ವಯನಾಡ್: ಭಾರೀ ಮಳೆಯಾಗುತ್ತಿರುವ ಕೇರಳದ ವಯನಾಡ್ ಜಿಲ್ಲೆಯ ವೈತಿರಿ ತಾಲೂಕಿನಲ್ಲಿ ಮಂಗಳವಾರ ನಸುಕಿನ ವೇಳೆ ಕೇವಲ ನಾಲ್ಕು ಗಂಟೆಗಳಲ್ಲಿ ಸಂಭವಿಸಿದ ಮೂರು ಭೀಕರ ಭೂಕುಸಿತಗಳು ಎಳೆಯ ಮಕ್ಕಳು ಸೇರಿದಂತೆ 150ಕ್ಕೂ ಅಧಿಕ ಜೀವಗಳನ್ನು ಬಲಿ ತೆಗೆದುಕೊಂಡಿವೆ. ಹಲವಾರು ಕುಟುಂಬಗಳು ನಾಪತ್ತೆಯಾಗಿದ್ದರೆ ಕಲ್ಲುಮಣ್ಣಿನಡಿ ಸಿಕ್ಕಿ ಹಾಕಿಕೊಂಡಿರುವ ನೂರಾರು ಜನರಿಗಾಗಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. 130ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಜನರು ಸವಿನಿದ್ರೆಯಲ್ಲಿದ್ದಾಗ ಸಂಭವಿಸಿದ ಭೂಕುಸಿತಗಳಲ್ಲಿ ಮನೆಗಳು ಮತ್ತು ಕುಟುಂಬಗಳು ಕೊಚ್ಚಿಕೊಂಡು ಹೋಗಿವೆ. ಚಿತ್ರಸದೃಶ ರಮಣೀಯ ಸ್ಥಳವಾಗಿದ್ದ ಪ್ರದೇಶದಲ್ಲಿ ಈಗ ಎಲ್ಲೆಲ್ಲೂ ವಿನಾಶವೇ ತಾಂಡವವಾಡುತ್ತಿದೆ. ಹಲವಾರು ಮನೆಗಳು ಧ್ವಂಸಗೊಂಡಿವೆ, ಜಲಮೂಲಗ ,ಜಲಮೂಲಗಳು ತುಂಬಿ ಹರಿಯುತ್ತಿವೆ,ಮರಗಳು ಬುಡಸಹಿತ ಉರುಳಿ ಬಿದ್ದಿವೆ. ರಕ್ಷಣಾ ಕಾರ್ಯಾಚರಣೆಗಳಿಗೆ ತೀವ್ರ ಅಡಿಯಂಟಾಗಿದೆ.
ಮೆಪ್ಪಾಡಿಯಲ್ಲಿ ಸಂಭವಿಸಿದ ಭೂಕುಸಿತ ಇಡೀ ಗ್ರಾಮವನ್ನೇ ಆಪೋಷನ ತೆಗೆದುಕೊಂಡಿದೆ. ಮುಂಡಕ್ಕೆ, ಚೂರ್ಲಮಾಲ, ಅಟ್ಟಮಾಲ ಮತ್ತು ನೂಲ್ವುಳ ಗ್ರಾಮಗಳು ಸಂಪರ್ಕವನ್ನು ಕಳೆದುಕೊಂಡಿವೆ. ವರದಿಗಳಂತೆ ಮುಂಡಕ್ಕೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಉಕ್ಕಿ ಹರಿಯುತ್ತಿರುವ ಜಲಮೂಲಗಳು ಮಾರ್ಗವನ್ನು ಬದಲಿಸಿ ಜನವಸತಿ ಪ್ರದೇಶದ ಮೂಲಕ ಹರಿದಿದ್ದು ಹೆಚ್ಚಿನ ವಿನಾಶವನ್ನುಂಟು ಮಾಡಿದೆ. ಗುಡ್ಡಗಳಿಂದ ಕೆಳಗುರುಳಿದ ಬೃಹತ್ ಬಂಡೆಗಳು ರಕ್ಷಣಾ ಕಾರ್ಯಕರ್ತರಿಗೆ ತೀವ್ರ ತಡೆಯನ್ನುಂಟು ಮಾಡಿವೆ.
ಮಾಧ್ಯಮ ವರದಿಗಳಂತೆ ಹಲವಾರು ಕಿ.ಮೀ.ಗಳಷ್ಟು ದೂರದ ಮಲಪ್ಪುರಮ್ನನಲ್ಲಿ ಚಾಲಿಯಾರ್ ನದಿಯಲ್ಲಿ ತೇಲುತ್ತಿದ್ದ 17 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ.
ಶವಗಳನ್ನು ಗುರುತು ಪತ್ತೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಈವರೆಗೆ ಕನಿಷ್ಠ 150ಕ್ಕೂ ಅಧಿಕ ಸಾವುಗಳು ಸಂಭವಿಸಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ. ಸಾವುಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕವಿದೆ ಎಂದು ಸ್ಪೆಷಲ್ ಬ್ರಾಂಚ್ ಡಿವೈಎಸ್ಪಿ ಪಿ.ಎಲ್.ಶೈಜು ಸುದ್ದಿಸಂಸ್ಥೆಗೆ ತಿಳಿಸಿದರು.
34 ಶವಗಳನ್ನು ಗುರುತಿಸಲಾಗಿದ್ದು, ಈ ಪೈಕಿ 18 ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಅಪರಿಚಿತ ಶವಗಳನ್ನು ಗುರುತಿಸಲು ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ಜಿಲ್ಲೆಯಲ್ಲಿ 45 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 3,069 ಜನರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ರಾಜ್ಯಾದ್ಯಂತ 118 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 5,531 ಜನರು ಆಶ್ರಯ ಪಡೆದಿದ್ದಾರೆ ಎಂದರು.
ಕೆಸರು ಮಿಶ್ರಿತ ನೀರಿನ ಪ್ರವಾಹದ ನಡುವೆ ತಮ್ಮ ಮನೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವವರು ಹಾಗೂ ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದರಿಂದ ಮತ್ತು ರಸ್ತೆಗಳಲ್ಲಿ ನೆರೆ ನೀರು ತುಂಬಿರುವುದರಿಂದ ಸ್ಥಳದಿಂದ ತೆರಳಲು ಸಾಧ್ಯವಾಗದ ಹಲವಾರು ಜನರು ಅಳುತ್ತಿರುವ ಮತ್ತು ರಕ್ಷಣೆಗಾಗಿ ಅಂಗಲಾಚುತ್ತಿರುವ ಹೃದಯ ಕಲಕುವ ದೂರವಾಣಿ ಸಂಭಾಷಣೆಗಳನ್ನು ಸ್ಥಳೀಯ ಟಿವಿ ವಾಹಿನಿಗಳು ಪ್ರಸಾರ ಮಾಡಿವೆ.
ನಿರಂತರ ಮಳೆ ಮತ್ತು ತೀವ್ರ ಪ್ರತಿಕೂಲ ಹವಾಮಾನದಿಂದಾಗಿ ಸವಾಲಾಗಿರುವ ರಕ್ಷಣಾ ಕಾರ್ಯಾಚರಣೆಗಳಲ್ಲಿ ನೆರವಾಗಲು ಎನ್ಡಿಆರ್ಎಫ್ ತಂಡಗಳು ಮತ್ತು ಸೇನಾ ತುಕಡಿಗಳು ಧಾವಿಸಿವೆ,ಜೊತೆಗೆ ಹೆಲಿಕಾಪ್ಟರ್ಗಳೂ ಆಗಮಿಸಿವೆ ಎಂದು ವಯನಾಡ್ ಜಿಲ್ಲಾಧಿಕಾರಿ ಮೇಘಶ್ರೀ ಡಿ.ಆರ್.ಸುದ್ದಿಸಂಸ್ಥೆಗೆ ತಿಳಿಸಿದರು. ವರದಿಗಳ ಪ್ರಕಾರ ಚೂರ್ಲಮಾಲ ಪ್ರದೇಶವನ್ನು ಸಂಪರ್ಕಿಸುವ ಸೇತುವೆಗೆ ಹಾನಿಯಾಗಿದ್ದು, ಸಂಪೂರ್ಣವಾಗಿ ನಾಮಾವಶೇಷಗೊಂಡಿರುವ ಮುಂಡಕ್ಕೆ ತಲುಪಲು ರಕ್ಷಣಾ ತಂಡಗಳು ಹೆಣಗಾಡುತ್ತಿವೆ.
ಎನ್ಡಿಆರ್ಎಫ್ ಜೊತೆಗೆ ಪೊಲೀಸ್ ಮತ್ತು ಅಗ್ನಿಶಾಮಕ ಪಡೆಯ ವಿಪತ್ತು ಪ್ರತಿಕ್ರಿಯಾ ತಂಡಗಳೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಸ್ವಯಂಸೇವಕರು ಮತ್ತು ಸ್ಥಳೀಯ ನಿವಾಸಿಗಳೂ ಕಾರ್ಯಾಚರಣೆಯಲ್ಲಿ ಸಹಕರಿಸುತ್ತಿದ್ದಾರೆ. ಕರಮಂತೋಡು ನದಿಯ ಬಾಣಾಸುರ ಸಾಗರ ಅಣೆಕಟ್ಟಿನ ದ್ವಾರವನ್ನು ತೆರೆಯಲಾಗಿದ್ದು, ಕೆಲಭಾಗದಲ್ಲಿಯ ಮತ್ತು ತಗ್ಗುಪ್ರದೇಶಗಳ ಜನರಿಗೆ ಸಂಭಾವ್ಯ ನೆರೆಯ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಕೇರಳ ಸರಕಾರದ ಕೋರಿಕೆಯ ಮೇರೆಗೆ ಸೇನಾ ಸಿಬ್ಬಂದಿಯ ತಂಡವನ್ನು ರವಾನಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದರು.