ಬೆಂಗಳೂರು ಅ.6: ಕಳೆದ ಸೆ.27ರಿಂದ ಐದು ದಿನಗಳ ಕಾಲ ಸತತವಾಗಿ ಸುರಿದ ಅನೀರಿಕ್ಷಿತ ಮಳೆಯಿಂದ ಒಟ್ಟು 206 ಮಂದಿ ಸಾವನ್ನಪ್ಪಿದ್ದು, 2.88 ಲಕ್ಷ ಮನೆಗಳು ಕುಸಿದು ಏಳು ಲಕ್ಷಕ್ಕೂ ಅಧಿಕ ಮಂದಿ ಬೀದಿಪಾಲಾಗಿದ್ದಾರೆ ಎಂದು ರಾಜ್ಯ ಸರಕಾರ ತಿಳಿಸಿದೆ.
ನೆರೆ ಹಾವಳಿಯಿಂದಾಗಿರುವ ಹಾನಿಯ ಕುರಿತು ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿರುವ ಸರಕಾರ ೧೫ ಜಿಲ್ಲೆಗಳಲ್ಲಿ ೨೦೬ ಮಂದಿ ಪ್ರಾಣ ಕಳೆದುಕೊಂಡಿರುವುದನ್ನು ಖಚಿತ ಪಡಿಸಿದೆ. ೨,೮೮,೬೦೪ ಮನೆಗಳು ಹಾನಿಗೆ ಒಳಗಾಗಿವೆ. ೫೨೮೭ ಜಾನುವಾರು ಗಳು ಸಾವನ್ನಪ್ಪಿವೆ. ೧೪೯೦ ಗ್ರಾಮಗಳು ತೊಂದರೆಗೊಳಗಾಗಿದ್ದು, ಸರಕಾರ ೧೬೯೧ ಗಂಜಿಕೇಂದ್ರಗಳ ಮೂಲಕ ೬,೫೯,೯೭೧ ಮಂದಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಿದೆ. ಅತೀವೃಷ್ಟಿ ಆರಂಭವಾದ ದಿನದಿಂದ ನಡೆದ ಕಾರ್ಯಾಚರಣೆಯಲ್ಲಿ ೫,೧೯೭ ಮಂದಿ ಯನ್ನು ರಕ್ಷಣೆ ಮಾಡಲಾಗಿದೆ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ಮಾಹಿತಿ ನೀಡಿದರು
ಈ ಕ್ಷಣದವರೆಗೂ ೧೨ ಹೆಲಿಕಾಫ್ಟರ್ಗಳನ್ನು ಬಳಕೆ ಮಾಡಿಕೊಂಡು ಯೋಧರು, ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಪಡೆಯ ಸಿಬ್ಬಂದಿ ಮತ್ತು ರಾಜ್ಯ ಪೊಲೀಸ ರನ್ನು ಬಳಸಿಕೊಂಡು ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಸುಮಾರು ೨೦ ಲಕ್ಷ ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲಾಗಿದೆ. ಸುಮಾರು ೩೨೯ ದೋಣಿಗಳನ್ನು ಜನರನ್ನು ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರಿಸಲು ಬಳಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾರಾವರದಲ್ಲಿ ಗುಡ್ಡ ಕುಸಿತದಿಂದ ೧೯ ಮಂದಿ ಮೃತಪಟ್ಟಿರುವ ಶಂಕೆಯಿದ್ದು, ೧೧ ಮಂದಿಯ ಶವಗಳನ್ನು ಹೊರತೆಗೆಯಲಾಗಿದೆ. ೪೦ ಸೈನಿಕರು, ೨೦ ವಾಯು ಪಡೆಯ ಸಿಬ್ಬಂದಿಗಳು, ೩ ಜೆಸಿಬಿ, ೨ ಯಂತ್ರೋಪಕರಣಗಳನ್ನು ಕಾರ್ಯಾಚರಣೆಗೆ ನಿಯೋಜಿಸ ಲಾಗಿದೆ. ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯದ ಕ್ಷಣೆ ನಡೆಸಿದರು ಎಂದು ಅವರು ಹೇಳಿದರು.
ಶಾಶ್ವತ ಪರಿಹಾರ: ಪ್ರತಿವರ್ಷ ಮಳೆಗಾಲದಲ್ಲಿ ಮುಳುಗಡೆಯಾಗುವ ಪ್ರದೇಶಗಳ ಗ್ರಾಮಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಶಾಸ್ವತ ಪರಿಹಾರ ಒದಗಿಸಲು ಒಂದು ವರ್ಷದೊಳಗಾಗಿ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಗದಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾತ್ಕಾಲಿಕ ಪರಿಹಾರ ದಿಂದ ಪ್ರತಿವರ್ಷವೂ ಸಮಸ್ಯೆ ಜೀವಂತವಾಗಿ ಉಳಿದಿದೆ. ಅದಕ್ಕಾಗಿ ಒಂದೇ ಬಾರಿಗೆ ಎಲ್ಲ ಗ್ರಾಮಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಎಷ್ಟೆ ಹಣ ವೆಚ್ಚವಾದರೂ ಭರಿಸಲು ಸರಕಾರ ಸಿದ್ಧವಿದೆ ಎಂದರು.
ಒಂದು ವರ್ಷದಲ್ಲಿ ಮನೆ ನಿರ್ಮಿಸಿಕೊಟ್ಟು, ಅಗತ್ಯವಾದ ಶಾಲಾ ಕಾಲೇಜು, ಕುಡಿಯುವ ನೀರು, ರಸ್ತೆ ಸೇರಿದಂತೆ ಎಲ್ಲ ಮೂಲಸೌಲಭ್ಯಗಳನ್ನು ಒದಗಿಸಲಾಗುವುದು. ಆವರೆಗೆ ಸಂತ್ರಸ್ಥರಿಗೆ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ವಿ.ಎಸ್.ಆಚಾರ್ಯ, ಅತೀವೃಷ್ಟಿಯಿಂದ ಮನೆ ಕಳೆದುಕೊಂಡ ಒಂದು ಲಕ್ಷ ಸಂತ್ರಸ್ಥರಿಗೆ ಸರಕಾರವೇ ರಾಜೀವ್ ಗಾಂಧಿ ವಸತಿ ನಿಗಮದಿಂದ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಿದೆ. ಹೆಚ್ಚುವರಿ ಹಣವನ್ನು ಕೇಂದ್ರ ಸರಕಾರದ ಉದ್ಯೋಗ ಖಾತ್ರಿ ಯೋಜನೆಯಿಂದ ಬಳಸಿಕೊಳ್ಳಲು ಚಿಂತನೆ ನಡೆದಿದೆ. ಉಳಿದ ಒಂದು ಲಕ್ಷ ಮನೆಗಳನ್ನು ನಿರ್ಮಿಸಿಕೊಡುವಂತೆ ಖಾಸಗಿ ವಲಯವನ್ನು ಕೇಳಿಕೊಳ್ಳಲಾಗುವುದು.
ಈಗಾಗಲೇ ಬಹಳಷ್ಟು ಸಂಘ ಸಂಸ್ಥೆಗಳು ಮತ್ತು ಮಠಗಳು ಮುಂದೆ ಬಂದಿವೆ ಎಂದು ಅವರು ಹೇಳಿದರು