ನವದೆಹಲಿ, ಜನವರಿ 26: ಆಹಾರ ಹಣದುಬ್ಬರದ ಪ್ರಮಾಣ 20 ಶೇಕಡಾ ತಲುಪಿ, ಸಕ್ಕರೆಯ ಬೆಲೆ 50ರೂ. ತಲುಪುತ್ತಿರುವಂತೆ ಯುಪಿಎ-2 ಸರಕಾರ, ಎಲ್ಲೆಡೆಯಿಂದಲೂ, ಸ್ವತಃ ಅಂಗಪಕ್ಷಗಳಿಂದಲೂ ಕಟು ಟೀಕೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 13ರಂದು ಈ ಕುರಿತ ಕೇಂದ್ರ ಸಂಪುಟ ಸಮಿತಿ ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಹಲವು ಕ್ರಮಗಳನ್ನು ನಿರ್ಧರಿಸಿದೆಯಂತೆ. ಇದರಿಂದಾಗಿ ಒಂದು ವಾರದಲ್ಲಿ ಸಕ್ಕರೆಯ ಬೆಲೆ ಇಳಿಯಲಿದೆ ಎಂದು ಆಹಾರ ಮತ್ತು ಕೃಷಿ ಮಂತ್ರಿಗಳು ಹೇಳಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ 20ರಿಂದ 30 ಲಕ್ಷ ಟನ್ ಅಕ್ಕಿ ಮತ್ತು ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ಬೆಲೆಯೇರಿಕೆಯ ಮೇಲೆ ಹತೋಟಿ ಬರುತ್ತದೆ ಎಂಬುದು ಅವರ ನಿರೀಕ್ಷೆ. ಆದರೆ ಈಗಲೂ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವ ಮಾತಿಲ್ಲ.
ಮಮತಾ ಧಾಳಿ ಈಗ ಕಾಂಗ್ರೆಸಿನ ಮೇಲೂ
ಪಶ್ಚಿಮ ಬಂಗಾಳದ ಎಡರಂಗ ಸರಕಾರದ ಮೇಲೆ ಸದಾ ಹರಿಹಾಯುತ್ತಿರುವ ಕೇಂದ್ರ ರೈಲ್ವೆ ಮಂತ್ರಿ ಮಮತಾ ಬ್ಯಾನರ್ಜಿಯವರು ಈಗ ತಾನು ಭಾಗಿಯಾಗಿರುವ ಯುಪಿಎ ಸರಕಾರ ಮತ್ತು ಅದರ ನೇತೃತ್ವ ವಹಿಸಿರುವ ಕಾಂಗ್ರೆಸಿನ ಮೇಲೂ ದಾಳಿ ಆರಂಭಿಸಿದ್ದಾರೆ. ತೀವ್ರ ಬೆಲೆಯೇರಿಕೆಯ ಬಗ್ಗೆ ಇತರ ಅಂಗಪಕ್ಷಗಳಂತೆ ತೃಣಮೂಲ ಕಾಂಗ್ರೆಸು ಕೂಡಾ ಮಾತಾಡಲೇ ಬೇಕಾಗಿ ಬಂದಿದೆ. ಅಲ್ಲದೆ ಸದ್ಯದಲ್ಲೇ ಪಶ್ಚಿಮ ಬಂಗಾಳದ 82 ನಗರ ಸಭೆಗಳಿಗೆ ನಡೆಯಲಿರುವ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಬೆಲೆಯೇರಿಕೆಯ ಹೊಣೆಯಿಂದ ಕೇಂದ್ರ ಸರಕಾರ ತಪ್ಪಿಸಿ ಕೊಳ್ಳುವಂತಿಲ್ಲ ಎಂದಿರುವ ಈ ಕೇಂದ್ರ ರೈಲ್ವೇ ಮಂತ್ರಿ ಮಾವೋವಾದಿ ಹಿಂಸಾಚಾರವನ್ನು ಎದುರಿಸಲು ಕೇಂದ್ರ ಸರಕಾರವು ರಾಜ್ಯ ಸರಕಾರದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿರುವುದನ್ನೂ ಟೀಕಿಸಿದ್ದಾರೆ. ಲಾಲ್ಗಡ್ ಮತ್ತು ಜಂಗಲ್ಮಹಲಿಗೆ ಕೇಂದ್ರ ತಂಡವನ್ನು ಕಳಿಸುವ ಮೊದಲು ತನ್ನೊಡನೆ ಸಮಾಲೋಚನೆ ನಡೆಸಿಲ್ಲ ಎಂಬುದೂ ಆಕೆಯ ಸಿಟ್ಟು.
ಈಗ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಅವರ ಪಕ್ಷದ ಚುನಾವಣಾ ಭಾಗೀದಾರ ಪಕ್ಷವಾಗಿದ್ದರೂ ಪ್ರಮುಖ ಕಾಂಗ್ರೆಸ್ ಮುಖಂಡರನ್ನು ತನ್ನ ಪಕ್ಷಕ್ಕೆ ಆಹ್ವಾನಿಸಿ, ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸಿಗರು ತನ್ನ ಪಕ್ಷ ಸೇರುವಂತೆ ಉತ್ತೇಜಿಸಿ ದಿಲ್ಲಿಯ ಕಾಂಗ್ರೆಸ್ ಮುಖಂಡರಿಗೆ `ಪಾಠ' ಕಲಿಸಬೇಕು ಎಂದು ಆಕೆಯ ಯೋಜನೆ ಎನ್ನಲಾಗಿದೆ.
ಯುಪಿಎ-2 ರಲ್ಲಿ ತನ್ನದು ಎರಡನೇ `ದೊಡ್ಡ' ಪಕ್ಷವಾಗಿದ್ದರೂ ಅದನ್ನು ಉಪೇಕ್ಷಿಸಲಾಗುತ್ತಿದೆ, ಅಲ್ಲದೆ ಪ್ರಣಬ್ ಮುಖರ್ಜಿಯವರಂತಹ ಕೇಂದ್ರದ ಪ್ರಮುಖ ಎಐಸಿಸಿ ಮುಖಂಡರು ಸಿಪಿಐ(ಎಂ) ರಾಜ್ಯ ಮುಖಂಡರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬುದೂ ಆಕೆಗೆ ಮುಜುಗರ ತಂದಿದೆ ಎಂದು ಆಕೆಯ ಪಕ್ಷದ ಮುಖಂಡರು ಹೇಳುತ್ತಿದ್ದಾರಂತೆ.
ರಕ್ಷಣಾ ಉದ್ದಿಮೆಯಲ್ಲಿಯೂ ಖಾಸಗೀ ಪ್ರಾಬಲ್ಯಕ್ಕೆ ಒಲವು
ಯುಪಿಎ-2 ಸರಕಾರ ಇತ್ತೀಚೆಗೆ ರಕ್ಷಣಾ ಉದ್ದಿಮೆಯಲ್ಲಿ ಖಾಸಗಿಯವರಿಗೆ ಇನ್ನಷ್ಟು ಅವಕಾಶ ಕೊಡಲು 2002ರ `ರಕ್ಷಣಾ ಖರೀದಿ ನೀತಿ'ಯಲ್ಲಿ ಬದಲಾವಣೆ ತಂದು ರಕ್ಷಣಾ ಟೆಂಡರುಗಳಲ್ಲಿ ಖಾಸಗಿಯವರು ನೇರವಾಗಿ ಪಾಲ್ಗೊಳ್ಳಲು, ಇದಕ್ಕಾಗಿ ವಿದೇಶಿ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಲು ಅವಕಾಶ ಕಲ್ಪಿಸಿತು. ಈ ಹಿಂದೆ ಕೇವಲ ಸಾರ್ವಜನಿಕ ವಲಯದ ಉದ್ದಿಮೆಗಳು ಮಾತ್ರ ಇದರಲ್ಲಿ ಪಾಲ್ಗೊಳ್ಳಬಹುದಿತ್ತು. ದೇಶದ ಭದ್ರತೆಯ ಪ್ರಶ್ನೆಯಿಂದಾಗಿ ಹೀಗೆ ಮಾಡಲಾಗಿತ್ತು. ಈಗ 26ಶೇ. ವಿದೇಶಿ ನೇರ ಹೂಡಿಕೆಗೂ ಅವಕಾಶವಿದೆ. ಈಗ ಈ ಅವಕಾಶಗಳನ್ನೆಲ್ಲಾ ಇನ್ನಷ್ಟು ಹೆಚ್ಚಿಸಲು ಸರಕಾರದ ಮೇಲೆ ಖಾಸಗಿಯವರ ಒತ್ತಡ ಹೆಚ್ಚುತ್ತಿದೆ. ಇದಕ್ಕಾಗಿ ಭಾರತೀಯ ಉದ್ಯಮಿಗಳ ಸಂಘಟನೆ ಸಿಐಐ ಒಂದು ಖಾಸಗಿ ಜಾಗತಿಕ ಸಲಹಾ ಸಂಸ್ಥೆ ಕೆಪಿಎಂಜಿ ಮೂಲಕ ಒಂದು `ಸಮಗ್ರ' ವರದಿಯನ್ನೂ ತಯಾರಿಸಿದೆ. ಇದನ್ನು ಭಾರತದ ರಕ್ಷಣಾ ಮಂತ್ರಿಗಳೇ ಜನವರಿ 13 ರಂದು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಭಾರತದ ರಕ್ಷಣಾ ಉಪಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ತಂತ್ರಜ್ಞಾನದ ದೃಷ್ಟಿಯಿಂದ ಹಳಸಲಾಗಿವೆ ಎನ್ನಲಾಗಿದೆ. ಇದನ್ನು ಅತ್ಯಾಧುನಿಕಗೊಳಿಸಲು ಖಾಸಗಿಯವರಿಗೆ ಇನ್ನಷ್ಟು ಉತ್ತೇಜನ ನೀಡುವ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕೆಂಬುದು ಅವರ ಆಗ್ರಹ. ಈ ಕ್ರಮಗಳನ್ನೂ ಪಟ್ಟಿ ಮಾಡಲಾಗಿದೆ.
ಭಾರತ ಈಗ ರಕ್ಷಣಾ ಖರ್ಚಿನ ಮೊತ್ತದ ದೃಷ್ಟಿಯಲ್ಲಿ ಪ್ರಮುಖ 10 ದೇಶಗಳಲ್ಲಿ ಪರಿಗಣಿಸಲ್ಪಟ್ಟಿದೆ. ಮುಂದಿನ 10 ವರ್ಷಗಳಲ್ಲಿ 10000 ಕೋಟಿ ಡಾಲರುಗಳು ಎಂದರೆ 5ಲಕ್ಷ ಕೋಟಿ ರೂಪಾಯಿಗಳಷ್ಟು ಯುದ್ಧೋಪಕರಣಗಳನ್ನು ಖರೀದಿಸುವ ಯೋಜನೆ ಹಾಕಿಕೊಂಡಿದೆ. ದೇಶೀ ಮತ್ತು ವಿದೇಶೀ ಖಾಸಗಿ ರಕ್ಷಣಾ ಉದ್ದಿಮೆದಾರರ ಕಣ್ಣುಗಳು ಇದರ ಮೇಲಿವೆ.
ಈ ನಡುವೆ ಪಾಕಿಸ್ತಾನ ಮಾತ್ರವಲ್ಲ, ಚೀನಾವೂ ಭಾರತದ ವಿರುದ್ಧ ಮಸಲತ್ತು ನಡೆಸುತ್ತಿದೆ ಎಂದು ಸೂಚಿಸುವ ವರದಿಗಳೂ ಬಂಡವಾಳಶಾಹಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಇದರಲ್ಲಿ ಇತ್ತೀಚಿನ ಸುದ್ದಿಯೆಂದರೆ ಲಡಾಕಿನಲ್ಲಿ ಚೀನಾ ನಮ್ಮ ಜಮೀನನ್ನು ದೊಡ್ಡ ಪ್ರಮಾಣದಲ್ಲಿ ನುಂಗಿ ಹಾಕುತ್ತಿದೆ ಎಂಬುದು. ಇದನ್ನು ಮಾತ್ರ ನಮ್ಮ ರಕ್ಷಣಾ ಮಂತ್ರಿಗಳು ಒಪ್ಪಿಕೊಂಡಿಲ್ಲ. ಭಾರತ ಮತ್ತು ಚೀನಾದ ನಡುವಿನ ಗಡಿಯೆಂದು ಪರಿಗಣಿಸಿರುವ ನಿಜ ಹತೋಟಿ ರೇಖೆ(ಎಲ್ಎಸಿ)ಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
4 ಲಕ್ಷ ಮುಂಬೈ ನಿವಾಸಿಗಳನ್ನು ಕಾಡಲಿರುವ ವಿಮಾನ ನಿಲ್ದಾಣ ಆಧುನೀಕರಣ
ಮುಂಬೈಯ ಛತ್ರಪತಿ ಶಿವಾಜಿ ಅಂತರ್ರಾಷ್ಟೀಯ ವಿಮಾನ ನಿಲ್ದಾಣದ ಆಧುನೀಕರಣದ ಯೋಜನೆ 2013ರಲ್ಲಿ ಪೂರ್ಣಗೊಳ್ಳಬೇಕಾಗಿದ್ದು ಅದರ ಮೊದಲು ಸುತ್ತಮುತ್ತಲಿನ ಸುಮಾರು 4 ಲಕ್ಷ ನಿವಾಸಿಗಳ ಪುನರ್ವಸತಿಯ ಬೃಹತ್ ಪ್ರಶ್ನೆಯನ್ನು ಬಗೆಹರಿಸಬೇಕಾಗಿದೆ. ಆದರೆ ಈ ಬಗ್ಗೆ ಕೇಂದ್ರ ಸರಕಾರದ ಮಂಜೂರಾತಿ ಪಡೆದಿರುವ ಮುಂಬೈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಕಂಪನಿಯಾಗಲಿ, ಮಹಾನಗರ ಪಾಲಿಕೆಯಾಗಲಿ ಅಥವಾ ಬೇರೆ ಯಾರೇ ಆಗಲಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಿಲ್ಲವಂತೆ. ಈ ಹಿನ್ನೆಲೆಯಲ್ಲಿ ಅಲ್ಲಿಯ ನಿವಾಸಿಗಳು ``ಒಂದು ಮನೆಗೆ ಬೀಗಹಾಕಿ, ಇನ್ನೊಂದು ಹೊಸ ಮನೆಯ ಬೀಗದ ಕೈ ಕೊಡಿ" ಎಂಬ ಘೋಷಣೆಯೊಂದಿಗೆ ಪ್ರತಿರೋಧ ಚಳುವಳಿ ನಡೆಸುತ್ತಿದ್ದಾರೆ.
ಬಡತನ ಹೆಚ್ಚಾಗಲು ಆರೋಗ್ಯ ಖರ್ಚುಗಳು ಪ್ರಮುಖ ಕಾರಣ
ಹೀಗೆಂದು ಯೋಜನಾ ಆಯೋಗದ ಇತ್ತೀಚಿನ ಒಂದು ಅಧ್ಯಯನ ಹೇಳಿದೆ. ಮೇ 2009ರಲ್ಲಿ ಹಲವು ಹಳ್ಳಿಗಳಲ್ಲಿ ನಡೆಸಿದ ಸರ್ವೆಗಳ ಆಧಾರದಲ್ಲಿ ನಡೆಸಿದ ಈ ಅಧ್ಯಯನದಲ್ಲಿ ಬಡತನಕ್ಕೆ ಇಳಿದಿರುವ ಜನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಆರೋಗ್ಯ ಸೇವೆಗಳಿಗೆ ಮಾಡಬೇಕಾಗಿ ಬಂದಿರುವ ವಿಪರೀತ ಖರ್ಚುಗಳಿಂದಾಗಿ ಅಂತಹ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ ಎಂದು ಕಂಡು ಬಂದಿದೆ. ಒಂದೇ ವರ್ಷದಲ್ಲಿ 3.9 ಕೋಟಿ ಜನಗಳು ಕೇವಲ ಕಾಯಿಲೆಗಳಿಗೆ ಮಾಡಿದ ಖರ್ಚುಗಳಿಂದಾಗಿಯೇ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ.
1000 ಕೋಟಿ ರೂ.ಗಳ ಹೆಚ್ಚುವರಿ ಹೂಡಿಕೆಗೆ ಪೆಪ್ಸಿಕೊಗೆ ಅನುಮತಿ
ಹಗುರ ಪಾನೀಯಗಳಿಗಾಗಿ ಭಾರತಕ್ಕೆ ನೇರ ವಿದೇಶಿ ಹೂಡಿಕೆ ಬೇಕೇ ಎಂಬ ಪ್ರಶ್ನೆ ಈಗ ಮತ್ತೆ ಎದ್ದಿದೆ. ಉದಾರೀಕರಣದ ನೆರಳಲ್ಲಿ ಭಾರತದಲ್ಲಿ ಈಗ 43 ಸ್ಥಾವರಗಳನ್ನು ಹೊಂದಿರುವ, ದೇಶೀ ಪಾನೀಯ ಕಂಪನಿಗಳನ್ನು ನುಂಗಿರುವ ಅಮೆರಿಕಾದ ಪೆಪ್ಸಿಕೊಗೆ ಈಗ ಮತ್ತೆ 20 ಕೋಟಿ ಡಾಲರುಗಳಷ್ಟು ಅಮೆರಿಕನ್ ಹಣವನ್ನು ತರಲು ಕೇಂದ್ರ ಸಂಪುಟ ಮಂಜೂರಾತಿ ನೀಡಿದೆ. ಇದರಿಂದಾಗಿ ಅದರ ಒಟ್ಟು ವಿದೇಶಿ ನೇರ ಹೂಡಿಕೆ 65.5 ಕೋಟಿ ಡಾಲರುಗಳಿಗೆ ಏರುತ್ತದೆ.
ನೇಪಾಳಿ ವಿದ್ಯಾರ್ಥಿನಿಯ ಗಡೀಪಾರು ಆಜ್ಞೆ ಸದ್ಯಕ್ಕೆ ರದ್ದು
ಕಳೆದ ಡಿಸೆಂಬರ್ 5ರಂದು ಪುಣೆಯ ಫಿಲ್ಮ್ ಇನ್ಸಿಟ್ಯೂಟಿನಲ್ಲಿ ವಿದ್ಯಾರ್ಥಿಯಾಗಿದ್ದ ನೇಪಾಳದ ನೀತು ಸಿಂಗ್ ಎಂಬ ಯುವತಿಯನ್ನು ಮಹಾರಾಷ್ಟ್ರ ಸರಕಾರ `ರಾಷ್ಟ್ರ-ವಿರೋಧಿ ಚಟುವಟಿಕೆಗಳಲ್ಲಿ' ತೊಡಗಿದ್ದಾಳೆ ಎಂಬ ಕಾರಣ ಕೊಟ್ಟು ಕಾಠ್ಮಂಡುವಿಗೆ ಗಡೀಪಾರು ಮಾಡಿತು. ಆದರೆ ಈ `ಚಟುವಟಿಕೆಗಳ' ವಿವರವನ್ನೇನೂ ಕೊಡಲಿಲ್ಲ. ಇದಕ್ಕೆ ಮೊದಲು ಆಕೆ ತನ್ನ ಪತಿಯ ಕಿರುಕುಳದ ಬಗ್ಗೆ ಮಹಿಳಾ ಸಂಘಟನೆಯ ಮೂಲಕ ಪುಣೆ ಪೋಲೀಸರ ಗಮನಕ್ಕೆ ತಂದಿದ್ದರೂ ಅವನ್ನೆಲ್ಲಾ ನಿರ್ಲಕ್ಷಿಸಿ ಈ ಕ್ರಮ ಕೈಗೊಂಡ ಸರಕಾರ ಈಗ ಆಕೆಯ ಗಡೀಪಾರು ಆದೇಶವನ್ನು ಅಮಾನತು ಮಾಡಿರುವುದರಿಂದ ಆಕೆ ಪುಣೆಗೆ ಮರಳಲು ಅವಕಾಶವಾಗಿದೆ.
ಆಕೆಯ ಪತಿ ನೇಪಾಳದ ಒಬ್ಬ ಪ್ರಮುಖ ರಾಜಕಾರಣಿಯಾಗಿದ್ದು, ಭಾರತದ ಕೇಂದ್ರ ಸರಕಾರದಲ್ಲಿ ಬಹಳಷ್ಟು ಪ್ರಭಾವ ಹೊಂದಿದ್ದ. ಅದರಿಂದಾಗಿ ಇಂತಹ ಕ್ರಮ ಕೈಗೊಳ್ಳಲಾಗಿತ್ತು. ಇದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು, ವ್ಯಕ್ತಿಗಳು ಬಲವಾಗಿ ಪ್ರತಿಭಟಿಸಿದರು. ಇದೊಂದು ಪೋಲೀಸ್ ಪ್ರಭುತ್ವ ಮಾಡುವ ಕೆಲಸ ಎಂದು ಟೀಕಿಸಲಾಯಿತು. ಕೇಂದ್ರ ಗೃಹಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಇವೆಲ್ಲದರ ಪರಿಣಾಮವಾಗಿಯಷ್ಟೇ ಈಗ ಗಡೀಪಾರು ಆದೇಶವನ್ನು ಅಮಾನತುಗೊಳಿಸಲಾಗಿದೆ.
ಸೌಜನ್ಯ: ಜನಶಕ್ತಿ