ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಭಿನ್ನರಿಂದ ಸರಕಾರ ಉರುಳಿಸುವ ಬೆದರಿಕೆ: ಮಾತುಕತೆ ಮತ್ತೆ ವಿಫಲ

ಬೆಂಗಳೂರು: ಭಿನ್ನರಿಂದ ಸರಕಾರ ಉರುಳಿಸುವ ಬೆದರಿಕೆ: ಮಾತುಕತೆ ಮತ್ತೆ ವಿಫಲ

Tue, 03 Nov 2009 02:45:00  Office Staff   S.O. News Service

ಬೆಂಗಳೂರು, ಅ.31: ಪಕ್ಷದ ಶಾಸಕರ ವಿಶ್ವಾಸ ಕಳೆದುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಾಯಕತ್ವದಿಂದ ಕೆಳಗಿಳಿಸದಿದ್ದರೆ ಸರಕಾರದಿಂದ ಹೊರಬರುವುದಾಗಿ ಗಣಿರೆಡ್ಡಿಗಳು ಇಂದು ನೇರವಾಗಿ ವರಿಷ್ಠರಿಗೆ ಎಚ್ಚರಿಕೆ ನೀಡುವ ಮೂಲಕ ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರಕಾರವನ್ನು ಉರುಳಿಸುವ ನೇರ ಬೆದರಿಕೆ ಹಾಕಿದ್ದಾರೆ.

ನಾಯಕತ್ವ ಬದಲಾವಣೆಯೇ ತಮ್ಮ ಅಂತಿಮ ಗುರಿ. ಈ ಬೇಡಿಕೆಯಿಂದ ಒಂದಿಂಚೂ ಬಾಗುವುದಿಲ್ಲ. ಶಾಸಕರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಿ. ಇಲ್ಲವಾದರೆ ನಮ್ಮ ದಾರಿ ನಮಗೆ, ನಿಮ್ಮ ಹಾದಿ ನಿಮಗೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಅರುಣ್ ಜೈಟ್ಲಿ, ಅನಂತಕುಮಾರ್, ಸುಷ್ಮಾ ಸ್ವರಾಜ್ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಚರ್ಚಿಸಿದ ಜನಾರ್ದನ ರೆಡ್ಡಿ, ಸರಕಾರದ ನಾಯಕತ್ವದಿಂದ ಯಡಿಯೂರಪ್ಪ  ಅವರನ್ನು ಬದಲಿಸುವುದು ಬಿಟ್ಟು ಬೇರೆ ಯಾವ ಸೂತ್ರವನ್ನು ಮುಂದಿಟ್ಟರೂ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದಾರೆನ್ನಲಾಗಿದೆ.

ಉಲ್ಭಣಗೊಂಡಿರುವ ಬಿಜೆಪಿ ಬಿಕ್ಕಟ್ಟು ಬಗೆ ಹರಿಸಲು ಹೆಣಗಾಡುತ್ತಿರುವ ಪಕ್ಷದ ಮುಖಂಡರು ಇಂದು ಬಂಡಾಯದ ಕೇಂದ್ರ ಬಿಂಧು ಸಚಿವ ಜನಾರ್ದನ ರೆಡ್ಡಿಯವ ರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಗಣಿಧಣಿಗಳು ತಮ್ಮ ಪಟ್ಟು ಸಡಿಲಿಸದೇ ಇದ್ದರಿಂದ ಸಂಜೆ ರಾಷ್ಟ್ರೀಯ ಮುಖಂಡರು ಕೋರ್ ಸಮಿತಿ ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದರು. ಆದರೂ ಯಾವುದೆ ಅಂತಿಮ ನಿರ್ಧಾರ ಕೈಗೊಳ್ಳಲಾಗದೆ ಸಂಧಾನ ಪ್ರಕ್ರಿಯೆಗಳನ್ನು ನಾಳೆಗೆ ಮುಂದೂಡಲಾಗಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಎಲ್ಲರೊಂದಿಗೆ ಚರ್ಚೆ ನಡೆದಿದೆ, ಬಿಕ್ಕಟ್ಟಿನ ಪರಿಹಾರಕ್ಕೆ ಸೂತ್ರ ಸಿದ್ಧ ಪಡಿಸಲಾಗುತ್ತಿದ್ದು, ಮೂರು ದಿನದಲ್ಲಿ ಎಲ್ಲವೂ ಸೂಸುತ್ರವಾಗಿ ಬಗೆಹರಿಯಲಿದೆ ಎಂದು ಹೇಳಿದರು.

ಮುಖಂಡರಾದ ಸುಷ್ಮಸ್ವರಾಜ್, ಅರುಣ್ ಜೈಟ್ಲಿ, ಅನಂತಕುಮಾರ್, ರಾಮಲಾಲ್ ಸಭೆಯಲ್ಲಿ ಹಾಜರಿದ್ದರು. ಚರ್ಚೆಯ ಮಧ್ಯೆ ಅನಂತಕುಮಾರ್ ಸಭೆಯಿಂದ ನಿರ್ಗಮಿಸಿ ಅಚ್ಚರಿ ಮೂಡಿಸಿದರು.

ಇದಕ್ಕೂ ಮೊದಲು ಮಧ್ಯಾಹ್ನ ಜನಾರ್ದನ ರೆಡ್ಡಿ ಮತ್ತು ಅರುಣ್ ಜೈಟ್ಲಿ ನಡುವೆ ಅನಂತಕುಮಾರ್ ನಿವಾಸದಲ್ಲಿ ನಡೆದ ಸಂಧಾನ ಮಾತುಕತೆ ವಿಫಲವಾಯಿತು.

ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವದ ಬದಲಾಗಲೇಬೇಕು ಎಂದು ಪಟ್ಟು ಹಿಡಿದಿರುವ ಜನಾರ್ದನ ರೆಡ್ಡಿ, ಪರ್ಯಾಯ ನಾಯಕತ್ವದ ಹೆಸರನ್ನು ವರಿಷ್ಠರಿಗೆ ತಿಳಿಸಿಲ್ಲ ಎಂದು ಹೇಳಲಾಗಿದೆ. ಇದು ರಾಜಕೀಯ ವಲಯದಲ್ಲಿ ಗೊಂದಲ ಮೂಡಿಸಿದೆ.

ಅರುಣ್ ಜೈಟ್ಲಿಯವರನ್ನು ಭೇಟಿ ಮಾಡಿದ ಭಿನ್ನಮತೀಯ ಶಾಸಕರು ಮತ್ತು ಸಚಿವರನ್ನು ನಾಯಕತ್ವ ಬದಲಾವಣೆಯ ಅನಿವಾರ್ಯತೆಯನ್ನು ಪ್ರತಿಪಾದಿಸಿದರು. ಇದಕ್ಕೆ ಪ್ರ ತಿಯಾಗಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಪರವಾಗಿ ಹೈಕಮಾಂಡ್ ಜೊತೆ ಯಾವ ಮುಖಂಡರು ಮಾತುಕತೆ ನಡೆಸಲಿಲ್ಲ. ಈ ಬೆಳವಣಿಗೆ ಯಡಿಯೂರಪ್ಪನವರ ಪಾಳೇಯದಲ್ಲಿ ಆತಂಕ ಮೂಡಿಸಿತ್ತು. ಸಂಜೆಯ ವೇಳೆಗೆ ಬೆಂಗಳೂರಿನ ಮುಖ್ಯಮಂತ್ರಿ ಯವರ ನಿವಾಸದಲ್ಲಿ 6 ಮಂದಿ ಶಾಸಕರು ಮತ್ತು 30 ಮಂದಿ ಶಾಸಕರು ಪ್ರತ್ಯೇಕ ಸಭೆ ನಡೆಸಿದರು.

ಇನ್ನೊಂದೆಡೆ ಗಣಿಧಣಿಗಳು ಇನ್ನಷ್ಟು ಶಾಸಕರನ್ನು ಕಲೆ ಹಾಕುವ ಯತ್ನದಲ್ಲಿ ನಿರತ ರಾಗಿದ್ದು, ಇಂದು ಸಂಜೆಯ 10 ಮಂದಿ ಶಾಸಕರು ಹೈದರಾಬಾದ್‌ಗೆ ತೆರಳಿ ಗಣಿಧಣಿಗಳು ಬಣ ಸೇರಿಕೊಂಡರು. ಈಗಾಗಲೇ 65 ಮಂದಿ ಶಾಸಕರು ಹೈದರಾಬಾದ್ ಮತ್ತು ಗೋವಾದಲ್ಲಿ ಠಿಕಾಣಿ ಹೊಡಿದ್ದಾರೆ.

ಶಾಸಕರು ಇನ್ನೆರಡು ದಿನಗಳಲ್ಲಿ ಕ್ಷೇತ್ರಗಳಿಗೆ ಮರಳದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಎಚ್ಚರಿಸಿದ್ದಾರೆ.

ಮಧ್ಯಾಹ್ನ ಅರುಣ್ ಜೈಟ್ಲಿಯೊಂದಿಗೆ ಮಾತುಕತೆ ನಡೆಸಿದ ನಂತರ ನಂತರ ಜನಾರ್ದನ ರೆಡ್ಡಿ ಬಿಜೆಪಿಯ ಇನ್ನೊಬ್ಬ ಮುಖಂಡೆ ಸುಷ್ಮಾ ಸ್ವರಾಜ್‌ರನ್ನು ಭೇಟಿ ಮಾಡಿದರು.

ಎಲ್ಲರೆದುರು ನಾಯಕತ್ವ ಬದಲಾವಣೆ ಪಟ್ಟನ್ನು ಜನಾರ್ದನ ರೆಡ್ಡಿ ಪ್ರದಿಪಾದಿಸಿದ್ದಾರೆ. ಈ ಮಧ್ಯ ರಾಜ್ಯದಲ್ಲಿ ಕೆಲವೆಡೆ ಗಣಧಣಿಗಳ ವಿರುದ್ಧ ಪ್ರತಿಭಟನೆಗಳು ನಡೆದವು


Share: