ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ತಾ.ಪಂ. ಕೆಡಿಪಿ ಸಭೆ - ಗ್ರಾಮಾಂತರ ಶಾಲೆಗಳಲ್ಲಿ ಶಿಕ್ಷಕರ ಕೊರತೆ: ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ; ಶಾಸಕ ಅಭಯಚಂದ್ರ ಜೈನ್ ಎಚ್ಚರಿಕೆ

ಮಂಗಳೂರು: ತಾ.ಪಂ. ಕೆಡಿಪಿ ಸಭೆ - ಗ್ರಾಮಾಂತರ ಶಾಲೆಗಳಲ್ಲಿ ಶಿಕ್ಷಕರ ಕೊರತೆ: ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ; ಶಾಸಕ ಅಭಯಚಂದ್ರ ಜೈನ್ ಎಚ್ಚರಿಕೆ

Tue, 08 Dec 2009 17:44:00  Office Staff   S.O. News Service
ಮಂಗಳೂರು, ಡಿ.೮: ಗ್ರಾಮಾಂತರ ಪ್ರದೇಶಗಳ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಹಳಷ್ಟಿದ್ದು, ಇದರಿಂದ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಈ  ನಿಟ್ಟಿನಲ್ಲಿ ಎಲ್ಲಾ ಶಾಲೆಗಳಲ್ಲೂ ಏಕ ರೀತಿಯ ನಿಯಮಗಳನ್ನು ರೂಪಿಸಿ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಯಾಗಿಸಿಕೊಂಡು ಪ್ರತಿಭಟನೆ ಮಾಡಲಾಗುವುದು ಎಂದು ಶಾಸಕ ಅಭಯಚಂದ್ರ ಜೈನ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 

ಮಂಗಳೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಇಂದು ತ್ರೈಮಾಸಿಕ ಕೆಡಿಪಿ  ಸಭೆಯ ಅಧ್ಯಕ್ಷತೆ ವಹಿಸಿ ಅವರು ಗ್ರಾಮಾಂತರ ಶಾಲೆಗಳಲ್ಲಿ ಶಿಕ್ಷಕರ ಕೊರತೆಗೆ ಸಂಬಂಧಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೈದರು. 

ಮಂಗಳೂರು ತಾಲೂಕು ವಲಯದಲ್ಲಿ ಪ್ರಾಥಮಿಕ ಶಾಲೆಗಳಿಗೆ 10 ಮಂದಿ ಶಿಕ್ಷಕರ ನೇಮಕಾತಿಗೆ ವಾರ್ಷಿಕ ಗುರಿ ಹೊಂದಿದ್ದು, ಗುರಿಯನ್ನು ಪೂರೈಸಲಾಗಿದೆ. ೮ನೆ ತರಗತಿಗೆ ನಾಲ್ಕು ಮಂದಿ ಶಿಕ್ಷಕರ ನೇಮಕಾತಿಯ ವಾರ್ಷಿಕ ಗುರಿ ಹೊಂದಿದ್ದು ಅದನ್ನೂ ಪೂರೈಸಲಾಗಿದೆ ಎಂದು ತಾಲೂಕು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು. ಮಂಗಳೂರು ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅನುಪಸ್ಥಿತಿಯಲ್ಲಿ  ಕಚೇರಿ ಸಿಬ್ಬಂದಿ ಮಾಹಿತಿ ನೀಡಿ ಪ್ರಾಥಮಿಕ ಶಾಲೆಗಳಿಗೆ ಇಬ್ಬರು ಶಿಕ್ಷಕರ ನೇಮಕಾತಿಯ ವಾರ್ಷಿಕ ಗುರಿ ಹೊಂದಲಾಗಿದ್ದು, ಇನ್ನಷ್ಟೆ ನೇಮಕವಾಗಬೇಕಾಗಿದೆ ಎಂದರು. 

ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಜಿ.ಪಂ. ಸದಸ್ಯರಾದ ಅಝೀಝ್ ಮಲಾರ್, ಪ್ರಮೋದ್ ಕುಮಾರ್ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವು ಶಾಲೆಗಳಲ್ಲಿ ೩೦೦ಕ್ಕೂ ಅಧಿಕ ಮಕ್ಕಳಿದ್ದರೂ ಅಲ್ಲಿರುವುದು ಒಂದಿಬ್ಬರು ಶಿಕ್ಷಕರು. ಅದೇ ಪಟ್ಟಣ ಪ್ರದೇಶಗಳ ಶಾಲೆಗಳಲ್ಲಿ ೧೨೫ ಮಕ್ಕಳಿಗೆ ನಾಲ್ಕೆದು ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಈ ಸಂದರ್ಭ ಮಾಹಿತಿ ನೀಡಿದ ಮಂಗಳೂರು ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ೪ ಶಿಕ್ಷಕರು ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಕನಿಷ್ಠ ಇಬ್ಬರು ಶಿಕ್ಷಕರು ಕಡ್ಡಾಯ ಎಂಬ ನಿಯಮ ಶಿಕ್ಷಣ ಇಲಾಖೆಯದ್ದು ಎಂದಾಗ ಈ ಬಗ್ಗೆ ಆಕ್ಷೇಪಿಸಿದ ಶಾಸಕ ಅಭಯಚಂದ್ರ ಜೈನ್, ಶಿಕ್ಷಕರ ಕುರಿತಾದ  ಅಂಕಿ ಅಂಶಗಳನ್ನೇ ಇಲಾಖೆಯು ಸಮರ್ಪಕವಾಗಿ ತಿಳಿಸುತ್ತಿಲ್ಲ. ಎಲ್ಲಾ ಶಾಲೆಗಳಲ್ಲೂ  ಒಂದೇ ರೀತಿಯ ನಿಯಮ ಆಗಬೇಕು. ನಗರ ಶಾಲೆಗಳಲ್ಲಿ ಒಂದು ಗ್ರಾಮಾಂತರ ಶಾಲೆಗಳಿಗೆ ಒಂದು ರೀತಿಯ ನಿಯಮ ಬೇಡ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಮುಸ್ಲಿಂ ವಸತಿ ಶಾಲೆಯ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸಿ
 
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಇಲಾಖಾವಾರು ಪ್ರಗತಿಯ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡುತ್ತಿದ್ದ ಸದಂರ್ಭ ತೊಕ್ಕೊಟ್ಟಿನ ಮುಸ್ಲಿಂ ವಸತಿ ಶಾಲೆಯ ಸಮಸ್ಯೆ ಯಾವ  ಹಂತದಲ್ಲಿದೆ ಎಂದು ಅಝೀಝ್ ಮಲಾರ್ ಪ್ರಶ್ನಿಸಿದರು. 

ಆ ಶಾಲೆಯ ಮುಖ್ಯೋಪಾಧ್ಯಾಯರನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ರಜೆಯ ಮೇಲೆ ಕಳುಹಿಸಿದ್ದಾರೆಂದು ತಿಳಿಸಿದರು. 

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಝೀಝ್ ಮಲಾರ್, ಇಲಾಖಾ ವಿಚಾರಣೆ ಇಲ್ಲದೆ ಮುಖ್ಯೋಪಾಧ್ಯಾಯರನ್ನು ರಜೆ ಮೇಲೆ ಕಳುಹಿಸಲಾಗಿದೆ. ನಾಟೆಕಲ್‌ನಿಂದ ತೊಕ್ಕೊಟ್ಟಿನ ಬಾಡಿಗೆ ಕಟ್ಟಡವನ್ನು ತೆಗೆದುಕೊಂಡಿದ್ದು ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ. ಅಲ್ಲಿನ ಅವ್ಯವಸ್ಥೆಯ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ. 

ಮುಖ್ಯೋಪಾಧ್ಯಾಯರನ್ನು ಹೊಣೆಯನ್ನಾಗಿಸಿರುವುದು ಯಾಕೆ ಎಂದವರು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಅಧಿಕಾರಿ ಕ್ರಮ ಕೈಗೊಂಡಿರುವುದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಎಂದರು. 

ಈ ಸಮಸ್ಯೆಯಿಂದಾಗಿ ಇದೀಗ 13  ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಶಾಲೆಯೊಂದು ಮುಚ್ಚುವ ಸ್ಥಿತಿಗೆ ಬಂದಿದೆ. ಒಂದು ವರ್ಷಕ್ಕೆ ಈ ಶಾಲೆಗೆ 40 ರಿಂದ 50 ಲಕ್ಷ ರೂ. ಹೂಡಿಕೆಯಾಗುತ್ತದೆ. ಆದರೆ, ಅದರ ಸಮರ್ಪಕ ಬಳಕೆಯಿಲ್ಲದೆ ಆ ಹಣ ವಾಪಾಸಾಗುತ್ತಿದೆ. ಕಳೆದ ಆರು ತಿಂಗಳಲ್ಲಿ 30 ಲಕ್ಷ ರೂ. ಹೂಡಿಕೆಯಾಗಿದೆ. ಹಾಗಿದ್ದರೂ ಸಮಾಜ ಕಲ್ಯಾಣ ಇಲಾಖೆ ವಸತಿಶಾಲೆಗೆ ಹಣ ನೀಡುತ್ತಿಲ್ಲ ಎಂದು ಅಝೀಝ್ ಮಲಾರ್ ದೂರಿದರು. 

ಈ ಸಂದರ್ಭ ಮಾತನಾಡಿದ ಶಾಸಕ ಅಭಯಚಂದ್ರ ಜೈನ್, ತಾ.ಪಂ. ಅಧ್ಯಕ್ಷರು, ಶಾಸಕರು ಹಾಗೂ ಜಿ.ಪಂ. ಸದಸ್ಯರನ್ನು ಕರೆಸಿ ಈ ವಿಷಯವನ್ನು ಒಂದು ವಾರದೊಳಗೆ ಬಗಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಅಡಿಕೆ ಬೆಳೆಯುವ ಪ್ರದೇಶದಲ್ಲಿ ತರಬೇತಿ ನೀಡಿ

ತೋಟಗಾರಿಕಾ ಇಲಾಖೆಯಿಂದ ಪ್ರಸಕ್ತ ವರ್ಷ ಮಲ್ಲೂರು ಉಳಾಯಿಬೆಟ್ಟುವಿನಲ್ಲಿ ಅಡಿಕೆ ಬೇರು ಹುಳ ರೋಗ ಮತ್ತು ಕೊಳೆರೋಗದ ಬಗ್ಗೆ ರೈತರಿಗೆ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದಾಗ ಅಡಿಕೆ ಬೆಳೆ ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ ರೈತರಿಗೆ ತರಬೇತಿ ನೀಡಿದಲ್ಲಿ ಮಾತ್ರವೇ ಅದರ ಪ್ರಯೋಜನ ಅರ್ಹರಿಗೆ ಲಭಿಸಲಿದೆ. ಮಾತ್ರವಲ್ಲದೆ ರೈತರಿಗೆ ಯಂತ್ರೋಪಕರಣ ಖರೀದಿ ಕುರಿತು ಸೂಕ್ತವಾದ ಮಾಹಿತಿಯ ಜೊತೆಗೆ ಮಾರುಕಟ್ಟೆಗೂ ವ್ಯವಸ್ಥೆ ಮಾಡುವುದು ಅಗತ್ಯ ಎಂದು ಶಾಸಕ ಅಭಯಚಂದ್ರ ಜೈನ್ ಸಲಹೆ ನೀಡಿದರು. 

ಸಭೆಯಲ್ಲಿ ತಾ.ಪಂ. ಅಧ್ಯಕ್ಷ ರಾಮಚಂದ್ರ ಕುಂಪಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು ಹಾಗೂ ಜಿ.ಪಂ.ನ ಕೆಲ ಸದಸ್ಯರು ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದು ವರದಿ ನೀಡಿದರು

Share: