ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುಂದಿನ 5 ದಿನಗಳಲ್ಲಿ ಭಾರೀ ಮಳೆ ಸಾಧ್ಯತೆ: ಇಂದು ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್

ಮುಂದಿನ 5 ದಿನಗಳಲ್ಲಿ ಭಾರೀ ಮಳೆ ಸಾಧ್ಯತೆ: ಇಂದು ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್

Sun, 09 Jun 2024 13:14:38  Office Staff   S O News

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಧಾರಾಕಾರ ಸುರಿಯುತ್ತಿದ್ದು, ಕೆಲ ಜಿಲ್ಲೆಗಳಲ್ಲಿ ಭಾರೀ ಅವಾಂತರವನ್ನು ಸೃಷ್ಟಿಸಿದೆ. ಸದ್ಯ ಭಾರೀ ಮಳೆ ಸಂಭವವಿರುವ ಕಾರಣ ಮುಂದಿನ 24 ಗಂಟೆಗಳಿಗೆ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಲಾಗಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಅರೆಂಜ್ ಅಲರ್ಟ್, ದಕ್ಷಿಣ ಕನ್ನಡ, ಬಾಗಲ ಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂ.9ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಗುಡುಗು ಸಹಿತ ಮಳೆಯಾಗಲಿದೆ. ಬೆಳಗಾವಿ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ 40 ರಿಂದ 50 ಕಿಲೋಮೀಟರ್ ಪ್ರತಿ ಗಂಟೆಗೆ ಗಾಳಿ ಬೀಸಲಿದ್ದು ಗುಡುಗು ಸಹಿತ ಮಳೆ ಬೀಳಲಿದೆ ಎಂದು ತಿಳಿಸಿದೆ.

ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ, ಉತ್ತರ ಒಳನಾಡಿನ ಅಲರ್ಟ್ ನೀಡದ ಹೆಚ್ಚಿನ ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದಿದೆ.

ಮೀನುಗಾರರಿಗೆ ಎಚ್ಚರಿಕೆ: ಗಂಟೆಗೆ 45 ಕಿ.ಮೀ. ರಿಂದ 55 ಕಿ.ಮೀ. ವರೆಗೆ ಗಾಳಿ ಸಹ ಬೀಸುವ ಸಾಧ್ಯತೆ ಇದ್ದು, ರಾಜ್ಯ ಕರಾವಳಿಯ ಜಿಲ್ಲೆಗಳ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಡಿಗ್ರಿ ಮತ್ತು 21 ಡಿಗ್ರಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.


Share: