ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರೈತರ ಮೇಲೆ ಲಾಠಿ ಪ್ರಹಾರ: ರಾಜ್ಯಾದ್ಯಂತ ತೀವ್ರ ಪ್ರತಿಭಟನೆ; ನ್ಯಾಯಾಂಗ ತನಿಖೆಗೆ ಆಗ್ರಹ

ಬೆಂಗಳೂರು: ರೈತರ ಮೇಲೆ ಲಾಠಿ ಪ್ರಹಾರ: ರಾಜ್ಯಾದ್ಯಂತ ತೀವ್ರ ಪ್ರತಿಭಟನೆ; ನ್ಯಾಯಾಂಗ ತನಿಖೆಗೆ ಆಗ್ರಹ

Sun, 13 Dec 2009 03:08:00  Office Staff   S.O. News Service
ಬೆಂಗಳೂರು, ಡಿ.12: ಚಾಮರಾಜನಗರ ಮತ್ತು ದಾವಣಗೆರೆಯಲ್ಲಿ ನಿನ್ನೆ ಪ್ರತಿಭಟನೆ ನಿರತ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ತೀವ್ರ ರೀತಿಯ ಪ್ರತಿಭಟನೆಗಳು ವ್ಯಕ್ತವಾಗಿವೆ. ಚಾಮರಾಜನಗರದಲ್ಲಿ ರೈತರು ಬಂದ್ ನಡೆಸಿದ್ದಾರೆ.

ಇದೇ ರೀತಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಪ್ರತಿಭಟನೆ ತೀವ್ರಗೊಂಡಿದೆ. ದಾವಣಗೆರೆಯಲ್ಲಿ ರೈತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ರೈತರೊಂದಿಗೆ ಪ್ರತಿಭಟನೆಗೆ ಇಳಿದಿವೆ.
 
ಗುಲ್ಬರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಹಾಸನ, ಮೈಸೂರು ಸೇರಿದಂತೆ ಸುಮಾರು ೧೫ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು ಪ್ರತಿಭಟನೆ ನಡೆದಿದೆ. ಚಾಮರಾಜನಗರದಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ರೈತ ಸಂಘದ ಮುಖಂಡರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಬೇಷರತ್ತಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಮುಂಜಾಗ್ರತೆಯಾಗಿ ಜಿಲ್ಲಾಡಳಿತ ವಿಧಿಸಿದ್ದ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಬಂದ್ ಮತ್ತು ಪ್ರತಿಭಟನೆ ನಡೆಸಲಾಯಿತು. ಅನಗತ್ಯವಾಗಿ ರೈತರ ಮೇಲೆ ಲಾಠಿ ಬೀಸಿದ ಜಿಲ್ಲೆಯ ಎಸ್‌ಪಿ ಮತ್ತು ಅದಕ್ಕೆ ಕುಮ್ಮಕ್ಕು ನೀಡಿದ್ದ ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸಬೇಕು. ರೈತರ ಮೇಲೆ ಹಾಕಲಾಗಿರುವ ದಾವೆಗಳನ್ನು ವಾಪಾಸ್ ಪಡೆದು ಬೇಷರತ್ತಾಗಿ ಬಿಡುಗಡೆ ಮಾಡಬೇಕು. ನಿನ್ನೆ ಪ್ರತಿಭಟನೆಯ ವೇಳೆ ವಶಪಡಿಸಿಕೊಳ್ಳಲಾದ ಟ್ಯ್ರಾಕ್ಟರ್‌ಗಳನ್ನು ಹಿಂತುರುಗಿಸಬೇಕು. ಚಾಮರಾಜನಗರ ಮತ್ತು ದಾವಣಗೆರೆಯಲ್ಲಿ ನಡೆದ ಲಾಠಿ ಪ್ರಹಾರ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಈ ಮಧ್ಯೆ ಚಾಮರಾಜನಗರ ಜಿಲ್ಲಾಧಿಕಾರಿ ಇಂದು ನಡೆದ ಪ್ರತಿಭಟನೆಯ ವೇಳೆ ಖುದ್ದುಃ ಲಾಠಿ ಹಿಡಿದು ವಿವಾದಕ್ಕೇಡೆಯಾಗಿದ್ದಾರೆ. ಜಿಲ್ಲಾಧಿಕಾರಿಯಾಗಿರುವುದರಿಂದ ತಾವು ದಂಡ ಹಿಡಿದಿರುವುದಾಗಿ ಜಿಲ್ಲಾಧಿಕಾರಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
 
ಘಟನೆಗೆ ಕ್ಷಮೆ ಕೇಳದಿದ್ದರೆ ರೈತ ಚಳುವಳಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕಸದ ಬುಟ್ಟಿ ಸೇರುವಂತೆ ಮಾಡುತ್ತದೆ ಎಂದು ರೈತ ಮುಖಂಡರಾದ ಕುರುಬೂರು ಶಾಂತಕುಮಾರ್ ಎಚ್ಚರಿಸಿದ್ದಾರೆ. ಹಿಂದೆ ಗೂಂಡೂರಾವ್ ಸರಕಾರ ರೈತರ ಮೇಲೆ ಲಾಠಿ ಬೀಸಿದ್ದಕ್ಕಾಗಿ ಕಸದ ಬುಟ್ಟಿ ಸೇರಿತ್ತು. ಅದೇ ಗತಿ ಯಡಿಯೂರಪ್ಪನವರ ಸರಕಾರಕ್ಕೂ ಬರಲಿದೆ ಎಂದು ಅವರು ಎಚ್ಚರಿಸಿದ್ದಾರೆ.
 
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆ ನಡೆಸಿದ ಮುಖಂಡರು ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.



Share: