ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಲೋಕಸಭಾ ಸ್ಥಾನ: ಕಾಂಗ್ರೆಸ್ ಶತಕ

ಲೋಕಸಭಾ ಸ್ಥಾನ: ಕಾಂಗ್ರೆಸ್ ಶತಕ

Sat, 08 Jun 2024 13:08:43  Office Staff   Vb

ಹೊಸದಿಲ್ಲಿ: ಲೋಕಸಭಾ ಚುನಾವಣೆಗಳಲ್ಲಿ ಉತ್ತಮ ಸಾಧನೆಯನ್ನು ಪ್ರದರ್ಶಿಸಿದ್ದರೂ ಶತಕ ವಂಚಿತಗೊಂಡಿದ್ದ ಕಾಂಗ್ರೆಸ್ ಗುರುವಾರ ಲೋಕಸಭೆಯಲ್ಲಿ ತನ್ನ ಬಲವನ್ನು ಒಂದು ಸ್ಥಾನದಿಂದ ಹೆಚ್ಚಿಕೊಂಡಿದೆ, ತನ್ಮೂಲಕ ಶತಕವನ್ನು ಸಾಧಿಸಿದೆ.

ಮಹಾರಾಷ್ಟ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಕಾಂಗ್ರೆಸಿನ ಬಂಡುಕೋರ ವಿಶಾಲ್ ಪಾಟೀಲ್ ಪಕ್ಷಕ್ಕೆ ಬೆಂಬಲವನ್ನು ಘೋಷಿಸಿದ್ದಾರೆ.

ಕಾಂಗ್ರೆಸ್ ಚುನಾವಣೆಯಲ್ಲಿ 99 ಸ್ಥಾನಗಳನ್ನು ಗೆದ್ದಿತ್ತು. ಪಾಟೀಲ್ ಬೆಂಬಲದೊಂದಿಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಬಲ ನೂರಕ್ಕೇರಲಿದೆ ಎಂದು ಕಾಂಗ್ರೆಸ್ ಶಾಸಕ ವಿಶ್ವಜಿತ ಕದಂ ತಿಳಿಸಿದರು. ಕದಂ ಪಕ್ಷದೊಳಗೆ ಪಾಟೀಲ್ ಪರವಾಗಿ ಹೋರಾಡಿದ್ದರು.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಸಂತದಾದಾ ಪಾಟೀಲ್‌ರ ಮೊಮ್ಮಗ ವಿಶಾಲ್ ಪಾಟೀಲ್ ಸಾಂಗ್ಲಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಂಜಯಕಾಕಾ ಪಾಟೀಲ ವಿರುದ್ದ ಗೆದ್ದಿದ್ದಾರೆ.

ಎಂವಿಎ ಮೈತ್ರಿಕೂಟದಲ್ಲಿ ಸ್ಥಾನ ಹಂಚಿಕೆ ವ್ಯವಸ್ಥೆಯಂತೆ ಸಾಂಗ್ಲಿ ಲೋಕಸಭಾ ಕ್ಷೇತ್ರವನ್ನು ಶಿವಸೇನೆ (ಯುಬಿಟಿ)ಗೆ ಬಿಟ್ಟು ಕೊಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಪಾಟೀಲ್ ಬಂಡಾಯವೆದ್ದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಎಕ್ಸ್‌ ಪೋಸ್ಟ್‌ನಲ್ಲಿ ಪಕ್ಷಕ್ಕೆ ಪಾಟೀಲ್ ಬೆಂಬಲವನ್ನು ಸ್ವಾಗತಿಸಿದ್ದಾರೆ.


Share: