ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ', 'ಜಾತ್ಯತೀತ' ಪದ ತೆಗೆಯಲು ಸುಪ್ರೀಂ ನಕಾರ

ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ', 'ಜಾತ್ಯತೀತ' ಪದ ತೆಗೆಯಲು ಸುಪ್ರೀಂ ನಕಾರ

Wed, 27 Nov 2024 02:59:48  Office Staff   Vb

ಹೊಸದಿಲ್ಲಿ: ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ' ಹಾಗೂ 'ಜಾತ್ಯತೀತ' ಪದಗಳನ್ನು ತೆಗೆಯುವಂತೆ ಕೋರಿ ಸಲ್ಲಿಸಲಾಗಿದ್ದ ಮೂರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.  

1976ರಲ್ಲಿ ಇಂದಿರಾ ಗಾಂಧಿ ಸರಕಾರ ಅಂಗೀಕರಿಸಿದ 42 ನೇ ಸಾಂವಿಧಾನಿಕ್ ತಿದ್ದುಪಡಿ ಮೂಲಕ 'ಸಮಾಜವಾದಿ' ಹಾಗೂ 'ಜಾತ್ಯತೀತ' ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಗಿತ್ತು. 

ಸಂವಿಧಾನದ ಪೀಠಿಕೆಯಲ್ಲಿ 'ಸಮಾಜವಾದಿ' ಹಾಗೂ 'ಜಾತ್ಯತೀತ' ಪದಗಳನ್ನು ಸೇರಿಸಿರುವುದನ್ನು ಪ್ರಶ್ನಿಸಿ ರಾಜ್ಯಸಭೆಯ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ, ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಹಾಗೂ ಬಲರಾಮ್ ಸಿಂಗ್ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ಸಂಜಯ್ ಕುಮಾರ್ ಅವರನ್ನು ಒಳಗೊಂಡ ಪೀಠ ನವೆಂಬರ್ 22ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. 

ಸುಮಾರು 44 ವರ್ಷಗಳ ಬಳಿಕ ಈ ಸಾಂವಿಧಾನಿಕ ತಿದ್ದುಪಡಿಯನ್ನು ಪ್ರಶ್ನಿಸುವುದಕ್ಕೆ ಯಾವುದೇ ನ್ಯಾಯ ಸಮ್ಮತತೆ ಅಥವಾ ಸಮರ್ಥನೆ ಇಲ್ಲ ಎಂದು ಪೀಠ ಅಭಿಪ್ರಾಯಿಸಿತು. 

ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರ ಪೀಠಿಕೆಗೂ ಅನ್ವಯಿಸುತ್ತದೆ. ಪೀಠಿಕೆಯನ್ನು ಯಾವುದೇ ದಿನ ಅಂಗೀಕರಿಸಿದರೂ ಅದು ಪೀಠಿಕೆಯನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರವನ್ನು ನಿರ್ಬಂಧಿಸು ವುದಿಲ್ಲ. ಈ ನೆಲೆಯಲ್ಲಿ ಪುನಾರವಲೋಕನ ನಡೆಸಬೇಕೆಂಬ ವಾದವನ್ನು ತಿರಸ್ಕರಿಸಲಾಗಿದೆ ಎಂದು ಪೀಠ ಹೇಳಿದೆ. 

ಪೀಠಿಕೆಯ ಮೂಲತತ್ವ ಜಾತ್ಯತೀತತೆ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಿಸಿತು. ಕೇಶವಾನಂದ ಭಾರತಿ ವರ್ಸಸ್ ಸ್ಟೇಟ್ ಆಫ್ ಕೇರಳ ಹಾಗೂ ಎಸ್.ಆರ್. ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾದ ಕುರಿತ ಸಾಂವಿಧಾನಿಕ ಪೀಠದ ತೀರ್ಪು ಸೇರಿದಂತೆ ಹಲವು ತೀರ್ಪು ಗಳು ಜಾತ್ಯತೀತತೆ ಸಂವಿಧಾನದ ಮೂಲಲಕ್ಷಣ ಎಂದು ಅಭಿಪ್ರಾಯಿಸಿವೆ ಎಂದು ನ್ಯಾಯಾಲಯ ಹೇಳಿತು.


Share: