ಬೆಂಗಳೂರು,೨೭:ರಾಸಲೀಲೆ ಪ್ರಕರಣದಲ್ಲಿ ದೇಶಾದ್ಯಂತ ಕುಖ್ಯಾತಿಗೆ ಒಳಗಾಗಿರುವ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯ ಪ್ರಕರಣ ದಿನದಿಂದ ದಿನಕ್ಕೆ ವಿಚಿತ್ರ ತಿರುವುಗಳನ್ನು ಪಡೆಯುತ್ತಿದ್ದು, ಸ್ವಾಮೀಜಿ ಕನ್ನಡ ಹಾಗೂ ತಮಿಳು ಚಿತ್ರರಂಗದ ಹಲವಾರು ಚಿತ್ರನಟಿಯರೊಂದಿಗೆ ಸಂಬಂಧಹೊಂದಿರುವುದು ಬೆಳಕಿಗೆ ಬಂದಿದೆ.
ರಾಜ್ಯದ ಸಿಐಡಿ ಪೊಲೀಸರು ಸ್ವಾಮೀಜಿ ಅವರ ಆಶ್ರಮದಿಂದ ವಶಪಡಿಸಿಕೊಂಡಿರುವ ನೂರಾರು ಸಿಡಿಗಳಿಂದ ಇದು ಸಾಬೀತಾಗಿದ್ದು, ಇವುಗಳನ್ನು ನೋಡುವುದೇ ಪೊಲೀಸರಿಗೆ ದೊಡ್ಡ ಕೆಲಸವಾಗಿ ಪರಿಣಮಿಸಿದೆ.
ವಿಶ್ವಸನೀಯ ಮೂಲಗಳು ಈ ವಿಷಯ ತಿಳಿಸಿದ್ದು, ಈ ಪೈಕಿ ಕನ್ನಡ ಚಿತ್ರರಂಗದ ಹತ್ತಾರು ನಟಿಯರೊಂದಿಗೆ ಸಂಬಂಧಹೊಂದಿರುವ ಪುರಾವೆಗಳು ಲಭ್ಯವಾಗಿವೆ. ತಮಿಳು ಚಿತ್ರರಂಗದ ಹಲವಾರು ಖ್ಯಾತನಾಮರೊಂದಿಗೆ ದೈಹಿಕ ಸುಖ ಅನುಭವಿಸಿರುವ ಬಗ್ಗೆಯೂ ಮಾಹಿತಿ ಸಂಗ್ರಹವಾಗುತ್ತಿದೆ.
ಆದರೆ ಸ್ವಾಮೀಜಿ ಈ ಕುರಿತು ಪೊಲೀಸರಿಗೆ ತನಿಖೆಗಾಗಿ ಹೆಚ್ಚಿನ ರೀತಿಯಲ್ಲಿ ಸಹಕರಿಸುತ್ತಿಲ್ಲ. ಆರೋಗ್ಯ, ಧ್ಯಾನ, ಯೋಗದ ನೆಪ ಹೇಳಿ ಪೊಲೀಸರನ್ನೇ ಹಾದಿತಪ್ಪಿಸುವ ಚಾಣಾಕ್ಷತನವನ್ನು ಪ್ರದರ್ಶಿಸುತ್ತಿದ್ದಾನೆ. ಆದರೂ ಪೊಲೀಸರು ಸ್ವಾಮೀಜಿಯನ್ನು ಬಿಡುತ್ತಿಲ್ಲ.
ಶ್ರೀಮಂತ ಮನೆತನದ ಮಹಿಳೆಯರು, ಚಿತ್ರನಟಿಯರೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಸಿಡಿಗಳನ್ನು ಹೊರದೇಶಗಳಲ್ಲಿ ಪ್ರದರ್ಶಿಸಿ ಅದನ್ನು ಬಂಡವಾಳ ಮಾಡಿಕೊಳ್ಳುತ್ತಿದ್ದ ಎಂದು ಇದೇ ಮೂಲಗಳು ತಿಳಿಸಿವೆ.
ಈ ಮಧ್ಯೆ ಹೃದಯಬೇನೆ ಎಂದು ನಿನ್ನೆ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಕಚೇರಿಗೆ ಬಿಗಿ ಭದ್ರತೆಯಲ್ಲಿ ತರಲಾಗಿದೆ. ಅಲ್ಲಿ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ನಾಳೆ ಸ್ವಾಮೀಜಿ ಅವರ ಪೊಲೀಸ್ ಕಸ್ಟಡಿ ಅವಧಿ ಪೂರ್ಣಗೊಳ್ಳಲಿದ್ದು, ಸಾಕಷ್ಟು ಮಾಹಿತಿ ಕಲೆ ಹಾಕುವ ಕೆಲಸ ಇನ್ನೂ ಬಾಕಿಯಿದೆ. ನಾಳೆ ಮತ್ತೆ ಸ್ವಾಮೀಜಿ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿತ್ತಿದ್ದಾರೆ.