ಮಂಗಳೂರು, ಅ.29: ದ.ಕ. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ರಾಜ್ಯದಲ್ಲೇ ಪ್ರಥಮವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ(ಎಚ್‌ಆರ್‌ಡಿ)ವನ್ನಾಗಿ ಪರಿವರ್ತಿಸ ಲಾಗಿದ್ದು, ಮುಂದೆ ಬಿಜಾಪುರ, ಗುಲ್ಬರ್ಗಾದ ಕೇಂದ್ರಗಳನ್ನು ಎಚ್‌ಆರ್‌ಡಿ ಕೇಂದ್ರಗಳಾಗಿ ಪರಿವರ್ತಿಸಲಾಗುವುದು.
ಮುಂದಿನ ಮಾರ್ಚ್ ನೊಳಗೆ ರಾಜ್ಯದ ಒಟ್ಟು ೧೨ ಉದ್ಯೋಗ ವಿನಿಮಯ ಕೇಂದ್ರಗಳನ್ನು ಎಚ್‌ಆರ್‌ಡಿ ಕೇಂದ್ರಗಳಾಗಿ ಪರಿವರ್ತಿಸುವ ಗುರಿಯನ್ನು ಸರಕಾರ ಹೊಂದಿದೆ ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಹೇಳಿದ್ದಾರೆ. ಬುಧವಾರ ನಗರದ ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಮಾನವ ಸಂಪನ್ಮೂಲ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದ ಯುವಕರಿಗೆ ಹೆಚ್ಚಿನ ಉದ್ಯೋಗವಕಾಶವನ್ನು ಕಲ್ಪಿಸಲು ಮತ್ತು ದೇಶದ ಆರ್ಥಿಕ ಪ್ರಗತಿಗೆ ಸಹಕಾರಿಯಾಗುವಂತೆ ಮಾನವಶಕ್ತಿಯನ್ನು ಬಳಸುವ ಉದ್ದೇಶದಿಂದ ಮಾನವ ಸಂಪನ್ಮೂಲ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದವರು ಹೇಳಿದರು. ರಾಜ್ಯಾದ್ಯಂತ ಇತ್ತೀಚೆಗೆ ನಡೆದ ಉದ್ಯೋಗ ಮೇಳದಲ್ಲಿ ಒಟ್ಟು ೧,೭೫,೦೦೦ ಅಭ್ಯರ್ಥಿಗಳು ಭಾಗವಹಿಸಿದ್ದು, ಅವರಲ್ಲಿ ೭೨,೦೦೦ ಅಭ್ಯರ್ಥಿಗಳಿಗೆ ಈಗಾಗಲೆ ವಿವಿಧ ಕಂಪೆನಿಗಳ ಉದ್ಯೋಗ ಪತ್ರಗಳನ್ನು ನೀಡಲಾಗಿದೆ. ಇನ್ನುಳಿದವರಲ್ಲಿ ೭೫,೦೦೦ ಅಭ್ಯರ್ಥಿಗಳಿಗೆ ವಿವಿಧ ಕಡೆಗಳಲ್ಲಿ ಉದ್ಯೋಗ ಸಂಬಂಧಿ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಸಚಿವ ಬಿ.ಎನ್. ಬಚ್ಚೇಗೌಡ ವಿವರಿಸಿದರು.
ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸೇರಿದ ರಾಜ್ಯದ ೫೦೦ ಹಾಸ್ಟೆಲ್‌ಗಳಲ್ಲಿ ೧೦೦ ಹಾಸ್ಟೆಲ್‌ಗಳನ್ನು ಪ್ರಥಮವಾಗಿ ಆಯ್ಕೆ ಮಾಡಿ ಪ್ರತಿದಿನ ಒಂದು ಗಂಟೆಯಂತೆ ಉದ್ಯೋಗಾಧಾರಿತ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗಿದೆ. ಐದು ವರ್ಷಕ್ಕೆ ೧೦ ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆಯಂತೆ ಈಗಾಗಲೆ ಎರಡು ಲಕ್ಷ ಉದ್ಯೋಗಗಳನ್ನು ನೀಡಲಾಗಿದೆ. ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದ್ದು, ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡಲು ಹಣಕಾಸಿನ ಕೊರತೆ ಇಲ್ಲ ಎಂದು ಸಚಿವ ಬಚ್ಚೇಗೌಡ
ಸ್ಪಷ್ಟಪಡಿಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಯುವ ಜನಾಂಗ ಸರಕಾರಿ ಕೆಲಸವನ್ನೇ ಕಾಯದೆ ತಮ್ಮ ಪ್ರತಿಭೆಯನ್ನು
ಕೌಶಲ ತರಬೇತಿಗಳಿಂದ ಉತ್ತಮಗೊಳಿಸಿ ಬದುಕು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಎಚ್‌ಆರ್‌ಡಿ ಕೇಂದ್ರದಡಿ ಪ್ರಸ್ತುತ ೭೮೨ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದು, ಅವರಲ್ಲಿ ೭೬೦ ಅಭ್ಯರ್ಥಿಗಳನ್ನು ಕೌಶಲ ಮೌಲ್ಯಮಾಪನಕ್ಕೊಳಪಡಿಸಲಾಗಿದೆ. ೩೦ ಕಂಪೆನಿಗಳು ಉದ್ಯೋಗ ನೀಡಲು ಮುಂದೆ ಬಂದಿದ್ದು, ೨೧ ಜನರಿಗೆ ಕೌಶಲ ಮೌಲ್ಯಮಾಪನ ಮತ್ತು ಉದ್ಯೋಗ ನೇಮಕಾತಿ ಪತ್ರವನ್ನು ಕೇಂದ್ರದಿಂದ ಸದ್ಯ ನೀಡಲಾಗುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ೧೨ ಮಂದಿಗೆ ಸಾಂಕೇತಿವಾಗಿ ಈ ನೇಮಕಾತಿ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಯು.ಟಿ.ಖಾದರ್ ಎಚ್‌ಆರ್‌ಡಿ ಕೇಂದ್ರವನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವಂತೆ
ಸಚಿವರನ್ನು ಆಗ್ರಹಿಸಿದರು. ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಟೀಮ್‌ಲೀಸ್ ಸಂಸ್ಥೆಯ ವ್ಯವಸ್ಥಾಪಕ ಅಶೋಕ್ ರೆಡ್ಡಿ ಮಾತನಾಡಿದರು. ಮೇಯರ್ ಶಂಕರ್ ಭಟ್, ಆಯುಕ್ತ ವಿಜಯ ಪ್ರಕಾಶ್ ಉಪಸ್ಥಿತರಿದ್ದರು. ಕೆವಿಟಿಎಸ್‌ಡಿಸಿಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ವಿಷ್ಣುಕಾಂತ್ ಎಸ್. ಚಟಪಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯೋಗಾಧಿಕಾರಿ ಎಚ್.ಟಿ. ಬಸವರಾಜ್ ವಂದಿಸಿದರು.