ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ನೈತಿಕ ಸ್ಥೈರ್ಯ ಕುಂದಿಸಲು ಸರ್ಕಾರದ ಹುನ್ನಾರ - ನೇಮಿಸದ ಉಪಲೋಕಾಯುಕ್ತ ಹುದ್ದೆ

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ನೈತಿಕ ಸ್ಥೈರ್ಯ ಕುಂದಿಸಲು ಸರ್ಕಾರದ ಹುನ್ನಾರ - ನೇಮಿಸದ ಉಪಲೋಕಾಯುಕ್ತ ಹುದ್ದೆ

Mon, 26 Apr 2010 18:50:00  Office Staff   S.O. News Service

ಬೆಂಗಳೂರು,ಏ,೨೬:ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ, ಇಡೀ ದೇಶಕ್ಕೇ ಮಾದರಿಯಾಗಿರುವ ಲೋಕಾಯುಕ್ತ ಸಂಸ್ಧೆಯ ನೈತಿಕ ಸ್ಧೈರ್ಯ ಕುಂದಿಸಲು ವ್ಯೆವಸ್ಧಿತ ಪಿತೂರಿ ನಡೆಸಿರುವ ರಾಜ್ಯ ಬಿಜೆಪಿ ಸರ್ಕಾರ, ಉಪಲೋಕಾಯುಕ್ತರನ್ನು ನೇಮಿಸದೇ ಲೋಕಾಯುಕ್ತ ವ್ಯವಸ್ಧೆಯ ಅರ್ದ ಭಾಗ ನಿಷ್ಕ್ರೀಯಗೊಳ್ಳುವಂತೆ ಮಾಡಿದೆ.

 

ಲೋಕಾಯುಕ್ತ ವ್ಯವಸ್ಧೆಯಲ್ಲಿ ಉಪಲೋಕಾಯುಕ್ತರ ಪಾತ್ರ ಪ್ರಮುಖವಾಗಿದ್ದು, ಈಗಿರುವ ಕಾನೂನಿನಂತೆ ಉಪಲೋಕಾಯುಕ್ತರ ಕೆಲಸವನ್ನು ಲೋಕಾಯುಕ್ತರು ಮಾಡಲು ಅವಕಾಶವಿಲ್ಲ. ಅನಾರೋಗ್ಯ ಇಲ್ಲವೆ ರಜೆಯ ಮೇಲೆ ತೆರಳಿದ ಸಂದರ್ಭದಲ್ಲಿ ಮಾತ್ರ ಉಪಲೋಕಾಯುಕ್ತರ ಕೆಲಸ ನಿರ್ವಹಿಸಲು ಲೋಕಾಯುಕ್ತರಿಗೆ ಅಧಿಕಾರವಿದೆ. ಇದನ್ನೇ ನೆಪಮಾಡಿಕೊಂಡು ಉಪಲೋಕಾಯುಕ್ತರನ್ನು ನೇಮಿಸದೇ ಬಿಜೆಪಿ ಸರ್ಕಾರ ಸತಾಯಿಸುತ್ತಿದೆ.

 

 

ಕಳೆದ ಡಿಸೆಂಬರ್‌ನಲ್ಲಿ ಉಪಲೋಕಾಯುಕ್ತ ಪತ್ರಿಬಸವನಗೌಡ ಸೇವೆಯಿಂದ ನಿವೃತ್ತರಾದರು. ನಾಲ್ಕು ತಿಂಗಳು ಕಳೆದರೂ ಉಪಲೋಕಾಯುಕ್ತರನ್ನು ನೇಮಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದರ ಪರಿಣಾಮ ಲೋಕಾಯುಕ್ತರ ಮುಂದೆ ೧೨, ೨೯೫ ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ. ನಾಲ್ಕು ತಿಂಗಳ ಅವಧಿಯಲ್ಲಿ ಕೇವಲ ೬೬ ಪ್ರಕರಣಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ.

 

ಲೋಕಾಯುಕ್ತರಿಗೆ ಬಂದಿರುವ ಎಲ್ಲಾ ಪ್ರಕರಣಗಳು ಸಾಮಾನ್ಯ ಜನತೆಗೆ ಸಂಬಂಧಪಟ್ಟದ್ದಾಗಿವೆ. ಬಡವರು, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರು, ಶೋಷಿತ ಸಮುದಾಯದವರು ಸರ್ಕಾರದಲ್ಲಿ ತಮ್ಮ ಕೆಲಸವಾಗಿಲ್ಲ ಎಂದು ಲೋಕಾಯುಕ್ತರಿಗೆ ದೂರು ನೀಡುತ್ತಾರೆ. ಸರ್ಕಾರದ ಧೋರಣೆಯಿಂದಾಗಿ ಇವರೆಲ್ಲರ ಅರ್ಜಿಗಳು ಇದೀಗ ನೆನೆಗುದಿಗೆ ಬೀಳುವಂತಾಗಿದೆ. ಇವರ ನೋವು ಕೇವಲ ಆರ್ತನಾದವಾದಂತಾಗಿದೆ.

 

 

ರಾಜ್ಯ ಸರ್ಕಾರವೇ ಒಪ್ಪಿಸಿದ ೨೪ ಇಲಾಖಾ ಪ್ರಕರಣಗಳು ಮುಕ್ತಾಯವಾಗಿದೆ. ಆದರೆ ಲೋಕಾಯುಕ್ತ ಕಾಯ್ದೆ ೧೪ [ ಎ ] ಅಡಿ ಇವುಗಳನ್ನು ಉಪಲೋಕಾಯುಕ್ತರೇ ವಿಲೇವಾರಿ ಮಾಡಬೇಕು. ಉಪಲೋಕಾಯುಕ್ತ ಪತ್ರಿಬಸವನ ಗೌಡ ಅವರ ನಿವೃತ್ತಿಯ ನಂತರ ಸರ್ಕಾರ ಹೆಚ್ಚುವರಿಯಾಗಿ ೧೪ ಪ್ರಕರಣಗಳಲ್ಲಿ ಇಲಾಖಾ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಶಿಫಾರಸ್ಸು ಮಾಡಿದೆ. ಈ ಎಲ್ಲಾ ಪ್ರಕರಣಗಳ ವಿಚಾರಣೆಗೆ ಉಪಲೋಕಾಯುಕ್ತರು ಬೇಕೇ ಬೇಕು.

 

 

ವಿಚಿತ್ರವೆಂದರೆ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವುದಾಗಿ ಪುಕ್ಕಟೆ ಭರವಸೆಗಳನ್ನು ನೀಡುತ್ತಿರುವ ಸರ್ಕಾರ, ಲೋಕಾಯುಕ್ತರಿಗೆ ಕೆಲಸ ಮಾಡಲು ಸಾಧ್ಯವಾಗದಂತಹ ಪರಿಸ್ಧಿತಿಗೆ ತಂದು ನಿಲ್ಲಿಸಿದೆ. ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾಗಿರುವ ಲೋಕಾಯುಕ್ತ ಸಂಸ್ಧೆ ಅರ್ಧಭಾಗದಷ್ಟು ಕೆಲಸ ಮಾಡಲಾರದ ಪ್ರಮಾಣದಲ್ಲಿ ನಿಷ್ಕ್ರೀಯವಾಗಿದೆ.

 

ಪೈಪೋಟಿ: ಈ ಮಧ್ಯೆ ಉಪಲೋಕಾಯುಕ್ತ ಹುದ್ದೆಗೇರಲು ಹಲವಾರು ಮಂದಿ ನಿವೃತ್ತ ನ್ಯಾಯಮೂರ್ತಿಗಳ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಕೆಲವರು ಕರಾವಳಿ ತೀರದ ಸ್ವಾಮೀಜಿಗಳನ್ನು ಹಿಡಿದುಕೊಂಡು ನಮ್ಮನ್ನು ಈ ಪ್ರಭಾವಿ ಹುದ್ದೆಗೆ ತರುವಂತೆ ಒತ್ತಡ ಹೇರುತ್ತಿದ್ದಾರೆ.

 

 

ಇನ್ನೂ ಕೆಲವರು ಸರ್ಕಾರದಲ್ಲಿ ಪ್ರಭಾವಿಗಳಾಗಿರುವ ಗಣಿ ರೆಡ್ಡಿಗಳ ಬಾಲ ಹಿಡಿದುಕೊಂಡಿದ್ದಾರೆ. ಗಣಿ ಕುರಿತ ಲೋಕಾಯುಕ್ತರ ವರದಿಯಿಂದ ತೀವ್ರ ಮುಜುಗರ ಹಾಗೂ ಕೆಂಡಮಂಡಲವಾಗಿರುವ ಗಣಿ ರೆಡ್ಡಿಗಳು ಉಪಲೋಕಾಯುಕ್ತರ ಹುದ್ದೆಗೆ ತಮ್ಮ ಬೆಂಬಲಿಗರನ್ನೇ ತರಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ತಮ್ಮ ರಕ್ಷಣೆಗೆ ಉಪಲೋಕಾಯುಕ್ತರನ್ನು ಗುರಾಣಿ.

 

ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಕಾರ್ಯವೈಖರಿಗೆ ಕಡಿವಾಣ ಹಾಕಲು ಉಪ ಲೋಕಾಯುಕ್ತರು ತಮ್ಮವರೇ ಆದರೆ ಒಳ್ಳೆಯದು ಎಂದು ಮನಗಂಡಿರುವ ಗಣಿ ರೆಡ್ಡಿಗಳು ಇದಕ್ಕಾಗಿ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿದ್ದಾರೆ.

 

 

ಸದಾ ಮುಜುಗರಕ್ಕೆ ಒಳಗಾಗುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಕೂಡ ತಮ್ಮವರೇ ಒಬ್ಬರು ಉಪಲೋಕಾಯುಕ್ತರಾಗಬೇಕು ಎಂಬ ಮನಸ್ಸಿದೆ. ಇದರ ಜೊತೆಗೆ ಆರ್.ಎಸ್.ಎಸ್. ಮುಖಂಡರು ಕೂಡ ತಮ್ಮವರೊಬ್ಬರನ್ನು ಈ ಮಹತ್ವದ ಸ್ಧಾನಕ್ಕೆ ತಂದು ಕೂರಿಸಬೇಕೆಂಬ ಮಹತ್ವಾಕಾಂಕ್ಷೆಯಿದೆ.

 

ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರ ಪಾತ್ರ ನಿರ್ಣಾಯಕವಾಗಿದೆ. ಪರಸ್ಪರ ಸಹಮತದೊಂದಿಗೆ ಕಾರ್ಯನಿರ್ವಹಿಸುವ ಅಗತ್ಯವಿದೆ. ವ್ಯವಸ್ಧೆ ಈ ರೀತಿ ನಡೆದಾಗ ಮಾತ್ರ ಲೋಕಾಯುಕ್ತ ಪರಿಣಾಮಕಾರಿಯಾಗಲು ಸಾಧ್ಯ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮತ್ತು ಉಪಲೋಕಾಯುಕ್ತ ಪತ್ರಿಬಸವನಗೌಡ ನಡುವೆ ಈ ಹಿಂದೆ ಬಹಿರಂಗವಾಗಿ ಜಾಟಾಪಟಿ ನಡೆಯುತ್ತಿತ್ತು. ತದನಂತರ ಇದೀಗ ಅತ್ಯಂತ ಸೌಹಾರ್ದಯುತ ವಾತಾವರಣವಿದೆ.

 

 

ಆದರೆ ಇದೀಗ ಲೋಕಾಯುಕ್ತರ ಮನಸ್ಧಿತಿಗೆ ವ್ಯತಿರಿಕ್ತವಾಗಿ ಉಪಲೋಕಾಯುಕ್ತರನ್ನು ನಿಯೋಜಿಸುವ ಸಂಚನ್ನು ಬಿಜೆಪಿ ಸರ್ಕಾರ ರೂಪಿಸುತ್ತಿದೆ. ಪರಸ್ಪರ ಪೂರಕ ಮನಸ್ಧಿತಿ ಇಲ್ಲದಿದ್ದರೆ ಭ್ರಷ್ಟಾಚಾರದ ಜಂಜಾಟದಲ್ಲಿ ಬಚಾವಾಗಬಹುದು ಎಂಬ ಉದ್ದೇಶವನ್ನು ಸರ್ಕಾರ ಹೊಂದಿದೆ.

 

 

ಇಷ್ಟೆಲ್ಲದರ ನಡುವೆಯೂ ಉಪಲೋಕಾಯುಕ್ತರನ್ನು ನೇಮಿಸುವ ಯಾವುದೇ ಪ್ರಕ್ರಿಯೆ ಸರ್ಕಾರದಿಂದ ನಡೆಯುತ್ತಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ರಾಜ್ಯದಲ್ಲಿ ಇದೊಂದು ಮಹತ್ವದ ಸಂಗತಿ ಎಂಬ ಅರಿವೇ ಇಲ್ಲದಂತೆ ವರ್ತಿಸುತ್ತಿದೆ. 

 


Share: