ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹೈದರಾಬಾದ್:ತೆಲಂಗಾಣ ಭವಿಷ್ಯ: ಇಂದು ಪ್ರಧಾನಿ ಕೊನೇ ನಿರ್ಣಯ?

ಹೈದರಾಬಾದ್:ತೆಲಂಗಾಣ ಭವಿಷ್ಯ: ಇಂದು ಪ್ರಧಾನಿ ಕೊನೇ ನಿರ್ಣಯ?

Mon, 21 Dec 2009 16:46:00  Office Staff   S.O. News Service
ನವದೆಹಲಿ/ಹೈದರಾಬಾದ್, ಡಿಸೆಂಬರ್ 22: ಪ್ರತ್ಯೇಕ ತೆಲಂಗಾಣ ರಾಜ್ಯದ ಕುರಿತು ಮಂಗಳವಾರ ಕೇಂದ್ರ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದ ಆಂಧ್ರಪ್ರದೇಶದ ಕೆಲ ಕಾಂಗ್ರೆಸ್ ಸಂಸದರಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಈ ಭರವಸೆ ದೊರೆತಿದೆ. ‘ಅತ್ತ ದರಿ, ಇತ್ತ ಪುಲಿ’ ಸ್ಥಿತಿಯಲ್ಲಿ ಸಿಲುಕಿರುವ ಕೇಂದ್ರದ ನಿರ್ಧಾರ ಕುತೂಹಲ ಮೂಡಿಸಿದೆ.  ಇನ್ನೊಂದೆಡೆ, ವಿಜಯವಾಡದ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಸಂಸದ ಲಗಡಪಾಟಿ ರಾಜಗೋಪಾಲ್ ಹೈದರಾಬಾದ್‌ನ ನಿಮ್ಸ್‌ನಲ್ಲಿ ಸೋಮವಾರ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಸದರ ಈ ರಾದ್ಧಾಂತಕ್ಕೆ ವಿಜಯವಾಡ ಪೊಲೀಸ್ ಆಯುಕ್ತ ಸಹಿತ ೬ ಮಂದಿ ಸಸ್ಪೆಂಡ್ ಆಗಿದ್ದಾರೆ. 

ಹೆದರಬೇಡಿ- ಪಿ‌ಎಂ ಅಭಯ: ತೆಲಂಗಾಣ ತಲೆನೋವಿನಿಂದ ಕರಾವಳಿ ಆಂಧ್ರಪ್ರದೇಶ ಮತ್ತು ರಾಯಲಸೀಮಾ ಪ್ರದೇಶದ ಸಂಸದರು ನವದೆಹಲಿಯಲ್ಲಿ ಪ್ರಧಾನಿ ಸಿಂಗ್ ಅವರನ್ನು ಭೇಟಿಯಾಗಿದ್ದರು. ಸಂಸದರು ಆಂಧ್ರಪ್ರದೇಶವನ್ನು ವಿಭಜಿಸುವುದು ಬೇಡ ಎಂದು ಒತ್ತಾಯಿಸಿದರು. ತೆಲಂಗಾಣ ಪ್ರತ್ಯೇಕ ರಾಜ್ಯ ಎಂದು ಸದ್ಯಕ್ಕೆ ಘೋಷಿಸುವುದು ಬೇಡ ಎಂದರು. ಮಂಗಳವಾರ ಅಥವಾ ಶೀಘ್ರವೇ ತೆಲಂಗಾಣ ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸಲಿದೆಯೆಂದು ಪ್ರಧಾನಿ, ನಿಯೋಗಕ್ಕೆ ಭರವಸೆ ನೀಡಿದರು ಎಂದು ಕಾಂಗ್ರೆಸ್ ಸಂಸದ ಕೆ.ಎಸ್.ರಾವ್ ಹೇಳಿದ್ದಾರೆ. 

ರಾಜ್ಯ ರಚಿಸಬಹುದು ಈಗಲ್ಲ:ಪ್ರತ್ಯೇಕ ರಾಜ್ಯ ಬೇಡ ಎಂದು ಒತ್ತಾಯಿಸಲು ಹೋದ ನಿಯೋಗ, ಎಲ್ಲರ ಒಪ್ಪಿಗೆ ದೊರೆತ ಬಳಿಕ ತೆಲಂಗಾಣ ರಾಜ್ಯ ರಚನೆಯಾಗಲಿ. ಸದ್ಯ ಶಾಂತಿ, ಸುವ್ಯವಸ್ಥೆ ಸ್ಥಾಪಿಸುವ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಪ್ರಧಾನಿಗೆ ಒತ್ತಾಯಿಸಿತು ಎಂದು ಕೆ.ಎಸ್.ರಾವ್ ತಿಳಿಸಿದರು. 

ಲಗಡಪಾಟಿ ರಾದ್ಧಾಂತ: ಭಾನುವಾರ ತಡ ರಾತ್ರಿ ವಿಜಯವಾಡ ಸರ್ಕಾರಿ ಆಸ್ಪತ್ರೆಯಿಂದ ನಾಪತ್ತೆಯಾದ ಸಂಸದ ಲಗಡಪಾಟಿ ರಾಜಗೋಪಾಲ್ ೧೫ ಗಂಟೆಗಳ ಬಳಿಕ ಹೈದರಾಬಾದ್‌ನ ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಆವರಣದಲ್ಲಿ ಕಾಣಿಸಿಕೊಂಡರು. ಕಾಂಗ್ರೆಸ್ ಮುಖಂಡ ಜೆ.ಸಿ.ದಿವಾಕರರೆಡ್ಡಿ ನಿವಾಸದಿಂದ ಆಟೋ ರಿಕ್ಷಾದಲ್ಲಿ ಬಂದ ಅವರು ಓಡೋಡುತ್ತಲೇ ನಿಮ್ಸ್ ಒಳಕ್ಕೆ ಪ್ರವೇಶಿಸಿದರು. ೯ ದಿನಗಳ ‘ಉಪವಾಸ’ ದಿಂದ ಬಳಲಿದ್ದ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. 

೬ ಪೊಲೀಸ್ ಸಿಬ್ಬಂದಿ ಸಸ್ಪೆಂಡ್: ಆಸ್ಪತ್ರೆಯಿಂದ ಸಂಸದರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯವಾಡ ಪೊಲೀಸ್ ಆಯುಕ್ತ ಕೆ.ವಿ.ರಾಜೇಂದ್ರನಾಥ್‌ರೆಡ್ಡಿ ಸೇರಿದಂತೆ ೬ ಮಂದಿ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. 

ಗೂರ್ಖಾಲ್ಯಾಂಡ್ ಮಾತುಕತೆ ವಿಫಲ: ಡಾರ್ಜಿಲಿಂಗ್‌ನಲ್ಲಿ ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯ ವಿವಾದ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ೪ನೇ ಸುತ್ತಿನ ಮಾತುಕತೆ ಮುರಿದು ಬಿದ್ದಿದೆ. ಮುಂದಿನ ೪೫ ದಿನಗಳಲ್ಲಿ ಮತ್ತೊಮ್ಮೆ ಮಾತುಕತೆ ಆರಂಭಿಸಲಾಗುವುದೆಂದು ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೆ ತಿಳಿಸಿದ್ದಾರೆ.

ಸೌಜನ್ಯ: ಕನ್ನಡಪ್ರಭ


Share: