ಬೆಂಗಳೂರು, ಡಿ.೨: ಮಾಜಿ ಮುಖ್ಯಮಂತ್ರಿಯೊಬ್ಬರ ಅಳಿಯ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ವಿವಿಧ ಹಂತದ ಸರಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಸುಮಾರು ೬.೮೬ ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.
ಬುಧವಾರ ಬೆಳಗ್ಗೆ ಹಾಸನ, ಬೆಳಗಾವಿ, ಚಾಮರಾಜನಗರ, ಗುಲ್ಬರ್ಗ, ಧಾರವಾಡ, ಬೆಂಗಳೂರು, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪ್‌ಕುಮಾರ್‌ದತ್ತಾ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದಾಳಿಯಲ್ಲಿ ಮೂರು ಮಂದಿ ಅಧಿಕಾರಿಗಳು ಒಂದು ಲಕ್ಷ ರೂಪಾಯಿಗಳಿಗೆ ಅಧಿಕ ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ. ಉಳಿದ ನಾಲ್ಕು ಮಂದಿ ೭೦ ಲಕ್ಷ ರೂಪಾಯಿಗೂ ಮೇಲ್ಪಟ್ಟ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಅವರು ತಿಳಿಸಿದರು.
ಬಲೆಗೆ ಬಿದ್ದ ಅಧಿಕಾರಿಗಳು:-
ಹಾಸನದಲ್ಲಿನ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಸಹಾಯಕ ವ್ಯವಸ್ಥಾಪಕ ಬಿ.ಸಿ.ಶಾಂತಕುಮಾರ್ ಸೇವೆಗೆ ಸೇರಿದ ನಂತರ ೨೯ ಲಕ್ಷ ರೂಪಾಯಿ ಆದಾಯವುಳ್ಳವರಾಗಿದ್ದಾರೆ. ಆದರೆ, ದಾಳಿಯ ವೇಳೆ ೯೫,೩೦,೭೨೭ ರೂಪಾಯಿ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ ಎಂದು ಅವರು ಹೇಳಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೂಡಿಯ ಆರ್‌ಟಿಒ ಕಚೇರಿಯಲ್ಲಿ ವಾಹನ ನಿರೀಕ್ಷಕರಾಗಿರುವ ಜಯಾನಂದ ಬಿ.ನರಸಣವರ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ 1,14,08,900 ರೂಪಾಯಿ ಮೌಲ್ಯದ ಆಸ್ತಿಗಳನ್ನು ಪತ್ತೆ ಮಾಡಲಾಗಿದೆ. ಇವರ ಸೇವಾವಧಿಯಲ್ಲಿ ಸುಮಾರು 20 ಲಕ್ಷ ರೂಪಾಯಿ ಆದಾಯ ಹೊಂದಿದ್ದಾರೆ ಎಂದು ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿರುವ ಕೆಎಎಸ್ ಅಧಿಕಾರಿ ನಾಗಪ್ಪನವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದಾಗ ೧,೩೫,೭೬,೨೯೭ ರೂಪಾ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ. ಇವರು ೧೯೮೩ರಲ್ಲಿ ತಹಸೀಲ್ದಾರ್‌ರಾಗುವ ಮೂಲಕ ಸರಕಾರಿ ಸೇವೆಗೆ ಸೇರಿದ್ದರು. ಇತ್ತೀಚೆಗೆ ಮಗನ ಹೆಸರಿನಲ್ಲಿ ೩೫ ಲಕ್ಷ ರೂಪಾಯಿ ಸಾಲ ಪಡೆದಿರುವುದು ಸೇರಿದಂತೆ ಒಟ್ಟು ೮೦,೯೭,೫೦೦ ರೂಪಾಯಿ ಆದಾಯ ಹೊಂದಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣದ ನಿರ್ದೇಶಕರಾಗಿರುವ ಪ್ರತಾಪ್‌ಸಿಂಗ್ ತಿವಾರಿಯವರ ಬಳಿ ೮೪,೧೨,೫೭೯ ರೂಪಾಯಿ ಆಸ್ತಿಗಳನ್ನು ವಶ ಪಡಿಸಿಕೊಳ್ಳಲಾಗಿದೆ.
೧೯೭೮ರಲ್ಲಿ ತರಬೇತುದಾರರಾಗಿ ಸೇವೆಗೆ ಸೇರಿದ ತಿವಾರಿಯವರ ಈವರೆಗಿನ ಆದಾಯ ೪೧ ಲಕ್ಷ ರೂಪಾಯಿಗಳಾಗಿದೆ. ಬೀದರ್ ಕ್ಷೇತ್ರದ ಸಂಸದರು ಮತ್ತು ಮಾಜಿ ಮುಖ್ಯಮಂತ್ರಿಯೊಬ್ಬರ ಅಳಿಯ ಸಂಬಂಧಿಯಾದ ಈ ಅಧಿಕಾರಿ ದೈಹಿಕ ಶಿಕ್ಷಣದ ನಿರ್ದೇಶಕರಾಗಿದ್ದರೂ ವಿಶ್ವವಿದ್ಯಾಲಯದ ಕುಲಸಚಿವರಂತೆ ವರ್ತಿಸುತ್ತಿದ್ದರು ಎಂದು ಹೇಳಲಾಗಿದೆ.
ತಿವಾರಿ ಸೌಹಾರ್ದ ಮಹಿಳಾ ಉದ್ಯೋಗ ಎಂಬ ನೀರು ಶುದ್ಧಿಕರಿಸುವ ಮಿನರಲ್ ವಾಟರ್ ಘಟಕವನ್ನು ನಡೆಸುತ್ತಿದ್ದರು. ಅದರ ಮೌಲ್ಯವೇ ೧೫ ಲಕ್ಷ ರೂಪಾಯಿಗಳಾಗಿದೆ ಎಂದು ಸಂತೋಷ್ ಹೆಗ್ಡೆ ತಿಳಿಸಿದರು.
ಧಾರವಾಡದ ಕೆಐಎಡಿಬಿಯಲ್ಲಿ ಕಿರಿಯ ಇಂಜಿನಿಯರ್ ಆಗಿರುವ ಶಿವಲಿಂಗಯ್ಯ ೧೯೭೭ರಲ್ಲಿ ಸೇವೆಗೆ ಸೇರಿದ್ದು ಈವರೆಗೆ ೧೫ ಲಕ್ಷ ರೂಪಾಯಿಗಳನ್ನು ಮಾತ್ರ ಆದಾಯ ಹೊಂದಿದ್ದಾರೆ. ದಾಳಿಯ ವೇಳೆ ೯೭,೫೯,೮೦೦ ರೂಪಾಯಿ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.
ಬೆಂಗಳೂರಿನ ಹಾಪ್ಸ್‌ಕಾಮ್‌ನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಸಿ.ದೇವರಾಜ್‌ರ ಬಳಿ ೮೭,೫೬,೪೨೬ ಕೋಟಿ ರೂಪಾಯಿ ಆಸ್ತಿಗಳನ್ನು ಹೊಂದಿದ್ದಾರೆ. ೧೯೭೭ರಲ್ಲಿ ಡಿ.ದರ್ಜೆಯ ನೌಕರರಾಗಿ ಸರಕಾರಿ ಸೇವೆಗೆ ಸೇರಿದ್ದ ದೇವರಾಜ್‌ರಿಗೆ ಸೇವಾವಧಿಯ ಆದಾಯ ೨೦ ಲಕ್ಷ ರೂಪಾಯಿಗಳೆಂದು ಲೋಕಾಯುಕ್ತರು ತಿಳಿಸಿದರು.
ಇಂದು ಬಲೆಗೆ ಬಿದ್ದಿರುವ ಅಧಿಕಾರಿಗಳ ಪೈಕಿ ದೇವರಾಜ್‌ರ ಆಸ್ತಿ ಮೌಲ್ಯ ಅತ್ಯಂತ ಗೌಪ್ಯವಾಗಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಸುಮಾರು ೨೦ ಲಕ್ಷ ರೂಪಾಯಿ ಮೌಲ್ಯದ ಆದಿತ್ಯಾ ಡಿಸೈನಿಂಗ್ ಕಾರ್ಖಾನೆಯ ದೇವರಾಜ್‌ರ ಪತ್ನಿಯ ಹೆಸರಿನಲ್ಲಿದೆ. ಕಾರ್ಖಾನೆ ತಮ್ಮದಲ್ಲ ಎಂದು ದೇವರಾಜ್ ವಾದಿಸುತ್ತಿದ್ದಾರೆ. ಇಲ್ಲಿ ಸುಮಾರು ೧೩ ಯಂತ್ರಗಳಿದ್ದು ಪ್ರತಿಯಂತ್ರದ ಬೆಲೆಯೂ ೫೦ ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಕಾರ್ಖಾನೆ ಇವರಿಗೆ ಸೇರಿದೆಂದು ದೃಢಪಟ್ಟದೆ ಕನಿಷ್ಠ ಸುಮಾರು ೭ ಕೋಟಿ ರೂಪಾಯಿ ಆಸ್ತಿಗಳಿಗೆ ದೇವರಾಜ್ ಮಾಲಕರಾಗಿರುತ್ತಾರೆ ಎಂದು ಸಂತೋಷ್ ಹೆಗ್ಡೆ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರದ ಪಂಚಾಯತ್ ರಾಜ್ ವಿಭಾಗದ ಕಾರ್ಯನಿವಾರ್ಹಕ ಇಂಜಿನಿಯರ್ ಆಗಿರುವ ಶ್ರೀಕಾಂತ್ ಆರ್.ಮೈಸೂರರ ಮನೆಯ ಮೇಲೆ ದಾಳಿ ನಡೆಸಿದಾಗ ೧,೦೨,೦೬,೩೪೧ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ. ೧೯೭೮ರಲ್ಲಿ ಕಿರಿಯ ಇಂಜಿನಿಯರ್ ಆಗಿ ಸೇವೆಗೆ ಸೇರಿದ ಶ್ರೀಕಾಂತ್‌ಗ ಈವರೆಗಿನ ಆದಾಯ ೫೧ ಲಕ್ಷ ರೂಪಾಯಿಗಳು ಮಾತ್ರ ಎಂದ ಲೋಕಾಯುಕ್ತರು, ಇದೇ ಅಧಿಕಾರಿ ಈ ಮೊದಲು ರಸ್ತೆ ನಿರ್ಮಾಣದ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಎದುರಿಸಿದ್ದಾರೆ ಎಂದು ಹೇಳಿದರು.
ದಾಳಿ ನಡೆಸಿದ ವೇಳೆ ತಕ್ಷಣಕ್ಕೆ ಸಿಕ್ಕಿರುವ ದಾಖಲೆ ಪತ್ರಗಳ ಮೂಲಕ ಆಸ್ತಿಯ ಮೌಲ್ಯವನ್ನು ಅಂದಾಜಿಸಲಾಗಿದೆ. ಬಹುತೇಕ ಅಧಿಕಾರಿಗಳ ಬ್ಯಾಂಕ್ ಲಾಕರ್‌ಗಳು ಇನ್ನು ತೆರೆಯಲಾಗಿಲ್ಲ, ಬ್ಯಾಂಕ್ ಖಾತೆಗಳ ತಪಾಸಣೆಯ ನಂತರ ಇನ್ನಷ್ಟು ಆಸ್ತಿಗಳು ಪತ್ತೆಯಾಗಬಹುದು ಎಂದು ಅವರು ಹೇಳಿದರು.
ಈ ವರ್ಷದಲ್ಲಿ ಇದು ೫೩ನೆ ದಾಳಿಯಾಗಿದ್ದು, ಕಳೆದ ವರ್ಷ ೯೨ ಬಾರಿ ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು ಎಂದು ಅವರು ಹೇಳಿದರು. ದಾಳಿಯಲ್ಲಿ ಸಿಕ್ಕಿ ಬಿದ್ದು ಆರೋಪದಲ್ಲಿ ಸತ್ಯಾಂಶವಿರುವುದು ಮೇಲ್ನೋಟಕ್ಕೆ ಕಂಡು ಬಂದರೆ ಅಂತಹ ಅಧಿಕಾರಿಗಳನ್ನು ಅಮಾನತುಗೊಳಿಸಲು ಅವಕಾಶವಿದೆ. ಆದರೆ, ವಿಚಾರಣೆ ನಡೆಸಿ ಶಿಕ್ಷಿಸುವ ಅಧಿಕಾರ ಇಲ್ಲ. ಇದರಿಂದ ಸುಮಾರು ೧೪ ವರ್ಷಗಳ ನಂತರದ ಪ್ರಕರಣಕ್ಕೆ ಇತ್ತೀಚೆಗೆ ಶಿಕ್ಷೆಯಾಗಿದೆ. ಸರಕಾರ ಭ್ರಷ್ಟಚಾರ ನಿಯಂತ್ರಣಕ್ಕೆ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವ ಅಗತ್ಯ ಇದೆ ಎಂದು ಪುನರುಚ್ಚರಿಸಿದರು