ಭಟ್ಕಳ, ಡಿಸೆಂಬರ್ ೭: ಕಳೆದ ೩೬ ವರ್ಷಗಳಿಂದ ಸತತವಾಗಿ ಯಶಸ್ವಿಯಾಗಿ ನಡೆಯುತ್ತ ಬಂದಿರುವ ತಾಲೂಕಿನ ಹಿಂದುಳಿದ ಪ್ರದೇಶವಾದ ಕುಂಟವಾಣಿಯ ಕೋಣನ ಕಂಬಳವು ಶಾಸಕ ಜೆ.ಡಿ. ನಾಯ್ಕರು ತೋರಿದ ಹಸಿರು ನಿಶಾನೆಯೊಂದಿಗೆ ಕುಂಟವಾಣಿಯ ಬರಗದ್ದೆ ಮನೆಯಲ್ಲಿ ಆದ್ದೂರಿಯಾಗಿ ಚಾಲನೆ ಪಡೆಯಿತು. ನಂತರ ಮಾತನಾಡಿದ ಶಾಸಕ ಜೆ ಡಿ ನಾಯ್ಕ ಮಾತನಾಡಿ ಗ್ರಾಮೀಣ ಕ್ರೀಡೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೋಣನ ಕಂಬಳವನ್ನು ಉಳಿಸಿ ಬೆಳೆಸಬೇಕಿದೆ. ಕಳೆದ 36 ವರ್ಷಗಳಿಂದ ಅನೇಕ ಏಳು ಬೀಳುಗಳ ಮಧ್ಯೆ ಸೋಮಯ್ಯ ಗೊಂಡರು ಕಂಬಳವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದ ಅವರು ಇಂತಹ ಕ್ರೀಡೆ ನಡೆಸುವುದರಿಂದ ರೈತರಲ್ಲಿ ಮತ್ತಷ್ಟು ಹುಮ್ಮಸ್ಸು ಬರಲು ಸಾಧ್ಯವಾಗುತ್ತದೆ. ಉತ್ತರ ಕನ್ನಡದಲ್ಲಿ ನಡೆಯುತ್ತಿರುವ ಅಪರೂಪದ ಇಂತಹ ಕ್ರೀಡೆಗೆ ಸರಕಾರದಿಂದ ಪ್ರೋತ್ಸಾಹ ಅಗತ್ಯ. ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹಾಡುವಳ್ಳಿ ಗ್ರಾಪಂ ಅಧ್ಯಕ್ಷ ಎಂ ಪಿ ಶೈಲೇಂದ್ರಕುಮಾರ ಮಾತನಾಡಿ ಗ್ರಾಮೀಣ ಕ್ರೀಡೆಯಲ್ಲೊಂದಾದ ಕೋಣನ ಕಂಬಳ ಇನ್ನಷ್ಟು ಸದೃಢಗೊಳಿಸಲು ಎಲ್ಲರ ಪ್ರಯತ್ನ ಅಗತ್ಯ ಎಂದರು. ಕಲಾ ಮತ್ತು ಕ್ರೀಡಾ ವಿಭಾಗವನ್ನು ಉದ್ಘಾಟಿಸಿದ ಹಾಡುವಳ್ಳಿಯ ಎಂ ಡಿ ಪಾರ್ಶ್ವನಾಥ ಗೌಡ, ತಾಪಂ ಸದಸ್ಯೆ ಜಯಲಕ್ಷ್ಮೀ ಗೊಂಡ, ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಗೌರಿ ಮೊಗೇರ ಮಾತನಾಡಿದರು. ವೇದಿಕೆಯಲ್ಲಿ ತಾಪಂ ಸದಸ್ಯ ಹಾಗೂ ಪಿ ಎಲ್ಡಿ ಬ್ಯಾಂಕ ಅಧ್ಯಕ್ಷ ಈರಪ್ಪ ಗರ್ಡಿಕರ, ಬಡಿಯಾ ಗೊಂಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಬ್ರಾಯ ನಾಯ್ಕ, ಲ್ಯಾಂಪ ಸೊಸೈಟಿ ಅಧ್ಯಕ್ಷ ಮಾಸ್ತಿ ಗೊಂಡ, ಶಾಂತರಾಜ ಶೆಟ್ಟಿ, ನಾಭಿರಾಜ ಶೆಟ್ಟಿ, ಸುಮಾವತಿ ಶೆಟ್ಟಿ, ಗಣೇಶ ಹೆಬ್ಬಾರ ಮುಂತಾದವರು ಉಪಸ್ಥಿತರಿದ್ದರು. ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದ ಕಂಬಳದ ರೂವಾರಿ ಸೋಮಯ್ಯ ಗೊಂಡ ಕಳೆದ ೩೬ ವರ್ಷಗಳಿಂದ ಕಂಬಳ ನಡೆಸಿಕೊಂಡು ಬಂದ ಕುರಿತು ವಿವರಿಸಿ ಮುಂದೆ ಯಶಸ್ವಿಯಾಗಿ ನಡೆಸಲು ಎಲ್ಲರ ಸಹಕಾರ ಕೋರಿದರು. ಕೆ ಟಿ ಗೊಂಡ ನಿರ್ವಹಿಸಿದರು. ಕೆಸರುಗದ್ದೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗಾಗಿ ಓಡ, ಹಗ್ಗ ಜಗ್ಗಾಟ, ಕೊಡ ತಲೆ ಮೇಲೆ ಹೊತ್ತು ನಡೆಯುವ ಸ್ಪರ್ಧೆಗಳು ಜನರ ಗಮನ ಸೆಳೆದವು. ಸುಮಾರು 50 ಕ್ಕೂ ಅಧಿಕ ಕೋಣನ ಜೊತೆ ಕೆಸರು ಗದ್ದೆಯಲ್ಲಿ ಓಡಿದವು. ಕಂಬಳವನ್ನು ವೀಕ್ಷಿಸಲು ತಾಲೂಕಿನ ಮೂಲೆ ಮೂಲೆಗಳಿಂದ ಜನರು ಆಗಮಿಸಿದ್ದರು.
ವರದಿ: ಎಮ್ಮಾರ್ ಮಾನ್ವಿ, ಭಟ್ಕಳ