ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಗೋಹತ್ಯೆ ಹೆಸರಿನಲ್ಲಿ ಬಡವರ ಹೂಟ್ಟೆಯ ಮೇಲೆ - ದಲಿತರು ಅಲ್ಪಸಂಖ್ಯಾತರ ಮೇಲೆ ಮತ್ತೋಂದು ದಾಳಿ- ಜಿ.ಎನ್. ನಾಗರಾಜ್

ಬೆಂಗಳೂರು: ಗೋಹತ್ಯೆ ಹೆಸರಿನಲ್ಲಿ ಬಡವರ ಹೂಟ್ಟೆಯ ಮೇಲೆ - ದಲಿತರು ಅಲ್ಪಸಂಖ್ಯಾತರ ಮೇಲೆ ಮತ್ತೋಂದು ದಾಳಿ- ಜಿ.ಎನ್. ನಾಗರಾಜ್

Thu, 25 Feb 2010 02:47:00  Office Staff   S.O. News Service

ಬೆಂಗಳೂರು, ಫೆಬ್ರವರಿ ೨೫: ಗೋಹತ್ಯೆಯ ನಿಷೇಧದ ಬಗ್ಗೆ ಒಂದು ಹೊಸ ಕಾನೂನು ತರಲು ಬಿಜೆಪಿ ಸರ್ಕಾರ ಹೊರಟಿದೆ. ಈ ಬಗ್ಗೆ ಒಂದು ವರ್ಷದ ಹಿಂದೆಯೇ ಬಿಜೆಪಿ ಸರ್ಕಾರ, ಆರೆಸ್ಸೆಸ್ ಆದೇಶದ ಮೇಲೆ ಈ ತೀರ್ಮಾನ ಮಾಡಿದ್ದರೂ ಬೆಳಗಾಂನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿಯೇ ಕಾನೂನು ತರುವ ಹರಿಬರಿ ಪ್ರಯತ್ನ ಮಾಡಿದ್ದರೂ ಅದನ್ನು ಹಿಂತೆಗೆದುಕೊಳಲಾಗಿತ್ತು.ನಂತರ ಕೋಮುವಾದಿಗಳ ಬಗಲ ಭಂಟನಂತೆ ವರ್ತಿಸುತ್ತಿರುವ ರಾಮಚಂದ್ರಾಪುರದ ಸ್ವಾಮಿಜಿಯನ್ನು ಬಳಸಿ ಆರೆಸ್ಸೆಸ್ ಮತ್ತು ಅದರ ಪರಿವಾರ ರಾಜ್ಯದಾದ್ಯಂತ ಯಾತ್ರೆಯನ್ನು ನಡೆಸಿತು.. ಆದರೆ ಈ ಯಾತ್ರೆ ಕಟ್ಟಾ ಕೋಮುವಾದಿಗಳನ್ನು ಹೊರತುಪಡಿಸಿ ಗೋಹತ್ಯೆ ನಿಷೇಧಕ್ಕೆ ಎಲ್ಲಿಯೂ ಜನ ಸಾಮಾನ್ಯರ ಬೆಂಬಲವಿಲ್ಲವೆಂಬುದನ್ನು ಸಾಬೀತುಪಡಿಸಿತು. ನಂತರ ನಿಷೇಧಕ್ಕೆ ಒತ್ತಾಯಿಸಿ ಪ್ರದರ್ಶನಗಳನ್ನು ನಡೆಸಿದರು. ಅದು ನಡೆದ ಸೀಮಿತ ರೀತಿಯನ್ನು ನೋಡಿದರೆ ಯಾರಿಗಾದರೂ ಈ ನಿಷೇಧಕ್ಕೆ ಜನ ಬೆಂಬಲವಿಲ್ಲವೆಂಬುದನ್ನು ಸಾಬೀತು ಮಾಡುವಂತಿತ್ತು.ಆದರೂ ಬಿಜೆಪಿ ಸರ್ಕಾರ ಆರೆಸ್ಸೆಸ್ನ ಗುಲಾಮನಂತೆ ವರ್ತಿಸುತ್ತಾ ಗೋಹತ್ಯೆ ನಿಷೇಧ ಕಾನೂನನ್ನು ತರಲು ಹೊರಟಿದೆ. ಈ ಹಿಂದೆ ಜನಶಕ್ತಿಯಲ್ಲಿ ವಿವರಿಸಿರುವಂತೆ ಕರ್ನಾಟಕದಲ್ಲಿ ಮೊತ್ತಮೊದಲು ಗೋಹತ್ಯೆಯ ನಿಷೇಧ ಕಾನೂನನ್ನು ಜಾರಿಗೆ ತಂದದ್ದು 1963 ರಲ್ಲಿ ಕಾಂಗ್ರೆಸ್ ಸರ್ಕಾರ. ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ನಿರ್ದೇಶನ ಹಾಗೂ ಒತ್ತಡದಲ್ಲಿ ದೇಶದ ಹಲವು ರಾಜ್ಯಗಳು ಗೋಹತ್ಯೆಗೆ ಸಂಬಂಧಿಸಿದ ನಿರ್ಬಂಧನಗಳನ್ನು ಜಾರಿಗೆ ತಂದಿದ್ದವು. ಈಗ ಬಿಜೆಪಿಯ ಸರದಿ ಅಲ್ಪಸಂಖ್ಯಾತರ ಮೇಲೆ ಧಾಳಿ ಮಾಡಲು ಗೋಹತ್ಯೆಯ ಪ್ರತಿಯನ್ನು ಒಂದು ಕತ್ರಿಯನ್ನಾಗಿ ಇನ್ನೂ ರಾಜ್ಯದ ಹಲವಾರು ಅಲ್ಪಸಂಖ್ಯಾತರು ಯಾವಾಗೆಂದರೆ ಆಗ ಬಂಧಿಸಲು? ಇದನ್ನೊಂದು ಆಯುಧವನ್ನಾಗಿ ಬಳಸಲು ಸಂಘಪರಿವಾರ ಕುತಂತ್ರ ನಡೆಸಿದೆ.

 

 

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡೂ ದೇಶದಲ್ಲಿ ಗೋಹತ್ಯೆಯ ಪ್ರಶ್ನೆಯನ್ನು ತಮ್ಮ ತಮಗೆ ಬೇಕಾದಂತಹ ರೀತಿಯಲ್ಲಿ ಬಳಸಲು ಯತ್ನಿಸುತ್ತಿದ್ದಾರೆ.ಅದೇ ಸಮಯದಲ್ಲಿ ಗೋಹತ್ಯೆಯ ಪ್ರಶ್ನೆ ಕೇವಲ ಅಲ್ಪಸಂಖ್ಯಾತರ ಪ್ರಶ್ನೆಯಲ್ಲ ಅದು ಪ್ರಮುಖವಾಗಿ ದಲಿತರ ಪ್ರಶ್ನೆ ಅನೇಕ ಬುಡಕಟ್ಟು ಹಾಗೂ ಕೆಲವು ಹಿಂದುಳಿದ ಜಾತಿಗಳ ಆಹಾರದ ಪ್ರಶ್ನೆ. ಅಷ್ಟೆ ಅಲ್ಲ ಇದು ರಾಜ್ಯದ ಲಕ್ಷಾಂತರ ರೈತರ ಆರ್ಥಿಕ ಸುಸ್ಥಿತಿಯ ಪ್ರಶ್ನೆ. ನಿರುಪಯೋಗಿಯಾದ ದನಗಳನ್ನು ಮಾರಲು ಸಾಧ್ಯವಿಲ್ಲವೆಂದಾದರೆ ಈಗಾಗಲೇ ಎತ್ತುಗಳನ್ನೂ ಬಳಸುವುದನ್ನು ಕಡಿಮೆ ಮಾಡುತ್ತಿರುವ ರೈತರು ಎತ್ತುಗಳೆಂದರೆ ಭಯಪಡುವಂತಹ ಪರಿಸ್ಥಿತಿಯನ್ನು ಈ ಕಾಯಿದೆ ತರುತ್ತದೆ. ಒಬ್ಬ ರೈತನಿಂದ ಎತ್ತುಗಳನ್ನು ಕೊಂಡ ಮತ್ತೊಬ್ಬ ರೈತನಿಗೂ ಈ ಕಾಯಿದೆ ಹಲವು ತಾಪತ್ರಯಗಳನ್ನು ಒಡ್ಡುತ್ತದೆ. ಇದು ಗೋತಳಿ ಅಭಿವೃದ್ಧಿಗೆ ಸಾಧಕವೋ ಬಾಧಕವೋ ಎಂಬ ಸಾಮಾನ್ಯ ಜ್ಞಾನ ಬಿಜೆಪಿ ಸರ್ಕಾರಕ್ಕಿಲ್ಲ.ಹೊಟ್ಟೆಯ ಮೇಲೆ ಹೊಡೆತ ! ಬೆಲೆ ಏರಿಕೆಯನ್ನು ಮತ್ತಷ್ಟು ಹೆಚ್ಚಿಸುವ ಕ್ರಮ ಗೋಹತ್ಯೆ ನಿಷೇಧವೆಂದರೆ ರಾಜ್ಯದಲ್ಲಿ ಬೆಲೆ ಏರಿಕೆಯನ್ನು ಮತ್ತಷ್ಟು ತೀವ್ರಗೊಳಿಸುವ ಕ್ರಮ. ಆ ಮೂಲಕ ರಾಜ್ಯ ಎಲ್ಲಾ ಜನತೆಯನ್ನು ಬಾಧಿಸುವ ಕ್ರಮ. ಕೇವಲ ದನದ ಮಾಂಸಾಹಾರಿಗಳಿಗೆ ಮಾತ್ರವಲ್ಲ.ಇವತ್ತೂ ಪ್ರತಿದಿನ ರಾಜ್ಯದಲ್ಲಿ ಲಕ್ಷಾಂತರ ಕೆ.ಜಿ. ದನದ ಮಾಂಸ ಉಪಯೋಗವಾಗುತ್ತಿದೆ. ಆಹಾರದ ಕೊರತೆಯಿಂದ, ಪ್ರೋಟಿನುಗಳ ಮೂಲವಾದ ಮಾಂಸಾಹಾರ, ಬೇಳೆ ಕಾಳುಗಳ ಕೊರತೆಯಿಂದ, ಬೆಲೆ ಏರಿಕೆಯಿಂದ ಬಳಲುತ್ತಿರುವ ರಾಜ್ಯದಲ್ಲಿ ನಿಷೇಧ ಕಾನೂನು ಜಾರಿಗೆ ಬಂದರೆ, ಈ ಲಕ್ಷಾಂತರ ಕೆ.ಜಿ. ಆಹಾರ ದಿಢೀರನೆ ಅಲಭ್ಯವಾಗುತ್ತದೆ. ಆಗ ಆಹಾರದ, ಪ್ರೋಟಿನಿನ ಕೊರತೆ ತೀವ್ರವಾಗುತ್ತದೆ. ದನದ ಮಾಂಸವನ್ನು ಸೇವಿಸುವವರು ಮೀನು, ಕೋಳಿ, ಕುರಿ, ಆಡು ಮೊದಲಾದ ಮಾಂಸಾಹಾರದ ಕಡೆಗೆ ಹೋಗುತ್ತಾರೆ. ಈಗಾಗಲೇ ಬಹಳ ತುಟ್ಟಿಯಾದ ಈ ಎಲ್ಲಾ ಮಾಂಸಾಹಾರ ಮತ್ತಷ್ಟು ತುಟ್ಟಿಯಾಗುತ್ತದೆ. ಸಾಮಾನ್ಯ ಜನರಿಗೆ, ಬಡಜನರಿಗೆ ಮಾಂಸಾಹಾರ ಕನಸು ಎನ್ನುವಂತಾಗುತ್ತದೆ. ಅವರು ಅನಿವಾರ್ಯವಾಗಿ ಪ್ರೋಟಿನಿನ ಕೊರತೆಯಿಂದ ಬಳಲುತ್ತಾರೆ ಅಥವಾ ಬೇಳೆ ಕಾಳುಗಳನ್ನು ಬಳಸಬೇಕಾಗುತ್ತದೆ. ಅವುಗಳ ಬೆಲೆಯೂ ಇನ್ನಷ್ಟು ಏರಿ ಸಸ್ಯಹಾರಿಗಳೆಲ್ಲರಿಗೂ ದೊಡ್ಡ ಕಷ್ಟವನ್ನು ತಂದೊಡ್ಡುತ್ತದೆ.ಹೀಗೆ ಗೋ ನಿಷೇಧ ಕಾಯಿದೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಬೇಧವಿಲ್ಲದೆ ಎಲ್ಲ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕಾಯಿದೆಯಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಕೇವಲ ಅಲ್ಪಸಂಖ್ಯಾತರಲ್ಲದೆ ಎಲ್ಲ ಜನತೆಯೂ ಈ ಕಾಯಿದೆಯನ್ನು ದೃಢವಾಗಿ ವಿರೋಧಿಸಬೇಕಾಗಿದೆ

 

 

ಸೌಜನ್ಯ:ಸಂಜೆವಾಣಿ

 

 


Share: