ಭಟ್ಕಳ, ಫೆಬ್ರವರಿ ೭: ತಾಲೂಕಿನ ಬಿಪಿಎಲ್ ಪಡಿತರಕ್ಕೆ ಸಂಬಂಧಿಸಿದಂತೆ ಪರಿಪಾಟಲು ಮುಂದುವರೆದಿದೆ. ಶುಕ್ರವಾರ ಸಂಜೆ ನಡೆದ ತಾಲೂಕು ಪಂಚಾಯತ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡ ಸದಸ್ಯರು ತಿರಸ್ಕರಿಸಲ್ಪಟ್ಟ ಬಿಪಿಎಲ್ ಪಡಿತರ ಚೀಟಿಯನ್ನು ಪುನರ್ ಪರಿಶೀಲನೆಗೆ ಒಳಪಡಿಸುವಂತೆ ಒತ್ತಾಯಿಸಿದ ಘಟನೆ ನಡೆದಿದೆ.
ಸಭೆ ಆರಂಭವಾಗುತ್ತಿದ್ದಂತೆಯೇ ವಿಷಯವನ್ನು ಪ್ರಸ್ತಾಪಿಸಿದ ಸದಸ್ಯ ಪರಮೇಶ್ವರ ದೇವಾಡಿಗ, ಒಂದೇ ನಂಬರಿನ ಎರಡು ಪಡಿತರ ಚೀಟಿಗಳು ವಿತರಣೆಯಾಗಿವೆ. ಪಡಿತರ ಚೀಟಿಗಾಗಿನ ಸರ್ವೇ ಕಾರ್ಯವೇ ಅವೈಜ್ಞಾನಿಕತೆಯಿಂದ ಕೂಡಿದ್ದು, ಯಾವುದೇ ಸಕಾರಣವಿಲ್ಲದೇ ಬಡವರ ಕಾರ್ಡನ್ನು ತಿರಸ್ಕರಿಸಲಾಗಿದೆ. ಕೂಡಲೇ ಅಂತಹ ಕಾರ್ಡಿನ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯರಾದ ವಿಠ್ಠಲ್ ನಾಯ್ಕ ಹಾಗೂ ಲಕ್ಷ್ಮಿ ನಾಯ್ಕ, ರದ್ದಾದ ಕಾರ್ಡುಗಳು ಹಾಗೂ ಸಿಂಗಲ್ ಯೂನಿಟ್ ಕಾರ್ಡುಗಳಿಗೆ ಸರಕಾರ ಪಡಿತರವನ್ನು ಬಿಡುಗಡೆಗೊಳಿಸುತ್ತಿದೆ. ಆದರೆ ಜನಸಾಮಾನ್ಯರಿಗೆ ಅದು ತಲುಪುತ್ತಿಲ್ಲ. ರೇಶನ್ ಅಂಗಡಿಗಳಲ್ಲಿಯೇ ಗೋಲ್ಮಾಲ್ ಆಗುತ್ತಿದೆ ಎಂಬ ಭಾವನೆ ಜನರಲ್ಲಿದೆ. ಅಧಿಕಾರಿಗಳು ಈ ಕುರಿತಂತೆ ಪರಿಶೀಲನೆ ನಡೆಸಿ ಸತ್ಯಾಂಶವನ್ನು ಹೊರ ಹಾಕಬೇಕು ಎಂದು ಆಗ್ರಹಿಸಿದರು. ಇದಕ್ಕುತ್ತರಿಸಿದ ತಹಸೀಲ್ದಾರ ಎಸ್.ಎಮ್.ನಾಯ್ಕ, ಸರಕಾರದ ಮಾನದಂಡದ ಪ್ರಕಾರವೇ ತಂಡ ರಚಿಸಿಕೊಂಡು ಸರ್ವೇ ಕಾರ್ಯ ನಡೆಸಲಾಗಿದೆ. ಬಡವರಿಗೆ ಅನ್ಯಾಯವಾಗಿದೆ ಎಂದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಎರಡು ತಿಂಗಳುಗಳಲ್ಲಿ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಬಹುತೇಕ ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಜಲಾನಯನ ಇಲಾಖೆಯ ಕಾಮಗಾರಿಗಳ ದೃಢೀಕರಣಕ್ಕಾಗಿ ಸಮತಿಯೊಂದನ್ನು ರಚಿಸುವಂತೆ ಸಭೆಯಲ್ಲಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಯಿತು. ತಾಲೂಕು ಪಂಚಾಯತ ಅಧ್ಯಕ್ಷೆ ಗೌರಿ ಮೊಗೇರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ಪಂಚಾಯತ ಉಪಾಧ್ಯಕ್ಷ ಮಾದೇವ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಂಧೂ ಭಾಸ್ಕರ ನಾಯ್ಕ, ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಎಮ್.ಎಮ್.ಹೆಗಡೆ ಎಲ್ಲರನ್ನೂ ಸ್ವಾಗತಿಸಿದರು. ವಿನೋದ ಗಾಂವಕರ್ ವಂದಿಸಿದರು.