ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಒಟ್ಟು ಹದಿನಾರು ಆರೋಪಗಳಿಗಾಗಿ ಬೇಕಾಗಿರುವ ಬಂಧಿತ ಉಗ್ರ ನಜೀರ್ ಮತ್ತು ಶಂಸುದ್ದೀನ್

ಬೆಂಗಳೂರು:ಒಟ್ಟು ಹದಿನಾರು ಆರೋಪಗಳಿಗಾಗಿ ಬೇಕಾಗಿರುವ ಬಂಧಿತ ಉಗ್ರ ನಜೀರ್ ಮತ್ತು ಶಂಸುದ್ದೀನ್

Sun, 06 Dec 2009 03:02:00  Office Staff   S.O. News Service
ಬೆಂಗಳೂರು, ಡಿಸೆಂಬರ್ ೬: ಬಂಧಿತ ಶಂಕಿತ ಉಗ್ರರಾದ ಕೇರಳದ ನಜೀರ್ ಹಾಗೂ ಸಂಶುದ್ದೀನ್ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಸೇರಿ ಬರೋಬ್ಬರಿ ೧೩ ಪ್ರಕರಣಗಳಲ್ಲಿ ಕೇರಳ ಪೊಲೀಸರಿಗೆ ಬೇಕಾಗಿದ್ದಾರೆ. ಉಳಿದಂತೆ ಬೆಂಗಳೂರು, ತಮಿಳುನಾಡಿನ ಕೊಯಮತ್ತೂರು ಹಾಗೂ ಗುಜರಾತಿನ ಸೂರತ್‌ನಲ್ಲಿ ನಡೆದ ಸ್ಫೋಟ ಪ್ರಕರಣಗಳಲ್ಲಿ ನಜೀರ್ ಭಾಗಿಯಾಗಿದ್ದಾನೆ. ಇದರಲ್ಲಿ ಎರಡು ಸ್ಫೋಟಗಳಿಗೆ ಸಂಶುದ್ದೀನ್ ಸಹಕಾರ ನೀಡಿದ್ದಾನೆ. ೧೯೯೬ರಿಂದಲೇ ನಜೀರ್ ಭಯೋತ್ಪಾದಕ ಚಟುವಟಿಕೆಗಳಿಗೆ ಅಂದರೆ ಪಾಕಿಸ್ತಾನದ ಲಷ್ಕರ್ ಸಂಘಟನೆಗೆ ಕೇರಳದಿಂದ ಮುಗ್ಧ ಯುವಕರನ್ನು ಪೂರೈಕೆ ಮಾಡುತ್ತಿದ್ದ. ಅಲ್ಲದೆ, ಇಸ್ಲಾಂ ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದ ಮುಸ್ಲಿಂ ವಿಚಾರವಾದಿಯೊಬ್ಬರ ಕೊಲೆಗೆ ನಜೀರ್ ಯತ್ನಿಸಿದ್ದ. ಸಾಲದ್ದಕ್ಕೆ ಕೇರಳದಲ್ಲಿ ಪೊಲೀಸರು ಮುಸ್ಲಿಂ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ೨೦೦೦ರಲ್ಲಿ ಅಂದಿನ ಕೇರಳದ ಗೃಹ ಸಚಿವರೂ ಆಗಿದ್ದ ಮುಖ್ಯಮಂತ್ರಿ ಇ.ಕೆ.ನಯನಾರ್ ಅವರ ಹತ್ಯೆಗೆ ಯತ್ನಿಸಿದ್ದ. ಜತೆಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಯುವಕರನ್ನು ಬಂಧಿಸುತ್ತಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಅವರಿದ್ದ ಜೀಪ್ ಮೇಲೆ ಬಾಂಬ್ ಎಸೆದು ಹತ್ಯೆಗೈಯಲು ಮುಂದಾಗಿದ್ದ. ಇದರಲ್ಲಿ ನಾಲ್ಕು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಕೋಜಿಕೋಡ್ ಬಾಂಬ್ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದ್ದರೇ, ಮಾಜಿ ಮುಖ್ಯಮಂತ್ರಿ ಇ.ಕೆ.ನಯನಾರ್ ಹತ್ಯೆ ಪ್ರಕರಣವನ್ನು ಕೇರಳದ ಸಿಸಿಬಿ ಹಾಗೂ ಭಯೋತ್ಪಾದಕ ಚಟುವಟಿಕೆಗಳ ಪ್ರಕರಣಗಳನ್ನು ಕೇರಳದ ಭಯೋತ್ಪಾದಕ ನಿಗ್ರಹ ದಳ (ಎಟಿ‌ಎಸ್) ತನಿಖೆ ನಡೆಸುತ್ತಿದೆ. ೧೪ ದಿನ ಪೊಲೀಸ್ ವಶಕ್ಕೆ:ಶನಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ, ಮೇಘಾಲಯದ ಶಿಲಾಂಗ್‌ನಿಂದ ಶುಕ್ರವಾರ ನಗರಕ್ಕೆ ಕರೆತರಲಾಗಿದ್ದು, ಶನಿವಾರ ಬೆಳಿಗ್ಗೆ ೧ನೇ ಎಸಿ‌ಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆ ಸಲುವಾಗಿ ೧೪ ದಿನಗಳ ಕಾಲ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಈ ಸಂಬಂಧ ಕೇರಳದ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಭೇಟಿ ಮಾಡಿದ್ದು, ಚರ್ಚೆ ನಡೆಸಿದ್ದಾರೆ. ಜಂಟಿ ತನಿಖೆ ನಡೆಸುವ ಕುರಿತು ಮಾತುಕತೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇರಳ ಎಟಿಸಿ ಎಸ್ಪಿ ಪಿ.ರಾಜು, ಇಬ್ಬರು ಕೂಡ ಎಂಟು ಪ್ರಕರಣಗಳಲ್ಲಿ ಕೇರಳ ಪೊಲೀಸರಿಗೆ ಬೇಕಾಗಿದ್ದಾರೆ. ಸೌಜನ್ಯ: ಕನ್ನಡಪ್ರಭ

Share: