ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ‘ಬಾಬರಿ ಮಸೀದಿ ಧ್ವಂಸ ಮಾಡಿದ ಆರೋಪಿಗಳನ್ನು ಗಲ್ಲಿಗೇರಿಸಿ’: ಪ್ರಗತಿಪರ ಸಂಘಟನೆಗಳಿಂದ ‘ಕರಾಳ ದಿನ’ ಆಚರಣೆ

ಮಂಗಳೂರು: ‘ಬಾಬರಿ ಮಸೀದಿ ಧ್ವಂಸ ಮಾಡಿದ ಆರೋಪಿಗಳನ್ನು ಗಲ್ಲಿಗೇರಿಸಿ’: ಪ್ರಗತಿಪರ ಸಂಘಟನೆಗಳಿಂದ ‘ಕರಾಳ ದಿನ’ ಆಚರಣೆ

Mon, 07 Dec 2009 02:14:00  Office Staff   S.O. News Service
ಬೆಂಗಳೂರು,ಡಿ.6: ದೇಶದ ಜಾತ್ಯತೀತ ಅಸ್ತಿತ್ವಕ್ಕೆ ಅವಮಾನ ಮಾಡಿ ಐತಿಹಾಸಿಕ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ಸಂಘಪರಿವಾರ ಮತ್ತು ಬಿಜೆಪಿಯ ದೇಶದ್ರೋಹಿ ಆರೋಪಿಗಳನ್ನು ನೇಣು ಹಾಕಬೇಕು ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಟಿಪ್ಪು ಸುಲ್ತಾನ ಸಂಯುಕ್ತ ರಂಗ, ಅಹಿಂದ, ಪ್ರಜಾವಿಮೋಚನಾ ಚಳುವಳಿ,ದಲಿತ ಸಂಘರ್ಷ ಸಮಿತಿ-ಕರ್ನಾಟಕ, ಸಿಪಿ‌ಎಂ, ಭಾರತ ಅಹಿಂದಾ ವೇದಿಕೆ, ಮುಸ್ಲಿಮ್ ಸಂಘರ್ಷ ಸಮಿತಿ ಸೇರಿದಂತೆ ಅನೇಕ ಪ್ರಗತಿಪರ ಮತ್ತು ಮಾನವ ಹಕ್ಕು ಸಂಘಟನೆಗಳು ಮಹಾತ್ಮ ಗಾಂಧಿ ಪ್ರತಿಮೆ ಬಳಿ ‘ಕರಾಳ ದಿನ’ದ ಅಂಗವಾಗಿ ಸಾಂಕೇತಿಕ ಧರಣಿ ಹಮ್ಮಿಕೊಂಡಿದ್ದವು.

ಧರಣಿಯಲ್ಲಿ ಮಾತನಾಡಿದ ಟಿಪ್ಪು ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಷಿ, ೧೯೯೨ರ ಡಿ.೬ರಂದು ಕೋಮುವಾದ ಶಕ್ತಿಗಳು ಬಾಬರಿ ಮಸೀದಿ ಧ್ವಂಸಗೊಳಿಸುವುದರ ಜೊತೆಗೆ ದೇಶದ ಜಾತ್ಯತೀತ ಅಸ್ತಿತ್ವವನ್ನು ನಾಶ ಮಾಡಿದರು. ಈ ಘಟನೆ ಜಾಗತಿಕ ಮಟ್ಟದಲ್ಲಿ ನಮ್ಮ ದೇಶ ತಲೆತಗ್ಗಿಸುವಂತೆ ಮಾಡಿತು. ದೇಶ ಭಕ್ತಿ, ದೇಶ ಪ್ರೇಮದ ಹುಸಿ ಮಾತಗಳನ್ನಾಡುವ ಸಂಘಪರಿವಾರ ದೇಶದ ಮಾನ ಹಾರಾಜು ಹಾಕಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದೀರ್ಘ ೧೭ ವರ್ಷಗಳ ತನಿಖೆ ನಂತರ ಲಿಬರ್ಹಾನ್ ಆಯೋಗ ತನ್ನ ವರದಿ ಸರಕಾರಕ್ಕೆ ಸಲ್ಲಿಸಿದೆ. ಮಾಜಿ ಪ್ರಧಾನಿ ವಾಜಪೇಯಿ, ಮಾಜಿ ಗೃಹ ಸಚಿವ ಎಲ್.ಕೆ. ಅಡ್ವಾಣಿ ಸೇರಿದಂತೆ ವರದಿಯಲ್ಲಿ ತಿಳಿಸಲಾದ ಸಂಘಪರಿವಾರ ಮತ್ತು ಬಿಜೆಪಿಯ ೬೮ ಮುಖಂಡರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ಅವರು ಒತ್ತಾಯಿಸಿದರು.

ಕ್ರಮ ಜಾರಿ ಬಗ್ಗೆ ಆಯೋಗ ಶಿಫಾರಸು ಮಾಡಿಲ್ಲವಾದರೂ, ಮಸೀದಿ ಧ್ವಂಸ ಮತ್ತು ನಂತರದ ಕೋಮುದಳ್ಳುರಿಗೆ ಕಾರಣರಾದವರನ್ನು ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಿ ನ್ಯಾಯಾಂಗ, ರಾಜ್ಯಾಂಗ ಮತ್ತು ರಾಷ್ಟ್ರದ ಘನತೆ ಎತ್ತಿ ಹಿಡಿಯಬೇಕು ಎಂದು ಅವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದರು.

ಅಹಿಂದ ಮುಖಂಡ ಪ್ರೊ.ಎನ್.ವಿ.ನರಸಿಂಹಯ್ಯ ಮಾತನಾಡಿ, ಬಿಜೆಪಿ ದೇಶದ ಪರಮ ಶತ್ರು. ವಾಜಪೇಯಿ ಅಡ್ವಾಣಿ ಮತ್ತು ಅವರ ಸೇನೆ ಗೋಮುಖ ವ್ಯಾಘ್ರಗಳು. ಇವರ ದೇಶಪ್ರೇಮದ ನಾಟಕ ಒಂದು ಕಪಟತನ. ಇವರನ್ನು ನಿರ್ನಾಮ ಮಾಡುವವರೆಗೂ ದೇಶಕ್ಕೆ ಉಳಿಗಾಲವಿಲ್ಲ ಎಂದು ನುಡಿದರು.

ರಾವಣ ವೇಷದಲ್ಲಿರುವ ಈ ಕಪಟ ‘ರಾಮಭಕ್ತ’ರಿಗೆ ತಕ್ಕ ಪಾಠ ಕಲಿಸಲು ಜಾತ್ಯತೀತ ಶಕ್ತಿಗಳು ಮತ್ತು ವ್ಯಕ್ತಿಗಳು ಒಂದಾಗಿ ಹೋರಾಟ ಮಾಡಬೇಕು. ಆ ಮೂಲಕ ದೇಶದ ಸಾರ್ವಭೌಮತೆ, ಏಕತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡಬೇಕು ಎಂದು ಅವರು ಕರೆ ನೀಡಿದರು.

ಧರಣಿಯಲ್ಲಿ ಪ್ರಜಾ ವಿಮೋಚನಾ ಚಳುವಳಿಯ ಪಟಾಪಟ್ ನಾಗರಾಜ್, ದಸಂಸ-ಕೆ ಅಧ್ಯಕ್ಷ ಎ.ಮಂಜುನಾಥ್, ಸಿಪಿ‌ಎಂನ ಕೆ. ಪ್ರಕಾಶ್, ಮುಸ್ಲಿಮ್ ಸಂಘರ್ಷ ಸಮಿತಿ ಅಧ್ಯಕ್ಷ ಎಂ.ಜೆ.ಅಲಿ, ಭಾರತ್ ಅಹಿಂದ ವೇದಿಕೆ ಅಧ್ಯಕ್ಷ ಹೇಮಾನಂದ ಭರಣಿ ಸೇರಿದಂತೆ ಇತರರು ಭಾಗವಹಿಸಿದ್ದರು.

ರಾಜ್ಯಪಾಲರಿಗೆ ಮನವಿ: ಧರಣಿ ನಂತರ ಎಲ್ಲಾ ಮುಖಂಡರು ರಾಜ್ಯಪಾಲರನ್ನು  ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದರು. ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವ ಸಂಬಂಧ ನಮ್ಮ ಬೇಡಿಕೆಯನ್ನು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಬೇಕೆಂದು ಅವರಲ್ಲಿ ಮನವಿ ಮಾಡಲಾಯಿತು.

Share: