ಬೆಂಗಳೂರು, ಡಿ.೨: ಇದು ಲೋಕಾಯುಕ್ತರು ಈ ವರ್ಷ ನಡೆಸಿದ 52 ನೇ ದಾಳಿ. ಕಳೆದ ಎರಡು ವರ್ಷದಿಂದ ನಡೆಯುತ್ತಿರುವ 145ನೇ ದಾಳಿ. ಮುಂದಿನ ದಾಳಿ ಯಾವಾಗ?
ಆದರೂ ಭ್ರಷ್ಟಾಚಾರ ಮಾತ್ರ ಕಡಮೆಯಾಗುತ್ತಿಲ್ಲ. ಬದಲಾಗಿ ಲೋಕಾಯುಕ್ತರ ಬಲೆಗೆ ಬೀಳುವ ನುಂಗಣ್ಣಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಹಾಗೆಂದು ಲೋಕಾಯುಕ್ತರು ಸುಮ್ಮನೆ ಕುಳಿತಿಲ್ಲ. ಭ್ರಷ್ಟ ಅಧಿಕಾರಿಗಳ ವಿರುದ್ಧ ದಾಳಿ ನಡೆಸುತ್ತಲೇ ಇದ್ದಾರೆ. ಈ ವರ್ಷದ ಕೊನೆಯ ದಾಳಿ ಇದು ಎಂದು ಪರಿಗಣಿಸಬೇಡಿ. ವರ್ಷ ಮುಗಿಯಲು ಇನ್ನೂ ೨೯ ದಿನ ಇದೆ ಎಂದು ಹೇಳುವ ಲೋಕಾಯುಕ್ತ ನ್ಯಾ| ಸಂತೋಷ್ ಹೆಗ್ಡೆ, ಈ ಮೂಲಕ ತಮ್ಮ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ವರ್ಷಾಂತ್ಯದ ತಿಂಗಳ ಮೊದಲ ಬುಧವಾರ ಮತ್ತೆ ಏಳು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇವರಿಂದ ೬.೮೬ ಕೋಟಿ ರು. ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಯನ್ನು ಲೋಕಾಯುಕ್ತರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಹಾಸನದ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಸಹಾಯಕ ವ್ಯವಸ್ಥಾಪಕ ಬಿ.ಸಿ. ಶಾಂತಕುಮಾರ್, ಚಿಕ್ಕೋಡಿ ಆರ್ಟಿಓ ಕಚೇರಿ ಮೋಟಾರು ವಾಹನ ನಿರೀಕ್ಷಕ, ಜಯಾನಂದ ಬಿ. ನರಸಣ್ಣವರ್, ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ನಾಗಪ್ಪ, ಗುಲ್ಬರ್ಗಾ ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಪ್ರತಾಪ್ ಸಿಂಗ್ ತಿವಾರಿ, ಧಾರವಾಡ ಕೆಐಎಡಿಬಿ ಕಿರಿಯ ಎಂಜಿನಿಯರ್ ಶಿವಲಿಂಗಯ್ಯ, ಬೆಂಗಳೂರು ಹಾಪ್ಕಾಮ್ಸ್ನ ಪ್ರಥಮ ದರ್ಜೆ ಸಹಾಯಕ ಸಿ. ದೇವರಾಜು ಹಾಗೂ ಮೈಸೂರಿನ ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಶ್ರೀಕಾಂತ್ ಲೋಕಾಯುಕ್ತ ಬಲೆಗೆ ಬಿದ್ದ ಮಿಕಗಳು.
ಬುಧವಾರ ಭ್ರಷ್ಟ ಅಧಿಕಾರಿಗಳ ವಿರುದ್ಧದ ದಾಳಿ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕಾಯುಕ್ತ ನ್ಯಾ| ಎನ್. ಸಂತೋಷ್ ಹೆಗ್ಡೆ, ಬುಧವಾರ ಏಕ ಕಾಲದಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದು, ಅಕ್ರಮ ಆಸ್ತಿ ಕುರಿತ ಸಾಕಷ್ಟು ವಿವರಗಳನ್ನು ಸಂಗ್ರಹಿಸಿದ್ದಾರೆ. ಕೆಲವು ಅಧಿಕಾರಿಗಳ ಬ್ಯಾಂಕ್ ಖಾತೆ ವಿವರಗಳು ಇನ್ನೂ ಬಹಿರಂಗವಾಗಿಲ್ಲ ಎಂದರು.
ಹಿಂದೆಯೂ ಅವ್ಯವಹಾರ ನಡೆಸಿದ್ದರು: ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳ ಪೈಕಿ ಮೈಸೂರಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಕಾಂತ್ ಈ ಹಿಂದೆ ಶಿಕಾರಿಪುರದಲ್ಲಿದ್ದಾಗ ಹಣ ದುರುಪಯೋಗ ಪ್ರಕರಣದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಆಗ ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಾಹಕ ಎಂಜಿನಿಯರ್ ಆಗಿದ್ದ ಶ್ರೀಕಾಂತ್ ರಸ್ತೆ ನಿರ್ಮಾಣಕ್ಕೆ ಬಿಡುಗಡೆ ಮಾಡಿದ್ದ ೧೨ ಕೋಟಿ ರು. ಪೈಕಿ ೪ ಕೋಟಿ ರುಪಾಯಿಯನ್ನು ಕೆಲಸ ಆರಂಭವಾಗುವ ಮುನ್ನವೇ ಪಡೆದು ಬ್ಯಾಂಕ್ನಲ್ಲಿ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಹಿಂದಿನ ಪ್ರಕರಣದ ಕುರಿತ ವಿಚಾರಣೆಯನ್ನೂ ಮುಂದುವರಿಸಲಾಗುವುದು ಎಂದು ನ್ಯಾ| ಸಂತೋಷ್ ಹೆಗ್ಡೆ ತಿಳಿಸಿದರು.
ಕಾರ್ಖಾನೆ ಯಾರದ್ದು?: ಬೆಂಗಳೂರಿನ ಹಾಪ್ಕಾಮ್ಸ್ನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಸಿ. ದೇವರಾಜ್ ಪತ್ನಿ ಹೆಸರಿನಲ್ಲಿ ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ಆದಿತ್ಯ ಡಿಸೈನಿಂಗ್ ಫ್ಯಾಕ್ಟರಿ ನಡೆಯುತ್ತಿದೆ. ಇಲ್ಲಿ ತಲಾ ೫೦ ಲಕ್ಷ ರು.ಬೆಲೆಯ ೧೩ ಯಂತ್ರಗಳಿವೆ. ಆದರೆ, ಇದನ್ನು ತಾವು ನಡೆಸುತ್ತಿಲ್ಲ. ಜಯರಾಮ್ ಪಾಂಡುರಂಗ್ ಮತ್ತು ರಾಘವೇಂದ್ರ ರಾವ್ ಎಂಬುವರು ನಡೆಸುತ್ತಿರುವುದಾಗಿ ದೇವರಾಜ್ ಹೇಳುತ್ತಿದ್ದಾರೆ. ಹೀಗಾಗಿ ಅಕ್ರಮ ಆಸ್ತಿಯಲ್ಲಿ ಈ ಯಂತ್ರಗಳ ಹೆಸರನ್ನು ಸೇರಿಸಿಲ್ಲ. ಪಾಂಡುರಂಗ್ ಮತ್ತು ರಾಘವೇಂದ್ರ ರಾವ್ ಅವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಈ ಲೆಕ್ಕವನ್ನು ಅಂತಿಮಗೊಳಿಸುವುದಾಗಿ ಹೇಳಿದರು.ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ ನಾಗಪ್ಪ ಅವರ ಪುತ್ರ ೩೫ ಲಕ್ಷ ರು. ಪಡೆದು ೩೨ ಲಕ್ಷ ರು. ವೆಚ್ಚದಲ್ಲಿ ಗೋದಾಮು ನಿರ್ಮಿಸಿದ್ದಾರೆ. ಹೀಗಾಗಿ ಅವರ ಸಕ್ರಮ ಆದಾಯದ ಜತೆಗೆ ಸಾಲದ ೩೫ ಲಕ್ಷ ರುಪಾಯಿಯನ್ನೂ ಸೇರಿಸಲಾಗಿದೆ. ಆದರೆ, ಪುತ್ರ ನಡೆಸುತ್ತಿರುವ ಕನ್ನಡಕಗಳ ಅಂಗಡಿಯ ಲೆಕ್ಕವನ್ನು ಅಕ್ರಮ ಆಸ್ತಿಯಲ್ಲಿ ಸೇರಿಸಿಲ್ಲ ಎಂದು ವಿವರಿಸಿದರು.
-ಬಿ.ಸಿ.ಶಾಂತಕುಮಾರ್: ಸೇವೆಗೆ ಸೇರಿದ್ದು- ೧೯೭೬. ಇದುವರೆಗೆ ಅವರು ಗಳಿಸಿದ ಸಕ್ರಮ ಆದಾಯ ೨೯ ಲಕ್ಷ ರು.
ಲೋಕಾಯುಕ್ತರು ವಶಪಡಿಸಿಕೊಂಡ ಆಸ್ತಿ
-ಹಾಸನ ಜಿಲ್ಲೆ ಉದಯಗಿರಿ ಬಡಾವಣೆಯಲ್ಲಿ ನಿವೇಶನ- ೧,೮೬,೪೫೦ ರು.
- ಹಾಸನ ಲೋಕೋಪಯೋಗಿ ಕಾಲೋನಿ ಬಳಿ ನಿವೇಶನ ಹಾಗೂ ಕಟ್ಟಡ- ೩೩,೪೩,೫೪೦ ರು.
- ಬನವಾಸೆ ಗ್ರಾಮದಲ್ಲಿ ಮನೆ ಹಾಗೂ ೩ ಎಕರೆ ಭೂಮಿ ಹಾಗೂ ಕೋಳಿ ಸಾಕಣೆ ಕೇಂದ್ರ- ೩೭,೦೫,೯೭೧ ರು.
- ಭಾನು ಚಿತ್ರಮಂದಿರದ ಬಳಿ ಮನೆ ಮತ್ತು ಉದಯಗಿರಿ ಬಡಾವಣೆಯಲ್ಲಿ ನಿವೇಶನ- ೪,೫೪,೫೬೩ ರು.
- ಒಂದು ಮಾರುತಿ ಎಸ್ಎಕ್ಸ್-೪ ಕಾರು ಮತ್ತು ಒಂದು ಮಾರುತಿ ಕಾರು- ೭,೬೦,೨೦೩
- ಎಲೆಕ್ಟ್ರಾನಿಕ್ ಸೇರಿದಂತೆ ಗೃಹೋಪಯೋಗಿ ವಸ್ತುಗಳು- ೩ ಲಕ್ಷ ರು.
- ವಿಜಯಾ ಬ್ಯಾಂಕ್ ಮತ್ತು ಮನೆಯಲ್ಲಿ ಸಿಕ್ಕಿದ ಚಿನ್ನ ಮತ್ತು ಬೆಳ್ಳಿ- ೭.೮೦ ಲಕ್ಷ ರು.
- ನಾಲ್ಕು ಬ್ಯಾಂಕ್ ಪಾಸ್ ಪುಸ್ತಕಗಳಿದ್ದು, ಪರಿಶೀಲನೆ ನಡೆಯುತ್ತಿದೆ.
ಒಟ್ಟು ಮೌಲ್ಯ- ೯೫,೩೦,೭೨೭
ಅಧಿಕಾರಿಗಳು ಮತ್ತು ಅವರ ಕುಟುಂಬದ ಆಸ್ತಿ
-ಜಯಾನಂದ ಬಿ. ನರಸಣ್ಣವರ್: ಸೇವೆಗೆ ಸೇರಿದ್ದು- ೧೯೯೦. ಇದುವರೆಗೆ ಗಳಿಸಿದ ಸಕ್ರಮ ಆದಾಯ- ೨೦ ಲಕ್ಷ ರು.
ಲೋಕಾಯುಕ್ತರು ವಶಪಡಿಸಿಕೊಂಡ ಆಸ್ತಿ
- ಬೆಳಗಾವಿಯ ಹನುಂತನಗರದಲ್ಲಿ ನಿವೇಶನ ಮತ್ತು ಎರಡು ಅಂತಸ್ತಿನ ಕಟ್ಟಡ- ೫೫ ಲಕ್ಷ ರು.
- ಬೆಂಗಳೂರಿನ ಯಶವಂತಪುರ ಬಳಿ ಮೂರು ಮತ್ತು ಬೆಳಗಾವಿಯ ಸುತ್ತಗಟ್ಟಿ ಗ್ರಾಮದಲ್ಲಿ ಒಂದು ನಿವೇಶನ- ೨.೮೩ ಲಕ್ಷ ರು.
- ಗೋಕಾಕ್ ತಾಲೂಕಿನ ದುಪದಲ್ ಗ್ರಾಮದಲ್ಲಿ ೨ ಪ್ಲಾಟ್ಗಳು- ೭೧ ಸಾವಿರ ರು.
- ಹುಕ್ಕೇರಿ ತಾಲೂಕಿನ ವಿವಿಧೆಡೆ ಒಟ್ಟು ೨೦ ಎಕರೆ ಭೂಮಿ- ೧೭.೬೦ ಲಕ್ಷ ರು.
- ಸಾಂಟ್ರೋ ಕಾರು- ೪.೨೦ ಲಕ್ಷ ರು.
- ಎಲೆಕ್ಟ್ರಾನಿಕ್ ಸೇರಿದಂತೆ ಗೃಹೋಪಯೋಗಿ ವಸ್ತುಗಳು- ೫ ಲಕ್ಷ ರು.
- ಚಿನ್ನ ಮತ್ತು ಬೆಳ್ಳಿ- ೩.೫೦ ಲಕ್ಷ ರು.
- ನಗದು- ೧೦ ಸಾವಿರ ರು.
- ಬ್ಯಾಂಕ್ ಠೇವಣಿಗಳು- ೨೦ ಲಕ್ಷ ರು.
ಒಟ್ಟು ಮೌಲ್ಯ- ೧,೧೪,೦೮,೯೦೦
-ಪ್ರತಾಪ್ ಸಿಂಗ್ ತಿವಾರಿ: ದೈಹಿಕ ಶಿಕ್ಷಣ ತರಬೇತುದಾರರಾಗಿ ಸೇವೆಗೆ ಸೇರಿದ್ದು ೧೯೭೮. ಇದುವರೆಗಿನ ಸಕ್ರಮ ಆದಾಯ- ೪೧ ಲಕ್ಷ ರು.
ಲೋಕಾಯುಕ್ತರು ವಶಪಡಿಸಿಕೊಂಡ ಆಸ್ತಿ
- ಗುಲ್ಬರ್ಗಾದ ಬಡೇಪುರ ಕಾಲೋನಿಯಲ್ಲಿ ೨ ಆರ್ಸಿಸಿ ಕಟ್ಟಡಗಳು- ೩೧,೮೯,೭೫೦ ರು.
- ಗುಲ್ಬರ್ಗಾದ ಶ್ರೀನಿವಾಸ ಸರದಗಿ ಮತ್ತು ಕಲಗನೂರು ಗ್ರಾಮದಲ್ಲಿ ೯.೨೦ ಎಕರೆ ಭೂಮಿ- ೪,೩೫,೦೯೫ ರು.
- ಗುಲ್ಬರ್ಗಾದ ರಾಜಪುರದಲ್ಲಿ ಗೃಹ ಮಂಡಳಿ ಮನೆ- ೧೭,೫೬,೧೨೫ ರು.
- ಗುಲ್ಬರ್ಗಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆದ ನಿವೇಶನ- ೨,೦೮,೦೩೫ ರು.
- ಗುಲ್ಬರ್ಗಾದಲ್ಲಿ ಸೌಹಾರ್ಧ ಮಹಿಳಾ ಉದ್ಯೋಗ ಮಿತ್ರ ಖನಿಜ ನೀರು ತಯಾರಿಕಾ ಕೇಂದ್ರದ ಕಟ್ಟಡ- ೧೫,೨೬,೫೭೪ ರು.
- ಗುಲ್ಬರ್ಗಾದ ಕತಗರಪುರ ಗ್ರಾಮದಲ್ಲಿ ಹಳೆಯ ಮನೆ ನವೀಕರಣ- ೫ ಲಕ್ಷ ರು.
- ಮೂರು ದ್ವಿಚಕ್ರ ವಾಹನ ಮತ್ತು ಒಂದು ಟಾಟಾ ಇಂಡಿಕಾ ಕಾರು- ೪,೬೬,೦೦೦
- ನಗದು- ೩೫ ಸಾವಿರ ರು.
- ಎಂಟು ಬ್ಯಾಂಕ್ ಪಾಸ್ ಪುಸ್ತಕಗಳನ್ನು ಪರಿಶೀಲಿಸಲಾಗುತ್ತಿದೆ.
- ವಿವಿಧ ಚಿಟ್ಫಂಡ್ಗಳಲ್ಲಿ ಹೂಡಿಕೆಗಳು- ೩ ಲಕ್ಷ ರು.
ಒಟ್ಟು ಮೌಲ್ಯ- ೮೪,೧೨,೫೭೯
- ಶಿವಲಿಂಗಯ್ಯ: ಸಹಾಯಕ ಎಂಜಿನಿಯರ್ ಆಗಿ ಸೇವೆಗೆ ಸೇರಿದ್ದು ೧೯೯೭. ಇದುವರೆಗಿನ ಸಕ್ರಮ ಆದಾಯ- ೧೫ ಲಕ್ಷ ರು.
ಲೋಕಾಯುಕ್ತರು ವಶಪಡಿಸಿಕೊಂಡ ಆಸ್ತಿ
- ತುಮಕೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಮನೆ- ೨೦ ಲಕ್ಷ ರು.
- ರಂಗಪುರದ ಕೈಗಾರಿಕಾ ಪ್ರದೇಶದಲ್ಲಿ ವಾಣಿಜ್ಯ ಮಳಿಗೆ (ಇತ್ತೀಚೆಗೆ ಮಾರಾಟ ಮಾಡಿದ್ದಾರೆ)- ೧೭.೬೨ ಲಕ್ಷ ರು.
- ಅಂತರಹಳ್ಳಿಯಲ್ಲಿ ನಿವೇಶನ- ೮.೬೬ ಲಕ್ಷ ರು.
- ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಿವೇಶನ (ಇತ್ತೀಚೆಗೆ ಮಾರಾಟ ಮಾಡಿದ್ದು, ಅದರ ಬೆಲೆ ಇನ್ನೂ ನಿರ್ಧರಿಸಿಲ್ಲ)- ೯೮,೮೦೦.
- ಬೈರಪಟ್ನದಲ್ಲಿ ಮನೆ- ೨೦ ಲಕ್ಷ ರು.
- ಮೊಪೆಡ್- ೩೦ ಸಾವಿರ ರು.
-ಕರ್ನಾಟಕ ಬ್ಯಾಂಕಿನ ಪಾಸ್ಬುಕ್ ಪರಿಶೀಲಿಸಲಾಗುತ್ತಿದೆ. ಒಟ್ಟು ಮೌಲ್ಯ- ೬೭,೫೯,೮೦೦
-ಸಿ.ದೇವರಾಜು : ಸೇವೆಗೆ ಸೇರಿದ್ದು ೧೯೭೭. ಇದುವರೆಗಿನ ಸಕ್ರಮ ಆದಾಯ- ೨೦ ಲಕ್ಷ ರು. ಪತ್ನಿ ಹೆಸರಿನ ೧೬ ಲಕ್ಷ ರು. ಸಾಲ ಸೇರಿ ೩೬ ಲಕ್ಷ ರು.
ಲೋಕಾಯುಕ್ತರು ವಶಪಡಿಸಿಕೊಂಡ ಆಸ್ತಿ
- ಬೆಂಗಳೂರಿನ ಬನಶಂಕರಿ ೩ನೇ ಹಂತದಲ್ಲಿ ಒಂದು ಮತ್ತು ರಾಮನಗರದ ಬೊಮ್ಮನಾಯಕನಹಳ್ಳಿಯಲ್ಲಿ ಒಂದು ಮನೆ- ೩೩ ಲಕ್ಷ ರು.
-ಆದಿತ್ಯ ಡಿಸೈನಿಂಗ್ ಫ್ಯಾಕ್ಟರಿ ಕಟ್ಟಡ, ನಿವೇಶನ- ೨೦.೭೫ ಲಕ್ಷ ರು.
- ಸ್ಕಾರ್ಫಿಯೋ ಕಾರು, ೩ ಸ್ಕೂಟರ್, ಟ್ರಾಕ್ಟರ್ ಟ್ರೇಲರ್ ಮತ್ತು ಒಂದು ಟ್ರಾಕ್ಟರ್- ೧೭ ಲಕ್ಷ ರು.
- ಪುತ್ರಿಯ ಮದುವೆಗೆ ಮಾಡಿದ ವೆಚ್ಚ- ೧೦ ಲಕ್ಷ ರು.
- ಚಿನ್ನಾಭರಣಗಳು- ೪.೫೦ ಲಕ್ಷ ರು.
- ಇನ್ಸೂರೆನ್ಸ್ ಕಂಪನಿಗಳಲ್ಲಿ ಹೂಡಿಕೆ- ೨,೩೧,೪೨೬ ರು.
ಒಟ್ಟು ಮೌಲ್ಯ- ೮೭,೫೬,೪೨೬ ರು.
- ಆರ್. ಶ್ರೀಕಾಂತ್: ಕಿರಿಯ ಎಂಜಿನಿಯರ್ ಆಗಿ ಸೇವೆಗೆ ಸೇರಿದ್ದು-೧೯೭೮. ಇದುವರೆಗಿನ ಸಕ್ರಮ ಆದಾಯ- ೫೧ ಲಕ್ಷ ರು.
ಲೋಕಾಯುಕ್ತರು ವಶಪಡಿಸಿಕೊಂಡ ಆಸ್ತಿ
- ದಾವಣಗೆರೆ ಜಿಲ್ಲೆ ಹರನಹಳ್ಳಿ ತಾಲೂಕಿನ ವಿವಿಧೆಡೆ ೪೬.೫ ಎಕರೆ ಭೂಮಿ- ೧೩,೮೫,೭೦೦ ರು.
- ವಿನಾಯಕನಗರ ಮತ್ತು ಇಟ್ಟಗುಡಿಯಲ್ಲಿ ಒಂದು ಮನೆ ಮತ್ತು ಒಂದು ಫಾರಂ ಹೌಸ್- ೪೫ ಲಕ್ಷ ರು.
- ದಾವಣಗೆರೆಯಲ್ಲಿ ೪ ನಿವೇಶನಗಳು- ೯.೯೨ ಲಕ್ಷ ರು.
- ಬ್ಯಾಂಕ್ ಖಾತೆಯಲ್ಲಿ- ೨,೪೭,೧೭೪ ರು.
- ಹುಂಡೈ ಕಾರು, ಟ್ರಾಕ್ಟರ್ ಮತ್ತು ಟ್ರೇಲರ್, ಎರಡು ದ್ವಿಚಕ್ರ ವಾಹನಗಳು- ೧೧.೩೦ ಲಕ್ಷ ರು.
- ಮೂರು ಕೊಳವೆಬಾವಿಗಳು- ೪೮ ಸಾವಿರ ರು.
- ೨ ಎಚ್ಡಿಎಫ್ಸಿ ಪಾಲಿಸಿಗಳು- ೧ ಲಕ್ಷ ರು.
- ವೈಯಕ್ತಿಕ, ಪತ್ನಿ ಮತ್ತು ಮಗನ ಹೆಸರಿನಲ್ಲಿ ೬ ಜೀವವಿಮಾ ನಿಗಮದ ಪಾಲಿಸಿಗಳು- ೩ ಲಕ್ಷ ರು.
- ಚಿನ್ನಾಭರಣ ಮತ್ತು ಬೆಳ್ಳಿ- ೩.೭೫ ಲಕ್ಷ ರು.
- ಗೃಹೋಪಯೋಗಿ ಸಲಕರಣೆಗಳು- ೫ ಲಕ್ಷ ರು.
- ನಗದು- ೧೦ ಸಾವಿರ ರು.
- ೧೨ ಬ್ಯಾಂಕ್ ಖಾತೆಗಳಲ್ಲಿ ಇರುವ ಹಣ- ೮.೧೩ ಲಕ್ಷ ರು.
- ಇನ್ನೂ ಐದು ಪಾಸ್ ಪುಸ್ತಕಗಳನ್ನು ಪರಿಶೀಲಿಸಲಾಗುತ್ತಿದೆ.
- ವೈಯಕ್ತಿಕ ಮತ್ತು ಪುತ್ರನ ಹೆಸರಿನಲ್ಲಿ ನಿಶ್ಚಿತ ಠೇವಣಿ- ಒಂದು ಲಕ್ಷ ರು.
- ಪತ್ನಿಯ ಹೆಸರಿನಲ್ಲಿ ನಿಶ್ಚಿತ ಠೇವಣಿ- ೯೬,೪೬೭ ರು.
ಒಟ್ಟು ಮೌಲ್ಯ- ೧,೦೨,೦೬,೩೪೧ ರು.
-ನಾಗಪ್ಪ: ಸೇವೆಗೆ ಸೇರಿದ್ದು- ೧೯೮೩. ಇದುವರೆಗೆ ಗಳಿಸಿದ ಸಕ್ರಮ ಆದಾಯ - ೮೦,೯೭,೫೦೦ರು. (ಮಗನ ಹೆಸರಲ್ಲಿ ಸಾಲ ೩೫ ಲಕ್ಷ ರು ಸೇರಿ).
- ಪತ್ನಿಯ ಹೆಸರಿನಲ್ಲಿ ಗುಲ್ಬರ್ಗಾದ ಗಣೇಶನಗರದಲ್ಲಿ ನಿವೇಶನ ಮತ್ತು ಆರ್ಸಿಸಿ ಕಟ್ಟಡ- ೩೦,೫೮,೬೭೬ ರು.
- ಗುಲ್ಬರ್ಗಾದ ಹಳೇ ಜೇವರ್ಗಿ ರಸ್ತೆಯಲ್ಲಿ ಒಂದು ನಿವೇಶನ ಮತ್ತು ಆರ್ಸಿಸಿ ಕಟ್ಟಡ- ೧೬,೪೫,೩೯೦ ರು.
- ಪುತ್ರನ ಹೆಸರಿನಲ್ಲಿ ಗುಲ್ಬರ್ಗಾ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಮತ್ತು ೨ ಮಹಡಿಯ ಆರ್ಸಿಸಿ ಕಟ್ಟಡ- ೪೦,೩೧,೩೭೬ ರು.
- ಪತ್ನಿ ಹಾಗೂ ವೈಯಕ್ತಿಕ ಹೆಸರಿನಲ್ಲಿ ಗುಲ್ಬರ್ಗಾದ ನಂದಿಕುರ ಮತ್ತು ಸಿರನೂರು ಗ್ರಾಮದಲ್ಲಿ ೧೨.೧೨ ಎಕರೆ ಭೂಮಿ- ೧೪,೨೦,೯೩೫ ರು.
- ಪುತ್ರನ ಹೆಸರಿನಲ್ಲಿ ಗುಲ್ಬರ್ಗಾ ರೋಜಾ ಮೊಹಲ್ಲಾದಲ್ಲಿ ೧೪ ಗುಂಟೆ ಜಮೀನು ಮತ್ತು ಗೋದಾಮು- ೩೨ ಲಕ್ಷ ರು.
- ಎರಡು ಸ್ಕೂಟರ್ಗಳು- ೬೯,೯೨೦ ರು.
- ಚಿನ್ನಾಭರಣಗಳು- ೧.೫೦ ಲಕ್ಷ ರು.
- ಎಂಟು ಪಾಸ್ ಪುಸ್ತಕಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
- ಪುತ್ರನ ಹೆಸರಿನಲ್ಲಿರುವ ಕನ್ನಡಕಗಳ ಅಂಗಡಿಯ ಲೆಕ್ಕ ಹಾಕಿಲ್ಲ.
ಒಟ್ಟು ಮೌಲ್ಯ- ೧,೩೫,೭೬,೨೯೭ ರು.
ಬಲೆಗೆ ಬಿದ್ದ ಮಿಕಗಳು
-ಬಿ.ಸಿ. ಶಾಂತಕುಮಾರ್
ಹಾಸನದ ರಾಜ್ಯ ಅರಣ್ಯ ನಿಗಮದ ಸಹಾಯಕ ವ್ಯವಸ್ಥಾಪಕ
೯೫.೩ ಲಕ್ಷ ರು. ಆಸ್ತಿ
-ಜಯಾನಂದ ಬಿ. ನರಸಣ್ಣವರ್
ಚಿಕ್ಕೋಡಿ ಆರ್ಟಿಒ ನಿರೀಕ್ಷಕ
೧.೧೪ ಕೋಟಿ ರು. ಆಸ್ತಿ
-ಪ್ರತಾಪ್ ಸಿಂಗ್ ತಿವಾರಿ
ಗುಲ್ಬರ್ಗ ವಿವಿ ದೈ.ಶಿಕ್ಷಣ ನಿರ್ದೇಶಕ
೮೪.೧೨ ಲಕ್ಷ ರು. ಆಸ್ತಿ
-ಶಿವಲಿಂಗಯ್ಯ, ಧಾರವಾಡ ಕೆಐಎಡಿಬಿ ಕಿರಿಯ ಎಂಜಿನಿಯರ್
೬೭.೫೯ ಲಕ್ಷ ರು. ಆಸ್ತಿ
- ಸಿ. ದೇವರಾಜು, ಬೆಂಗಳೂರು ಹಾಪ್ಕಾಮ್ಸ್ ಪ್ರ.ದ. ಸಹಾಯಕ
೮೭.೫೬ ಲಕ್ಷ ರು. ಆಸ್ತಿ
-ಆರ್. ಶ್ರೀಕಾಂತ್ ಮೈಸೂರು ಪಂ.ರಾಜ್ ಕಾ.ನಿ. ಎಂಜಿನಿಯರ್
೧.೦೨ ಕೋಟಿ ರು. ಆಸ್ತಿ
೨೦೦೮ನೇ ಸಾಲಿನಲ್ಲಿ ೯೨ ದಾಳಿಗಳನ್ನು ನಡೆಸಲಾಗಿತ್ತು. ಈ ಬಾರಿ ೫೩ ದಾಳಿಗಳು ನಡೆದಿವೆ. ಈ ವರ್ಷ ಲೋಕಸಭಾ
ಚುನಾವಣೆ ಮತ್ತು ಪ್ರವಾಹದಿಂದಾಗಿ ಮಾರುಕಟ್ಟೆ ಕುಸಿದಿದೆ. ಹೀಗಾಗಿ ದಾಳಿ ಪ್ರಮಾಣ ಕಡಮೆಯಾಗಿದೆ. ಈ ವರ್ಷದ ಕಡೆಯ ದಾಳಿ ಇದು ಎಂದು ಭಾವಿಸುವುದು ಬೇಡ. ಇನ್ನೂ ೨೯ ದಿನ ಬಾಕಿ ಇದೆ.
- ಲೋಕಾಯುಕ್ತ ನ್ಯಾ| ಎನ್.ಸಂತೋಷ್ ಹೆಗ್ಡೆ
ಸೌಜನ್ಯ: ಕನ್ನಡಪ್ರಭ