ಬೆಂಗಳೂರು:ಏ,೧೮-ಐಪಿಎಲ್ ಪಂದ್ಯಾವಳಿಯ ಸಂಧರ್ಭದಲ್ಲಿ ನಡೆದ ಬಾಂಬ್ ಸ್ಫೋಟದ ಬೆಳವಣಿಗೆಯ ಬೆನ್ನಲ್ಲೇ ಇಂದು ಇನ್ನೆರಡು ಬಾಂಬ್‌ಗಳು ಪತ್ತೆಯಾಗಿದ್ದು ಆ ಮೂಲಕ ಉಗ್ರರ ಕರಿನೆರಳು ಬೆಂಗಳೂರನ್ನು ಆವರಿಸುವ ಆತಂಕ ದಟ್ಟವಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಏಪ್ರಿಲ್ ೨೧ ಹಾಗೂ ೨೨ ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್‌ನ ಎರಡು ಸೆಮಿಫೈನಲ್ ಪಂದ್ಯಗಳನ್ನು ಬಿಸಿಸಿಐ ರದ್ದುಗೊಳಿಸಿದ್ದು ಅದನ್ನು ಮುಂಬೈನಲ್ಲಿ ನಡೆಸುವ ತೀರ್ಮಾನ ಕೈಗೊಂಡಿದೆ.
ಬಿಸಿಸಿಐನ ಈ ತೀರ್ಮಾನ ದೇಶದ ಪ್ರಮುಖ ಆರ್ಥಿಕ ಕೇಂದ್ರವಾದ ಬೆಂಗಳೂರಿಗೆ ಆಘಾತ ಉಂಟು ಮಾಡಿದ್ದು ಆ ಮೂಲಕ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವ ಸಾಧ್ಯತೆಗಳು ಕಡಿಮೆಯಾಗಿವೆ.
ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣಕ್ಕೆ ನಿಷೇಧಿತ ಅಂಜುಮಾನ್ ದೀನ್‌ದಾರ್ ಸಂಘಟನೆಯ ಕೈವಾಡ ಇದೆ ಎಂಬ ಅನುಮಾನ ವ್ಯಕ್ತವಾಗಿದ್ದು ಈ ಹಿನ್ನೆಲೆಯಲ್ಲಿ ಆ ಸಂಘಟನೆ ಸೇರಿದಂತೆ ಇಪ್ಪತ್ತು ಸಂಘಟನೆಗಳ ಚಲನವಲನಗಳ ಮೇಲೆ ಗಮನ ಇಡಲಾಗಿದೆ.
ಇಷ್ಟೆಲ್ಲದರ ಮಧ್ಯೆಯೂ ಪೋಲೀಸ್ ಮಹಾನಿರ್ದೇಶಕ ಅಜಯ್‌ಕುಮಾರ್ ಸಿಂಗ್ ಅವರು,ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಉಗ್ರರ ಕೈವಾಡ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ನೆನ್ನೆ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ಗಳ ಬಳಿ ಎರಡು ಬಾಂಬ್ ಸ್ಫೋಟಿಸಿದ ಘಟನೆಯ ಬಗ್ಗೆ ಪೋಲೀಸ್ ತನಿಖೆ ನಡೆಯುತ್ತಿರುವ ಸಂಧರ್ಭದಲ್ಲೇ ಇಂದು ಪುನ: ಎರಡು ಬಾಂಬ್‌ಗಳು ಪತ್ತೆಯಾದವು.
ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂಬರ್ ಒಂದರ ಬಳಿ ಮತ್ತು ಹತ್ತಿರದಲ್ಲೇ ಇದ್ದ ಪಾರ್ಕ್ ಬಳಿ ಎರಡು ಬಾಂಬ್‌ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ ಅದನ್ನು ವಶಕ್ಕೆ ತೆಗೆದುಕೊಂಡು ನಿಷ್ಕ್ರಿಯಗೊಳಿಸಿತು.
ಇದಾದ ನಂತರ ತಕ್ಷಣವೇ ಬೆಂಗಳೂರಿನಾದ್ಯಂತ ಬಿಗಿ ಪೋಲೀಸ್ ಬಂದೋಬಸ್ತ್‌ನ್ನು ಏರ್ಪಡಿಸಲಾಯಿತಲ್ಲದೇ ನಲವತ್ತೈದಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದುಕೊಂಡು ತನಿಖೆಯನ್ನು ತೀವ್ರಗೊಳಿಸಲಾಯಿತು.
ಬೆಂಗಳೂರಿನ ಬಾಂಬ್ ಸೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲು ಪೋಲೀಸರು ಐದು ತಂಡಗಳನ್ನು ರಚಿಸಿದ್ದು ಈ ತಂಡಗಳು ರಾಜ್ಯದಲ್ಲಷ್ಟೇ ಅಲ್ಲದೇ ಹೊರರಾಜ್ಯಗಳಿಗೂ ತೆರಳಿ ತನಿಖೆ ನಡೆಸಲಿವೆ.
ಈ ನಡುವೆ ಉನ್ನತ ಮೂಲಗಳ ಪ್ರಕಾರ,ಬೆಂಗಳೂರಿನ ಮೇಲೆ ಉಗ್ರರು ಕಣ್ಣಿಟ್ಟಿರುವ ಬಗ್ಗೆ ಕೇಂದ್ರ ಸರ್ಕಾರ ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತಲ್ಲದೇ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಲು ಸಲಹೆ ನೀಡಿತ್ತು.
ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಬೆಂಗಳೂರು ಪ್ರತಿವರ್ಷ ಅರವತ್ತೈದು ಸಾವಿರ ಕೋಟಿ ರೂಗಳ ಐಟಿ ವಹಿವಾಟನ್ನು ಹೊಂದಿದ್ದು ಇದನ್ನು ಕೆಡಿಸಲು ಉಗ್ರರು ಸಂಚು ಹೂಡಿದ್ದಾರೆ ಎಂದು ಸ್ವತ: ಪ್ರಧಾನಮಂತ್ರಿ ಮನ್‌ಮೋಹನ್‌ಸಿಂಗ್ ಅವರೇ ರಾಜ್ಯದ ಗೃಹ ಸಚಿವ ಡಾ||ವಿ.ಎಸ್.ಆಚಾರ್ಯ ಅವರಿಗೆ ವಿವರಿಸಿದ್ದರೆನ್ನಲಾಗಿದೆ.
ಪಾಕಿಸ್ತಾನ ಮೂಲದ ಉಗ್ರರು ಇಂತಹ ಸಂಚು ನಡೆಸಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ಇದೆ ಎಂದೂ ಪ್ರಧಾನ ಮಂತ್ರಿ ಮನ್‌ಮೋಹನ್‌ಸಿಂಗ್ ಅವರು ಡಾ||ಆಚಾರ್ಯ ಅವರಿಗೆ ವಿವರಿಸಿದ್ದರೆನ್ನಲಾಗಿದೆ.
ದಾವೂದ್ ಕೈವಾಡ?
ಇದೇ ರೀತಿ ಮತ್ತೊಂದು ಅನುಮಾನದ ಪ್ರಕಾರ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ನಡೆಸುವ ಕೃತ್ಯದ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುಮ್ಮಕ್ಕು ಇದ್ದರೂ ಅಚ್ಚರಿಯಿಲ್ಲ.
ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ತಮ್ಮ ಬಂಟರ ಮೂಲಕ ದಾವೂದ್ ಅಪಾರ ಪ್ರಮಾಣದ ಆಸ್ತಿ ಖರೀದಿ ನಡೆಸುತ್ತಿದ್ದಾನೆನ್ನಲಾಗಿದೆ.
ಬೆಂಗಳೂರು ಮೂಲದ ಬಿಲ್ಡರ್ ಕಂಪನಿಯೊಂದು ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಸಾವಿರಾರು ಎಕರೆ ಭೂಮಿಯನ್ನು ಖರೀದಿಸಿದ್ದು ಈ ಹಣ ದಾವೂದ್ ಇಬ್ರಾಹಿಂನದು ಎನ್ನಲಾಗಿದೆ.
ಹೀಗೆ ಕರ್ನಾಟಕದಲ್ಲಿ ತನ್ನ ಜಾಲವನ್ನು ಭದ್ರಗೊಳಿಸಲು ದಾವೂದ್ ಸಂಚು ನಡೆಸುತ್ತಿದ್ದು ನೆನ್ನೆ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಕಾರಣರಾದವರಿಗೆ ಆತ ಕುಮ್ಮಕ್ಕು ನೀಡಿರಬಹುದು ಎಂಬ ಶಂಕೆಯೂ ವ್ಯಕ್ತ ಆಗಿದೆ.
ಪ್ರತಿಪಕ್ಷಗಳ ಆಕ್ರೋಶ
ಈ ಮಧ್ಯೆ ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಹಾಗೂ ಇಂದು ಮತ್ತೆ ಬಾಂಬ್ ಪತ್ತೆಯಾದ ಪ್ರಕರಣಗಳ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ,ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು,ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪ ಮಾಡಿದ್ದಾರೆ.
ಐಪಿಎಲ್ ಪಂದ್ಯಾವಳಿಯನ್ನು ರದ್ದುಪಡಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಘನತೆಯನ್ನು ಕುಗ್ಗಿಸಲು ವಿದ್ರೋಹಿಗಳು ನಡೆಸಿದ ಸಂಚನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದೂ ಡಿಕೆಶಿ ಟೀಕಿಸಿದ್ದಾರೆ.