ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ನೆರೆ ಪ್ರಹಾರಕ್ಕೆ ಪ್ರತಿಪಕ್ಷಗಳು ಸಜ್ಜು

ಬೆಂಗಳೂರು: ನೆರೆ ಪ್ರಹಾರಕ್ಕೆ ಪ್ರತಿಪಕ್ಷಗಳು ಸಜ್ಜು

Mon, 14 Dec 2009 02:57:00  Office Staff   S.O. News Service
ಬೆಂಗಳೂರು, ಡಿಸೆಂಬರ್ 13೩: ಉತ್ತರ ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದಂಥ ಪ್ರವಾಹ ಪರಿಸ್ಥಿತಿ ತಲೆದೋರಿದ ನಂತರ ಇದೇ ಮೊದಲ ಬಾರಿಗೆ ಸೋಮವಾರದಿಂದ ಸಮಾವೇಶಗೊಳ್ಳಲಿರುವ ವಿಧಾನಮಂಡಲದ ಅಧಿವೇಶನ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ನೇರ ವಾಕ್ಸಮರಕ್ಕೆ ವೇದಿಕೆಯಾಗಲಿದೆ.

ಹಿಂದಿನ ಅಧಿವೇಶನದ ನಂತರ ರಾಜ್ಯದಲ್ಲಿ ಹಾಗೂ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಿರುವುದರಿಂದ ಈ ಬಾರಿಯ ಅಧಿವೇಶನ ನಿರೀಕ್ಷೆಗಿಂತ ಹೆಚ್ಚು ಕಾವೇರುವುದು ನಿಶ್ಚಿತವಾಗಿದೆ. 

ಮುಖ್ಯವಾಗಿ ಪ್ರಸಕ್ತ ವಿಧಾನಪರಿಷತ್ ಚುನಾವಣೆ ನೆಪದಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿ‌ಎಸ್ ತೀರಾ ಸಮೀಪಕ್ಕೆ ಬಂದಿರುವುದರಿಂದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಹಾಗೂ ಅದರ ವೈಫಲ್ಯಗಳನ್ನು ಎತ್ತಿ ತೋರಿಸುವ ಎಲ್ಲ ಪ್ರಯತ್ನಗಳು ನಡೆಯುವುದರಲ್ಲಿ ಯಾವ ಅನುಮಾನವೂ ಇಲ್ಲ. ಕಳೆದ ಮೂರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಅನೇಕ ಮಹತ್ವದ ಬೆಳವಣಿಗೆಗಳು ಸಂಭವಿಸಿವೆ. 

ಉತ್ತರ ಕರ್ನಾಟಕದಲ್ಲಿನ ಪ್ರವಾಹ ಮತ್ತು ನಂತರ ಮುಂದುವರಿದಿರುವ ಪರಿಹಾರ ಕಾರ್ಯ:
 
ಸರ್ಕಾರದಲ್ಲಿನ ಮೂವರು ಪ್ರಭಾವಿ ಸಚಿವರ ಪಾಲುದಾರಿಕೆಯಲ್ಲಿರುವ ಕಂಪನಿ ನಡೆಸಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ವಿರುದ್ಧದ ಸಿಬಿ‌ಐ ತನಿಖೆ... ಆಂತರಿಕವಾಗಿದ್ದ ಬಿಜೆಪಿಯಲ್ಲಿನ ಒಳಬೇಗುದಿ ಪಕ್ಷದ ಹೊಸ್ತಿಲು ದಾಟಿ ಬೀದಿಗೆ ಬಂದಿದ್ದೂ ಅಲ್ಲದೆ ದೆಹಲಿಯನ್ನೂ ತಲುಪಿದ್ದು. 

ಈ ಮೂರು ವಿಷಯಗಳನ್ನು ಮುಂದಿಟ್ಟುಕೊಂಡೇ ಪ್ರತಿಪಕ್ಷಗಳು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲು ತೀರ್ಮಾನಿಸಿವೆ. ಅದರಲ್ಲೂ ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿ‌ಐ ತನಿಖೆ ಆರಂಭಗೊಂಡಿರುವುದರಿಂದ ಸಚಿವರಾದ ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಹಾಗೂ ಶ್ರೀರಾಮುಲು ಅವರ ರಾಜೀನಾಮೆಗೆ ಪಟ್ಟು ಹಿಡಿಯುವ ಸಂಭವವಿದೆ. 
ಈಗಾಗಲೇ ಮೇಲ್ಕಂಡ ಮೂರೂ ವಿಷಯಗಳ ಬಗ್ಗೆ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಬಹಿರಂಗವಾಗಿ ಆರೋಪ-ಪ್ರತ್ಯರೋಪ, ವಾದ-ಪ್ರತಿವಾದಗಳು ಸಾಕಷ್ಟು ನಡೆದಿವೆ.   

ಅವೆಲ್ಲವೂ ಅಧಿವೇಶನದಲ್ಲಿ ಪುನರಾವರ್ತನೆಗೊಳ್ಳುವುದರ ಜತೆಗೆ ನೇರಾನೇರ ಚರ್ಚೆ ನಡೆಯಲಿದೆ.ಇದರೊಂದಿಗೆ ಮಹದಾಯಿ ಕುಡಿಯುವ ನೀರಿನ ಯೋಜನೆ ವಿವಾದದ ಹಿನ್ನೆಲೆಯಲ್ಲಿ ನ್ಯಾಯಾಧಿಕರಣ ರಚಿಸುವ ಕೇಂದ್ರ ಸರ್ಕಾರದ ತೀರ್ಮಾನದ ಬಗ್ಗೆಯೂ ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುವುದು ನಿಶ್ಚಿತವಾಗಿದೆ. 

ಒಂದು ವಾರ ಮುಂದೂಡಿಕೆ ನಿರೀಕ್ಷೆ: ಸೋಮವಾರ ಸಾಂಕೇತಿಕವಾಗಿ ಅಧಿವೇಶನ ಆರಂಭಗೊಂಡರೂ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಒಂದು ವಾರ ಕಾಲ ಮುಂದೂಡಲು ಈಗಾಗಲೇ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಸದನ ಆರಂಭಗೊಳ್ಳುವ ಮುನ್ನ ನಡೆಯುವ ಕಲಾಪ ವ್ಯವಹಾರಗಳ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.ಹೀಗಾಗಿ ಸೋಮವಾರ ಸದನದಲ್ಲಿ ಕೇವಲ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಕಲಾಪ ಮಾತ್ರ ನಡೆಯುವುದು ಬಹುತೇಕ ಖಚಿತವಾಗಿದ್ದು, ನಂತರ ಸದನವನ್ನು ಇದೇ ತಿಂಗಳ ೨೧ ಅಥವಾ ೨೨ಕ್ಕೆ ಮುಂದೂಡುವ ಸಂಭವವಿದೆ.ಆದರೆ, ಮುಂದೂಡಲ್ಪಟ್ಟ ಅಧಿವೇಶನ ಆರಂಭಗೊಳ್ಳುವ ಹೊತ್ತಿಗೆ ವಿಧಾನಪರಿಷತ್ ಚುನಾವಣೆಯ ಫಲಿತಾಂಶವೂ ಹೊರಬೀಳುವುದರಿಂದ ಅದರಲ್ಲಿ ಗಳಿಸುವ ಬಲಾಬಲದ ಆಧಾರದ ಮೇಲೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳಾದ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವಿನ ವಾಕ್ಸಮರ ಮತ್ತಷ್ಟು ರಂಗು ಪಡೆದುಕೊಳ್ಳಲಿದೆ. 

ಪ್ರಸ್ತಾಪಗೊಳ್ಳುವ ವಿಷಯಗಳು 
      ಉತ್ತರ ಕರ್ನಾಟಕದಲ್ಲಿನ ಪ್ರವಾಹ ಸಂತ್ರಸ್ತ ಪ್ರದೇಶಗಳಲ್ಲಿನ ಪರಿಹಾರ ಕಾರ್ಯ ಹಾಗೂ ಅದರಲ್ಲಿನ ಲೋಪದೋಷಗಳು. 
      ಸರ್ಕಾರದ ಮೂವರು ಪ್ರಭಾವಿ ಸಚಿವರ ಒಡೆತನದಲ್ಲಿರುವ ಓಬಳಾಪುರಂ ಮೈನಿಂಗ್ ಕಂಪನಿ ನಡೆಸಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ವಿರುದ್ಧದ ಸಿಬಿ‌ಐ ತನಿಖೆ. 
      ಸರ್ಕಾರದ ಬುಡ ಅಲುಗಾಡಿಸಿದ ಆಡಳಿತಾರೂಢ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ. 
      ಮಹದಾಯಿ ಕುಡಿಯುವ ನೀರಿನ ಯೋಜನೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣ ರಚನೆ ತೀರ್ಮಾನ.


ಸೌಜನ್ಯ: ಕನಡಪ್ರಭ


Share: