ಬೀದರ, ಮಾ.11: ಮಹಾತ್ಮಾ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಗಳ ಅಡಿಯಲ್ಲಿ ಮತದಾರರ ಅನುಕೂಲಕ್ಕಾಗಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ ಅವರು ಸ್ಪಷ್ಟಪಡಿಸಿದ್ದಾರೆ.
ಸಹಕಾರ ಸಂಘಗಳ ಕಾಯ್ದೆ ೧೯೫೯ ಕಲಂ ೩೯ಸಿ ಅಡಿಯಲ್ಲಿ ಮತದಾನ ಕೇಂದ್ರಕ್ಕೆ ಹೋಗಲು ಅಥವಾ ಅಲ್ಲಿಂದ ಬರಲು ಯಾವೊಬ್ಬ ಮತದಾರನಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ ಕಲಂ ೧೨೩ ಪ್ರಕಾರ, ಮತದಾರರನ್ನು ಉಚಿತವಾಗಿ ಕರೆದುಕೊಂಡು ಹೋಗಲು ವಾಹನವನ್ನು ಬಾಡಿಗೆಗೆ ಅಥವಾ ಇತರ ರೀತಿಯಲ್ಲಿ ಪಡೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಈ ಕಾಯ್ದೆಗಳ ಅಡಿಯಲ್ಲಿ ಶಾಂತಿಯುತವಾಗಿ, ನಿಷ್ಪಕ್ಷಪಾತವಾಗಿ ಹಾಗೂ ನಿರ್ಭಯವಾಗಿ ಮತದಾರರು ಮತಚಲಾಯಿಸಲು ಅನುಕೂಲವಾಗುವಂತೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮತದಾನದ ದಿನದಂದು ಮತಗಟ್ಟೆಯಿಂದ ೧೦೦ಮೀಟರ್ ಅಂತರದ ಒಳಗೆ ಮತಯಾಚನೆ ಮಾಡುವುದನ್ನು ನಿಷೇಧಿಸಲಾಗಿದೆ. ಮತಗಟ್ಟೆ ಪ್ರದೇಶದಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದೆ. ಮತದಾರರ ಅನುಕೂಲಕ್ಕಾಗಿ ತೆರೆಯಲಾಗುವ ಹೆಲ್ಪ್ ಡೆಸ್ಕ್‌ನಲ್ಲಿ ಮತಗಟ್ಟೆ ಸಂಖ್ಯೆ, ಮತದಾರರ ಪಟ್ಟಿ, ಕ್ರಮ ಸಂಖ್ಯೆ ಚೀಟಿ ವಿತರಿಸಲಾಗುವುದು. ಮತದಾನ ಕೇಂದ್ರದಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಜಿಲ್ಲಾಮಟ್ಟದ ಅಧಿಕಾರಿಯನ್ನು ನೋಡಲ್/ಮೈಕ್ರೋ ಅಬ್ಸರ್ವರ್ ಎಂದು ನಿಯೋಜಿಸಲಾಗಿದೆ. ಮತದಾನ ಶಾಂತ ರೀತಿಯಿಂದ ನಡೆಯಲು ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಮತದಾರರು ನಿರ್ಭಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಪೊಲೀಸ್ ಬಂದೋಬಸ್ತು: ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ. ಮತದಾನ ಸ್ಥಳದಲ್ಲಿ ೬೫ ಪೊಲೀಸ್ ಅಧಿಕಾರಿಗಳು, ೭೦೦ಪೊಲೀಸ್ ಸಿಬ್ಬಂದಿ, ೨ಕೆಎಸ್‌ಆರ್‌ಪಿ ಪ್ಲಟೂನ್, ೫ಡಿಎಆರ್ ಪಾರ್ಟಿಗಳು, ೨ಕ್ಯೂಆರ್‌ಟಿ ತಂಡ ಹಾಗೂ ಒಂದು ರ್‍ಯಾಪಿಡ್ ಇಂಟರ್‌ವೆನ್ಷನ್ ವಾಹನವನ್ನು ಬಂದೋಬಸ್ತು ಕೆಲಸಕ್ಕೆ ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ವಿವಿಧ ಆಯ್ದ ಸ್ಥಳಗಳಲ್ಲಿ ೧೦ಚೆಕ್‌ಪೋಸ್ಟ್‌ಗಳನ್ನು ಪ್ರಾರಂಭಿಸಲಾಗಿದೆ. ಈ ಚೆಕ್‌ಪೋಸ್ಟ್‌ಗಳಲ್ಲಿ ಕಂದಾಯ, ಸಾರಿಗೆ ವಿಭಾಗ, ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸುವರು. ಭಾಲ್ಕಿ ನಗರ ಮತ್ತು ತಾಲೂಕು ಪ್ರದೇಶಗಳಲ್ಲಿ ಮಾ.೧೧ರ ಸಾಯಂಕಾಲ ೬ಗಂಟೆಯಿಂದ ಮಾ.೧೩ರ ಬೆಳಗ್ಗೆ ೬ಗಂಟೆವರೆಗೆ ಸಾರಾಯಿ ಮಾರಾಟ ನಿಷೇಧಿಸಲಾಗಿದೆ. ಮಾ.೧೨ರ ಬೆಳಗ್ಗಿನ ಜಾವದಿಂದ ಮಾ.೧೩ರ ಬೆಳಗ್ಗಿನ ಜಾವದವರೆಗೆ ಭಾಲ್ಕಿ ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮತದಾನದ ಸಂದರ್ಭದಲ್ಲಿ ಯಾವುದೇ ತೊಂದರೆ ಅಥವಾ ಅಕ್ರಮ ಕಂಡು ಬಂದಲ್ಲಿ ಪೊಲೀಸ್ ಸಹಾಯಕ್ಕಾಗಿ ದೂರವಾಣಿ ಸಂಖ್ಯೆ ೧೦೦, ೨೨೬೭೦೪, ೨೨೭೨೩೧ (೦೮೪೮೨) ಅಥವಾ ೨೬೨೩೩೩, ೨೬೨೨೩೩ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಕ್ರಮ: ನಸೀಮುದ್ದೀನ್ ಪಟೇಲ್
ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ನಸೀಮುದ್ದೀನ್ ಪಟೇಲ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗುರುವಾರ ನಡೆದ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸುತ್ತಾ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವ ವಿಷಯದಲ್ಲಿ ಯಾವುದೇ ನೆಪಗಳನ್ನು ಸಹಿಸಲು ಸಾಧ್ಯವಿಲ್ಲ. ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸುವುದು ಎಲ್ಲರ ಆದ್ಯತೆಯಾಗಿದ್ದು, ಈ ಕಾರ್ಯದಲ್ಲಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ದುರಸ್ತಿ ಅಗತ್ಯ ಇರುವ ಕೊಳವೆಬಾವಿಗಳ ರಿಪೇರಿಗೆ ತುರ್ತು ಕ್ರಮ ಕೈಗೊಳ್ಳಬೇಕು. ದುರಸ್ತಿ ಅಗತ್ಯ ಇರುವ ಕೊಳವೆ ಬಾವಿಗಳ ಮಾಹಿತಿಯನ್ನು ಒದಗಿಸಬೇಕು. ತುರ್ತು ದುರಸ್ತಿಗಾಗಿ ಪ್ರತಿ ತಾಲೂಕಿಗೆ ಒಂದು ದುರಸ್ತಿ ವಾಹನವನ್ನು ಒದಗಿಸಲಾಗುವುದು. ಅದರಲ್ಲಿ ದುರಸ್ತಿಗೆ ಸಂಬಂಧಪಟ್ಟ ಸಾಮಗ್ರಿಗಳು ಹಾಗೂ ಮೆಕ್ಯಾನಿಕ್ ಇರುವರು. ಈ ಕಾರ್ಯ ಸೋಮವಾರದಿಂದಲೇ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಒದಗಿಸಲು ತೆರೆದ ಬಾವಿಗಳನ್ನು ಸುಧಾರಿಸಬೇಕು. ಹಲವು ಬಾವಿಗಳಲ್ಲಿ ಹೂಳು ತುಂಬಿದ್ದು, ಅಲ್ಪ ಪ್ರಮಾಣದಲ್ಲಿ ಹೂಳು ತೆಗೆದರೂ, ನೀರಿನ ಮೂಲವನ್ನು ಸುಧಾರಿಸಬಹುದಾಗಿದೆ. ಗ್ರಾಮಗಳ ಹತ್ತಿರವಿರುವ ತೆರೆದ ಬಾವಿಗಳ ಹೂಳೆತ್ತುವ ಕಾರ್ಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ತಾಲ್ಲೂಕಾ ಪಂಚಾಯತಗಳಲ್ಲಿ ದೂರು ಸ್ವೀಕರಿಸುವ ವ್ಯವಸ್ಥೆ ಇದ್ದು ಕುಡಿಯುವ ನೀರಿನ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ದೂರ ಸಲ್ಲಿಸಬಹುದಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಜನರ ದೂರುಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸುವ ಕಾರ್ಯವನ್ನು ಮಾಡಬೇಕು ಎಂದು ಅವರು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗಾಗಿ ಇಲಾಖೆಗಳಿಗೆ ವಿವಿಧ ಯೋಜನೆ ಅಡಿಯಲ್ಲಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ಈ ಅನುದಾನ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕು. ಅನುದಾನ ಬಾಕಿಯಾಗಿ ಸರ್ಕಾರಕ್ಕೆ ಹಿಂದಕ್ಕೆ ಹೋದರೆ ಅಂತಹ ಅಧಿಕಾರಿಗಳನ್ನು ಜವಾಬ್ದಾರ ಮಾಡಿ ಕ್ರಮ ಕೈಗೊಳ್ಳಲಾವುದು. ಇದಕ್ಕೆ ಯಾವುದೇ ಅಧಿಕಾರಿ ಅವಕಾಶ ಮಾಡಿಕೊಡಬಾರದು ಎಂದು ಅವರು ತಿಳಿಸಿದರು.
ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಮೀನುಗಾರಿಕೆ, ಸಮಾಜ ಕಲ್ಯಾಣ, ಜಲಾನಯನ, ಬಿಸಿಎಂ, ಎಸ್.ಸಿ ಎಸ್.ಟಿ ಕಾರ್ಪೊರೇಶನ್ ಮುಂತಾದ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗುರುನೀತ್ ತೇಜ್ ಮೆನನ್, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಾಣಿ ವಧೆ ನಿಷೇಧಿತ ದಿನಗಳು
ಪ್ರಸ್ತುತ ವರ್ಷದಲ್ಲಿ ಈ ಕೆಳಕಂಡ ದಿನಗಳಂದು ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಸ್.ಎಸ್.ಪೂಜಾರ್ ತಿಳಿಸಿದ್ದಾರೆ.
ಶ್ರೀರಾಮನವಮಿ ಮಾರ್ಚ ೨೪, ಮಹಾವೀರ ಜಯಂತಿ ಮಾರ್ಚ ೨೮, ಡಾ: ಬಿ.ಆರ್. ಅಂಬೇಡ್ಕರದ ಜಯಂತಿ ಏಪ್ರಿಲ್ ೧೪, ಬುದ್ದ ಪೂರ್ಣಿಮಾ ಮೇ. ೨೭, ಕೃಷ್ಣ ಜನ್ಮಾಷ್ಠಮಿ ಸೆಪ್ಟಂಬರ್ ೦೧, ಗಣೇಶ ಚತುರ್ಥಿ ಸೆಪ್ಟಂಬರ್ ೦೧, ಗಾಂಧಿ ಜಯಂತಿ ಅಕ್ಟೋಬರ್ ಎರಡು.