ಭಟ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ದಿನದಿಂದ ದಿನಕ್ಕೆ ಹರಾಜಾಗುತ್ತಿದೆಯಾದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡದೇ ತಮ್ಮ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರವಾಗಿ ಟೀಕಿಸಿದರು.
ಭಟ್ಕಳದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಗಂಭೀರ ಆರೋಪಗಳು ಕೇಳಿ ಬಂದಿದ್ದಾಗ ತಕ್ಷಣ ರಾಜೀನಾಮೆ ನೀಡಬೇಕಾಗಿತ್ತು. ಅವರು ಹಾಗೆ ಮಾಡದೆ ಮುಂದುವರಿಯುತ್ತಿರುವುದು ಸರಿಯಾದ ನಡೆ ಅಲ್ಲ ಎಂದರು. ಇಂತಹ ರಾಜಕೀಯ ಅನುಭವ ಹೊಂದಿರುವವರು ಹಾರಿಕೆಯ ಉತ್ತರ ನೀಡದೆ ತಮ್ಮ ಸ್ಥಾನಕ್ಕೆ ಯೋಗ್ಯ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ಮುನಿರತ್ನ ಕುರಿತ ಪ್ರಕರಣದಲ್ಲಿಯೂ, ಸರಕಾರವು ಅವರ ಮೇಲೆ ಕ್ರಮ ಕೈಗೊಂಡಿದ್ದು ಸೇಡಿನ ರಾಜಕೀಯವಾಗಿ ಕಾಣುತ್ತಿದೆ ಎಂದು ಕಾಗೇರಿ ಹೇಳಿದರು. ತಪ್ಪು ಮಾಡಿದರೆ ನ್ಯಾಯಬದ್ಧ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿತ್ತು, ಆದರೆ ಜೈಲಿಗೆ ಹಾಕುವುದು ಸರಿಯಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಓಲೈಕೆ ಮಾಡುವ ಮೂಲಕ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಮತ್ತು ರಾಜ್ಯದ ಕೆಲವು ಕಡೆ ಅಹಿತಕರ ಘಟನೆಗಳಿಗೆ ಕಾರಣವಾಗಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ, ರಾಜೇಶ ನಾಯ್ಕ, ಶ್ರೀಕಾಂತ ನಾಯ್ಕ, ಕಿಶನ್ ಬಲ್ಸೆ,ಶ್ರೀನಿವಾಸ ನಾಯ್ಕ ಮುಂತಾದವರಿದ್ದರು.