ಬೆಂಗಳೂರು, ಮಾ. 18 : ನೈಸ್ ಯೋಜನೆಯ ಮೂಲ ಒಪ್ಪಂದದಂತೆ ಸರಕಾರ ನಡೆದುಕೊಳ್ಳುತ್ತೆ. ಒಪ್ಪಂದ ಉಲ್ಲಂಘಿಸಿದಲ್ಲಿ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಬುಧವಾರ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸುತ್ತಿದ್ದ ಅವರು, ನ್ಯಾಯಾಲಯದ ಆದೇಶದ ಹೊರತು ಒಂದು ಎಕರೆ ಭೂಮಿಯನ್ನೂ ನೈಸ್ ಸಂಸ್ಥೆಗೆ ನೀಡುವುದಿಲ್ಲ. ಈ ಮಾತಿಗೆ ಎಲ್ಲಾದರೂ ತಪ್ಪಿದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ನಾನು ಇರುವುದಿಲ್ಲ ಎಂದರು. ನೈಸ್ ಕಂಪನಿಯು 29 ಸಾವಿರ ಎಕರೆ ಭೂಮಿಯನ್ನು ಕೇಳಿದೆ. ಅದಕ್ಕೆ ನೀವೂ ಸಿದ್ಧರಾಗಿದ್ದೀರಿ. ಈಗಾಗಲೇ 25 ಸಾವಿರ ಎಕರೆ ಭೂಮಿ ನೀಡಲು ಅಧಿಸೂಚನೆಯನ್ನೂ ಹೊರಡಿಸಲಾಗಿದೆ' ಎಂಬ ಆರೋಪಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು.
ಯೋಜನೆ ಜಾರಿಗೆ ಬರುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕನಾಗಿ ನಾನೂ ಇದರ ವಿರುದ್ಧ ಹೋರಾಟ ಮಾಡಿದ್ದವನು. ಈಗ ಏನೇನು ನಡೆಯುತ್ತಿದೆಯೋ, ಅದನ್ನು ಆ ದಿನಗಳಲ್ಲೇ ನಾನು ಗುರುತಿಸಿದ್ದೆ. ಆದರೆ ಈಗಿನ ಪರಿಸ್ಥಿತಿ ಹೀಗಿರುವಾಗ ಸರಕಾರ ಏನೂ ಮಾಡಲು ಸಾಧ್ಯವಿಲ್ಲ. ಮತ್ತೆ ಮತ್ತೆ ನ್ಯಾಯಾಲಯದೆದುರು ಛೀಮಾರಿ ಹಾಕಿಸಿಕೊಳ್ಳುವುದು, ಜಗತ್ತಿನ ಮುಂದೆ ನಗೆಪಾಟಲಿಗೀಡಾಗುವುದು ನಮಗೆ ಬೇಕಿಲ್ಲ. ಆದರೆ ಹೆಚ್ಚುವರಿ ಭೂಮಿಯನ್ನು ಯಾವುದೇ ಕಾರಣಕ್ಕೂ ನಾವು ನೀಡುವುದಿಲ್ಲ ಎಂದು ಮುಖ್ಯಮಂತ್ರಿಯವರು ಭರವಸೆ ನೀಡಿದರು.