ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಾಮರಾಜನಗರ: ನಿಷೇಧಾಜ್ಞೆ ನಡೆವೆಯೂ ಪ್ರತಿಭಟನೆ

ಚಾಮರಾಜನಗರ: ನಿಷೇಧಾಜ್ಞೆ ನಡೆವೆಯೂ ಪ್ರತಿಭಟನೆ

Sat, 12 Dec 2009 20:11:00  Office Staff   S.O. News Service
ಚಾಮರಾಜನಗರ, ಡಿ.12: ರೈತರ ಮೇಲೆ ನಿನ್ನೆ ನಡೆದ ಲಾಠಿ ಚಾರ್ಜ್‌ನಿಂದಾಗಿ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಗರದಲ್ಲಿ ಜಿಲ್ಲಾಡಳಿತ ಹೇರಿದ್ದ ೧೪೪ನೆ ಸೆಕ್ಷನ್‌ಯನ್ನು ಲೆಕ್ಕಿಸದೆ ರೈತರು ಪ್ರವಾಸಿ ಮಂದಿರದಲ್ಲಿ ಗುಂಪು ಸಭೆ ನಡೆಸಿ ಮೆರವಣಿಗೆ ಹೊರಟು ಗುಂಡ್ಲುಪೇಟೆ ವೃತ್ತದ ಬಳಿ ಧರಣಿ ಕುಳಿತು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರ, ದೌರ್ಜನ್ಯವನ್ನು ವಿರೋಧಿಸಿ ಇಂದು ರಾಜ್ಯ ರೈತ ಸಂಘದ ಹಾಗೂ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಮತ್ತು ಶಾಸಕರು ಇಂದು ಪ್ರವಾಸಿ ಮಂದಿರದಲ್ಲಿ ನಡೆದ ಖಂಡನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. 

ಪ್ರತಿಭಟನಾಕರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ಸೋಮವಾರದಿಂದ ಇಡೀ ರಾಜ್ಯಾದ್ಯಂತ ಚಳವಳಿ ನಡೆಸಲು ಕರೆ ನೀಡಿದರು. ಮಣ್ಣಿನ ಮಕ್ಕಳಿಗೆ ಅನಾವಶ್ಯಕವಾಗಿ ಪೊಲೀಸರ ದೌರ್ಜನ್ಯ ನಡೆಸಿದ್ದನ್ನು ಖಂಡಿಸಿದರು. ಜಿಲ್ಲೆಯ ಡಿಸಿ ಮತ್ತು ಎಸ್‌ಪಿ ಗೌರವಯುತವಾಗಿ ಶಾಂತಿಯುವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಗೌರವದಿಂದ ಕಂಡು ಚರ್ಚೆ ಮಾಡುವ ಸೌಜನ್ಯ ತೋರದೆ ಲಾಠಿ ಮುಖಾಂತರ ದೌರ್ಜನ್ಯ ಎಸಗಿರುವುದು ಸರಿಯಲ್ಲ ಎಂದರು. 

ಸಾರ್ವಜನಿಕರ ಸೇವಕರಾಗಿರುವ ಇವರು, ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ  ಮಾರ್ಗ ತಿಳಿಯದಿದ್ದರೆ ಅಧಿಕಾರದಿಂದ ಕೆಳಗಿಳಿಯಬೇಕು. ರೈತರ ಮೇಲಿನ ಪೊಲೀಸ್ ಹಲ್ಲೆಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನೇರ ಹೊಣೆಗಾರರಾಗಿದ್ದು, ಅಮಾನುಷವಾಗಿ ಹಲ್ಲೆ ಮಾಡಿರುವ ಪೊಲೀಸರ ವಿರುದ್ಧ ಸರಕಾರ ಕ್ರಮ ಜರಗಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಅಪರಾಧ ತಡೆ ಸಪ್ತಾಹ ನಡೆಸುತ್ತಿರುವ ಪೊಲೀಸ್ ಇಲಾಖೆ ರೈತರ ಮೇಲೆ ಹಲ್ಲೆ ನಡೆಸಿ ಅಪರಾಧವೆಸಗಿದ್ದಾರೆ ಎಂದು ಲೇವಡಿ ಮಾಡಿದರು.

ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಆತ್ಮಗೌರವವಿದ್ದರೆ ರೈತರ ಪರವಾಗಿ ಬೇಷರತ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಡಿಸಿ ಮತ್ತು ಎಸ್‌ಪಿ ಮೇಲೆ ಕಾನೂನು ಕ್ರಮ ಜರಗಿಸದಿದ್ದಲ್ಲಿ ರಾಜ್ಯಾದ್ಯಂತ ಚಳವಳಿ ನಡೆಸಿ ಉಗ್ರ ರೂಪಕ್ಕೆ ಕೊಂಡೊಯ್ಯಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಪಚ್ಚನಂಜುಂಡ ಸ್ವಾಮಿ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ಎಲ್ಲೂ ರೈತರ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿರಲಿಲ್ಲ. ಒಂದು ಪಕ್ಷ ನಡೆದಿದ್ದರೂ ಅಂತ ಸರಕಾರ ಉಳಿದಿಲ್ಲ. ಬಿಜೆಪಿ ಸರಕಾರವು ಉಳಿಯುವುದಿಲ್ಲ ಎಂದು ಭವಿಷ್ಯ ನುಡಿಯುತ್ತಾ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ಶಾಲು ತೊಟ್ಟು ಕೇಸರಿ ಚಡ್ಡಿಯ ಮೇಲೆ ಕೈಯಿಟ್ಟು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಲೇವಡಿ ಮಾಡಿದರು. ಅಹಿಂಸೆಯ ಪಾಠ ಹೇಳಿದ ಗಾಂಧೀಜಿಯನ್ನು ಕೊಂದು ಈಗ ದೇಶಕ್ಕೆ ಅನ್ನದಾತರಾಗಿರುವ ರೈತರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಇದು ನೋಡಿದರೆ ಅಹಿಂಸೆಯ ದಾರಿಯಲ್ಲಿ ನಡೆಯುವವರನ್ನು ಗಾಂಧೀಜಿಯನ್ನು ಕೊಂದ ರೀತಿಯಲ್ಲಿ ರೈತರನ್ನು ಕೊಲ್ಲಬಹುದು ಎಂದರು.

ರಾಜ್ಯದ ಹಲವಾರು ಕಡೆಯಿಂದ ರೈತರು ಆಗಮಿಸಿ ನಿಷೇಧಾಜ್ಞೆ ನಡುವೆ ಸಭೆ ನಡೆಸಿದರು. ತಾಲೂಕು ಮತ್ತು ಜಿಲ್ಲಾಡಳಿತ ದಸ್ತಗಿರಿ ಮಾಡಲು ಹಿಂದೇಟು ಹಾಕಿತು. ಸ್ಥಳಕ್ಕೆ ಜಿಲ್ಲಾಧಿಕಾರಿ ಮನೋಜ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವಾರ್ ಆಗಮಿಸಿ ಇನ್ನು ಐದು ನಿಮಿಷದಲ್ಲಿ ಗುಂಪು ಚದುರದೆ ಹೋದಲ್ಲಿ ಬಂಧಿಸಲಾಗುವುದೆಂದು ಎಚ್ಚರಿಸಿದರು ಮತ್ತು ಕೆಲವರನ್ನು ಬಂಧಿಸಲಾಯಿತು.

ಈ ಚಳವಳಿಯನ್ನು ಸೋಮವಾರದಿಂದ ರಾಜ್ಯಾದ್ಯಂತ ನಡೆಸಲು ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.
 
ಉಪವಿಭಾಗಾಧಿಕಾರಿಯಿಂದ ತನಿಖೆ: ಮುಖ್ಯಮಂತ್ರಿ

ಚಾಮರಾಜನಗರದಲ್ಲಿ ರೈತರ ಮೇಲೆ ನಡೆದ ಲಾಠಿ ಪ್ರಹಾರ ಘಟನೆಯನ್ನು ಉಪವಿಭಾಗಾಧಿಕಾರಿಯಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾದ ಎಲ್ಲ ರೈತರನ್ನು ಬೇಷರತ್ತಾಗಿ ತಕ್ಷಣ ಬಿಡುಗಡೆ ಮಾಡುವುದಲ್ಲದೆ, ಅವರ ಮೇಲೆ ದಾಖಲಿಸಲಾಗಿದ್ದ ದಾವೆಗಳನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ.ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಈ ಘಟನೆ ನಡೆಯಬಾರದಿತ್ತು ಎಂದು ಹೇಳಿದ್ದಾರೆ. ಲಾಠಿ ಪ್ರಹಾರ ನಡೆಸಲು ಇರುವ ಕಾರಣಗಳು ಮತ್ತು ಇತರ ಅಂಶಗಳನ್ನು ಉಪವಿಭಾಗಾಧಿಕಾರಿ ತನಿಖೆ ನಡೆಸಲಿದ್ದಾರೆ. ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

 

Share: