ಕಡಿಮೆ ಅಂಕಗಳಿಕೆ ಆತ್ಮಹತ್ಯೆಗೆ ಕಾರಣ; ಡೆತ್ ನೋಟ್ನಲ್ಲಿ ಉಲ್ಲೇಖ
ಮುಲ್ಕಿ: ಇಲ್ಲಿಗೆ ಸಮೀಪದ ಅತಿಕಾರಿಬೆಟ್ಟು ರೈಲ್ವೆ ಗೇಟ್ ಸಮೀಪದಲ್ಲಿರುವ ಕ್ವಾಟರ್ಸ್ನಲ್ಲಿ ವಾಸ್ತವ್ಯವಿದ್ದ ಕೊಂಕಣ ರೈಲ್ವೆ ಗೇಟ್ ಸಿಬ್ಬಂದಿ ಮಹೇಶ್ ನಾಯ್ಕ ಅವರ ಪುತ್ರಿ ಉಜ್ವಲ (17) ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮುಲ್ಕಿ ವಿಜಯಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಉಜ್ವಲ, ಮೃತದೇಹವನ್ನು ಮನೆಯ ಎದುರಿನ ಕೋಣೆಯಲ್ಲಿ ಪೈಪಿನ ಕಬ್ಬಿಣಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಹಚ್ಚಿದ್ದಾರೆ.
ಭಟ್ಕಳದಲ್ಲಿ ನೆಲೆಸಿದ್ದ ಉಜ್ವಲ, ಕಾಲೇಜು ಸಭೆ ಮುಗಿಸಿಕೊಂಡು ಮನೆಗೆ ಹಿಂದಿರುಗಿದ್ದು, ಮನೆಯಲ್ಲಿದ್ದಾಗ ಒಂಟಿಯಾಗಿದ್ದಾಗ ಈ ಕೃತ್ಯ ನಡೆದಿದೆ.
ಈ ಸಂದರ್ಭ, ತಂದೆ ಮಹೇಶ್ ನಾಯ್ಕ ಕರ್ತವ್ಯ ನಿರ್ವಹಿಸುತ್ತಿದ್ದು, ತಾಯಿ ಊರಾದ ಭಟ್ಕಳಕ್ಕೆ ತೆರಳಿದ್ದರು. ಮೃತಳ ಅಣ್ಣ ಮುಕ್ಕ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಮನೆಗೆ ಹಿಂತಿರುಗಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಯುವತಿಯ ಕೊಠಡಿಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ, ಇದರಲ್ಲಿ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿರುವುದರಿಂದ ಆತ್ಮಹತ್ಯೆಗೈದಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ. ತಮ್ಮ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ನಡೆಸಬೇಕೆಂದು ವಿವರಿಸಲಾಗಿದೆ.
ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.