ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಸಂಘಪರಿವಾರದಿಂದಲೇ ಹಿಂದೂ ಜೀವನ ಪದ್ಧತಿಗೆ ಬೆದರಿಕೆ: ಕೋಸೌವೇ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಗುಜರಾತ್‌ನ ನಿವೃತ್ತ ಡಿಜಿಪಿ ಶ್ರೀಕುಮಾರ್

ಬೆಂಗಳೂರು: ಸಂಘಪರಿವಾರದಿಂದಲೇ ಹಿಂದೂ ಜೀವನ ಪದ್ಧತಿಗೆ ಬೆದರಿಕೆ: ಕೋಸೌವೇ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಗುಜರಾತ್‌ನ ನಿವೃತ್ತ ಡಿಜಿಪಿ ಶ್ರೀಕುಮಾರ್

Sun, 13 Dec 2009 03:05:00  Office Staff   S.O. News Service
ಬೆಂಗಳೂರು, ಡಿ. 12: ಹಿಂದೂ ಧರ್ಮದ ರಕ್ಷಣೆ ಮಾಡುತ್ತೇವೆ ಎಂದು ವಾದಿಸುವ ಸಂಘಪರಿವಾರದಿಂದಲೇ ಹಿಂದೂ ಜೀವನ ಪದ್ಧತಿಗೆ ಬೆದರಿಕೆ ಇದೆ  ಎಂದು ಗುಜರಾತ್‌ನ ನಿವೃತ್ತ ಡಿಜಿಪಿ ಡಿ.ಸಿ.ಶ್ರೀಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಐ‌ಎಸ್‌ಐನಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಒಬ್ಬ ನೈಜ ಹಿಂದೂವಾಗಿ ಕೋಮುವಾದಿ ರಾಜಕಾರಣವನ್ನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದರು.

ಮಧ್ಯ ಯೋರೋಪ್ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರಾಜಕೀಯ ಮತ್ತು ಧರ್ಮದ ಪರಸ್ಪರ ಬೆರಕೆ ಭಯಾನಕ ಸ್ಥಿತಿ ತಲುಪಿದೆ ಎಂದರು.

೨೦೦೨ ಗುಜರಾತ್ ಹತ್ಯಾಕಾಂಡದ ಕೆಲವು ಘಟನೆಗಳನ್ನು ಉದಾಹರಿಸಿ ಮಾತನಾಡಿದ ಅವರು, ಗುಜರಾತ್‌ನ ಭಯಾನಕ ಕೋಮುವಾದಿಕರಣ ಪ್ರಜ್ಞಾಪೂರ್ವಕವಾಗಿ ರಾಜಕೀಯ ಪ್ರೇರೇಪಿತವಾಗಿತ್ತು. ಧಾರ್ಮಿಕ ಹಗೆತನ ಜನರ ನರ ನಾಡಿಗಳನ್ನು ಪ್ರವೇಶಿಸಿದೆ. ಒಬ್ಬ ಪೊಲೀಸ್ ಅಧಿಕಾರಿಯಾಗಿ ಸತ್ಯ ಹೇಳಬೇಕಾದರೆ ಅನೇಕ ಕಿರುಕುಳ, ಬೆದರಿಕೆಗಳನ್ನು ಎದುರಿಸಬೇಕಾಗಿ ಬಂತು ಎಂದು ಹತ್ಯಾಕಾಂಡ ಮತ್ತು ನಂತರದ ಘಟನಾವಳಿಗಳನ್ನು ಅವರು ಸ್ಮರಿಸಿಕೊಂಡರು.

ಸಂಘಪರಿವಾರ ಪ್ರತಿಪಾದಿಸುವ ನಿಲುವುಗಳು ಹಿಂದೂ ಧರ್ಮಕ್ಕೆ ವಿರುದ್ಧವಾಗಿವೆ. ಕಮ್ಯುನಿಷ್ಟರು ಮೋದಿಯನ್ನು ಸಮರ್ಥಿಸುವಷ್ಟರ ಮಟ್ಟಿಗೆ ಕೋಮುವಾದ ಆಳವಾಗಿ ಬೇರೂರಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮುಂಬೈ ಮೂಲದ ಮಾನವ ಹಕ್ಕು ಹೋರಾಟಗಾರ, ಬರಹಗಾರ ಮತ್ತು ಏಕತಾ ಕೋಮು ಸೌಹಾರ್ದ ಸಮಿತಿಯ ಡಾ.ರಾಮ್ ಪುನಿಯಾನಿರವರ ‘ಕೋಮುವಾದದ ಒಂದು ಸಚಿತ್ರ ದರ್ಶನ’ ಅನುವಾದಿತ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಶಾಸಕ, ವಕೀಲ ಎ.ಕೆ. ಸುಬ್ಬಯ್ಯ, ಗುಜರಾತ್ ನಂತರ ಕೋಮುವಾದದ ವೈರಸ್ ಕರ್ನಾಟಕವನ್ನು ಪ್ರವೇಶಿಸಿ ಸಮಾಜದ ಸ್ವಾಸ್ಥವನ್ನು ಕೆಡಿಸುತ್ತಿದೆ ಎಂದರು.

ಬಿಜೆಪಿ ಪಕ್ಷದಲ್ಲಿ ಮಾತ್ರ ಕೋಮುವಾದಿಗಳಿದ್ದಾರೆ ಎನ್ನುವ ವಾದ ಸರಿಯಲ್ಲ. ಜಾತ್ಯತೀತ ಪಕ್ಷಗಳಲ್ಲಿ ಅನೇಕ ಕೋಮುವಾದಿ ಮುಖಗಳಿವೆ. ಚುನಾವಣಾ ಪ್ರಚಾರ, ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಹೋಮ-ಹವನ, ಯಜ್ಞ-ಯಾಗಾದಿಗಳನ್ನು ಮಾಡುವುದನ್ನು ಮೊದಲು ಆರಂಭಿಸಿದ್ದು, ಜಾತ್ಯತೀತ ಪಕ್ಷಗಳು. ಇದರಿಂದ ಉತ್ತೇಜನ ಪಡೆದ ಬಿಜೆಪಿ ವಿಧಾನ ಸೌಧದಲ್ಲಿ ಪ್ರಾರಂಭ ಮಾಡಿತು ಎಂದು ಕುಹಕವಾಡಿದರು.

ರಾಜ್ಯಾಂಗದ ಆಶಯಗಳನ್ನು ನುಚ್ಚು ನೂರು ಮಾಡುವಂತಹ ಮೌಢ್ಯಗಳಾದ ಜೋತಿಷ್ಯ-ವಾಸ್ತು ಶಿಲ್ಪದ ಪ್ರಭಾವ ರಾಜಕೀಯ ವಲಯದಲ್ಲಿ ಹೆಚ್ಚಾಗುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆ. ಮೌಢ್ಯದ ಪ್ರತಿಪಾದಕರಿಗೆ ಇಂದು ರಾಜಶ್ರಯ ಸಿಗುತ್ತಿದೆ. ವಿರೋಧಿಸಿದವರನ್ನು ಜೈಲಿಗೆ ಹಾಕಲಾಗುತ್ತಿದೆ. ಮೌಢ್ಯಗಳಿಗೆ ಅನಗತ್ಯ ಪ್ರಚಾರ ನೀಡುವಲ್ಲಿ ಮಾಧ್ಯಮಗಳು ಕಾರಣವಾಗಿವೆ. ಈ ವಾಸ್ತವ ಜನರಿಗೆ ಅರ್ಥವಾಗಬೇಕು ಎಂದು ಸುಬ್ಬಯ್ಯ ಅಭಿಪ್ರಾಯಪಟ್ಟರು.

ಇಂದು ದೇವರು ಸೇರಿದಂತೆ ಎಲ್ಲಾ ಮಠಗಳು, ಸ್ವಾಮೀಜಿಗಳು, ಪೂಜಾರಿಗಳು ಬಿಜೆಪಿಯದ್ದಾಗಿವೆ. ದೇವೇಗೌಡರು ನೆರವೇರಿಸುವ ಯಜ್ಞದಲ್ಲಿ ಬರುವ ಸ್ವಾಮಿ ಅಥವಾ ಪೂಜಾರಿ ದೇವೇಗೌಡರಿಗೆ ಪ್ರಸಾದ ನೀಡುತ್ತ ಬಿಜೆಪಿ ಏಳಿಗೆಯನ್ನು ಬಯಸುತ್ತಾನೆ ಎಂದು ಅವರು ವ್ಯಂಗವಾಡಿದರು.

ಭ್ರಷ್ಟಚಾರ ಮತ್ತು ಅವ್ಯವಹಾರ ಪ್ರಾರಂಭವಾಗುವುದು ಮಠಗಳಿಂದ. ಬಹುತೇಕ ಮಠಗಳು ಭ್ರಷ್ಟಚಾರದ ಕೇಂದ್ರಗಳಾಗಿವೆ. ಬಹುತೇಕ ಮಾಧ್ಯಮ ಕಚೇರಿಗಳು ವಿ‌ಎಚ್‌ಪಿ, ಬಜರಂಗದಳದ ಕಚೇರಿಗಳಾಗಿ ಮಾರ್ಪಟ್ಟಿವೆ ಎಂದು ಸುಬ್ಬಯ್ಯ ನೇರವಾಗಿ ಆರೋಪಿಸಿದರು.

ಜಾತ್ಯತೀತ ಮೌಲ್ಯಗಳಿಗೆ ಜಾತ್ಯತೀತ ಪಕ್ಷಗಳಿಂದಲೇ ಹಿನ್ನಡೆ ಉಂಟಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ತಮ್ಮ ಕ್ಷೇತ್ರಗಳನ್ನು ಸಂಪೂರ್ಣವಾಗಿ ಬಿಜೆಪಿಗೆ ಒಪ್ಪಿಸಿದವರು ಇಂದು ರಾಷ್ಟ್ರ ಮಟ್ಟದಲ್ಲಿ ನಾಯಕರಾಗಿದ್ದಾರೆ ಎಂದು ಹೇಳಿದ ಸುಬ್ಬಯ್ಯ, ರಪ್ಪ ಮೊಯ್ಲಿ, ಆಸ್ಕರ್ ಫೆರ್ನಾಂಡಿಸ್ ಹಾಗೂ ಜನಾರ್ದನ ಪೂಜಾರಿ ಬಗ್ಗೆ ಲೇವಡಿ ಮಾಡಿದರು.

ನಿಜ ಸ್ಥಿತಿಯನ್ನು ಜನರಿಗೆ ಮನವರಿಕೆ ಮಾಡದೇ ಹೊದರೆ ಕರ್ನಾಟಕವನ್ನು ಉಳಿಸಿಕೊಳ್ಳುವುದು ಕಷ್ಟ ಸಾಧ್ಯ. ಆದರೆ ಸಂಘಟಿತ ಪ್ರಯತ್ನಗಳಿಂದ ಅದನ್ನು ಸಾಧಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಧ್ಯಾಹ್ನ ನಡೆದ ಎರಡನೆ ಗೋಷ್ಠಿ ‘ಕೋಮುವಾದ ಚಾರಿತ್ರಿಕ ಬೆಳವಣಿಗೆ ಮತ್ತು ಸಮಕಾಲೀನ ವಿದ್ಯಾಮಾನಗಳು’ ಕುರಿತು ಮಾತನಾಡಿದ ಡಾ. ರಾಮ್ ಪುನಿಯಾನಿ, ಕೋಮುವಾದ ಮತ್ತು ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ. ಧರ್ಮದ ವ್ಯವಸ್ಥಿತ ದುರ್ಬಳಕೆಯಿಂದ ಕೋಮುವಾದ ಹುಟ್ಟಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜಕೀಯ, ಜಾತಿ ಮತ್ತು ಲಿಂಗ ಆಧಾರಿತ ಅಸಮಾನತೆ ಸಮಾಜದಲ್ಲಿ ತಾಂಡವವಾಡುತ್ತಿದೆ. ಸ್ವಾತಂತ್ರ ಪೂರ್ವದಲ್ಲಿ ದೇಶದಲ್ಲಿ ಕೋಮು ಸಾಮರಸ್ಯ ಬಲಿಷ್ಠವಾಗುತ್ತಿದೆ. ನಂತರದ ದಿನಗಳಲ್ಲಿ ತಮ್ಮ ರಾಜಕೀಯ ಲಾಭಗಳಿಗಾಗಿ ಹಿಂದೂ ಮತ್ತು ಮುಸ್ಲಿಂ ಕೋಮುವಾದಿಗಳು ಇದನ್ನು ಅಸ್ಥಿರಗೊಳಿಸಿದರು ಎಂದು ವಿವರಿಸಿದರು.

ಸಮಕಾಲೀನ ಸಂದರ್ಭದಲ್ಲಿ ಸಾಮರಸ್ಯದ ಅನೇಕ ಉದಾಹರಣೆ ಮತ್ತು ಪ್ರಯತ್ನಗಳು ನಡೆಯುತ್ತಿವೆ ಅವುಗಳನ್ನು ಒಗ್ಗೂಡಿಸುವುದು ಮತ್ತು ಬಲಪಡಿಸುವ ಮುಖಾಂತರ ಕೋಮುವಾದಿ ಶಕ್ತಿಗಳ ಷಡ್ಯಂತ್ರಗಳನ್ನು ವಿಫಲಗೊಳಿಸಬೇಕು ಎಂದು ಅವರು ಕರೆ ನೀಡಿದರು.

ವೇದಿಕೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್, ಕೋಮು ಸೌಹಾರ್ದ ವೇದಿಕೆ ಕಾರ್ಯದಶಿರ ಕೆ.ಎಲ್. ಅಶೋಕ್, ಪಿಯುಸಿ‌ಎಲ್ ಕಾರ್ಯಾಧ್ಯಕ್ಷ ಡಾ. ವಿ. ಲಕ್ಷ್ಮಿನಾರಾಯಣ, ಸಾಹಿತಿ ಪ್ರೊ. ಶಿವರಾಮಯ್ಯ, ಡಾ. ವಾಸು ಸೇರಿದಂತೆ ಇತರರು ಉಪಸ್ಥಿತರಿದ್ದರು.

Share: