ಬೆಂಗಳೂರು,ಏ,೨೭-ಸಾದರ ಲಿಂಗಾಯತ ಉಪವರ್ಗವನ್ನು ಹಿಂದುಳಿದ ೨ಎ ಪ್ರವರ್ಗಕ್ಕೆ ಸೇರಿಸಿಲ್ಲದಿದ್ದರೂ ವಿನಾಕಾರಣ ಅಪಪ್ರಚಾರ ಮಾಡುತ್ತಿರುವ ಪ್ರತಿಪಕ್ಷಗಳು ರಾಜ್ಯದಲ್ಲಿ ವರ್ಗ ಸಂಘರ್ಷ ಹುಟ್ಟು ಹಾಕುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ,ಇಂತಹ ಪ್ರತಿಪಕ್ಷಗಳಿಗೆ ಜನ ಛೀಮಾರಿ ಹಾಕಬೇಕು ಎಂದು ಕರೆ ನೀಡಿದ್ದಾರೆ.
ಇಂದು ತಮ್ಮ ಗೃಹ ಕಛೇರಿ ಕೃಷ್ಣಾದಲ್ಲಿ ಸುದ್ಧಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು, ಸಾದರ ಲಿಂಗಾಯತ ಉಪವರ್ಗವನ್ನು ಹಿಂದುಳಿದ ೨ಎ ಪ್ರವರ್ಗಕ್ಕೆ ಸೇರಿಸಿಯೇ ಇಲ್ಲ, ಹಾಗೇನಾದರೂ ಇದು ನಿಜವಾಗಿದ್ದರೆ ಪ್ರತಿಪಕ್ಷಗಳು ಈ ಕುರಿತ ದಾಖಲೆಯನ್ನು ಬಹಿರಂಗಪಡಿಸಲಿ ಎಂದು ಸವಾಲೆಸೆದರು.
ಬಿಬಿಎಂಪಿ ಚುನಾವಣೆಯಲ್ಲಿ ಸೋತು ಹತಾಶಗೊಂಡಿರುವ ಪ್ರತಿಪಕ್ಷಗಳು ವಿನಾಕಾರಣ ಇಲ್ಲ ಸಲ್ಲದ ವಿಷಯವನ್ನು ಬಳಸಿ ಜನರನ್ನು ಗೊಂದಲಕ್ಕೆ ಸಿಕ್ಕಿಸಲು ಪ್ರಯತ್ನಿಸುತ್ತಿವೆ ಎಂದು ಅವರು ನೇರವಾಗಿ ಆರೋಪಿಸಿದರು.
ಈ ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ,ಕಾಗೋಡು ತಿಮ್ಮಪ್ಪ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ೧೨೦ ಜಾತಿಗಳನ್ನು ಹಿಂದುಳಿದ ೨ಎ ಪ್ರವರ್ಗಕ್ಕೆ ಸೇರಿಸುವಂತೆ ಸರ್ಕಾರ ಆದೇಶ ಹೊರಡಿಸಿತ್ತು.
ಸದರಿ ಆದೇಶವನ್ನು ಜಾರಿಗೊಳಿಸಿ ಎಂದು ನಾವು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದ ಅವರು, ಹಿಂದೆ ಹೊರಡಿಸಿದ್ದ ಸರ್ಕಾರಿ ಆದೇಶದ ಪ್ರತಿಯನ್ನು ಬಹಿರಂಗಪಡಿಸಿ ಇದರಲ್ಲಿ ಸಾದರ ಲಿಂಗಾಯತ ಉಪವರ್ಗವನ್ನು ಹಿಂದುಳಿದ ೨ಎ ಪ್ರವರ್ಗಕ್ಕೆ ಸೇರಿಸಲು ಸೂಚಿಸಲಾಗಿದೆಯೇ ನೋಡಲಿ ಎಂದು ಸವಾಲು ಹಾಕಿದರು.
ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಇಂತಹ ಅಪಪ್ರಚಾರ ನಡೆಸಲು ಮುಂದಾಗಿರುವ ಪ್ರತಿಪಕ್ಷಗಳಿಗೆ ಆ ಮೂಲಕ ರಾಜ್ಯದಲ್ಲಿ ವರ್ಗ ಸಂಘರ್ಷವನ್ನು ಹುಟ್ಟು ಹಾಕುವ ಬಯಕೆ ಇದೆ ಎಂದ ಅವರು, ಇಂತಹ ಆಟ ನಮ್ಮ ಮುಂದೆ ನಡೆಯುವುದಿಲ್ಲ ಎಂದು ವ್ಯಂಗ್ಯವಾಡಿದರು.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿ ಈ ಕುರಿತು ಸ್ಪಷ್ಟೀಕರಣ ಪಡೆದಿದ್ದಾರೆ. ಇಷ್ಟಾದ ನಂತರವೂ ಅವರು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಕಳೆದೆರಡು ವರ್ಷಗಳ ಅವಧಿಯಲ್ಲಿ ಸರ್ಕಾರಕ್ಕೆ ಬಂದ ಜನಮನ್ನಣೆಯನ್ನು ನೋಡಿ ಪ್ರತಿಪಕ್ಷಗಳಿಗೆ ತಡೆಯಲಾಗದ ಸಂಕಟವಾಗುತ್ತಿದೆ. ಹೀಗಾಗಿ ಸರ್ಕಾರದ ವರ್ಚಸ್ಸನ್ನು ಕುಗ್ಗಿಸಲು ಅಪಮಾರ್ಗವನ್ನು ಹಿಡಿಯುತ್ತಿವೆ. ಇಂತಹ ಪ್ರತಿಪಕ್ಷಗಳಿಗೆ ಜನ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಇವತ್ತು ಸಿದ್ಧರಾಮಯ್ಯ ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ಇಲ್ಲ ಸಲ್ಲದ ಮಾತನಾಡುತ್ತಿದ್ದಾರೆ. ನಾನು ವಿಧಾನಮಂಡಲ ಅಧಿವೇಶನದಲ್ಲೇ ಈ ಬಗ್ಗೆ ವಿವರವಾಗಿ ತಿಳಿಸಿದ್ದೇನೆ. ಜಾಗತಿಕ ಆರ್ಥಿಕ ಕುಸಿತವಿದ್ದರೂ ಕಳೆದ ವರ್ಷ ಶೇಕಡಾ ಆರರಷ್ಟು ಪ್ರಮಾಣದಲ್ಲಿ ಹೆಚ್ಚುವರಿಯಾಗಿ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದೂ ಅವರು ವಿವರ ನೀಡಿದರು.
ಇದೇ ರೀತಿ ರಾಜ್ಯದ ಹಣಕಾಸು ನಿರ್ವಹಣೆಯನ್ನು ಮೆಚ್ಚಿ ಕೇಂದ್ರ ಯೋಜನಾ ಆಯೋಗವೂ ಶಹಭ್ಭಾಸ್ಗಿರಿ ನೀಡಿದೆ. ಹಾಗೆಯೇ ರಾಜ್ಯದ ಯೋಜನಾ ಗಾತ್ರದ ಪ್ರಮಾಣವನ್ನು ೩೧,೦೦೦ ಕೋಟಿ ರೂಗಳಿಗೆ ಹಿಗ್ಗಿಸಿದೆ ಎಂದು ಸಮರ್ಥಿಸಿಕೊಂಡರು.
ಯೋಜನಾ ಗಾತ್ರದಲ್ಲಿ ಈ ಹಿಂದೆ ನಿಗದಿ ಪಡಿಸಿದ ಹಣದಲ್ಲೂ ಹೆಚ್ಚು ಪ್ರಮಾಣದ ಹಣವನ್ನು ನಾವು ವೆಚ್ಚ ಮಾಡಿರುವುದಾಗಿ ನುಡಿದ ಅವರು, ಈ ಎಲ್ಲದರ ಮಧ್ಯೆಯೂ ಸಿದ್ಧರಾಮಯ್ಯ ಹಣಕಾಸು ಪರಿಸ್ಥಿತಿಯ ಬಗ್ಗೆ ದಾರಿ ತಪ್ಪಿಸುವ ಮಾತನಾಡುತ್ತಿದ್ದಾರೆ ಎಂದು ದೂರಿದರು.
ಅವರಿಗೆ ಅವರ ಪಕ್ಷದಲ್ಲಿ ನೆಲೆಯೂ ಇಲ್ಲ,ಬೆಲೆಯೂ ಇಲ್ಲ,ಹೀಗಾಗಿ ಅಲ್ಲಿ ತಮ್ಮ ಅಸ್ತಿತ್ವವನ್ನು ತೋರಿಸಲು ವಿನಾಕಾರಣದ ಟೀಕೆಗಳಿಗೆ ಮುಂದಾಗುತ್ತಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದರು.
ಈ ಮಧ್ಯೆ ರಾಜ್ಯದಲ್ಲಿ ನಡೆಯಲಿರುವ ಗ್ರಾಮಪಂಚಾಯ್ತಿ ಚುನಾವಣೆಗಳ ಹಿನ್ನೆಲೆಯಲ್ಲಿ ಆಕ್ರಮವಾಗಿ ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ದೇವೇಗೌಡರ ಷ್ಯ ದತ್ತ ಟೀಕಿಸುತ್ತಿದ್ದಾರೆ. ಅದಕ್ಕೆ ನಾನು ಹೇಗೆ ಕಾರಣನಾಗುತ್ತೇನೆ? ಹಾಗೇನಾದರೂ ನಕಲಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಕೆಲಸ ನಡೆದಿದ್ದರೆ ಇವರು ನ್ಯಾಯಾಲಯಕ್ಕೆ ಹೋಗಲಿ, ಚುನಾವಣಾ ಆಯೋಗಕ್ಕೆ ದೂರು ನೀಡಲಿ ಎಂದರು.
ರಾಜ್ಯದ ಖಾಸಗಿ ಅನುದಾನರಹಿತ ಪಾಲಿಟೆಕ್ನಿಕ್ಗಳಿಗೆ ಅನುದಾನ ನೀಡುವ ಸಂಬಂಧ ತನ್ನ ಇತಿಮಿತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಯಿಸಿದರು.