ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಮಂತ್ರಿಯಾಗಿ ಇಪ್ಪತ್ತು ತಿಂಗಳು ಕಳೆದರೂ ಶಿಕ್ಷಕರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಹೊರಟ್ಟಿ - ಶೀಘ್ರವೇ ಚಕ್ರಾಧಿಪತ್ಯದ ಕೊನೆ - ಡಾ. ಎಂ.ಆರ್. ಕುಬೇರಪ್ಪ

ಭಟ್ಕಳ: ಮಂತ್ರಿಯಾಗಿ ಇಪ್ಪತ್ತು ತಿಂಗಳು ಕಳೆದರೂ ಶಿಕ್ಷಕರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಹೊರಟ್ಟಿ - ಶೀಘ್ರವೇ ಚಕ್ರಾಧಿಪತ್ಯದ ಕೊನೆ - ಡಾ. ಎಂ.ಆರ್. ಕುಬೇರಪ್ಪ

Wed, 24 Feb 2010 03:00:00  Office Staff   S.O. News Service
ಭಟ್ಕಳ, ಫೆಬ್ರವರಿ 24:  ಕಳೆದ ಮೂವತ್ತು ವರ್ಷಗಳಿಂದ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿಯವರಿಂದ ಯಾವುದೇ ಕೆಲಸ ಆಗಿಲ್ಲ. ಇವರು ೨೦ ತಿಂಗಳು ಶಿಕ್ಷಣ ಮಂತ್ರಿಯಾದರೂ ಸಹ ಶಿಕ್ಷಕರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಶಿಕ್ಷಕರು ಈ ಸಲ ಬದಲಾವಣೆ ಬಯಸಿದ್ದು, ಹೊರಟ್ಟಿಯವರ ೩೦ ವರ್ಷಗಳ ಚಕ್ರಾಧಿಪತ್ಯ ಕೊನೆಗೊಳ್ಳಲಿದೆ ಎಂದು ರಾಜ್ಯ ಸೆಕೆಂಡರಿ ಶಿಕ್ಷಕರ ಸಂಘದ ವಿಧಾನ ಪರಿಷತ್ ಅಭ್ಯರ್ಥಿ ಡಾ. ಆರ್ ಎಂ ಕುಬೇರಪ್ಪ ಹೇಳಿದರು.

ಅವರು ನಿನ್ನೆ ಸಂಜೆ ನಗರದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಈ ಸಲ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಿದೆ. ಹೊರಟ್ಟಿ ಕಳೆದ ೩೦ ವರ್ಷಗಳಿಂದ ಶಿಕ್ಷಕರ ಪ್ರತಿನಿಧಿಯಾಗಿದ್ದರೂ ಸಹ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿಲ್ಲ. ಪ್ರಸ್ತುತ  ಸಂದರ್ಭದಲ್ಲಿ ಹೊರಟ್ಟಿ ಬಳಿ ಯಾವುದೇ ಸಂಘಟನೆಯೂ ಇಲ್ಲ. ಅವರಿಗೆ ಶಿಕ್ಷಕರ ಬೆಂಬಲವೂ ಇಲ್ಲ ಎಂದ ಅವರು ಕಳೆದ ಚುನಾವಣೆಯಲ್ಲಿ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿಯಾದ ತಾವು ಅಲ್ಪಮತದಿಂದ ಪರಾಭವಗೊಂಡಿದ್ದು, ಈ ಸಲ ಎಲ್ಲರ ಸಹಕಾರದಿಂದ ಹಾಗೂ ಸಂಘಟನೆಯ ಬಲದಿಂದ ಗೆಲುವು ಸಾಧಿಸುವುದು ನಿಶ್ಚಿತ. ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಜೂನ್‌ನಲ್ಲಿ ಚುನಾವಣೆ ನಡೆಯಲಿದ್ದರೂ ಸಹ ಈಗಿಂದಲೇ ಪ್ರಚಾರ ಕಾರ್ಯವನ್ನು ಆರಂಭಿಸಲಾಗಿದೆ. ಭಟ್ಕಳ ಸೇರಿದಂತೆ ಮತಕ್ಷೇತ್ರದ ನಾಲ್ಕು ಜಿಲ್ಲೆಗಳ ಪ್ರತಿ ತಾಲೂಕುಗಳ ಎಲ್ಲಾ ಶಾಲಾ,ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರ ಬಳಿ ಮತಯಾಚಿಸಲಾಗಿದೆ. ಈ ಸಂದರ್ಭದಲ್ಲಿ ಅನೇಕ ಶಿಕ್ಷಕರು ತಮ್ಮಲ್ಲಿ ಸಮಸ್ಯೆಯನ್ನು ತೋಡಿಕೊಂಡಿದ್ದು, ಬದಲಾವಣೆ ಬಯಸುತ್ತಿರುವುದು ಕಂಡು ಬಂದಿದೆ. ಅದರಂತೆ ಪ್ರಚಾರಕ್ಕೆ ತೆರಳಿದ ಎಲ್ಲಾ ಕಡೆಗಳಲ್ಲೂ ಸಹ ಉತ್ತಮ ಸ್ಪಂದನೆ ಸಿಕ್ಕಿದೆ. ಸೆಕೆಂಡರಿ ಶಿಕ್ಷಕರ ಸಂಘ ಅನೇಕ ಹೋರಾಟಗಳನ್ನು ಮಾಡಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಈ ಚುನಾವಣೆ ಪಕ್ಷ ಆಧಾರಿತ ಚುನಾವಣೆ ಅಲ್ಲದಿದ್ದರೂ ಸಹ ತಮಗೆ ಸಂಘ ಪರಿವಾರ ಮತ್ತು ಬಿ ಜೆ ಪಿಯಿಂದ ಬೆಂಬಲ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು ಉತ್ತರ ಕನ್ನಡ ಜಿಲ್ಲೆಯ ಶಿಕ್ಷಕರು ಮೂವತ್ತು ವರ್ಷಗಳ ಚಕ್ರಾಧಿಪತ್ಯವನ್ನು ಕೊನೆಗೊಳಿಸಿ ತಮ್ಮನ್ನು ಆಯ್ಕೆ ಮಾಡಲು ಸಹಕರಿಸಬೇಕು ಎಂದರು. ರಾಜ್ಯ ಸರಕಾರ ಖಾಸಗಿ ಪ್ರೌಢಶಾಲೆಗಳಿಗೂ ಸಹ ಅನುದಾನ ಬಿಡುಗಡೆಗೊಳಿಸಬೇಕಿದೆ. ಆರ್ಥಿಕ ಪರಿಸ್ಥಿತಿ ನೆಪವೊಡ್ಡಿ ಇಂತಹ ಶಾಲೆಗಳಿಗೆ ಅನುದಾನ ಒದಗಿಸದೇ ಇರುವುದು ಸರಿಯಲ್ಲ. ಅದರಂತೆ ಅನುದಾನಿತ ಮತ್ತು ಅನುದಾನಿತ ಪ್ರೌಢಶಾಲೆಗಳ ೯-೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಹಣ ನೀಡಿದರೆ ಮಾತ್ರ ನೀಡಲಾಗುವುದು ಎಂಬ ಆದೇಶವನ್ನು ರದ್ದುಪಡಿಸಿ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ಸರಕಾರದಿಂದಲೇ ಪಠ್ಯಪುಸ್ತಕವನ್ನು ವಿತರಿಸಬೇಕು. ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜನ್ನು ಪ್ರೌಢಶಾಲೆಗಳಿಂದ ಬೇರ್ಪಡಿಸಿದಂತೆ ಖಾಸಗೀ ಕಾಲೇಜುಗಳನ್ನೂ ಸಹ ಪ್ರೌಢಶಾಲೆಗಳಿಂದ ಬೇರ್ಪಡಿಸುವ ಕಾರ್ಯ ಸರಕಾರದಿಂದ ಆಗಬೇಕಿದ್ದು, ಈ ಎಲ್ಲಾ ಸಮಸ್ಯೆಗಳ ಬಗ್ಗೆ ಶಿಕ್ಷಣ ಸಚಿವರು ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸೆಕೆಂಡರಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್ ಸಿ ನಾಯ್ಕ, ಗೌರವಾಧ್ಯಕ್ಷ ಕೆ ಜಿ ನಾಯ್ಕ,ಪ್ರಧಾನ ಕಾರ್ಯದರ್ಶಿ ಚಿದಾನಂದ ಬಂಡಾರಿ, ಮಹಿಳಾ ಘಟಕದ ಅಧ್ಯಕ್ಷೆ ರಾಜಮ್ಮ ಹಿಚಕಡ,ಪುಷ್ಪಾ ನಾಯ್ಕ, ಭಟ್ಕಳ ತಾಲೂಕು ಅಧ್ಯಕ್ಷ ಉದಯ ನಾಯ್ಕ, ಪ್ರಧಾನ ಕಾರ್ಯದರ್ಶಿ ಮೋಹನ ದೇಸಾಯಿ, ಎಸ್ ಎಂ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. 


Share: