ಮಂಗಳೂರು, ಫೆ.೪: ಚರ್ಚ್ ದಾಳಿಗೆ ಸಂಬಂಧಿಸಿ ನಡೆಯುತ್ತಿರುವ ವಿಚಾರಣೆಯ ಸಂದರ್ಭ ಪೊಲೀಸ್ ಪರ ವಕೀಲ ನ್ಯಾ. ನಾರಾಯಣ ರೆಡ್ಡಿಯವರಿಗೆ ಸಹಕಾರ ನೀಡಲು ಪೊಲೀಸ್ ಅಧಿಕಾರಿಗಳ ಅನುಪಸ್ಥಿತಿಯ ಬಗ್ಗೆ ನ್ಯಾ. ಬಿ.ಕೆ. ಸೋಮಶೇಖರ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಇಂದು ನಡೆಯಿತು. ಚರ್ಚ್ ದಾಳಿಗೆ ಸಂಬಂಧಿಸಿ ಪ್ರಮುಖ ಸಾಕ್ಷಿಯಲ್ಲೊಬ್ಬರಾದ ಮೆಲ್ವಿಲ್ ಪಿಂಟೊ ಅವರನ್ನು ಇಂದು ಪೊಲೀಸ್ ಪರ ವಕೀಲ ನಾರಾಯಣ ರೆಡ್ಡಿಯವರು ಪಾಟೀ ಸವಾಲಿಗೆ ಗುರಿಪಡಿಸಿದ ಸಂದರ್ಭ ಅವರು ಕೆಲ ದಾಖಲೆಗಳಿಗಾಗಿ ತಡಕಾಡಬೇಕಾಯಿತು. ಈ ಸಂದರ್ಭ ತನಗೆ ಪೊಲೀಸ್ ಅಧಿಕಾರಿಗಳಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂದರು. ಪೊಲೀಸ್ ಇಲಾಖೆಯಿಂದ ಅಧಿಕಾರಿಗಳು ಯಾರೂ ಬಂದಿಲ್ಲವೇ ಎಂದಾಗ ಹೆಡ್ ಕಾನ್ಸ್ಟೆಬಲ್ ಮತ್ತು ಮಹಿಳಾ ಕಾನ್ಸ್ಟೆಬಲ್ಗಳು ಬಂದಿದ್ದಾರೆ. ಅವರಿಂದ ತನಗೆ ಏನೂ ಪ್ರಯೋಜನವಾಗದು. ತನಗೆ ಸಹಕಾರ ನೀಡಲು ಪೊಲೀಸ್ ಅಧಿಕಾರಿಗಳನ್ನು ಬರ ಹೇಳಿದ್ದರೂ ಬಂದಿಲ್ಲ ಎಂದು ನಾರಾಯಣರೆಡ್ಡಿಯವರೇ ಖುದ್ದಾಗಿ ಆಯೋಗದ ಮುಂದೆ ಅತೃಪ್ತಿ ವ್ಯಕ್ತಪಡಿಸಿದರು. ಈ ಸಂದರ್ಭ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಸೋಮಶೇಖರ, ವಕೀಲರಿಗೆ ಸಹಕಾರ ನೀಡಲು ಪೊಲೀಸ್ ಅಧಿಕಾರಿಗಳು ಬರುತ್ತಿಲ್ಲವೆಂದಾದರೆ ಸರಕಾರದ ಆಡಳಿತ ವೈಖರಿಯನ್ನು ಗಮನಿಸಬಹುದಾಗಿದೆ. ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದು ಸರಕಾರದ ಕರ್ತವ್ಯ. ಹಾಗಾಗಿ ಎಲ್ಲವೂ ಪಾರದರ್ಶಕವಾಗಿರಬೇಕು. ಸಾರ್ವಜನಿಕರಿಗೆ ಏನು ಬೇಡ ಎಂದರೆ ಹೇಗೆ ಎಂದು ಸೋಮಶೇಖರ್ ಸರಕಾರದ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದರು. ಆಯೋಗ ವಿಚಾರಣೆ ಆರಂಭಿಸಿದಾಗಿನಿಂದ ವಿಚಾರಣೆಯ ಸಂದರ್ಭ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ವಿಚಾರಣೆಯಲ್ಲಿ ಭಾಗವಹಿಸಬೇಕೆಂದು ಹೇಳಿಕೊಂಡು ಬಂದಿದ್ದೇನೆ. ಆದರೆ ವಕೀಲರೊಬ್ಬರಿಗೆ ಈ ಗತಿಯಾದರೆ ಇನ್ನು ಜನರ ಪಾಡೇನು ಎಂದು ಹೇಳಿದ ನ್ಯಾ. ಸೋಮಶೇಖರ, ವಕೀಲರ ಕೆಲಸ ನಿಧಾನವಾದರೆ ಆಯೋಗದ ಕಾರ್ಯಕ್ಕೂ ಅಡ್ಡಿಯಾಗುತ್ತದೆ. ಹಾಗಾಗಿ ತಕ್ಷಣ ಎಸ್ಪಿಯವರು ತುರ್ತು ಕೆಲಸದಲ್ಲಿದ್ದರೆ ಡಿವೈಎಸ್ಪಿಯವರನ್ನು ಕರೆಸಿ. ಮಧ್ಯಾಹ್ನ ೩ ಗಂಟೆಯೊಳಗೆ ಪೊಲೀಸ್ ಅಧಿಕಾರಿಗಳು ಇಲ್ಲಿ ಬಂದಿಲ್ಲವಾದರೆ ತಾನು ನೋಟೀಸು ನೀಡುವುದಾಗಿ ಹೇಳಿದರು. ಮಧ್ಯಾಹ್ನದ ನಂತರ ಪೊಲೀಸ್ ಸಿಬ್ಬಂದಿಯೊಬ್ಬರು ಆಗಮಿಸಿ ವಕೀಲ ನಾರಾಯಣರೆಡ್ಡಿಯವರಿಗೆ ಸಹಕರಿಸಿದರು. ಪ್ರಜ್ಞೆ ಕಳೆದುಕೊಂಡ ಸಾಕ್ಷಿ ಸೋಮಶೇಖರ ಅವರು ಸರಕಾರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸುತ್ತಿರುವಂತೆಯೇ ಇತ್ತ ಕಟಕಟೆಯಲ್ಲಿ ಕುಳಿತಿದ್ದ ಸಾಕ್ಷಿ ಮೆಲ್ವಿಲ್ ಪಿಂಟೊ ಕುಳಿತಲ್ಲೇ ಕುಸಿದರು. ತಕ್ಷಣ ಕೋರ್ಟ್ ಸಭಾಂಗಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ತಕ್ಷಣ ನ್ಯಾ. ಸೋಮಶೇಖರ ಅವರು ವೈದ್ಯರು ಹಾಗೂ ಆಂಬುಲೆನ್ಸ್ಗೆ ಕರೆ ಹೇಳಲು ಸೂಚಿಸಿದರು. ಕಲಾಪದಲ್ಲಿದ್ದ ವಕೀಲರು, ಪೊಲೀಸರೆಲ್ಲರು ಸಾಕ್ಷಿಯ ನೆರವಿಗೆ ಮುಂದಾದರು. ಸುಮಾರು ೧೦-೧೫ ನಿಮಿಷದಲ್ಲಿ ಸಾವರಿಸಿಕೊಂಡ ಮೆಲ್ವಿಲ್ಪಿಂಟೊ, ಚರ್ಚ್ ದಾಳಿಯ ಸಂದರ್ಭ ಅವಧಿ ಮೀರಿದ ಅಶ್ರುವಾಯು ಸಿಡಿಸಿದ್ದ ಪರಿಣಾಮ ಅದನ್ನು ಸೇವಿಸಿದ ಬಳಿಕ ತನಗೆ ಆಗಾಗ್ಗೆ ಈ ರೀತಿ ಆಗುತ್ತಿರುವುದಾಗಿ ಆಯೋಗದ ಎದುರು ಹೇಳಿಕೊಂಡರು. ನಂತರ ಅವರನ್ನು ಸಾವರಿಸಿಕೊಳ್ಳುವಂತೆ ತಿಳಿಸಲಾಯಿತು. ಅಷ್ಟು ಹೊತ್ತಿಗೆ ಮಧ್ಯಾಹ್ನದ ಊಟಕ್ಕೆ ವಿರಾಮ ನೀಡಲಾಗಿತ್ತು. ಈ ಸಂದರ್ಭ ಸಾವರಿಸಿಕೊಂಡಿದ್ದ ಮೆಲ್ವಿಲ್ ಪಿಂಟೊ ಪೊಲೀಸರ ಸಹಾಯದೊಂದಿಗೆ ಸರ್ಕ್ಯೂಟ್ ಹೌಸ್ನ ಕೋರ್ಟ್ ಸಭಾಂಗಣದಿಂದ ಇಳಿಯುತ್ತಿದ್ದಂತೆ ಮತ್ತೆ ಪ್ರಜ್ಞಾಹೀನರಾದ ಕಾರಣ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ನಮಗೆ ನಿದ್ದೆ ಇಲ್ಲದ ಹಾಗಾಗಿದೆ! ನ್ಯಾ. ಬಿ.ಕೆ. ಸೋಮಶೇಖರ ಆಯೋಗವು ಮಧ್ಯಾಂತರ ವರದಿಯನ್ನು ಸರಕಾರಕ್ಕೆ ಒಪ್ಪಿಸಿದ ಕಾರಣದಿಂದಾಗಿ ಜನರು ಆಯೋಗ ಎಂದರೇನು ಎಂಬುದನ್ನು ತಿಳಿಯುವಂತಾಗಿದೆ ಎಂದು ವಿಚಾರಣೆಯ ಸಂದರ್ಭ ಕ್ರೈಸ್ತ ಸಂತ್ರಸ್ತ ಪರ ವಕೀಲ ಇಬ್ರಾಹಿಂ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಸೋಮಶೇಖರ, ನಿಜಕ್ಕೂ ಆಯೋಗ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದು ಜನರಿಗೆ ಮನವರಿಕೆ ಆಗುತ್ತಿದೆ ಎಂದಾಗ, ಇತ್ತ ಬಜರಂಗದಳ ಪರ ವಕೀಲ ಜಗದೀಶ ಶೇಣವ ಪ್ರತಿಕ್ರಿಯಿಸಿ, ನಮಗೆ ನಿದ್ದೆ ಇಲ್ಲದ ಹಾಗಾಗಿದೆ ಎಂದರು. ಇಂದು ಕಾರ್ಮಿಲ್ ಗೋವಿಯಸ್, ಲೂಸಿ ಡಿಸೋಜಾ ಮೊದಲಾದವರನ್ನು ನಾರಾಯಣ ರೆಡ್ಡಿ, ಸರಕಾರಿ ಪರ ವಕೀಲ ಎಲ್.ಎನ್. ಹೆಗ್ಡೆ, ಜಗದೀಶ್ ಶೇಣವ ಪಾಟೀ ಸವಾಲಿಗೊಳಪಡಿಸಿದರು. ಕ್ರೈಸ್ತ ಸಂತ್ರಸ್ತರ ಪರ ವಕೀಲ ಎಂ.ಪಿ.ನೊರೊನ್ನಾ, ಫ್ರಾನ್ಸಿಸ್, ಆಯೋಗದ ತಿಮ್ಮಾವಗೋಳ್ ಮೊದಲಾದವರು ಉಪಸ್ಥಿತರಿದ್ದರು. |