ಭಟ್ಕಳ, ಫೆಬ್ರವರಿ 28: ನಗರಕ್ಕೆ ಹೊಂದಿಕೊಂಡಿರುವ ಹೆಬಳೆ ತೆಂಗಿನಗುಂಡಿ ರಸ್ತೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ನಡೆಸಲಾಗುತ್ತಿರುವ ಮರು ಡಾಂಬರೀಕರಣ ಕಳಪೆಯಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.
ಹೆಬಳೆ ರಸ್ತೆಗೆ ರಜಾ ದಿನವಾದ ನಿನ್ನೆ ಡಾಂಬರೀಕರಣ ಆರಂಭಿಸಿರುವುದು ಹಾಗೂ ಸಮರ್ಪಕವಾಗಿ ಜಲ್ಲಿ ಹಾಕದೇ ಕಾಮಗಾರಿ ನಡೆಸುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕೆಲಸವನ್ನು ಸ್ಥಗಿತಗೊಳಿಸಿ, ಸ್ಥಳಕ್ಕೆ ಲೋಕೋಪಯೋಗಿ ಅಭಿಯಂತರರು ಆಗಮಿಸಬೇಕು ಎಂದು ಪಟ್ಟು ಹಿಡಿದರು. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು ಹಾಗೂ ಲೋಕೋಪಯೋಗಿ ಇಲಾಖೆಯ ಅಭಿಯಂತರರು ಸ್ಥಳದಲ್ಲೇ ನಿಂತು ಮೇಲ್ವಿಚಾರಣೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಸ್ಥಳದಲ್ಲಿ ಕಾಮಗಾರಿ ಸ್ಥಗಿತಗೊಳಿಸಿ ಅಭಿಯಂತರರು ಆಗಮಿಸುತ್ತಾರೆಂದು ಒಂದು ತಾಸಿಗೂ ಕಾಲ ಸಾರ್ವಜನಿಕರು ಕಾದರೂ ಸಹ ಅಭಿಯಂತರು ಮಾತ್ರ ಆಗಮಿಸಲಿಲ್ಲ. ಅಭಿಯಂತರರಿಗೆ ದೂರವಾಣಿ ಮುಖಾಂತರ ವಿಷಯ ತಿಳಿಸಿದ್ದರೂ ಸಹ ಬೇರೆ ಕಡೆ ಇದ್ದೇನೆ ಬರುತ್ತೇನೆ ಎಂಬ ಉತ್ತರ ಬಂತು. ಎಷ್ಟೊತ್ತಾದರೂ ಅಭಿಯಂತರರು ಸ್ಥಳಕ್ಕಾಗಮಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಾಮಗಾರಿ ಮೇಲ್ವಿಚಾರಣೆ ನಡೆಸುತ್ತಿರುವ ವ್ಯಕ್ತಿಯ ಬಳಿ ಅಭಿಯಂತರರು ಸ್ಥಳಕ್ಕೆ ಬಂದು ಕಾಮಗಾರಿ ವೀಕ್ಷಣೆ ಮಾಡುವವರೆಗೆ ಡಾಂಬರೀಕರಣ ನಡೆಸುವುದು ಬೇಡ ಒತ್ತಾಯಿಸಿದರು.