ಶಿವಮೊಗ್ಗ: ಅಡಿಕೆಗೆ ಈಗ ನಿಜಕ್ಕೂ ಚಿನ್ನದ ಬೆಲೆ ಬಂದೇ ಬಿಟ್ಟಿದೆ ! ಸರಕು ಕ್ವಿಂ. ಒಂದರ ಇಂದಿನ ಮಾರುಕಟ್ಟೆಯ ಗರಿಷ್ಠ ಬೆಲೆ ಬರೋಬರಿ ೨೪,೦೯೯ ರೂ.ಗಳು. ಇದು ಅಡಿಕೆ ಇತಿಹಾಸದಲ್ಲಿ ಬರೆದ ಹೊಸ ದಾಖಲೆ.
ಆದರೆ ಸರಕಿನ ಬೆಲೆಯನ್ನು ಉಳಿದ ಅಡಿಕೆ ಮಾದರಿಗಳು ಇದೇ ವೇಗದಲ್ಲಿ ಹಿಂಬಾಲಿಸುತ್ತಿಲ್ಲ. ಆದರೆ ಸದ್ಯಕ್ಕೆ ಅವಕ್ಕೂ ಉತ್ತಮ ಬೆಲೆಯಂತೂ ಇದೆ.
೯೭ರಲ್ಲಿ ಅಡಿಕೆ ತನ್ನ ಧಾರಣೆಯನ್ನು ಗರಿಷ್ಠ ೨೨ ಸಾವಿರ ರೂ.ಗಳಿಗೆ ಮುಟ್ಟಿಸಿತ್ತು. ಆಗ ಎಲ್ಲೆಲ್ಲೂ ಚಿನ್ನದ ಅಡಿಕೆಯ ಕುರಿತೇ ಮಾತುಕತೆ ನಡೆದಿತ್ತು. ಅಡಿಕೆ ಬೆಳೆಗಾರ ಎಂದರೆ ಕುಬೇರ ಎಂಬರ್ಥ ದಲ್ಲಿ ವರ್ಣನೆಯೂ ಆಗುತ್ತಿತ್ತು.
ಬಳಿಕದ ವರ್ಷಗಳಲ್ಲಿ ಮಲೆನಾಡಿನ ತುಂಗೆಯಲ್ಲಿ ಸಾಕಷ್ಟು ನೀರು ಹರಿದಂತೆ ಅಡಿಕೆ ಉದ್ಯಮವೂ ಉರುಳಾಡಿಬಿಟ್ಟಿತು. ಅಡಿಕೆ ಧಾರಣೆಯ ಏರಿಕೆಯ ಬೆನ್ನಲ್ಲೇ ಎಲ್ಲ ವಸ್ತುಗಳು ಮತ್ತು ಕೂಲಿ ದರ ಹೆಚ್ಚಿತು. ನಂತರ ನಿಧಾನವಾಗಿ ಅಡಿಕೆ ದರ ಪಾತಾಳಕ್ಕಿಳಿಯಿತು. ಆದರೆ ಏರಿದ ಯಾವುದೇ ದರ ಇಳಿಯಲಿಲ್ಲ. ಹೀಗಾಗಿ ಅಡಿಕೆ ಬೆಳೆಗಾರ ಕಂಗಾಲಾಗಿ ಉಳಿವು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯ ನ್ನೂ ಮುಟ್ಟಿದ. ಆತ್ಮಹತ್ಯೆಯ ಪ್ರಕರಣಗಳೂ ವರದಿಯಾದವು. ಕೊನೆಗೆ ಸರ್ಕಾರವೇ ಈ ರೈತರ ನೆರವಿಗೆ ಬಂದು ಅಡಿಕೆಗೆ ಬೆಂಬಲ ಬೆಲೆ ಕೂಡ ಘೋಷಿಸಿತು.
ಇದೆಲ್ಲ ಇತಿಹಾಸ ಎಂಬಂತೆ ಭಾಸವಾಗುವಂತೆ ಈ ವರ್ಷ ಮತ್ತೆ ಅಡಿಕೆ ಬೆಲೆ ಚೇತರಿಕೆಯ ಹಾದಿಯತ್ತ ನಡೆಯಿತು. ಆದರೆ ಇದೀಗ ಯಾರೂ ನಿರೀಕ್ಷಿಸದ ರೀತಿಯಲ್ಲಿ ಅಡಿಕೆಗೆ ಬಂಪರ್ ಬೆಲೆ ಬಂದಿದೆ.
ಏಕೆ ಈ ಧಾರಣೆ ? : ಈ ಬಾರಿಯ ಹವಾಮಾನ ವೈಪರೀತ್ಯದಿಂದಾಗಿ ಅಡಿಕೆ ಬೆಳೆಯು ನಿಗದಿ ತ ವೇಳೆಗಿಂತ ಮೊದಲೇ ಬಲಿಯಿತು. ಮಳೆಗಾಲ ಇನ್ನೂ ಮುಗಿಯದ ಕಾರಣ ಇದರ ಕೊಯ್ಲು ಸಾಧ್ಯವಾಗಲಿಲ್ಲ. ಹೀಗಾಗಿ ರೈತರಿಗೆ ಸರಕು ಮಾದರಿ ಸಿಗಲಿಲ್ಲ. ಬದಲಾಗಿ ಎಲ್ಲವೂ ಬೆಟ್ಟೆಯಾ ಯಿತು.
ಇದರ ಜೊತೆಗೆ ಅಡಿಕೆ ಸುಲಿಯುವವರ ಕೊರತೆಯೂ ರೈತರನ್ನು ಕಾಡಿತು. ಈ ಸಮಸ್ಯೆಯೇ ಬೇಡ ಎಂದು ಬಹುತೇಕ ರೈತರು ಸುಲಿದ ಹಸಿ ಆಡಿಕೆ ಯನ್ನು ಕತ್ತರಿಸದೆ `ಇಡಿ' ಮಾದರಿಯ ಅಡಿಕೆಯನ್ನೇ ಮಾರಿದರು. ಇದರ ಪರಿಣಾಮವಾಗಿ ಸರಕು ಎಂಬ ಮಾದರಿ ಇಲ್ಲವಾಯಿತು.
ಹೀಗಾಗಿ ಮಾರುಕಟ್ಟೆಯಲ್ಲಿ ಸರಕು ಮಾದರಿ ಅಡಿಕೆಯ ಆವಕ ತೀರಾ ಎನ್ನುವಷ್ಟು ಕಡಿಮೆಯಾ ಯಿತು. ಈ ಮಾದರಿಗೆ ದಕ್ಷಿಣ ಭಾರತದಲ್ಲಿ ವಿಶೇಷ ಬೇಡಿಕೆ ಇದೆ. ಇದೇ ವೇಳೆಗೆ ಗುಟ್ಕಾ ಮಾರು ಕಟ್ಟೆಯಲ್ಲಿಯೂ ಈ ಮಾದರಿಯ ಅಡಿಕೆಯನ್ನೇ ಕೇಳುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಈ ಮಾದ ರಿಯ ಅಡಿಕೆಯೇ ಇಲ್ಲ ಎನ್ನುವಂತಾಗಿದೆ. ಇದೆಲ್ಲದರ ಪರಿಣಾಮವಾಗಿ ಇದರ ಧಾರಣೆ ಒಂದೇ ಸಮನೆ ಏರುಮುಖವಾಗಿ ಸಾಗುತ್ತಿದೆ. ಇದು ಶೀಘ್ರದಲ್ಲಿಯೇ ೩೦ ಸಾವಿರ ರೂ. ಮುಟ್ಟುವ ಸಾಧ್ಯ ತೆ ಇದೆ ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ ಬೆಟ್ಟೆ ಸೇರಿದಂತೆ ಇತರ ಮಾದರಿಯ ಅಡಿಕೆಯ ಧಾರಣೆಯು ಉತ್ತಮ ಎನ್ನು ವಂತೆಯೇ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಎಲ್ಲ ಮಾದರಿಯ ಅಡಿಕೆಗೂ ಬಂಪರ್ ಬೆಲೆಯೇ ಸಿಕ್ಕಿದೆ.
ಸೌಜನ್ಯ: ಉದಯವಾಣಿ