ಬೆಂಗಳೂರು,ಫೆಬ್ರವರಿ 23: ಬಿಡಿಎ ನಿರ್ಮಿಸಲು ಹೊರಟಿರುವ ೫೪೮೦೦ ನಿವೇಶನಗಳಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ ಬಿಬಿಎಂಪಿ ಚುನಾವಣಾ ಪೂರ್ವದ ರಾಜಕೀಯ ಅಖಾಡವಾಗುವ ಎಲ್ಲಾ ಲಕ್ಷಣಗಳು ಕಾಣಿಸಿದುತ್ತಿವೆ.
ನೂತನ ಬಡಾವಣೆ ನಿರ್ಮಾಣ ಪೂರ್ವದ ಸರ್ವೆ ಕಾರ್ಯ ನಡೆಸಲು ನಿನ್ನೆ ಕೋಡಿಗೇನಹಳ್ಳಿಗೆ ತೆರಳಿದ ಬಿಡಿಎ ಅಧಿಕಾರಿಗಳನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರುವುದು ರಜಕೀಯ ಮುಖಂಡರು ಇಂದು ಅಲ್ಲಿಗೆ ಧಾವಿಸುವಂತೆ ಪ್ರೇರೇಪಿಸಿದೆ.
ಕೊಡಿಗೇನಹಳ್ಳಿಗೆ ಮೊದಲು ತಲುಪಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನೇತಾರ ಎಚ್.ಡಿ. ದೇವೇಗೌಡರು, ಸ್ಥಳೀಯರ ಕಷ್ಟ-ಸುಖ ವಿಚಾರಿಸಿ, ಅವರಿಗೆ ಸಂಪೂರ್ಣ ಬೆಂಬಲ ಸೂಚಿಸಿದರು.
ಸ್ಥಳೀಯರ ಹಿತಾಸಕ್ತಿಯನ್ನು ಕಡೆಗಣಿಸಿ ಬಡಾವಣೆ ನಿರ್ಮಾಣ ಬೇಕಾಗಿಲ್ಲ ಎಂದು ಅವರು ಹೇಳಿದರು. ಸ್ಥಳಕ್ಕೆ ಆಗಮಿಸಿದ ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೂ ಸ್ಥಳೀಯರ ಬೆಂಬಲಕ್ಕೆ ನಿಂತರು.
ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತರಾತುರಿಯಲ್ಲಿ ಹೊಸ ಬಡವಣೆ ನಿರ್ಮಿಸುವುದನ್ನು ಕುಮಾರಸ್ವಾಮಿ ವಿರೋದಿಸಿದರು. ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ಅಮಾಯಕರು ಬಂಧನವನ್ನು ಅವರು ಖಂಡಿಸಿದರು.
ಬಂಧಿತರ ಬಿಡುಗಡೆ ತಮ್ಮ ಜವಾಬ್ದಾರಿ ಎಂದು ಕುಮಾರಸ್ವಾಮಿ ಅವರು, ನಾವು ಮುಖ್ಯಮಂತ್ರಿಯಾಗಿದ್ದಾಗ ಸ್ವಇಚ್ಛೆಯಿಂದ ನೀಡಿದ ಜಮೀನನ್ನು ಬಡಾವಣೆ ನಿರ್ಮಿಸಲು ಬಳಸಿಕೊಂಡಿದ್ದಾಗಿ ತಿಳಿಸಿದರು.
೨೦-೩೦ ವರ್ಷಗಳಿಂದ ವಾಸವಾಗಿರುವ ಮನೆಗಳನ್ನು ಬಿಟ್ಟು ಬೇರೆಡೆ ಬಡಾವಣೆ ನಿರ್ಮಿಸಬೇಕೆಂದರು.
ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಅವರೂ ಸ್ಥಳಕ್ಕೆ ಧಾವಿಸಿ, ೨೦೦೮ರಲ್ಲೇ ಅಧಿಸೂಚನೆ ಹೊರಡಿಸಿದ್ದರೂ ಇದುವರೆಗೆ ಸುಮ್ಮನಿದ್ದು ಈಗ ಏಕಾಏಕಿ ಜಮೀನು ಸ್ವಾಧೀನಕ್ಕೆ ಹೊರಟಿರುವುದರ ಔಚಿತ್ಯವನ್ನು ಪ್ರಶ್ನಿಸಿದರು.
ಸ್ಥಳೀಯರ ಸಮಸ್ಯೆ ಬಗೆ ಹರಿಸುವುದಾಗಿ ಅವರು ಆಶ್ವಾಸನೆ ನೀಡಿದರು. ಕಾಂಗ್ರೆಸ್ ಮುಖಂಡ ಎಚ್.ಟಿ. ಸೋಮಶೇಖರ್ ಮತ್ತಿತರರು ಹಾಜರಿದ್ದರು.
ಕೆಂಗೇರಿ ಹೋಬಳಿಯ ೮ ಗ್ರಾಮ ಹಾಗೂ ಯಶವಂತಪುರ ಹೋಬಳಿಯ ೪ ಗ್ರಾಮಗಳ ಒಟ್ಟು ೪೦೪೩.೭ ಎಕರೆ ಜಮೀನನ್ನು ನಾಡಪ್ರಭು ಕೆಂಪೇಗೌಡ ಬಡಾವಣೆನ ನಿರ್ಮಿಸಲು ಸ್ವಾಧೀನ ಪಡಿಸಲಾಗುವುದು.