ಭಟ್ಕಳ, ಫೆಬ್ರವರಿ ೫: ಶಿರಾಲಿಯ ಪ್ರಸಿದ್ಧ ಶ್ರೀ ಪೇಟೆ ವಿನಾಯಕ, ಶಾಂತಾ ದುರ್ಗಾ ಯಾನೆ ಶ್ರೀ ಮಹಾಗಣಪತಿ ಮಹಮ್ಮಾಯಾ ದೇವಸ್ಥಾನ ಶಿರಾಲಿ ಇಲ್ಲಿನ ಅರ್ಚಕ ವೆಂಕಟೇಶ ಶ್ರೀನಿವಾಸ ಭಟ್ಟ ಇವರ ಅರ್ಚಕತನಕ್ಕೆ ಯಾವುದೇ ರೀತಿಯಿಂದ ಹಸ್ತಕ್ಷೇಪ ಮಾಡದಂತೆ ದೇವಸ್ಥಾನದ ಕೇಂದ್ರ ಆಡಳಿತ ಕಮಿಟಿಗೆ ಭಟ್ಕಳ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಹೊನ್ನಾವರದ ಹಿರಿಯ ವಿಭಾಗದ ನ್ಯಾಯಾಲಯ ಎತ್ತಿ ಹಿಡಿದು ವೆಂಕಟೇಶ ಭಟ್ಟರ ಪರವಾಗಿ ತೀರ್ಪು ನೀಡಿದೆ.
ಭಟ್ಕಳ ಸಿವಿಲ್ (ಕಿ.ವಿ) ನ್ಯಾಯಾಲಯದಲ್ಲಿ ಶ್ರೀ ಪೇಟೆ ವಿನಾಯಕ, ಶಾಂತಾ ದುರ್ಗಾ ದೇವಸ್ಥಾನದ ಅನುವಂಶೀಯ ಅರ್ಚಕ ತಾನೆಂದು ವೆಂಕಟೇಶ ಶ್ರೀನಿವಾಸ ಭಟ್ಟ ಅವರು ತಮಗೆ ಕೇಂದ್ರ ಆಡಳಿತ ಕಮಿಟಿಯ ಅಧ್ಯಕ್ಷರೆಂದು ಹೇಳಿಕೊಳ್ಳುವುವವರಿಂದ ಅರ್ಚಕತನಕ್ಕೆ ಧಕ್ಕೆಯಾಗಿದ್ದು ತನ್ನನ್ನು ವಜಾ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಇದು ನ್ಯಾಯ ಬಾಹೀರವಾಗಿದ್ದು ತಾನು ಶ್ರೀ ದೇವಸ್ಥಾನದ ಅನುವಂಶೀಯ ಅರ್ಚಕನಾಗಿದ್ದು ತಮ್ಮ ವಂಶದವರು ಸುಮಾರು ೨೭೫ ವರ್ಷಗಳಿಗೂ ಹಿಂದಿನಿಂದ ದೇವಸ್ಥಾನದ ಪೂಜೆಯನ್ನು ಯಾವುದೇ ಫಲಾಫೇಕ್ಷ ಇಲ್ಲದೇ ಮಾಡಿ ಬಂದಿದ್ದೇವೆ. ಕೇಂದ್ರ ಆಡಳಿತ ಕಮಿಟಿಯಾಗಲೀ, ಇತರ ಯಾರಿಗೇ ಆಗಲಿ ತಮ್ಮ ಅರ್ಚಕತನದ ಹಕ್ಕನ್ನು ಪ್ರಶ್ನಿಸಲು ಬರಲಾರದು ಎಂದು ವಾದಿಸಿದ್ದರು.
ತಮ್ಮ ಪರ್ಯಾಯ ಪೂಜೆಯ ಹಕ್ಕನ್ನು ರದ್ದುಗೊಳಿಸುವುದಾಗಲಿ, ತಮ್ಮನ್ನು ಪೂಜೆ ಮಾಡದಂತೆ ತಡೆಯುವುದಾಗಲೀ ನಡೆಯಕೂಡದೂ ಎಂದು ವಾದಿಸಿದ್ದ ಸದ್ರಿಯವರ ವಿರುದ್ಧ ಖಾಯಂ ತಾಕೀನಿನ ಆದೇಶಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರು. ಎರಡೂ ಕಡೆಯವರ ವಾದ ವಿವಾದವನ್ನು ಆಲಿಸಿದ ನ್ಯಾಯಾಲಯ ದೇವಸ್ಥಾನದ ಅನುವಂಶಿಕ ಪಯಾಯ ಅರ್ಚಕರಾದ ವೆಂಕಟೇಶ ಶ್ರೀನಿವಾಸ ಭಟ್ಟ ಇವರ ಅರ್ಚಕತನದ ಹಕ್ಕಿಗೆ ಯಾವುದೇ ತೊಂದರೆ ನೀಡದಂತೆ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆಯನ್ನು ಪ್ರಶ್ನಿಸಿ ದೇವಸ್ಥಾನದ ಆಡಳಿತ ಕಮಿಟಿ ಹೊನ್ನಾವರದ ಕಿರಿಯ ವಿಭಾಗದ ನ್ಯಾಯಾಲಯದಲ್ಲಿ ಆಫೀಲು ಸಲ್ಲಿಸಿ, ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿತ್ತು. ಎರಡು ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ವೆಂಕಟೇಶ ಭಟ್ಟರ ಪರ ನ್ಯಾಯವಾದಿ ವಿ.ಎಫ್. ಗೋಮ್ಸ ಮತ್ತು ಎಂ. ಎಂ. ಜಾಲಿಸತ್ಗಿ ಅವರ ವಾದವನ್ನು ಎತ್ತಿ ಹಿಡಿದು ತಡೆಯಾಜ್ಞೆಯನ್ನು ತೆರವುಗೊಳಿಸಲು ನಿರಾಕರಿಸಿ ಭಟ್ಕಳ ನ್ಯಾಯಾಲಯ ಆದೇಶವನ್ನೇ ಎತ್ತಿಹಿಡಿದಿದೆ.