ಬೆಂಗಳೂರು : ರಾಜ್ಯ ಅಲ್ಪಸಂಖ್ಯಾತರ ಆಯೋಗದ ನೂತನ ಅಧ್ಯಕ್ಷರಾಗಿ ನಿವೃತ್ತ ಐಪಿಎಸ್ ಅಧಿಕಾರಿ ಯು.ನಿಸಾರ್ ಅಹ್ಮದ್ ಶುಕ್ರವಾರ ನಗರದ ಶೇಷಾದ್ರಿಪುರದಲ್ಲಿರುವ ಕೆಎಂಡಿಸಿ ಭವನದಲ್ಲಿ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ನನ್ನ ಮೇಲೆ ವಿಶ್ವಾಸವಿಟ್ಟು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದೆ. ನನ್ನ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಯಾವುದೇ ಅನ್ಯಾಯ ಆಗದಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು. ಅಲ್ಪಸಂಖ್ಯಾತರಲ್ಲಿ ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಜೈನರು, ಬೌದ್ಧರು ಹಾಗೂ ಪಾರ್ಸಿಗಳಿದ್ದಾರೆ. ಇವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುತ್ತೇನೆ. ಆಯೋಗಕ್ಕೆ ಸಂಬಂಧಿಸಿದಂತೆ ರೂಪಿಸಿರುವ ಕಾನೂನುಗಳನ್ನು ಅಧ್ಯಯನ ಮಾಡಿ, ಅವುಗಳ ಚೌಕಟ್ಟಿನಲ್ಲಿ ಯಾವ ರೀತಿಯಲ್ಲಿ ಅಲ್ಪಸಂಖ್ಯಾತರಿಗೆ ನೆರವು, ನ್ಯಾಯ ಒದಗಿಸಬಹುದೋ ಆ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ನಿಸಾರ್ ಅಹ್ಮದ್ ತಿಳಿಸಿದರು.