ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ

ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ

Sat, 04 May 2024 02:31:47  Office Staff   SO News

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವ ಪ್ರಧಾನಿಯವರ ರೀತಿ? ಮೋದಿ ಒಬ್ಬ ಒಳ್ಳೆ ನಾಟಕಕಾರ; ಇವೆಂಟ್ ಮ್ಯಾನೇಜರ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಲ್ಲಿ ಪ್ರಜಾಧ್ವನಿ- 2 ಸಮಾವೇಶದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ರಕ್ಷಣೆ ಕೊಡತ್ತೇವೆಂದು ಪ್ರಧಾನಿಯವರು ಹಾಗೂ ಬಿಜೆಪಿಯವರು ಹೇಳುತ್ತಾರೆ. ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಹಾಲಿ ಲೋಕಸಭಾ ಸದಸ್ಯ, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾಡಿರುವ ಅನ್ಯಾಯ ಜಗಜ್ಜಾಹೀರಾಗಿದೆ. ಈ ಬಗ್ಗೆ ಗೊತ್ತಿದ್ದೂ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಟಿಕೆಟ್ ನೀಡಿದ್ದಾರೆ. ಹೆಣ್ಣುಮಕ್ಕಳನ್ನ ರೇಪ್ ಮಾಡಿರುವವನಿಗೆ ಟಿಕೆಟ್ ಕೊಟ್ಟಿದ್ದಾರೆ. ಇದೇನಾ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವ ನೀತಿ? ಎಂದು ಪ್ರಶ್ನಿಸಿದರು.

ನಮ್ಮ ಪಕ್ಷದ ಅಭ್ಯರ್ಥಿಗೆ ಈ ಬಾರಿ ಆಶೀರ್ವಾದ ಮಾಡಬೇಕು. ಹಿಂದೆ ಉತ್ತರಕನ್ನಡ ಜಿಲ್ಲೆಯಲ್ಲಿ ಬಿಜೆಪಿಯನ್ನ‌ ಗೆಲ್ಲಿಸಿದ್ದೀರಿ. ಮಾರ್ಗರೇಟ್ ಆಳ್ವಾ ಒಮ್ಮೆ ಸಂಸದರಾಗಿದ್ದರು. ಈ ಬಾರಿ ಬದಲಾವಣೆಗೆ ಅವಕಾಶ ಇದೆ. ಹತ್ತು ವರ್ಷಗಳ ಕಾಲ ಮೋದಿಯವರು ಅಧಿಕಾರದಲ್ಲಿದ್ದರೂ ಕರ್ನಾಟಕದಲ್ಲಾಗಲಿ, ದೇಶದಲ್ಲಾಗಲಿ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿಲ್ಲ. ಮೋದಿ ಮತ್ತು ಬಿಜೆಪಿಯವರು ಹೇಳುತ್ತಿದ್ದರು, ಎರಡೂ ಕಡೆ ಒಂದೇ ಸರ್ಕಾರವಿದ್ದರೆ ಡಬಲ್ ಎಂಜಿನ್ ಸರ್ಕಾರವಾಗುತ್ತದೆ ಎನ್ನುತ್ತಿದ್ದರು. ಮೂರು ವರ್ಷ ಹತ್ತು ತಿಂಗಳು ಎರಡೂ ಒಂದೇ ಸರ್ಕಾರವಿದ್ದರೂ ಲೂಟಿ ಹೊಡೆದರೇ ವಿನಾ ಏನೂ ಕೆಲಸ ಮಾಡಿಲ್ಲ. ಮೋದಿಯವರು ಹೇಳುತ್ತಾರೆ, ಕರ್ನಾಟಕದಲ್ಲಿ ಲೂಟಿ ಹೊಡೆಯುವ ಗ್ಯಾಂಗ್ ಇದೆ, ಕಾಂಗ್ರೆಸ್‌ನವರು ಲೂಟಿ ಮಾಡುತ್ತಾರೆ ಎನ್ನುತ್ತಾರೆ. ಗುತ್ತಿಗೆದಾರರ ಸಂಘದವರು ರಾಜ್ಯ ಬಿಜೆಪಿ ಸರ್ಕಾರ ೪೦% ಕಮಿಷನ್ ಸರ್ಕಾರವೆಂದಾಗ ಮೋದಿಯವರು ಏನೂ ಪ್ರತಿಕ್ರಿಯೆ ಕೊಟ್ಟಿಲ್ಲ. ಆರೋಪ ಸಹಿಸಿಕೊಂಡಿದ್ದರೆಂದರೆ ಭ್ರಷ್ಟಾಚಾರ ಸಹಿಸಿಕೊಳ್ಳುವ ಕೆಲಸ ಮಾಡಿದ್ದಾರೆಂದು ಎಂದರು.

ಪ್ರಧಾನಿಯಾಗುವ ಮುನ್ನ ನೀಡಿದ್ದ ಯಾವ ಭರವಸೆಯನ್ನೂ ಮೋದಿಯವರು ಈಡೇರಿಸಿಲ್ಲ. ಎರಡು ಕೋಟಿ ವಾರ್ಷಿಕ ಉದ್ಯೋಗ ಸೃಷ್ಟಿ ಮಾಡುತ್ತೇವೆಂದರು. ವಿದ್ಯಾವಂತರು ಹತ್ತು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಾಗದೆ‌ ನಿರುದ್ಯೋಗಿಗಳಾಗಿದ್ದಾರೆ. ಕೆಲಸ ಕೇಳಿದರೆ ಪಕೋಡಾ ಮಾರೋಕೆ ಹೋಗಿ ಎಂದು ಮೋದಿಯವರು ಹೇಳಿದರು. ಒಬ್ಬ ಪ್ರಧಾನಿ ಹೇಳುವ ಮಾತು ಇದಲ್ಲ. ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಸಮಸ್ಯೆ ಬಗೆಹರಿಸಲು ಆಗದಿದ್ದ ಮೇಲೆ ಆ ಕುರ್ಚಿಯಲ್ಲಿರಲು ನಿಮಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದ್ದಾರೆ.


Share: