ಕಾರವಾರ: ಲಂಚ ಪಡೆಯುತ್ತಿರುವ ಸಂದರ್ಭದಲ್ಲಿ ಸಿಕ್ಕಿ ಬಿದ್ದ ಪಟ್ಟಣ ಪಂಚಾಯಿತಿ ಸದಸ್ಯನಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.
ಯಲ್ಲಾಪುರ ಪಟ್ಟಣ ಪಂಚಾಯಿತಿಯ 5 ನೇ ವಾರ್ಡ್ ಸದಸ್ಯರಾಗಿದ್ದ ರವಿ ಸೋಮಯ್ಯ ದೇವಾಡಿಗನಿಗೆ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯವು 2 ವರ್ಷಗಳ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
2010 ರ ಅಕ್ಟೋಬರ್ 12 ರಂದು ಅತಿಕ್ರಮಣ ತೆರವು ಮಾಡದೇ ಬಿಡಲು ಮನೆಯ ಮಾಲೀಕನಿಂದ 4,500 ರೂ ಲಂಚ ಪಡೆಯುವ ವೇಳೆ ಲೋಕಾಯುಕ್ತ ದಾಳಿ ವೇಳೆ ರವಿ ದೇವಾಡಿಗ ಬಂಧಿತನಾಗಿದ್ದ.
ನರಸಿಂಹ ವೆಂಕರಮಣ ಭಟ್ಟ ಅವರ ಯಲ್ಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಟಗಾರ ರಸ್ತೆಯ ಮನೆಯ ಎದುರು ಪಪಂ ಅನುದಾನದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿತ್ತು. ನಿಯಮದಂತೆ ಚರಂಡಿ ನಿರ್ಮಾಣ ಮಾಡಲು ನರಸಿಂಹ ಭಟ್ಟ ಅವರು ಅತಿಕ್ರಮಿಸಿ ನಿರ್ಮಿಸಿದ ಮನೆಯ ಗೋಡೆಯನ್ನು ಒಡೆಯಬೇಕಾಗುತ್ತದೆ ಎಂದು ಗುತ್ತಿಗೆದಾರ ಹೇಳಿದ್ದ. ಗೋಡೆ ಒಡೆಯದಂತೆ ಕಾಮಗಾರಿ ಮಾಡಿಕೊಡುವಂತೆ ನರಸಿಂಹ ಭಟ್ಟ ಅವರು ಆಗಿನ ಪಪಂ ಸದಸ್ಯ ರವಿ ದೇವಾಡಿಗ ಬಳಿ ಮನವಿ ಮಾಡಿದಾಗ 10 ಸಾವಿರ ರೂ. ಲಂಚ ಕೇಳಿದ್ದ. 4500 ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ ನಡೆಸಲಾಗಿತ್ತು.
ಲೋಕಾಯುಕ್ತ ಪೊಲೀಸರು ಹಣದೊಂದಿಗೆ ರವಿ ದೇವಾಡಿಗನ್ನು ಬಂಧಿಸಿದ್ದರು. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಕೈಗೊಂಡ ಜಿಲ್ಲಾ ನ್ಯಾಯಾಧೀಶರಾದ ಡಿ ಎಸ್ ವಿಜಯಕುಮಾರ್ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ 4,500ರೂ. ದೂರುದಾರರಿಗೆ ಮರಳಿಸುವಂತೆ ಸೂಚಿಸಿದ್ದಾರೆ. ಲೋಕಾಯಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್ ಎಂ ಪ್ರಭು ವಾದ ಮಂಡಿಸಿದ್ದರು.