ಮೈಸೂರು, ಏ. ೨೯ (ಕರ್ನಾಟಕ ವಾರ್ತೆ) - ೨೦೦೯-೧೦ನೇ ಸಾಲಿನಲ್ಲಿ ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿನ (ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ) ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇದ್ದ ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್-೨, ಸಂಗೀತ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-೧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ದಿನಾಂಕ ೧೯.೨.೨೦೧೦ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಅಂತಿಮ ಪಟ್ಟಿಯಲ್ಲಿ ಅಭ್ಯರ್ಥಿಗಳು ನೇಮಕಾತಿ ಹೊಂದುವ ಜಿಲ್ಲೆಯ ಸಂಕೇತವನ್ನು ಅವರ ಹೆಸರಿನ ಮುಂದೆ ನಮೂದಿಸಲಾಗಿರುತ್ತದೆ.
ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಕೆಳಕಂಡ ದಿನಾಂಕಗಳಂದು ಜಿಲ್ಲಾವಾರು ಕೌನ್ಸಿಲಿಂಗ್ ಕಾರ್ಯಕ್ರಮಗಲನ್ನು ಆಯ್ಕೆ ಪ್ರಾಧಿಕಾರಿ ಹಾಗೂ ವಿಭಾಗೀಯ ಕಾರ್ಯದರ್ಶಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ವಿಭಾಗ, ಮೈಸೂರು (ಡಿ. ಸುಬ್ಬಯ್ಯ ರಸ್ತೆ) ಇಲ್ಲಿ ನಡೆಸಲಾಗುತ್ತದೆ. ಆಯ್ಕೆ ಪಟ್ಟಿಯಲ್ಲಿರುವಂತೆ ಆಯಾ ಜಿಲ್ಲೆಗೆ ಹಂಚಿಕೆಯಾಗಿರುವ ಅಭ್ಯರ್ಥಿಗಳು, ಆಯಾ ಜಿಲ್ಲೆಯ ಕೌನ್ಸಿಲಿಂಗ್ ನಡೆಯುವ ದಿನದಂದು ಎಲ್ಲಾ ಮೂಲ ದಾಖಲೆಗಳು ಹಾಗೂ ಪಾಸ್ಪೋರ್ಟ್ ಅಳತೆಯ ಇತ್ತೀಚಿನ ೫ ಭಾವಚಿತ್ರಗಳೊಂದಿಗೆ ಖುದ್ದಾಗಿ ಹಾಜರಾಗಲು ತಿಳಿಸಿದೆ. ಯಾವುದೇ ಅಭ್ಯರ್ಥಿಗೆ ಪ್ರತ್ಯೇಕವಾಗಿ ಸೂಚನೆಯನ್ನು ನೀಡಲಾಗುವುದಿಲ್ಲ. ಒಂದು ವೇಳೆ ಕೌನ್ಸಿಲಿಂಗ್ಗೆ ಗೈರು ಹಾಜರಾದಲ್ಲಿ ಆಯ್ಕೆಯನ್ನು ನಿಯಮಾನುಸಾರ ರದ್ದುಪಡಿಸಲಾಗುತ್ತದೆ.
ಕೌನ್ಸಿಲಿಂಗ್ ವೇಳಾಪಟ್ಟಿ ಇಂತಿದೆ:
ದಿನಾಂಕ ೧೯.೦೫.೨೦೧೦, ಹಾಸನ ಜಿಲ್ಲೆ, ಸಮಯ ಬೆಳಿಗ್ಗೆ ೧೦.೩೦ ರಿಂದ ಸಂಜೆ ೫.೩೦. ದಿನಾಂಕ ೨೦.೦೫.೨೦೧೦, ಮಂಡ್ಯ ಮತ್ತು ಕೊಡಗು ಜಿಲ್ಲೆ, ಸಮಯ ಬೆಳಿಗ್ಗೆ ೧೦.೩೦ ರಿಂದ ಸಂಜೆ ೫.೩೦. ದಿನಾಂಕ ೨೧.೦೫.೨೦೧೦, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ, ಸಮಯ ಬೆಳಿಗ್ಗೆ ೧೦.೩೦ ರಿಂದ ಸಂಜೆ ೫.೩೦. ದಿನಾಂಕ ೨೨.೦೫.೨೦೧೦, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ, ಸಮಯ ಬೆಳಿಗ್ಗೆ ೧೦.೩೦ ರಿಂದ ಸಂಜೆ ೫.೩೦ರವರೆಗೆ ಎಂದು ಆಯ್ಕೆ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.