ಬೆಂಗಳೂರು,ಫೆಬ್ರವರಿ ೮-ಸಚಿವ ಸ್ಧಾನಕ್ಕಾಗಿ ಮತ್ತೆ ಪ್ರಬಲ ಪೈಪೋಟಿ ನಡೆಸಿದ್ದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗೆ ನೇಮಿಸಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ.
ಶೋಭಾ ಕರಂದ್ಲಾಜೆ ಅವರನ್ನು ಮತ್ತೆ ಮಂತ್ರಿಮಂಡಲಕ್ಕೆ ಸೇರ್ಪಡೆಮಾಡಿಕೊಂಡು ಇಲ್ಲದ ರದ್ದಾಂತ ಸೃಷ್ಟಿಸುವ ಬದಲು ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸ್ಧಾನಕ್ಕೆ ನೇಮಿಸುವುದು ಸೂಕ್ತ ಎಂಬ ನಿಲುವಿಗೆ ಪಕ್ಷದ ಮುಖಂಡರು ಬಂದಿದ್ದಾರೆ.
ಅವರ ಹೆಸರನ್ನು ಸಧ್ಯದಲ್ಲೇ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗೆ ಶಿಫಾರಸ್ಸು ಮಾಡಲಿದ್ದು, ರಾಜ್ಯದ ಮಹಿಳೆಯೊಬ್ಬರು ರಾಷ್ಟ್ರಮಟ್ಟದಲ್ಲಿ ಉನ್ನತ ಹುದ್ದೆಗೆ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ.
ಯಡಿಯೂರಪ್ಪ ಸಂಪುಟದಲ್ಲಿ ಈ ಹಿಂದೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿಯ ಹಲವು ಶಾಸಕರು ತಿರುಗಿಬಿದ್ದಿದ್ದರು. ಗಣಿ ರೆಡ್ಡಿಗಳ ಬಂಡಾಯದಿಂದಾಗಿ ಅವರು ತಮ್ಮ ಸಚಿವ ಸ್ಧಾನ ತೆರವುಗೊಳಿಸಿದ್ದರು.
ಶಾಸಕರ ಈ ಮನ:ಸ್ಥಿತಿಯನ್ನು ಅಸ್ತ್ರವನ್ನಾಗಿ ಪರಿವರ್ತಿಸಿಕೊಂಡ ಗಣಿ ರೆಡ್ಡಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಬಂಡಾಯವೆದ್ದಿದ್ದರಲ್ಲದೇ ಅಂತಿಮವಾಗಿ ಶೋಭಾ ಕರಂದ್ಲಾಜೆ ಅವರ ತಲೆದಂಡ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿರುವ ನಿತಿನ್ ಗಡ್ಕರಿ ಅವರನ್ನು ಈಗಾಗಲೇ ಭೇಟಿ ಮಾಡಿ ಮಾತುಕತೆ ನಡೆಸಿರುವ ಶೋಭಾ ಕರಂದ್ಲಾಜೆ ರಾಷ್ಟ್ರಮಟ್ಟದಲ್ಲಿ ಉನ್ನತ ಹುದ್ದೆಗೇರುವ ಕನಸು ಕಾಣುತ್ತಿದ್ದಾರೆ. ಇದಕ್ಕೆ ಪೂರಕವಾದ ಬೆಳವಣಿಗೆಗಳು ರಾಜ್ಯದಲ್ಲಿ ಸಂಭವಿಸುತ್ತಿವೆ.
ಇದಲ್ಲದೇ ಸಂಘಪರಿವಾರ ಹಾಗೂ ಲೋಕಸಭೆ ವಿಪಕ್ಷ ನಾಯಕಿ ಸುಷ್ಮಾಸ್ವರಾಜ್ ಅವರನ್ನು ಭೇಟಿ ಮಾಡಿ ಅವರ ಸಹಾನುಭೂತಿ ಗಿಟ್ಟಿಸುವಲ್ಲಿಯೂ ಶೋಭಾಕರಂದ್ಲಾಜೆ ಯಶಸ್ವಿಯಾಗಿದ್ದು, ಇದು ಅವರು ಉನ್ನತ ಹುದ್ದೆಗೇರಲು ಸೂಕ್ತ ವೇದಿಕೆ ನಿರ್ಮಾಣ ಮಾಡಲು ವೇದಿಕೆ ಸಿದ್ಧವಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಶೋಭಾ ಕರಂದ್ಲಾಜೆ ಅವರನ್ನು ಬಜೆಟ್ ಅಧಿವೇಶನದ ನಂತರ ನಡೆಯಲಿರುವ ಸಂಪುಟ ಪುನರ್ರಚನೆ ಸಂಧರ್ಭದಲ್ಲಿ ಪುನ; ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮಾತುಗಳು ಕೇಳಿ ಬಂದಿದ್ದವು.
ಆದರೆ ಇದೀಗ ಶೋಭಾ ಕರಂದ್ಲಾಜೆ ಅವರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವ ಬದಲು ರಾಷ್ಟ್ರಮಟ್ಟದಲ್ಲಿ ಪಕ್ಷದ ಸೇವೆಗಾಗಿ ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯ ಸ್ವತ: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ವ್ಯಕ್ತವಾಗಿದೆ ಎಂದು ಮೂಲಗಳು ವಿವರ ನೀಡಿವೆ.
ಮಂತ್ರಿ ಮಂಡಲಕ್ಕೆ ಶೋಭಾ ಕರಂದ್ಲಾಜೆ ಅವರನ್ನು ಪುನ: ತೆಗೆದುಕೊಂಡರೆ ಮಂತ್ರಿ ಪದವಿ ಆಕಾಂಕ್ಷಿಗಳಲ್ಲದೇ ಹಲವು ಶಾಸಕರು ಅಸಮಾಧಾನಗೊಳ್ಳುತ್ತಾರೆ. ಹಾಗೆ ಮಾಡಿ ಸರ್ಕಾರವನ್ನು ದುರ್ಬಲಗೊಳಿಸಿಕೊಳ್ಳುವ ಬದಲು ಶೋಭಾ ಅವರನ್ನು ಪಕ್ಷದ ಸೇವೆಗೆ ಬಳಸಿಕೊಳ್ಳಬೇಕು ಎಂದು ಸಂಘಪರಿವಾರ ಹಾಗೂ ಬಿಜೆಪಿ ಪ್ರಮುಖರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಹಮತ ವ್ಯಕ್ತಪಡಿಸಿದರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿಯೇ ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವಂತೆ ಸಧ್ಯದಲ್ಲೇ ಶಿಫಾರಸು ರವಾನಿಸಲು ಅವರು ಸಿಗ್ನಲ್ ನೀಡಿದ್ದಾರೆ ಎಂಬುದು ಮೂಲಗಳ ಹೇಳಿಕೆ.
ಸಧ್ಯದ ಪರಿಸ್ಥಿತಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗೆ ಕರ್ನಾಟಕದಿಂದ ಇಬ್ಬರ ಹೆಸರುಗಳು ಶಿಫಾರಸಾಗಿ ದೆಹಲಿಗೆ ಹೋಗಲಿವೆ.
ಈ ಪೈಕಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಂಸದ ಅನಂತಕುಮಾರ್ ಅವರ ಹೆಸರೇ ಸೂಚಿತವಾಗಲಿದ್ದು ಉಳಿದಂತೆ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗೆ ಶೋಭಾ ಕರಂದ್ಲಾಜೆ ಹೆಸರು ಸೂಚಿತವಾಗುವುದು ಬಹುತೇಕ ನಿಶ್ಚಿತವಾಗಿದೆ.
ಉಳಿದಂತೆ ಪಕ್ಷದ ರಾಜ್ಯ ಪಧಾಧಿಕಾರಿಗಳ ಆಯ್ಕೆಗಾಗಿ ನೆನ್ನೆ ನಡೆದ ಸಭೆಯಲ್ಲಿ ಕರಡು ಪಟ್ಟಿಯೊಂದನ್ನು ತಯಾರಿಸಲಾಗಿದೆ ಎಂದು ಮೂಲಗಳು ಹೇಳಿದ್ದು,ಅದೇ ಕಾಲಕ್ಕೆ ಪಕ್ಷದ ಮಾಜೀ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ ಅವರ ಹೆಸರನ್ನು ಪಕ್ಷದ ರಾಷ್ಟ್ರ್ರೀಯ ಕಾರ್ಯದರ್ಶಿ ಹುದ್ದೆಗೆ ಶಿಫಾರಸು ಮಾಡುವ ಬಗ್ಗೆಯೂ ಚರ್ಚೆ ನಡೆಯಿತೆನ್ನಲಾಗಿದೆ.