ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಳ್ಳಭಟ್ಟಿ ದಂಧೆಯನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ: ಜಿಲ್ಲಾಧಿಕಾರಿ

ಕಳ್ಳಭಟ್ಟಿ ದಂಧೆಯನ್ನು ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ: ಜಿಲ್ಲಾಧಿಕಾರಿ

Thu, 18 Mar 2010 17:17:00  Office Staff   S.O. News Service

ಮಡಿಕೇರಿ ಮಾ. ೧೮ (ಕರ್ನಾಟಕ ವಾರ್ತೆ):- ಜಿಲ್ಲೆಯಾದ್ಯಂತ ಕಳ್ಳಭಟ್ಟಿ ದಂಧೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯಪೊಲೀಸ್,   ಅಬಕಾರಿ, ಕಂದಾಯ ಇಲಾಖೆಗಳು ಸೇರಿದಂತೆ ಪ್ರತಿಯೊಂದು ಗ್ರಾಮ ಪಂಚಾಯತ್‌ಗಳು  ಜವಾಬ್ದಾರಿ ಹೊಂದಿದ್ದು, ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಅಶ್ವತ್ಥ್ ನಾರಾಯಣಗೌಡ ಅವರು ತಿಳಿಸಿದ್ದಾರೆ.

 ಮಡಿಕೇರಿಯ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿಂದು  ನಡೆದ  ಅಬಕಾರಿ, ಪೊಲೀಸ್, ಕಂದಾಯ, ಅರಣ್ಯ ಮತ್ತು ಲಾಟರಿ ನಿಷೇಧ ದಳದ  ಅಧಿಕಾರಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಜಿಲ್ಲಾಧಿಕಾರಿಯವರು  ೦೧-೦೭-೨೦೦೧ ರಿಂದ  ಸಾರಾಯಿ ಮಾರಾಟ ನಿಷೇಧದ  ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳ್ಳಭಟ್ಟಿ  ಹಾಗೂ ಅಕ್ರಮ ಮದ್ಯ ಮಾರಾಟ/ ಸಾಗಾಣಿಕೆ ಮುಂತಾದ ಅಬಕಾರಿ ಅಕ್ರಮಗಳನ್ನು ನಿಯಂತ್ರಿಸುವ ಸಲುವಾಗಿ ೨೦೦೯ ರ ಜುಲೈನಿಂದ ಫೆಬ್ರವರಿ-೨೦೧೦ ರವರೆಗೆ ಅಬಕಾರಿ  ಹಾಗೂ ಪೊಲೀಸ್ ಇಲಾಖೆಗಳು ನಡೆಸಿದ ಅಕ್ರಮ ಮದ್ಯ ಮಾರಾಟದ ಪ್ರಕರಣದ ಕಾರ್ಯ ಪ್ರಗತಿ ವರದಿಯನ್ನು ಪರಿಶೀಲಿಸಿ, ಕಳ್ಳಭಟ್ಟಿ ದಂಧೆ ಗಂಭೀರ ವಿಷಯವಾಗಿದ್ದು, ಇಂತಹ ದಂಧೆಯಲ್ಲಿ ತೊಡಗಿರುವವರ ಮಾಹಿತಿಯನ್ನು  ಅಬಕಾರಿ  ಹಾಗೂ ಪೊಲೀಸ್ ಇಲಾಖೆಗೆ ತಿಳಿಸಿ ಅದರ ನಿಯಂತ್ರಣಕ್ಕೆ  ಸಹಕರಿಸುವಲ್ಲಿ  ಸಾರ್ವಜನಿಕರ  ಪಾತ್ರ ಪ್ರಮುಖವಾದದ್ದು ಎಂದರು. 

ಅಲ್ಲದೆ, ಈ ಹಿಂದೆ ಬೆಂಗಳೂರು ಹಾಗೂ ಕೋಲಾರ ಜಿಲ್ಲೆಗಳಲ್ಲಿ ಸಂಭವಿಸಿದ ಕಳ್ಳಭಟ್ಟಿ  ದುರಂತವನ್ನು  ಉಲ್ಲೇಖಿಸಿ  ಮಾತನಾಡಿದ ಅವರು ಕಳ್ಳಭಟ್ಟಿ  ಹಾಗೂ  ಅಕ್ರಮ ಮದ್ಯ ಮಾರಾಟದ  ಬಗ್ಗೆ ನಿಖರವಾದ ಮಾಹಿತಿ ಹಾಗೂ ಪರಿಣಾಮಕಾರಿ ವರದಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ  ಇಂತಹ ಗಂಭೀರ ಸಮಸ್ಯೆಯನ್ನು ಎದುರಿಸಲು  ಮುಂಜಾಗ್ರತಾ ಕ್ರಮಗಳನ್ನು  ಕೈಗೊಂಡು ಶಿಸ್ತು ಬದ್ಧತೆಯಿಂದ ಕಾರ್ಯನಿರ್ವಹಿಸಲು ಶ್ರಮಿಸಬೇಕು ಎಂದು ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಬಕಾರಿ ಇಲಾಖೆಯು ಜುಲೈ-೦೯ ರಿಂದ ಫೆಬ್ರವರಿ-೧೦ ರವರೆಗೆ ಕಳ್ಳಭಟ್ಟಿಯಂತಹ  ಅಕ್ರಮ ದಂಧೆಯಲ್ಲಿ ತೊಡಗಿರುವವರ ವಿರುದ್ದ ಒಟ್ಟು ೯೩೩  ಪ್ರಕರಣಗಳಲ್ಲಿ ದಾಳಿ ನಡೆಸಿ ೩೩ ಆರೋಪಿಗಳ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅಲ್ಲದೆ, ೧.೬೮೦ ಲೀ ವೈನ್, ೧೦.೦೦೦ ಲೀ. ಶೇಂದಿ, ೨೩೪೫.೦೦೦ಲೀ ಬೆಲ್ಲದ ಕೊಳೆ, ೧೭೨.೮೦೦ ಲೀ ನಕಲಿಮದ್ಯ, ೩೨.೦೭೦ಲೀ ಸ್ವದೇಶಿ ಮದ್ಯ ಮತ್ತು ೨೮೫.೦೦೦ ಲೀ ಕಳ್ಳಭಟ್ಟಿ ಸಾರಾಯಿಯನ್ನು   ವಶಪಡಿಸಿಕೊಳ್ಳಲಾಗಿದೆ.

ಇದೇ ರೀತಿ ಪೊಲೀಸ್ ಇಲಾಖೆಯು ಕಳ್ಳಭಟ್ಟಿ ಹಾಗೂ ಅಕ್ರಮ ಮದ್ಯ ಮಾರಾಟ  ದಂಧೆಯಲ್ಲಿ ತೊಡಗಿದ್ದ ೨೮ ಆರೋಪಿಗಳ ವಿರುದ್ಧ ಅಷ್ಟೇ ಸಂಖ್ಯೆಯ ಮೊಕದ್ದಮೆಗಳನ್ನು  ದಾಖಲಿಸಿರುದಲ್ಲದೆ ೧೨೫೦.೦೦೦ ಲೀ ಬೆಲ್ಲದ ಕೊಳೆ, ೧೭೭.೯೯೦ ಲೀ ಸ್ವದೇಶಿ ಮದ್ಯ, ೦.೬೫೦ ಲೀ ಬೀರ್, ೨೭೩.೦೫೦ ಲೀ ಜಿಂಜರ್ ಬರೀಸ್ ಹಾಗೂ ೪೬.೦೦೦ಲೀ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಯವರು ಸಭೆಗೆ ಮಾಹಿತಿ ನೀಡಿದರು.

 ಇದೇ ಸಂದರ್ಭದಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಸಿ.ಎಲ್. ಜಯರಾಮ್ ಅವರು ಮಾತನಾಡಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಹಾಗೂ ಅಕ್ರಮ ಮದ್ಯ ಮಾರಾಟದಂತಹ ದಂಧೆಗಳನ್ನು ತಡೆಗಟ್ಟಲು ಎಲ್ಲಾ ೯೮ ಗ್ರಾಮ ಪಂಚಾಯತ್ ಗಳಲ್ಲಿ ಗ್ರಾಮ ಸಭೆಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಜಾಗೃತಿ  ಮೂಡಿಸಲಾಗುವುದು ಎಂದರು.

ಮಡಿಕೇರಿ ಉಪವಿಭಾಗದ ಅಬಕಾರಿ ನಿರೀಕ್ಷಕರಾದ ಗೋವಿಂದಯ್ಯ ಅವರು ಮಾತನಾಡಿ ತಾಲ್ಲೂಕಿನ ಗಡಿಭಾಗದ ಪ್ರದೇಶಗಳಾದ ಕರಿಕೆ, ಚೆಂಬು ಮತ್ತು ಪೆರಾಜೆ ವ್ಯಾಪ್ತಿಯಲ್ಲಿ ಕಳ್ಳಭಟ್ವಸಾರಾಯಿ ದಂಧೆ ಅವ್ಯವ್ಯಹತವಾಗಿ ನಡೆಯುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು. 

ಸೋಮವಾರಪೇಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಮಾತನಾಡಿ ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ೨೮ ಕಳ್ಳಭಟ್ಟಿ ಕೇಂದ್ರಗಳನ್ನು ಈಗಾಗಲೇ ಗುರುತಿಸಲಾಗಿದೆ. ಶಾಂತಳ್ಳಿಯಲ್ಲಿ ಕಳ್ಳಭಟ್ಟಿ ದಂಧೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ ಎಂದರು. 

ವೀರಾಜಪೇಟೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ಮಾತನಾಡಿ ಅರಣ್ಯ ಪ್ರದೇಶದ ಪೈಸಾರಿ ಜಾಗದಲ್ಲಿ ಹಾಗೂ ನದಿದಂಡೆಯಲ್ಲಿ ಕಳ್ಳಭಟ್ಟಿ ಪ್ರಕರಣಗಳು ಕಂಡು ಬಂದಿದ್ದು ಮುಂದಿನ ದಿನಗಳಲ್ಲಿ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಯೊಡನೆ ಕೈಜೋಡಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಿರ್ಜಾ ಅಕ್ಬರುಲ್ಲಾ, ಮಡಿಕೇರಿ ಉಪವಿಭಾಗದ ಅಬಕಾರಿ ನಿರೀಕ್ಷಕ ತ್ರಿನೇತ್ರ, ವೀರಾಜಪೇಟೆವಲಯದ ನಿರೀಕ್ಷಕ ಲಕ್ಷ್ಮೀಶ, ವೀರಾಜಪೇಟೆ ಉಪವಿಭಾಗದ ನಿರೀಕ್ಷಕ ಇದಾಯತ್-ಉಲ್ಲಾ, ಜಿಲ್ಲಾ ವಿಚಕ್ಷಣಾಧಳದ ನಿರೀಕ್ಷಕ ಚೇತನ್ ಕುಮಾರ್, ಮಡಿಕೇರಿ ವಲಯದ ನಿರೀಕ್ಷಕ ಬಾಲಕೃಷ್ನ, ಸೋಮವಾರಪೇಟೆ ವಲಯದ ನಿರೀಕ್ಷಕ ಆನಂದ್ ಕುಮಾರ್, ವೀರಾಜಪೇಟೆ ವಲಯದ ಉಪನಿರೀಕ್ಷಕ ರೇವಯ್ಯ, ಜಿಲ್ಲಾ ವಿಚಕ್ಷಣಾಧಳದ ಉಪನಿರೀಕ್ಷಕ ಭಾಸ್ಕರ್, ಪೆರುಂಬಾಡಿ ತನಿಖಾ ಠಾಣೆಯ ಉಪನಿರೀಕ್ಷಕ ಪದ್ಮಯ್ಯ ಗೌಡ, ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಪೊಲೀಸ್ ಉಪನಿರೀಕ್ಷಕ ಗುರುನಾಥ ಚವಾಣ್, ಮಡಿಕೇರಿ ಸರ್ಕಲ್ ಇನ್ಸ್‌ಪೆಕ್ಟರ್ ಸತೀಶ್ ಕುಮಾರ್, ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ವೀರಾಜಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ ಅವರುಗಳು ಉಪಸ್ಥಿತರಿದ್ದರು.


Share: