ಭಟ್ಕಳ, ಫೆಬ್ರವರಿ ೨೩: ಭಟ್ಕಳ ನಗರ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣವನ್ನು ಬೇಧಿಸಿದ ನಗರಠಾಣ ಪೊಲಿಸರು ಐದು ಬಾಲಕರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ನಾಗೇನ ಮಟ್ಟಿ ನಿವಾಸಿ ಅಶೋಕ ತಂದೆ ಕೃಷ್ಣ ಅಲಿಯಾಸ್ ಶಿವಾಜಿ ಮರಾಠಿ (೨೨) ಬೆಂಗಳೂರು ಕನಕಪುರ ಮುಖ್ಯ ರಸ್ತೆಯ ನಿವಾಸಿ ಹೆಚ್. ಆನಂದ ಗೌಡ (೨೨)ಹಾಗೂ ಐವರು ಬಾಲಪರಾಧಿಗಳೆಂದು ಗುರುತಿಸಲಾಗಿದೆ. ಬಂಧಿತರಿಂದ ಭಟ್ಕಳದಲ್ಲಿ ನಡೆದ ನಾಲ್ಕು ಸರಣಿ ಕಳ್ಳತನ ಪ್ರಕರಣದಲ್ಲಿ ಚಿನ್ನ ಬೆಳ್ಳಿ, ನಗದು ಹಣ, ಮುಬೈಲ್, ಹಿತ್ತಾಳೆಯ ಪಾತ್ರೆ, ಸ್ಟೀಲ್ ಪಾತ್ರೆ, ಬಟ್ಟೆ ಬರೆ ಸೇರಿದಂತೆ ಒಟ್ಟು ೪೮ ಸಾವಿರಾ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಐವರು ಬಾಲಕರು ಗುಜರಿ ಹೆಕ್ಕುವ ನೆಪದಲ್ಲಿ ನಗರದ ವಿವಿಧ ಸ್ಥಳದ ಮಾಹಿತಿಯನ್ನು ಪಡೆದು ರಾತ್ರಿ ಸಮಯದಲ್ಲಿ ಕಳ್ಳತನಕ್ಕೆ ಇಳಿಯುತ್ತಿದ್ದ ಮಾಹಿತಿಯು ತನಿಖೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ. ಇವರು ತಾವು ಕಳವುಗೈದ ಸಾಮಾನುಗಳನ್ನು ಇಲ್ಲಿಯ ಶಮ್ಸುದ್ದೀನ್ ವೃತ್ತದಲ್ಲಿರುವ ಮುಹಮ್ಮದ್ ಎನ್ನುವ ವ್ಯಕಿಗ್ತೆ ಸೇರಿದ ಗುಜರಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ್ದು ಚಿನ್ನ, ಬೆಳ್ಳಿ, ನಗದು, ಮೊಬೈಲ್ ಮತ್ತಿತರ ಬೆಲೆಬಾಳು ವಸ್ತುಗಳನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ಹಾಕಿ ಗುಳ್ಮಿ, ತಲಾಂದ ಬಳಿಯ ಜನರು ವಾಸಮಾಡದೆ ಇರುವ ಕೊಳಚೆ ಪ್ರದೇಶದಲ್ಲಿ ಬಚ್ಚಿಡುತ್ತಿದ್ದ ಕುರಿತು ತನಿಖೆಯ ವೇಳೆ ಮಾಹಿತಿಯನ್ನು ನೀಡಿದ್ದಾರೆ. ಆರೋಪಿ ಅಶೋಕ ಎಂಬುವವನ ವಿರುದ್ಧ ಈಗಾಗಲೇ ಮಂಗಳೂರು ಬರ್ಕೆ ಪೊಲೀಸ್ ಠಾಣೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ದಾಖಲಾಗಿದ್ದು, ಬಂಧಿತ ಆನಂದ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯ ಪ್ರಕರಣದಲ್ಲಿಯೂ ಭಾಗಿಯಾಗಿ ಇಬ್ಬರೂ ಶಿಕ್ಷಿತ ಅಪರಾಧಿಗಳಾಗಿದ್ದಾರೆ ಎಂದು ಪೊಲಿಸರು ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ
ಕಳೆದ ಒಂದು ವಾರದಲ್ಲೆ ನಾಲ್ಕು ಕಳುವಿನ ಪ್ರಕರಣಗಳು ಜರುಗಿದ್ದು ಭಟ್ಕಳದ ಜನರಲ್ಲಿ ಆತಂಕವನ್ನು ಹುಟ್ಟುವಂತೆ ಮಾಡಿದ್ದವು. ಹಾಡುಹಗಲೆ ಇಲ್ಲಿನ ಬಿಜೆಪಿಯ ಮಾಜಿ ಶಾಸಕ ದಿವಂಗತ ಡಾ.ಯು.ಚಿತ್ತರಂಜನ್ ಮನೆಯಲ್ಲಿ ಕಳ್ಳತನ ನಡೆಸಿದ್ದ ಬಾಲಪರಾದಿಗಳನ್ನು ಅಂದು ಸಾರ್ವಜನಿಕರ ನೆರವಿನೊಂದಿಗ್ ಪೋಲಿಸರು ಬಂಧಿಸಿದ್ದರು. ಅವರನ್ನು ವಿಚಾರಣೆಗೊಳಪಡಿಸಿದಾಗ ನಗರದಲ್ಲಿ ಇದುವರೆಗೂ ನಡೆದ ವಿವಿಧ ಕಳ್ಳತನ ಪ್ರಕರಣಗಳು ಬಯಲಿಗೆ ಬಂದಿವೆ. ಎಸ್.ಎಮ್. ಮೋಹಸಿನ್, ಅಮಿತಾ ಆಸ್ಪತ್ರೆ ಪಕ್ಕದಲ್ಲಿರುವ ನೂರ್ ಜಹಾನ್ ಎಂಬುವವರ ಮನೆ ಹಾಗೂ ಬಂದರ್ ರೋಡ್‌ನಲ್ಲಿರುವ ಎಸ್.ಎಮ.ಸೈಯದ್ ಜುಬೇg ಮೌಲಾನ ಎಂಬುವವರಿಗೆ ಸೇರಿದ ಮನೆಗಳಲ್ಲಿ ಕಳ್ಳತನ ನಡೆಸಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಸೋಮವಾರದಂದು ನಗರ ಪೋಲಿಸ್ ಠಾಣೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಡಿವಾಯ್‌ಎಸ್ಪಿ ಡಾ. ಸಿ.ಬಿ.ವೇದಮೂರ್ತಿ, ಈ ವಿಷಯವನ್ನು ಬಹಿರಂಗಪಡಿಸಿದರು.
ಪ್ರಕರಣವನ್ನು ಭೇದಿಸುವಲ್ಲಿ ಸಿಪಿಐ ಗುರುಮತ್ತೂರು, ಎಸೈ ಮಂಜುನಾಥ ಗೌಡ, ಎಸೈ ಕೆ.ಪಿ.ಕರ್ನಿಂಗ್, ಎಸೈ ಉಮೇಶ ಕಾಂಬಳೆ ಹಾಗೂ ಸಿಬ್ಬಂದಿಗಳಾದ ಸಂದೀಪ ನಾಯ್ಕ, ಕೀರಪ್ಪ ಘಟಕಾಂಬ್ಳೆ, ಗಜಾನನ ನಾಯ್ಕ, ಕೃಷ್ಣೇ ಗೌಡ, ಕೇಶವ ಗೌಡ, ಹೋಂ ಗಾರ್ಡ ದೀಪಕ ಕೃಷ್ಣ ದೇಸಾಯಿ ಮತ್ತಿತರರು ಪಾಲ್ಗೊಂಡಿದ್ದರು.