ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಟಲ್ ಬಿಹಾರಿ ವಾಜಪೇಯಿ ಕೈವಾಡವಿದೆಯೇ?

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಟಲ್ ಬಿಹಾರಿ ವಾಜಪೇಯಿ ಕೈವಾಡವಿದೆಯೇ?

Tue, 24 Nov 2009 03:00:00  Office Staff   S.O. News Service
ನವದೆಹಲಿ, ನವೆಂಬರ್ 23: ಬಾಬ್ರಿ ಮಸೀದಿ ಧ್ವಂಸಕ್ಕೆ ವಾಜಪೇಯಿಯೇ ರೂವಾರಿ? 

ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಬೇಕಿದ್ದ ಲಿಬರ್ಹಾನ್ ಆಯೋಗದ ವರದಿಯಲ್ಲಿ ಈ ಅಂಶ ಪ್ರಸ್ತಾಪಗೊಂಡಿದೆ ಎಂದು ದ ಇಂಡಿಯನ್ ಎಕ್ಸ್ ಪ್ರೆಸ್ ಸೋಮವಾರ ಪ್ರಕಟಿಸಿದೆ. ಇದು ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿ ಕಲಾಪ ಮುಂದೂಡಬೇಕಾಯಿತು.

ಈ ಬಗ್ಗೆ ಚರ್ಚಿಸಲು ಮಂಗಳವಾರ ಬೆಳಗ್ಗೆ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಕೇಂದ್ರ ಸಂಪುಟ ಸಭೆ ನಡೆಯಲಿದೆ. 

೧೯೯೨ರ ಡಿ.೬ ರಂದು ನಡೆದ ಘಟನೆ ಬಿಜೆಪಿ ಮುಖಂಡರು ಹೇಳಿಕೊಂಡಂತೆ ಏಕಾ‌ಏಕಿ ಘಟನೆಯಲ್ಲ. ಅದು ಪೂರ್ವ ನಿಯೋಜಿತವಾದದ್ದು ಎಂದು ಆಯೋಗ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಪತ್ರಿಕೆ ಪ್ರಕಟಿಸಿದೆ. ಅಚ್ಚರಿಯ ವಿಚಾರವೆಂದರೆ, ಮಾಜಿ ಪ್ರಧಾನಿ ವಾಜಪೇಯಿ ಅವರೂ ಕೂಡ ಬಾಬ್ರಿ ಮಸೀದಿ ಕಟ್ಟಡ ಧ್ವಂಸ ಮಾಡಲು ಸಂಚು ರೂಪಿಸಲು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದೆ. ಜೊತೆಗೆ ಬಿಜೆಪಿಯ ಇತರ ಮುಖಂಡರಾದ ಎಲ್.ಕೆ. ಆಡ್ವಾಣಿ, ಮುರಳೀಮನೋಹರ ಜೋಶಿ ಆಪಾದಿತರು ಎಂದು ಉಲ್ಲೇಖಿಸಿದೆ. 
ಒಟ್ಟು ಘಟನೆ ಪೂರ್ವ ನಿಯೋಜಿತ. ಹೀಗಾಗಿ ಮುಖಂಡರಿಗೆ ಘಟನೆ ಬಗ್ಗೆ ತಿಳಿದಿಲ್ಲ ಎಂಬ ವಿಚಾರವೇ ಒಪ್ಪಲರ್ಹವಲ್ಲ. ಯಾವುದೇ ದುರ್ಘಟನೆಯಾಗದೆಂದು ಬಿಜೆಪಿ ಮುಖಂಡರು ಅಂದಿನ ಕೇಂದ್ರ ಸರ್ಕಾರಕ್ಕೆ ಮಾತು ನೀಡಿದ್ದರು. ಆದರೆ, ಅವರು ತಮ್ಮ ವಚನ ಪಾಲಿಸಲಿಲ್ಲ ಎಂದು ಆಯೋಗ ತನ್ನ ವರದಿಯಲ್ಲಿ ಹೇಳಿದೆ. 

ಈ ಮುಖಂಡರ ಹಾಗೂ ವಿ‌ಎಚ್‌ಪಿ, ಶಿವಸೇನೆ ಮತ್ತು ಆರ್‌ಎಸ್‌ಎಸ್ ವಿರುದ್ಧ ದೇಶವನ್ನು ಕೋಮುಗಳ ಆಧಾರದಲ್ಲಿ ವಿಭಜಿಸಲು ಯತ್ನಿಸಲಾಗಿದೆ ಎಂದು 
ದೂರಲಾಗಿದೆ. 

ಕ್ಲೀನ್ ಚಿಟ್: ಘಟನೆ ನಡೆದ ಸಂದರ್ಭ ಅಧಿಕಾರದಲ್ಲಿದ್ದ ಅಂದಿನ ಪ್ರಧಾನಿ ದಿ.ನರಸಿಂಹ ರಾವ್ ಸರ್ಕಾರಕ್ಕೆ ಆಯೋಗ ಕ್ಲೀನ್ ಚಿಟ್ ನೀಡಿದೆ.  ಜೊತೆಗೆ ಅಂದು ಉ.ಪ್ರದೇಶ ಸಿ‌ಎಂ ಆಗಿದ್ದ ಕಲ್ಯಾಣ್ ಸಿಂಗ್ ವಿರುದ್ಧ ತೀವ್ರ ಆರೋಪ ಮಾಡಿದೆ. ಅವರಿಗೆ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿಯಿದ್ದರೂ, ಕ್ರಮ ಕೈಗೊಳ್ಳಲಿಲ್ಲ. ಫೈಜಾಬಾದ್‌ನ ಅಂದಿನ ಜಿಲ್ಲಾಧಿಕಾರಿಗೆ ಕರಸೇವಕರು ವಿವಾದಿತ ಕಟ್ಟಡ ಧ್ವಂಸಗೊಳಿಸುತ್ತಿದ್ದ ವೇಳೆ ಪರಿಸ್ಥಿತಿ ನಿಯಂತ್ರಿಸುವಂತೆ ಅರೆಸೇನೆಗೆ ಕಲ್ಯಾಣ್‌ಸಿಂಗ್ ಆದೇಶ ನೀಡರಲಿಲ್ಲ ಎಂದು ಆಕ್ಷೇಪಿಸಿದೆ.

ಹೆಚ್ಚು ಬೆಂಬಲ ವ್ಯಕ್ತವಾಗಿಲ್ಲ: ಬಿಜೆಪಿ, ಸಂಘಪರಿವಾರದ ಮುಖಂಡರು ರಾಮಜನ್ಮಭೂಮಿ ಅಭಿಯಾನಕ್ಕೆ ಸಮಾಜದಿಂದ ಅಭೂ ತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ, ಹಿಂದೂಗಳೇ ಅದಕ್ಕೆ ಹೆಚ್ಚಿನ ಬೆಂಬಲ ನೀಡಲಿಲ್ಲವೆಂದು ವರದಿಯಲ್ಲಿದೆ ಎಂದು ಪತ್ರಿಕೆ ತಿಳಿಸಿದೆ. 
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿಯೇ ಸಿದ್ಧ ಎನ್ನುವುದು ದೇಶದ ಜನಾಭಿಪ್ರಾಯವಾಗಿರಲಿಲ್ಲ ಎಂದಿದೆ. 

ನುಣುಚಿಕೊಳ್ಳಲು ಸಾಧ್ಯವಿಲ್ಲ: ಬಿಜೆಪಿ ಮುಖಂಡರಾದ ವಾಜಪೇಯಿ ಮತ್ತು ಆಡ್ವಾಣಿ ವಿವಾದಿತ ಕಟ್ಟಡ ಧ್ವಂಸದಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿಕೊಂಡರೂ ಅವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ವರದಿ ಪ್ರತಿಪಾದಿಸಿದೆ. 
ವಾಜಪೇಯಿ, ಆಡ್ವಾಣಿ, ಮುರಳೀ ಮನೋಹರ ಜೋಶಿಯವರನ್ನು ಸಂಘ ಪರಿವಾರ ತನ್ನ ದಾಳಗಳನ್ನಾಗಿ ಬಳಸಿಕೊಂಡಿತು. ತಮ್ಮ ರಾಜಕೀಯ ಬದುಕನ್ನು ಬಲಿಗೊಟ್ಟು ಸಂಘಟನೆಯನ್ನು ವಿರೋಧಿಸುವ ಕೆಚ್ಚು ಆ ಮುಖಂಡರಲ್ಲಿ ಇರಲಿಲ್ಲ ಎಂದು ವರದಿ ಹೇಳಿದೆ ಎಂದು ಪತ್ರಿಕೆ ವರದಿ ಮಾಡಿದೆ. 
ಆಡ್ವಾಣಿ, ಮುರಳೀ ಮನೋಹರ ಜೋಶಿ ರಥಯಾತ್ರೆ ಮೂಲಕ ಜನರನ್ನು ಮಾನಸಿಕವಾಗಿ ಕೆರಳುವಂತೆ ಮಾಡಿ ಅಭಿಯಾನಕ್ಕೆ ಸೆಳೆದರೆಂದು ವರದಿಯಲ್ಲಿ ಹೇಳಲಾಗಿದೆ. 

ಹೊಸ ಹುಟ್ಟು: ಅಯೋಧ್ಯಾ ಅಭಿಯಾನದಿಂದಾಗಿ ಸಂಘದ ಅಂಗ ಸಂಸ್ಥೆಗಳು ಮರುಹುಟ್ಟು ಪಡೆದವು ಎಂದು ಅಭಿಪ್ರಾಯಪಟ್ಟಿದೆ. 
ಮುಸ್ಲಿಂ ಮುಖಂಡರ ವಿರುದ್ಧ ಟೀಕೆ: ಮುಸ್ಲಿಂ ಮುಖಂಡರ ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿರುವ ಆಯೋಗ ಸಮುದಾಯದ ಗಣ್ಯ ವ್ಯಕ್ತಿಗಳೆನಿಸಿಕೊಂಡವರು ತಮ್ಮದೇ ವರ್ಗ ಸೃಷ್ಟಿಸಿಕೊಂಡಿದ್ದರು. ಅವರಿಗೆ ಸಮುದಾಯದ ಬಗ್ಗೆ ಕಾಳಜಿ ಇರಲಿಲ್ಲ. ವಿವಾದದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಬಗ್ಗೆ, ಕೋರ್ಟ್ ಹೊರಗಡೆ ಅದನ್ನು ತೀರ್ಮಾನಿಸುವ ಕ್ರಮ ಕೈಗೊಳ್ಳಲಿಲ್ಲ ಎಂದಿದೆ. 

ಕೋಲಾಹಲ: ಆಯೋಗದ ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದಕ್ಕೆ ಸಂಸತ್‌ನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಸದನದಲ್ಲಿ ಮಂಡನೆಯಾಗುವುದಕ್ಕೆ ಮೊದಲೇ ಕೆಲ ವರ್ಗದ ಮಾಧ್ಯಮಗಳಲ್ಲಿ ಪ್ರಕಟವಾದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಲೋಕಸಭೆಯಲ್ಲಿ ಮಾತನಾಡಿದ ಆಡ್ವಾಣಿ ಅಧಿವೇಶನ ನಡೆಯುತ್ತಿರುವಾಗಲೇ ಸರ್ಕಾರ ವರದಿ ಸೋರಿಕೆಯಾಗುವಂತೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು. 
 ರಾಜ್ಯಸಭೆಯಲ್ಲಿ ಮಾತನಾಡಿದ ಸಿಪಿ‌ಎಂ ಸದಸ್ಯ ಸೀತಾರಾಂ ಯೆಚೂರಿ ಆಯೋಗ ಮತ್ತು ಸರ್ಕಾರಗಳೆರಡೂ ತಮ್ಮಿಂದಾಗಿ ವರದಿ ಸೋರಿಕೆಯಾಗಿಲ್ಲ ಎನ್ನುತ್ತಿವೆ. ವರದಿ ಸೋರಿಕೆಯಾಗಿರುವುದು ಆಯ್ದ ಭಾಗವಲ್ಲ. ಹೀಗಾಗಿ, ಒಂದು ಮೂಲದಿಂದ ಮಾಧ್ಯಮಕ್ಕೆ ಪ್ರತಿ ಲಭ್ಯವಾಗಿರುವುದು ಸ್ಪಷ್ಟ ಎಂದರು. 
ಮೂರ್ಖನಲ್ಲ: ಸಂಸತ್‌ನ ಉಭಯ ಸದನಗಳಲ್ಲಿ ಈ ಬಗ್ಗೆ ಹೇಳಿಕೆ ನೀಡಿದ ಗೃಹ ಸಚಿವ ಚಿದಂಬರಂ ವರದಿ ಸೋರಿಕೆಯಾಗುವಂತೆ ಮಾಡಿ ಮುಜುಗರಕ್ಕೀಡಾಗಲು ತಾವೇನು ಮೂರ್ಖರಲ್ಲ ಎಂದರು. ವರದಿ ಬಗ್ಗೆ ಯಾವುದೇ ಮಾಧ್ಯಮ ಪ್ರತಿನಿಧಿ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು. 

ಮಾಧ್ಯಮಗಳಿಗೆ ಸಿಕ್ಕ ವರದಿಯಲ್ಲೇನಿದೆ? 
-      ಬಾಬ್ರಿ ಮಸೀದಿ ಧ್ವಂಸಕ್ಕೆ ವಾಜಪೇಯಿ, ಆಡ್ವಾಣಿ, ಎಂ.ಎಂ.ಜೋಶಿ ಕಾರಣ. 
-      ಮುಸ್ಲಿಂ ಗಣ್ಯ ವ್ಯಕ್ತಿಗಳು ಸಮುದಾಯ ಉದ್ಧಾರಕ್ಕೆ ಹೆಚ್ಚಿನ ಕೆಲಸ ಮಾಡಿಲ್ಲ. 
-      ಬಿಜೆಪಿ ಅಂದಿನ ಕೇಂದ್ರ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ವಂಚಿಸಿತ್ತು. 
-      ಅಯೋಧ್ಯಾ ಆಂದೋಲನಕ್ಕೆ ಹಿಂದೂಗಳಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ. 
-      ಆಗಿನ ಪ್ರಧಾನಿ ದಿ. ಪಿ.ವಿ. ನರಸಿಂಹ  ರಾವ್ ಅವರಿಗೆ ಕ್ಲೀನ್ ಚಿಟ್ 
-      ಉತ್ತರಪ್ರದೇಶದ ಅಂದಿನ ಸಿ‌ಎಂ ಕಲ್ಯಾಣ್ ಸಿಂಗ್ ವಿರುದ್ಧ ತರಾಟೆ. 
-      ಆರೆಸ್ಸೆಸ್, ಬಿಜೆಪಿ ಮುಖಂಡರ ಹೇಳಿಕೆಯಂತೆ ಧ್ವಂಸ ಘಟನೆ ಏಕಾ‌ಏಕಿ ನಡೆದದ್ದಲ್ಲ. ಅದು ಪೂರ್ವ ನಿಯೋಜಿತ. 
-      ರಾಮಜನ್ಮಭೂಮಿ ಹೆಸರಲ್ಲಿ ಸಂಗ್ರಹಿಸಿದ ಕೋಟ್ಯಂತರ ರು.ಹಣವನ್ನು ಮುಖಂಡರ ಹೆಸರಲ್ಲಿರುವ ಬ್ಯಾಂಕ್ ಖಾತೆಯಲ್ಲಿಡಲಾಗಿದೆ. 

ದಾಖಲೆ ಬರೆದ ಆಯೋಗ 
ಬಾಬ್ರಿ ಧ್ವಂಸ ಬಗ್ಗೆ ತನಿಖೆ ನಡೆಸಲು ನೇಮಿಸಿದ್ದ ಮನೋಹರ್ ಸಿಂಗ್ ಲಿಬರ್ಹಾನ್ ನೇತೃತ್ವದ ಏಕ ಸದಸ್ಯ ಆಯೋಗ ದೇಶ ಕಂಡ ಅತಿ ದುಬಾರಿ ಆಯೋಗ. ಇದಕ್ಕೆ ೮ ಕೋಟಿ ವೆಚ್ಚವಾಗಿದೆ. ಇದು ೪೮ ಬಾರಿ ವಿಸ್ತರಣೆ ಕಂಡಿತ್ತು. ೧೭ ವರ್ಷಗಳ ಬಳಿಕ ಅಂದರೆ ೨೦೦೯ರ ಜೂ.೩೦ಕ್ಕೆ ಪ್ರಧಾನಿಗೆ ವರದಿ ಸಲ್ಲಿಸಿತ್ತು. ೧೯೯೨ರ ಡಿ.೬ರಂದು ಬಾಬ್ರಿ ಧ್ವಂಸ 
ಗೊಂಡ ೧೦ ದಿನದಲ್ಲಿ ಈ ಆಯೋಗ ರಚನೆಯಾಗಿತ್ತು. ೩ ತಿಂಗಳಲ್ಲಿ ವರದಿ ಸಲ್ಲಿಕೆಗೆ ಸೂಚಿಸಲಾಗಿತ್ತು. 

ಸೋರಿಕೆಗೇನು ಕಾರಣ? 
ಶೀಘ್ರದಲ್ಲೇ ನಡೆಯಲಿರುವ ಜಾರ್ಖಂಡ್ ಚುನಾವಣೆಯಲ್ಲಿ ಮತಗಳನ್ನು ಧ್ರುವೀಕರಿಸುವ ಉದ್ದೇಶದಿಂದ ಕೇಂದ್ರವೇ ಮಾಧ್ಯಮಗಳಿಗೆ ವರದಿ ಲಭ್ಯವಾಗುವಂತೆ ಮಾಡಿರಬಹುದು. 
  ಸಂಸತ್ ಅಧಿವೇಶನದಲ್ಲಿ ಬೆಲೆ ಏರಿಕೆ ವಿಚಾರ, ಕಬ್ಬಿನ ಬೆಲೆ ನಿಗದಿ ನಿಟ್ಟಿನಲ್ಲಿ ಹೊಸ ತಿದ್ದುಪಡಿ ಮಸೂದೆ ಮಂಡನೆಯಾಗದಿರಲು. 
  ವರದಿ ಸೋರಿಕೆ ಮೂಲಕ ಪ್ರತಿಪಕ್ಷಗಳ ಗಮನ ಬೇರೆಡೆಗೆ ಸೆಳೆಯಲು. 
  ೨೬/೧೧ರ ಘಟನೆಗೆ ೧ ವರ್ಷ ಪೂರ್ಣವಾಗುವ ಹಿನ್ನೆಲೆಯಲ್ಲಿ ಸಂಸತ್ತಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಭದ್ರತಾ ಲೋಪ ವಿಚಾರ ಎತ್ತದಿರಲು. 

ದುಃಖವಾಗಿದೆ 
ಸಂಸತ್‌ನ ಮುಂದೆ ಮಂಡಿಸುವ ಮುನ್ನ ಮಾಧ್ಯಮಗಳಿಗೆ ವರದಿ ನೀಡುವಷ್ಟು ಚಾರಿತ್ರ್ಯಹೀನ ನಾನಲ್ಲ. ನನಗೆ ಇದರಿಂದ ದುಃಖವಾಗಿದೆ. 
ನ್ಯಾ. ಎಂ.ಎಸ್.ಲಿಬರ್ಹಾನ್ 

ಬಹಿರಂಗಪಡಿಸಿಲ್ಲ 
ಇಂಥ ಸೂಕ್ಷ್ಮ ವರದಿ ಬಹಿರಂಗಪಡಿಸುವಷ್ಟು ಮೂರ್ಖ ನಾನಲ್ಲ. ಯಾವ ಮಾಧ್ಯಮ ಪ್ರತಿನಿಧಿಯೂ ನನ್ನೊಂದಿಗೆ ಮಾತನಾಡಿಲ್ಲ. 
ಪಿ. ಚಿದಂಬರಂ 

ಆಘಾತವಾಗಿದೆ 
ನನಗೆ ಆಘಾತವಾಗಿದೆ. ಅಧಿವೇಶನದ ವೇಳೆಯೇ ಕೇಂದ್ರ, ಸರ್ಕಾರ ಮಾಧ್ಯಮಗಳಿಗೆ ವರದಿ ಸೋರಿಕೆಯಾಗುವಂತೆ ಮಾಡಿದ್ದೇಕೆ? 
ಎಲ್.ಕೆ. ಆಡ್ವಾಣಿ 
 
ಸೌಜನ್ಯ: ಕನ್ನಡಪ್ರಭ 
 

Share: