ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರಾಜ್ಯದಲ್ಲಿ ಇಪ್ಪತ್ತೈದು ಲಕ್ಷ ಅಳತೆಪೋಡಿ ಪ್ರಕರಣ ಬಾಕಿ - 3200 ಭೂಮಾಪಕ ಹುದ್ದೆಗಳ ನೇಮಕಾತಿಗೆ ರೇವಣ್ಣ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಇಪ್ಪತ್ತೈದು ಲಕ್ಷ ಅಳತೆಪೋಡಿ ಪ್ರಕರಣ ಬಾಕಿ - 3200 ಭೂಮಾಪಕ ಹುದ್ದೆಗಳ ನೇಮಕಾತಿಗೆ ರೇವಣ್ಣ ಆಗ್ರಹ

Wed, 06 Jan 2010 17:07:00  Office Staff   S.O. News Service
ಬೆಂಗಳೂರು,ಜನವರಿ 6:ರಾಜ್ಯದಲ್ಲಿ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಅಳತೆಪೋಡಿ ಪ್ರಕರಣಗಳು ಬಾಕಿಯಿದ್ದು ಇದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಖಾಲಿಯಿರುವ ೩೨೦೦ ಭೂಮಾಪಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಜೆಡಿ‌ಎಸ್ ಶಾಸಕಾಂಗ ನಾಯಕ ಹೆಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ.

ಇಂದಿಲ್ಲಿ ಸುದ್ಧಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು,ರಾಜ್ಯದ ಪ್ರತೀ ತಾಲ್ಲೂಕುಗಳಲ್ಲೂ ಎರಡು ಸಹಸ್ರಕ್ಕೂ ಭೂ ಅಳತೆ ಪ್ರಕರಣಗಳು ಬಾಕಿಯಿದ್ದು ಆ ಮೂಲಕ ರೈತರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ದೂರಿದರು.

ಈ ಕೆಲಸ ಮಾಡಬೇಕಾದ ನೆಮ್ಮದಿ ಕೇಂದ್ರಗಳು ರೈತರ ನೆಮ್ಮದಿಯನ್ನೇ ಹಾಳು ಮಾಡುತ್ತಿದ್ದು ಈ ಕೇಂದ್ರಗಳಿಗೆ ಸರ್ಜರಿ ಮಾಡಿ,ಇಲ್ಲದಿದ್ದರೆ ಅವುಗಳನ್ನು ರದ್ದು ಮಾಡಿ ಹಳೇ ಪದ್ಧತಿಯನ್ನೇ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ಸುಮಾರು 3200 ಭೂಮಾಪಕರ ಹುದ್ದೆಗಳು ಖಾಲಿಯಿದ್ದು,ಈ ಹಿನ್ನೆಲೆಯಲ್ಲಿಯೇ ಕುಮಾರಸ್ವಾಮಿ ಅವರ ಸರ್ಕಾರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 1800 ಮಂದಿ ಭೂಮಾಪಕರನ್ನು ಖಾಯಂ ಮಾಡಲು ಆದೇಶ ನೀಡಿತ್ತು.

ಆದರೆ ಇದುವರೆಗೂ ಈ ಕೆಲಸ ಆಗಿಲ್ಲ ಎಂದು ವಿಷಾದಿಸಿದ ಅವರು,ಒಂಭತ್ತು ವರ್ಷ ಸೇವೆ ಸಲ್ಲಿಸಿರುವ ಅನುಭವ ಇರುವವರನ್ನು ಖಾಯಂ ಮಾಡುವಂತೆ ಒತ್ತಾಯಿಸಿದರು.

ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಏಳರಿಂದ ಎಂಟು ಸಾವಿರ ಮಂದಿ ಭೂಮಾಪಕರಿದ್ದು ಇಲ್ಲಿ ಅಗತ್ಯದಷ್ಟೂ ಭೂಮಾಪಕರಿಲ್ಲ.ಖಾಸಗಿ ಸರ್ಮೇಯರ್‌ಗಳ ಸೇವೆ ಪಡೆಯುವುದಾಗಿ ಸರ್ಕಾರ ಹೇಳಿದರೂ ನ್ಯಾಯಾಲಯ ಅದನ್ನು ಕಾನೂನು ಬದ್ಧವಲ್ಲ ಎಂದು ಹೇಳಿದೆ.ಹೀಗಾಗಿ ರೈತರ ಬಗ್ಗೆ ಯಡಿಯೂರಪ್ಪ ಸರ್ಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದರೆ ತಕ್ಷಣವೇ ಖಾಲಿ ಇರುವ ಭೂಮಾಪಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಹಿಂದೆ ಇದೇ ಯಡಿಯೂರಪ್ಪ ಅವರು ವಿಪಕ್ಷದ ನಾಯಕರಾಗಿದ್ದ ಕಾಲದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಭೂಮಾಪಕರ ಮುಷ್ಕರದ ಸಂಧರ್ಭದಲ್ಲಿ ಅಲ್ಲಿಗೆ ಹೋಗಿದ್ದರು.ನಾವು ಅಧಿಕಾರಕ್ಕೆ ಬಂದರೆ ನಿಮ್ಮ ಸೇವೆಯನ್ನು ಖಾಯಂ ಮಾಡುತ್ತೇವೆ ಎಂದು ಹೇಳಿದ್ದರು.ಅದನ್ನು ಈಗವರು ಮರೆತಿರುವಂತಿದೆ ಎಂದು ವ್ಯಂಗ್ಯವಾಡಿದರು.

ಇದೇ ರೀತಿ ಭೂಮಿಯನ್ನು ಅಳತೆ ಮಾಡಿಕೊಡಲು ಹಿಂದೆ ೩೦೦ ರೂ ಶುಲ್ಕವನ್ನು ರೈತರಿಂದ ಪಡೆಯಲಾಗುತ್ತಿತ್ತು.ಆದರೆ ಇದೀಗ ಆರು ನೂರು ರೂಪಾಯಿಗಳನ್ನು ಪಡೆಯಲಾಗುತ್ತಿದೆ.ಈ ಪೈಕಿ ೩೦೦ ರೂಗಳನ್ನು ಖಾಸಗಿ ಸರ್ವೇಯರ್‌ಗಳಿಗೆ ನೀಡಿ ಉಳಿದ ೩೦೦ ರೂಗಳನ್ನು ಖಜಾನೆಗೆ ಕಟ್ಟುವುದಾಗಿ ಹೇಳಿದ್ದರೂ ಅಂತಹ ಕೆಲಸವಾಗುತ್ತಿಲ್ಲ.

ಈ ಹಣವೆಲ್ಲಿಗೆ ಹೋಗುತ್ತಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ ಅವರು,ಯಡಿಯೂರಪ್ಪ ಸರ್ಕಾರಕ್ಕೆ ರೈತರ ಬಗ್ಗೆ ಯಾವ ಕಾಳಜಿಯೂ ಇಲ್ಲ ಎಂದು ಟೀಕಿಸಿದರು.

ಅವರ ಸರ್ಕಾರ ಬಂದ ಮೇಲೆ ರೈತರಿಗೆ ನರಕಯಾತನೆ ಕೊಡಲಾಗುತ್ತಿದೆ.ಸ್ವತ: ಯಡಿಯೂರಪ್ಪ ಅವರೇ ಬಿಡದಿ ಬಳಿ ಹೋಗಿ ರೈತ ಮುಖಂಡರನ್ನು ಭೇಟಿ ಮಾಡಿ ಇನ್ನು ಮೇಲೆ ರೈತರ ಮೇಲೆ ಕೈ ಮಾಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದರು.

ಆದರೆ ಹೇಳಿ ಕೆಲವೇ ದಿನ ಕಳೆಯುವುದರೊಳಗಾಗಿ ರೈತರ ಕೈಗೆ ಬೇಡಿ ತೊಡಿಸುವ ಕೆಲಸವಾಗಿದೆ.ಯಡಿಯೂರಪ್ಪ ಅವರ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆ ಎಂದು ವ್ಯಂಗ್ಯವಾಡಿದರು .

ನೆರೆಹಾವಳಿ ಪ್ರದೇಶಗಳಿಗೆ ಪರಿಹಾರ ನೀಡುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ.ಇದೇ ರೀತಿ ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯಿಂದಾದ ಹಾನಿಯನ್ನು ಭರ್ತಿ ಮಾಡಿಕೊಡುವ ಕೆಲಸವೂ ಆಗುತ್ತಿಲ್ಲ.ಹೀಗಾಗಿ ಜನವರಿ 13 ರಂದು ಪ್ರಧಾನಿಗಳನ್ನು ಭೇಟಿ ಮಾಡಲು ನಿಯೋಗ ಕೊಂಡೊಯ್ಯುವಾಗ ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಮನವಿ ಪತ್ರ ಸಲ್ಲಿಸಬೇಕು.

ಹಾಗಾಗದಿದ್ದರೆ ಇವು ಕೇವಲ ನಾಟಕವಾಗುತ್ತವೆ ಎಂದ ಅವರು,ನಾಡಿನ ಹಿತ ಕಾಯುವ ಯಾವುದೇ ಕೆಲಸಕ್ಕೆ ನಮ್ಮ ಬೆಂಬಲವಿದೆ.ಆದರೆ ನೆಪಕ್ಕಾಗಿ ಏನನ್ನಾದರೂ ಮಾಡಲು ಹೋದರೆ ನಮ್ಮ ಬೆಂಬಲವಿಲ್ಲ ಎಂದು ಹೇಳಿದರು.


Share: