Home
/
ರಾಜ್ಯ ಸುದ್ದಿ
/
ಕನ್ನಡಿಗರಿಗೆ ಮತ್ತೊಂದು ಬರಸಿಡಿಲು - ಅನಿರೀಕ್ಷಿತವಾಗಿ ಬಂದೆರಗಿದ ವಿಷ್ಣುವರ್ಧನ್ ಅಸ್ತಂಗತ ವಾರ್ತೆ
ಕನ್ನಡಿಗರಿಗೆ ಮತ್ತೊಂದು ಬರಸಿಡಿಲು - ಅನಿರೀಕ್ಷಿತವಾಗಿ ಬಂದೆರಗಿದ ವಿಷ್ಣುವರ್ಧನ್ ಅಸ್ತಂಗತ ವಾರ್ತೆ
Wed, 30 Dec 2009 17:38:00
Office Staff
S.O. News Service
ಮೈಸೂರು/ಬೆಂಗಳೂರು, ಡಿಸೆಂಬರ್ ೩೦: ನೆನ್ನೆಯಷ್ಟೇ ಗಾಯಕ ಸಿ. ಅಶ್ವಥ್‌ರವರ ಸಾವಿನ ಸುದ್ದಿ ಕೇಳಿ ಚೇತರಿಸಿಕೊಳ್ಳುವ ಮೊದಲೇ ಕನ್ನಡಿಗರಿಗೆ ಇಂದು ಇನ್ನೊಂದು ಬರ ಸಿಡಿಲು ಎರಗಿದಂತಾಗಿದೆ. ಕನ್ನಡ ಚಲನಚಿತ್ರ ರಂಗದ ‘ಸಾಹಸ ಸಿಂಹ’, ಖ್ಯಾತ ನಟ ವಿಷ್ಣುವರ್ಧನ್ ಕಳೆದ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ೫೯ ವರ್ಷ ವಯಸ್ಸಾಗಿತ್ತು.
ಸುದ್ದಿ ತಿಳಿದ ತಕ್ಷಣ ಕನ್ನಡ ಚಿತ್ರೋದ್ಯಮ ಸೇರಿದಂತೆ, ಕನ್ನಡ ನಾಡೆಲ್ಲವೂ ದಿಗ್ಮೂಢವಾಗಿದೆ. ವಿಷ್ಣು ಅಭಿಮಾನಿಗಳು ಅವರ ಅಸಹನೆ, ದುಃಖವನ್ನು ಈಗಾಗಲೇ ಪ್ರದರ್ಶಿಸುತ್ತಿದ್ದಾರೆ. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಸರ್ಕಾರ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ವಿಷ್ಣು ನಿವಾಸವಿರುವ ಜಯನಗರ ಸೇರಿದಂತೆ, ಬೆಂಗಳೂರಿನ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿಲಾಗಿದೆ. ಅವರ ಅಂತಿಮ ದರ್ಶನ ಪಡೆಯಲು ದಕ್ಷಿಣ ಭಾರತದ ಖ್ಯಾತ ನಟರಾದ ಚಿರಂಜೀವಿ, ರಜನೀಕಾಂತ್, ಸುಹಾಸಿನಿ ಸೇರಿದಂತೆ ನೆರೆಯ ಚಿತ್ರರಂಗಗಳ ಅನೇಕ ಗಣ್ಯಾತಿಗಣ್ಯರು ಬರುವ ನಿರೀಕ್ಷೆಯಿದೆ.
‘ಸಾಹಸ ಸಿಂಹ’ ಹೆಜ್ಜೆ ಗುರುತು....
೧೯೫೦ ಸೆಪ್ಟಂಬರ್ ೧೮ ರಂದು, ಜನಿಸಿದ್ದ ವಿಷ್ಣುವರ್ಧನ್‌ರವರ ಮೂಲ ಹೆಸರು, ಸಂಪತ್ ಕುಮಾರ್. ಹುಟ್ಟೂರು ಮೈಸೂರು. ಎಲ್ಲರೂ ಸಾಮಾನ್ಯವಾಗಿ ತಿಳಿದಂತೆ ‘ನಾಗರ ಹಾವು’ ಚಿತ್ರ ಅವರ ಮೊದಲ ಚಿತ್ರವಲ್ಲ. ಅದಕ್ಕೂ ಮುಂಚೆ ‘ಶಿವಶರಣೆ ನಂಬೆಕ್ಕ’ ಚಿತ್ರದಲ್ಲಿ ಈಗಿನ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುರವರೊಂದಿಗೆ ಬಾಲನಟರಾಗಿ ಅಭಿನಯ. ನಂತರ, ಪುಟ್ಟಣ್ಣರವರ ಆಪ್ತ ಶಿಷ್ಯರಾದ ವಿಷ್ಣು, ‘ನಾಗರಹಾವು’ ಚಿತ್ರದ ಮೂಲಕ ಕನ್ನಡ ಮನೆಮಾತಾದರು. ‘ಸಾಹಸಸಿಂಹ’ ಚಿತ್ರ ಅವರಿಗೆ ಆಕ್ಷನ್ ಹೀರೊ ಪಟ್ಟ ತಂದು ಕೊಟ್ಟಿತು.
ಅಲ್ಲಿಂದ ಹಿಂತಿರುಗಿ ನೋಡದ ವಿಷ್ಣು, ಕನ್ನಡ ಚಿತ್ರರಸಿಕರ ಮನದಲ್ಲಿ ‘ಮುತ್ತಿನ ಹಾರ’ವಾಗಿ ಬಿಟ್ಟರು.
ಅವರು ವೈಯುಕ್ತಿಕವಾಗಿ ಇಷ್ಟಪಡುತ್ತಿದ್ದ ನಟ ಹಿಂದಿ ಚಿತ್ರರಂಗದ ಹೆಸರಾಂತ ನಟ ದಿವಂಗತ ರಾಜ್‌ಕುಮಾರ್. ವಿಷ್ಣು ಅವರೇ ಅಭಿನಯಿಸಿದ್ದ ‘ಮಹಾಕ್ಷತ್ರಿಯ’ ಚಿತ್ರದ ‘ಈ ಭೂಮಿ ಬಣ್ಣದ ಬುಗುರಿ... ಆ ಶಿವನೇ ಚಾಟಿ ಕಣೋ....’ ಹಾಡು ಅವರಿಗೆ ಹೆಚ್ಚು ಆಪ್ತವಾದ ಹಾಡು.
ಭಾವನಾತ್ಮಕ ಅಭಿನಯ ಸೇರಿದಂತೆ ಹಲವು ರೀತಿಯ ವೈವಿಧ್ಯಮಯ ಪಾತ್ರಮಾಡಿದ್ದ ವಿಷ್ಣು, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಜನ ಸಾಮಾನ್ಯನ ಪಾತ್ರದಿಂದ ಹಿಡೆದು ಪೊಲೀಸ್, ರಾಜಕಾರಣಿ ಪಾತ್ರಗಳನ್ನೂ ಮಾಡಿದ್ದರು. ಅವರಿಗೆ ಬಂದ ಪ್ರಶಸ್ತಿ, ಪುರಸ್ಕಾರಗಳು ಅನೇಕ.
ವಿಷ್ಣುವರ್ಧನ್, ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಸುಮಾರು ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದರು. ಇತ್ತೀಚೆಗೆ, ಅವರು ಅಭಿನಯಿಸಿರುವ ಇನ್ನೂ ಬಿಡುಗಡೆಯಾಗದ ಕನ್ನಡದ ‘ಆಪ್ತ ರಕ್ಷಕ’ ಚಿತ್ರ ಅವರ ಅಭಿನಯದ ಕಡೇ ಚಿತ್ರ.
ಅಭಿಮಾನದಲ್ಲೂ, ಸೇವೆಯಲ್ಲೂ, ‘ಸಿಂಹ’ ಪಾಲು :
ಕನ್ನಡದ ವರನಟ ರಾಜ್‌ಕುಮಾರ್ ನಿಧನದ ನಂತರ, ಚಿತ್ರರಂಗದಲ್ಲಿ ಹಿರಿಯರ ಸ್ಥಾನದಲ್ಲಿ ಕಂಗೊಳಿಸುತ್ತಿದ್ದ ಸಾಹಸ ಸಿಂಹ ಕನ್ನಡ ಚಿತ್ರ ರಸಿಕರ ಅಭಿಮಾನದ ಸವಿಯನ್ನು ಹೆಚ್ಚು ಹೆಚ್ಚು ಪಡೆದರು. ಅಭಿಮಾನಿಗಳ ಪ್ರೀತಿಗೆ ಭಾವುಕರಾಗುತ್ತಿದ್ದ ವಿಷ್ಣು, ಕನ್ನಡಕ್ಕೆ ಸೇವೆ ಮಾಡುವ ಸಂದರ್ಭ ಬಂದಾಗಲೆಲ್ಲಾ ಬೀದಿಗಿಳಿದು ಮುಂಚೂಣಿಯಲ್ಲಿ ನಿಂತು ತಮ್ಮ ಸೇವೆ ನೀಡುತ್ತಿದ್ದರು. ಇತ್ತೀಚೆಗೆ ಕರ್ನಾಟಕದಲ್ಲಿ ಉಂಟಾದ ನೆರೆ ಹಾವಳಿಯಲ್ಲಿ ಸಂತ್ರಸ್ಥರಾದ ಜನರಿಗೆ ಸಹಾಯ ಹಸ್ತ ನೀಡಲು, ತಮ್ಮದೇ ಸ್ನೇಹಿತರ ಸಂಘಟನೆಯಾದ, ‘ಸ್ನೇಹಲೋಕ’ದ ವತಿಯಿಂದ ಅವರ ತಾರಾ ಪತ್ನಿ ಭಾರತಿ ಹಾಗೂ ಸ್ನೇಹಲೋಕದ ಇತರ ಸದಸ್ಯ ಮತ್ತೊಬ್ಬ ಹಿರಿಯ ನಟ ಶಿವರಾಂ ಮುಂತಾದವರ ಜೊತೆ, ಬೀದಿಗಿಳಿದು ಚಂದಾ ವಸೂಲಿ ಮಾಡಿ, ಸರ್ಕಾರಕ್ಕೆ ಅರ್ಪಿಸಿದ್ದರು.
‘ನಿಶ್ಯಬ್ದ’ವಾದ ‘ಸಿಂಹ’:
ಸ್ನೇಹಜೀವಿಯಾಗಿ, ಕಲಾವಿದನಾಗಿ ಕನ್ನಡಿಗರಲ್ಲಿ ಹಾಗೂ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲೇ ತಮ್ಮ ಹೆಗ್ಗುರುತು ಮೂಡಿಸಿದ್ದ ‘ಸಾಹಸಸಿಂಹ’, ‘ನಿಶ್ಯಬ್ದ’ವಾಗಿದೆ.
ಸೌಜನ್ಯ: ಕನ್ನಡಪ್ರಭ