ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸಮಾಜ ಜಾಗೃತಗೊಳ್ಳಬೇಕು- ಧರ್ಮ ಸಭೆಯಲ್ಲಿ  ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜಿ  ಆಶೀರ್ವಚನ

ಸಮಾಜ ಜಾಗೃತಗೊಳ್ಳಬೇಕು- ಧರ್ಮ ಸಭೆಯಲ್ಲಿ  ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜಿ  ಆಶೀರ್ವಚನ

Tue, 20 Feb 2024 00:19:02  Office Staff   SOnews

 

ಭಟ್ಕಳ: ಸಮಾಜ ಜಾಗೃತರಾಗಿ ಒಗ್ಗಟ್ಟಾಗಬೇಕಿದೆ. ಉತ್ತಮ ಸಂಘಟನೆ ಇದ್ದರೆ ಏನನ್ನೂ ಮಾಡಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಹೇಳಿದರು.

ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಏರ್ಪಡಿಸಲಾದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಹೊಸ ತಲೆಮಾರು ಜವಾಬ್ದಾರಿ ವಹಿಸಿಕೊಳ್ಳಬೇಕು. ದೇವಸ್ಥಾನ, ಶ್ರೀ ಮಠದ ಕಾರ್ಯದಲ್ಲಿ ಹಿರಿಯರ ಜೊತೆ ಯುವಕರೂ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ಯುವಕರು ಸಂಘಟಿತರಾದರೆ ಯಾವುದೇ ಕೆಲಸ ಮಾಡಬಹುದು. ಶ್ರೀ ಮಠದ 107 ವಲಯದಲ್ಲಿ ಭಟ್ಕಳದ ಭವತಾರಿಣಿ ವಲಯ ಅತ್ಯಂತ ಕ್ರಿಯಾಶೀಲವಾಗಿದೆ. ಇಲ್ಲಿನ ಯುವಕರು ಜಾಗೃತರಾಗಿ ಮತ್ತು ಸಂಘಟಿತರಾಗಿ ಕೆಲಸ ಮಾಡುತ್ತಿದ್ದಾರೆ. ಕಿತ್ರೆಯ ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನದ ಸಹಜ ದೇವಸ್ಥಾನವಾಗಿದ್ದು, ಇದು ವಿಶೇಷ ಕ್ಷೇತ್ರವಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಬೆಳೆಯಲಿದೆ. ದೇವಸ್ಥಾನದ ಬ್ರಹ್ಮ ಕಲಶೋತ್ಸವವನ್ನು ಅತೀ ವಿಜ್ರಂಭಣೆಯಿಂದ ಆಚರಿಸಿ ದೇವಿ ಮತ್ತು ಗುರುಗಳಿಗೆ ಖುಷಿ ಆಗುವ ಹಾಗೆ ಮಾಡಲಾಗಿದೆ. ಇಲ್ಲಿನ ಯುವಕರ ಒಗ್ಗಟ್ಟು ಮತ್ತು ಸಂಘಟನೆ ನಿರಂತರ ಮುಂದುವರಿಯಬೇಕು. ದೇವಸ್ಥಾನವನ್ನು ಮತ್ತಷ್ಟು ಅಭಿವೃದ್ಧಿಯ ಕಡೆಗೆ ಒಯ್ಯಬೇಕು ಎಂದರು.

ದೇವಸ್ಥಾನದ ಮೊಕ್ತೇಸರ ಉಮೇಶ ಹೆಗಡೆ ಸಭಾ ಪೂಜೆ ನೆರವೇರಿಸಿ ಸ್ವಾಗತಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ ಮುಲ್ಲೆಮಕ್ಕಿ ವರದಿ ವಾಚಿಸಿದರು. ಬ್ರಹ್ಮ ಕಲಶೋತ್ಸವದ ಸಮಿತಿಯ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು ವಂದಿಸಿದರು. ಪ್ರಶಾಂತ ಮೂಡಲಮನೆ, ಶುಭ ದೇಸಾಯಿ ನಿರೂಪಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಲಂಭೋದರ ಭಟ್ಟ ದಂಪತಿ, ದೇವಸ್ಥಾನದ ಮೊಕ್ತೇಸರ ಉಮೇಶ ಹೆಗಡೆ ದಂಪತಿ, ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ ಮುಲ್ಲೆಮಕ್ಕಿ ದಂಪತಿ, ದೇವಸ್ಥಾನದ ವ್ಯವಸ್ಥಾಪಕ ಶ್ರೀರಾಮ ಹೆಬ್ಬಾರ ದಂಪತಿ, ಗುತ್ತಿಗೆದಾರ ಮಾಧವ ಭಟ್ಟ ದಂಪತಿ ಅವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಸಭೆಯಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಹವ್ಯಕ ಮಹಾ ಮಂಡಲದ ಅಧ್ಯಕ್ಷ ಮೋಹನ ಹೆಗಡೆ, ಹೊನ್ನಾವರ ಮಂಡಲದ ಅಧ್ಯಕ್ಷ ಆರ್ ಜಿ ಹೆಗಡೆ, ಭಟ್ಕಳದ ವಲಯದ ಅಧ್ಯಕ್ಷೆ ರೇಷ್ಮಾ ಭಟ್ಟ ಸೇರಿದಂತೆ ಹಲವು ಮುಖಂಡರು, ಸಮಾಜ ಬಾಂಧವರಿದ್ದರು.


Share: