ಕಾರವಾರ,೨: ವಿಧಾನ ಪರಿಷತ್‌ನ ಒಂದು ಕ್ಷೇತ್ರಕ್ಕೆ ಉತ್ತರ ಕನ್ನಡ ಜಿಲ್ಲೆಯಿಂದ ಒಟ್ಟು ೫ ಜನ ನಾಮಪತ್ರ ಸಲ್ಲಿಸಿದ್ದು, ಇಂದು ಮೂವರು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಕಾಂಗ್ರೆಸ್ ನಿಂದ ಎಸ್. ಎಲ್. ಘೋಟ್ನೇಕರ್, ಬಿಜೆಪಿಯಿಂದ ವಿನೋದ ಪ್ರಭು, ಪಕ್ಷೇತರರಾಗಿ ಅದಿರು ಉದ್ಯಮಿ ಅನಿಲ್ ಕುಮಾರ್ ನಾಮಪತ್ರಗಳನ್ನು ಚುನಾವಣಾಧಿಕಾರಿ ಚೆನ್ನಪ್ಪಗೌಡರಿಗೆ ಸಲ್ಲಿಸಿದರು.

.


ಸೋಮವಾರ ಪಕ್ಷೇತರರಾಗಿ ಎಂ.ಎಂ.ನಾಯ್ಕ, ಶಶಿಕಾಂತ ನಾಯ್ಕ ನಾಮಪತ್ರ ಸಲ್ಲಿಸಿದ್ದರು. ಇಂದು ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಬಲಪ್ರದರ್ಶನ ಮಾಡಿದವು. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ ಅನಿಲ್ ಕುಮಾರ್ ಸಹ ತಮ್ಮ ನೂರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಅದಿರು ಉದ್ಯಮಿ ಅನಿಲ್ ಕುಮಾರ್ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ತಲೆನೋವಾಗಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಲ್.ಎಲ್.ಘೋಟ್ನೇಕರ್ ನಾಮಪತ್ರ ಸಲ್ಲಿಸುವಾಗ ಕೆಪಿಸಿಸಿ ಅಧ್ಯಕ್ಷ ಆರ್. ವಿ. ದೇಶಪಾಂಡೆ, ಡಿಸಿಸಿ ಅಧ್ಯಕ್ಷ ಶಾಂತಾರಾಮ್ ಹೆಗಡೆ, ರಮಾನಂದ ನಾಯಕ, ಜಿ.ಪಂ.ಅಧ್ಯಕ್ಷ ಎಲ್. ವಿ.ಶಾನಭಾಗ, ಉಪಾಧ್ಯಕ್ಷೆ ಪುಷ್ಪಾ ನಾಯ್ಕ, ಮಾಜಿ ಅಧ್ಯಕ್ಷೆ ಗಾಯತ್ರಿ ಗೌಡ,ಮೋಂಟಿ ಫರ್ನಾಂಡೀಸ್, ದೀಪಕ್ ಹೊನ್ನಾವರ,ಅದಿರು ಉದ್ಯಮಿ ಸತೀಶ್ ಸೈಲ್ ಸೇರಿದಂತೆ ಕಾಂಗ್ರೆಸ್ ಧುರೀಣರ ಮತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ದಂಡು ಇತ್ತು.
ಬಿಜೆಪಿ ಅಭ್ಯರ್ಥಿ ವಿನೋದ ಪ್ರಭು ನಾಮಪತ್ರ ಸಲ್ಲಿಸುವಾಗ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಆನಂದ ಅಸ್ನೋಟಿಕರ್, ನಗರಸಭೆಯ ಅಧ್ಯಕ್ಷ ಗಣಪತಿ ಉಳ್ವೇಕರ್, ಕೆಡಿಎ ಅಧ್ಯಕ್ಷ ಆರ್.ಜಿ.ನಾಯ್ಕ, ಉಲ್ಲಾಸ್ ರೇವಣಕರ್ , ಪ್ರಸಾದ್ ಕಾರವಾರಕರ್, ನಿತಿನ್ ಪಿಕಳೆ , ನಾಗರಾಜ್ ಜೋಶಿ, ರಾಜೇಶ್ ನಾಯ್ಕ ,ನಯನಾ ನಂದನ್ ನೀಲಾವರ, ಜಿ.ಪಂ.ಸದಸ್ಯ ಶಾಂತಾ ಬಾಂದೇಕರ್, ಭಾಸ್ಕರ್ ನಾರ್ವೇಕರ್, ಮದನ್ ನಾಯ್ಕ, ಶಶಿಭೂಷಣ ಹೆಗಡೆ ಸೇರಿದಂತೆ ಸಾವಿರಾರು ಜನ ಕಾರ್ಯಕರ್ತರು ಇದ್ದರು. ಮಾಜಿ ಸಚಿವ ಶಿವಾನಂದ ನಾಯ್ಕ, ಆರ್.ಎನ್.ನಾಯಕ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ದೇಶಪಾಂಡೆ ವಿಶ್ವಾಸ :
ವಿಧಾನಪರಿಷತ್ ಉತ್ತರ ಕನ್ನಡ ಕ್ಷೇತ್ರವನ್ನು ‘ಟು ಹನ್‌ಡ್ರೆಡ್ ಪರಸೆಂಟ್’ ಗೆಲ್ಲುವುದಾಗಿ ಕೆಪಿಸಿಸಿ ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು. ಅಭ್ಯರ್ಥಿ ಘೋಟ್ನೇಕರ್ ಸಹ ಗೆಲ್ಲುವ ಭರವಸೆ ಇದೆ ಎಂದರು. ಪಂಚಾಯತ್ ರಾಜ್ಯ ವ್ಯವಸ್ಥೆಗೆ ಜೀವ ತುಂಬಿದ್ದು ಕಾಂಗ್ರೆಸ್. ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಗ್ರಾ.ಪಂ.ಗಳಿಗೆ ಜೀವ ತುಂಬಿದ್ದಾರೆ. ಬಿಜೆಪಿ ಸರ್ಕಾರ ಪಂಚಾಯತ್ ರಾಜ್ಯ ವ್ಯವಸ್ಥೆಯ ಕತ್ತು ಹಿಚುಕಿದೆ. ತಾ.ಪಂ. ಮತ್ತು ಜಿ.ಪಂ.ಗಳ ಅಧಿಕಾರ ಮೊಟಕು ಗೊಳಿಸಿದೆ. ಇದೇ ವಿಷಯ ಇಟ್ಟುಕೊಂಡು ಚುನಾವಣೆ ಗೆಲ್ಲುವುದಾಗಿ ದೇಶಪಾಂಡೆ ಹೇಳಿದರು.
ಕಾಗೇರಿ ವಿಶ್ವಾಸ:
ಜಿಲ್ಲೆಯಲ್ಲಿ ಬಿಜೆಪಿ ಮತದರರು ಇದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹಾಗಾಗಿ ನಮ್ಮ ಗೆಲುವು ಸುಲಭ. ಸರ್ಕಾರದ ಸಾಧನೆಗಳು ಇವೆ. ವಿನೋದ ಪ್ರಭು ಜಿಲ್ಲೆಯ ಜನಪ್ರತಿನಿಧಿಗಳಿಗೆ ಪರಿಚಿತರು. ಅವರ ಗೆಲುವು ಈ ಕಾರಣದಿಂದ ಸುಲಭ ಎಂದರು.
ಅನಿಲ್ ವಿಶ್ವಾಸ:
ನಾನು ಮಾನಸಿಕವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಇಲ್ಲ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಸ್ನೇಹಿತರಿದ್ದು, ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮತದಾರರ ಮನಗೆದ್ದು, ವಿಧಾನಪರಿಷತ್ ಪ್ರವೇಶಿಸುವ ವಿಶ್ವಾಸ ಇದೆ ಎಂದು ಅದಿರು ಉದ್ಯಮಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ ನಂತರ ನುಡಿದರು. ನಾಮಪತ್ರವನ್ನು ವಾಪಾಸ್ ಪಡೆಯುವುದಿಲ್ಲ. ಚುನಾವಣೆಯ ಕಣದಲ್ಲಿ ಉಳಿಯುವೆ. ಈ ನಿರ್ಧಾರ ಅಚಲ ಎಂದು ಅವರು ಹೇಳಿದರು.
ಚಿತ್ರ, ವರದಿ: ನಾಗರಾಜ ಹರಪನಹಳ್ಳಿ, ಕಾರವಾರ.