ಭಟ್ಕಳ: ತಾಲೂಕಿನ ಮುಂಡಳ್ಳಿಯ ಜೆ.ಎನ್.ನಾಯ್ಕರ ಪುತ್ರ ಅಶೋಕ್‌ರಾಜ್-ಸಂಪತ್ ನಿರ್ಮಾಣದ ‘ಡಂಗುರ’ ಮಕ್ಕಳ ಚಲನಚಿತ್ರದ ಚಿತ್ರೀಕರಣವು ಅಳಿವೆಕೋಡಿ ದುರ್ಗಾಪರಮೇಶ್ವರಿ ದೇವಿಗೆ ಪೂಜೆ ಸಲ್ಲಿಸುವುದರೊಂದಿಗೆ ಮಂಗಳವಾರ ವಿದ್ಯುಕ್ತವಾಗಿ ಆರಂಭವಾಯಿತು.
ಭಟ್ಕಳ ತಾಲೂಕಿನ ಸುತ್ತಮುತ್ತ ಮುಂದಿನ ಹತ್ತು ದಿನಗಳ ಕಾಲ ಚಿತ್ರೀಕರಣವು ನಡೆಯಲಿದೆ. ಚಿತ್ರಕ್ಕೆ ಮಂಜು ಮಸ್ಕಲ್ ಮಟ್ಟಿ ಕಥೆ ಹಾಗೂ ಸಾಹಿತ್ಯವನ್ನು ಒದಗಿಸಿ ನಿರ್ದೇಶನ ನೀಡಿದ್ದಾರೆ. ಧನಪಾಲಸಿಂಗ್ ರಜಪೂತ ಸಂಗೀತ ನಿರ್ದೇಶನ ಮಾಡಿದ್ದು, ನವೀನ್ ಕೃಷ್ಣ, ಯೋಗರಾಜ್ ಭಟ್ ಹಾಗೂ ಕವಿರಾಜ್ ಗೀತೆಗೆ ಸಾಹಿತ್ಯವನ್ನು ಒದಗಿಸಿದ್ದಾರೆ. ಚಿತ್ರಕ್ಕಾಗಿ ಏಳು ಪ್ರಮುಖ ಬಾಲ ಕಲಾವಿದರನ್ನು ಆರಿಸಿಕೊಳ್ಳಲಾಗಿದ್ದು, ಅವರುಗಳಲ್ಲಿ ಹೊನ್ನಾವರದ ಬೇಬಿ ಮಧುರಾ ಹಾಗೂ ಗೋಕರ್ಣದ ಮಾಸ್ಟರ್ ರತ್ನ ವರ್ಮಾ ಸೇರಿದ್ದಾರೆ. ಚಿತ್ರದಲ್ಲಿ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಭಟ್ಕಳವೂ ಸೇರಿದಂತೆ ರಾಜ್ಯದ ವಿವಿದೆಡೆಯ ೬೦ ಮಕ್ಕಳು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ೮೦ಕ್ಕೂ ಹೆಚ್ಚು ಕಲಾವಿದರು ಚಿತ್ರ ತಂಡದಲ್ಲಿದ್ದು, ಚಿತ್ರದ ಯಶಸ್ಸಿನ ಬಗ್ಗೆ ನಿರ್ಮಾಪಕ ಅಶೋಕ್ ರಾಜ್ ಅತಿಯಾದ ನಿರೀಕ್ಷೆಯನ್ನು ಇರಿಸಿಕೊಂಡಿದ್ದಾರೆ. ಚಿತ್ರೀಕರಣ ಸಂದರ್ಭದಲ್ಲಿ ಅಶೋಕ್ ರಾಜ್ ತಂದೆ ಜೆ.ಎನ್.ನಾಯ್ಕ, ಸುಬ್ರಾಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.