ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಬಿಬಿ‌ಎಂಪಿ ಚುನಾವಣೆ ಘೋಷಣೆ: ಮಾ. 28 ರಂದು ಮತದಾನ

ಬೆಂಗಳೂರು:ಬಿಬಿ‌ಎಂಪಿ ಚುನಾವಣೆ ಘೋಷಣೆ: ಮಾ. 28 ರಂದು ಮತದಾನ

Sat, 06 Mar 2010 16:09:00  Office Staff   S.O. News Service

ಬೆಂಗಳೂರು, ಮಾ. ೬ (ಕರ್ನಾಟಕ ವಾರ್ತೆ)- ರಾಜ್ಯ ಚುನಾವಣಾ ಆಯೋಗವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೧೯೮ ವಾರ್ಡುಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ ೨೮ರಂದು ಮತದಾನ ನಡೆಯಲಿದೆ.

ಚುನಾವಣೆಯ ವೇಳಾಪಟ್ಟಿ ಹೀಗಿದೆ:

೧. ಬಿಬಿ‌ಎಂಪಿ ಆಯುಕ್ತರು ಚುನಾವಣಾ ಅಧಿಸೂಚನೆ ಹೊರಡಿಸುವ ದಿನ: ೮-೩-೨೦೧೦

೨. ನಾಮಪತ್ರ ಸಲ್ಲಿಸಲು ಕೊನೆಯ ದಿನ: ೧೫-೩-೨೦೧೦

೩. ನಾಮಪತ್ರ ಪರಿಶೀಲನೆ: ೧೭-೩-೨೦೧೦

೪. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ: ೧೯-೩-೨೦೧೦

೫. ಮತದಾನ: ೨೮-೩-೨೦೧೦

೬. ಮರುಮತದಾನ (ಅಗತ್ಯವಿದ್ದರೆ): ೪-೪-೨೦೧೦

೭. ಮತಗಳ ಎಣಿಕೆ: ೫-೪-೨೦೧೦

೮. ಚುನಾವಣೆ ಪ್ರಕ್ರಿಯೆ ಮುಕ್ತಾಯ: ೬-೪-೨೦೧೦

ಚುನಾವಣಾ ನೀತಿ ಸಂಹಿತೆಯು ಮಾರ್ಚ್ ೭ರಿಂದಲೇ ಜಾರಿಗೆ ಬರಲಿದ್ದು, ಏಪ್ರಿಲ್ ೬ರ ವರೆಗೆ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯುಕ್ತ ಶ್ರೀ ಸಿ.ಆರ್. ಚಿಕ್ಕಮಠ ಹೇಳಿದರು.

ಬಿಬಿ‌ಎಂಪಿ ವ್ಯಾಪ್ತಿಯಲ್ಲಿ ೧೯೮ ವಾರ್ಡುಗಳಲ್ಲಿ ೬೫೯೦ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಒಟ್ಟು ಮತದಾರು ೬೬,೧೭,೩೭೯ರಷ್ಟಿದ್ದು, ಅವರಲ್ಲಿ ೩೪,೮೦,೨೬೮ ಪುರುಷರು ಹಾಗೂ ೩೧,೩೭೧೧೧ ಮಹಿಳಾ ಮತದಾರರು.

ಸೂಕ್ಷ್ಮ, ಅತಿಸೂಕ್ಷ್ಮ, ವಲ್ನರಬಲ್, ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿರುವ ಮತಗಟ್ಟೆಗಳಲ್ಲಿ ಮತದಾನ ದಿನದಂದು ಘಟನೆಗಳನ್ನು ಚಿತ್ರೀಕರಣ ಮಾಡಲು ಆಯೋಗ ಸೂಚಿಸಿದೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರವನ್ನು ಬಿಬಿ‌ಎಂಪಿ ಚುನಾವಣೆಯಲ್ಲಿ ಬಳಸಲಾಗುತ್ತಿದೆ. ಮತಯಂತ್ರದ ಸೂಚನಾ ಕೈಪಿಡಿಯನ್ನೂ ಕನ್ನಡದಲ್ಲಿ ಮುದ್ರಿಸಲಾಗಿದೆ.

ಪ್ರಥಮ ಬಾರಿಗೆ ವಿದ್ಯುನ್ಮಾನ ಮತ ಯಂತ್ರದಲ್ಲಿ ಅಂಧ ಮತದಾರರಿಗೆ ಅನುಕೂಲವಾಗುವಂತೆ ಅವರು ಅಭ್ಯರ್ಥಿಗಳನ್ನು ಸುಲಭವಾಗಿ ಗುರುತಿಸಲು ಬ್ರೈಲ್ ಸಂಖ್ಯೆಯನ್ನು ಅಳವಡಿಸಲಾಗಿದೆ.

 

ಮತದಾರರ ಪಟ್ಟಿ:

ಬಿಬಿ‌ಎಂಪಿ ವ್ಯಾಪ್ತಿಯಲ್ಲಿನ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಮತ್ತು ತಮ್ಮ ಮತಗಟ್ಟೆಗಳ ವಿಳಾಸ ಮತ್ತು ಮತಗಟ್ಟೆಗಳ ಸಂಖ್ಯೆ ಮತ್ತು ಮತದಾರರ ಪಟ್ಟಿಯಲ್ಲಿನ ಕ್ರಮ ಸಂಖ್ಯೆಯನ್ನು ತಿಳಿದುಕೊಳ್ಳಲು ಅನುಕೂಲವಾಗುವಂತೆ www.bbmpelections.info ವೆಬ್‌ಸೈಟಿನಲ್ಲಿ ಮಾಹಿತಿಯನ್ನು ಪ್ರಕಟಿಸಲಾಗಿದೆ.

 

ಸಿಬ್ಬಂದಿ ನೇಮಕಾತಿ:

ಬಿಬಿ‌ಎಂಪಿ ಚುನಾವಣೆಗಾಗಿ ಆಯೋಗವು ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು, ಮತದಾರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರ ನೋಂದಣಾಧಿಕಾರಿಗಳು, ರಿಟರ್ನಿಂಗ್ ಅಧಿಕಾರಿಗಳು ಮತ್ತು ಸಹಾಯಕ ರಿಟರ್ನಿಂಗ್ ಅಧಿಕಾರಿಗಳು, ಪ್ರಿಸೈಡಿಂಗ್ ಅಧಿಕಾರಿಗಳು ಮತ್ತು ಪೋಲಿಂಗ್ ಅಧಿಕಾರಿಗಳು, ಚುನಾವಣಾ ವೀಕ್ಷಕರು, ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ.

 

ಬೆಂಗಳೂರು ನಗರ ಜಿಲ್ಲಾಧಿಕಾರಿಗಳನ್ನು ಮತ್ತು ಬಿಬಿ‌ಎಂಪಿಯ ಮೂವರು ಹೆಚ್ಚುವರಿ ಆಯುಕ್ತರನ್ನು ಜಿಲ್ಲಾ ಚುನಾವಣಾಧಿಕಾರಿಗಳನ್ನಾಗಿ ಹಾಗೂ ಬಿಬಿ‌ಎಂಪಿಯ ಎಂಟು ಜಂಟಿ ಆಯುಕ್ತರುಗಳನ್ನು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

 

ಮತದಾರರ ಪಟ್ಟಿಯನ್ನು ನಿಯಮಬದ್ಧವಾಗಿ ಮತ್ತು ದೋಷರಹಿತವಾಗಿ ತಯಾರಿಸುವ ಸಲುವಾಗಿ ಕಂದಾಯ ಅಧಿಕಾರಿಗಳನ್ನು ಮತದಾರರ ನೋಂದಣಾಧಿಕಾರಿಗಳಾಗಿ, ಸಹಾಯಕ ಕಂದಾಯ

 ಅಧಿಕಾರಿಗಳನ್ನು ವಿಭಾಗವಾರು ಉಪನೋಂದಣಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.

 

ಕಂಟ್ರೋಲ್ ರೂಂ: ಮಾರ್ಚ್ ೭ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದ್ದು, ನೀತಿ ಸಂಹಿತೆ ಉಲ್ಲಂಘನೆ ಕುರಿತ ದೂರುಗಳನ್ನು ಎಲ್ಲಾ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ದಾಖಲಿಸಬಹುದು. ಅಬಕಾರಿ ಇಲಾಖೆಯ ಅಧಿಕಾರಿಗಳಿಗೂ ಸೂಕ್ತ ಸೂಚನೆಗಳನ್ನು ನೀಡಲಾಗಿದ್ದು, ಅಬಕಾರಿ ಇಲಾಖೆಯು ನಿಯಂತ್ರಣ ಕೊಠಡಿ ಪ್ರಾರಂಭಿಸಲಿದೆ ಎಂದು ಶ್ರೀ ಸಿ.ಆರ್. ಚಿಕ್ಕಮಠ ಅವರು ತಿಳಿಸಿದರು.

 

ಚುನಾವಣೆ ನಡೆಸಲು ಆಯೋಗ ಎಲ್ಲ ರೀತಿಯ ಪೂರ್ವ ಸಿದ್ಧತಾ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಶಾಂತಿಯುತವಾಗಿ ಚುನಾವಣೆ ನಡೆಸಲು ಜನತೆ ಸಹಕರಿಸುವಂತೆ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.

 

ಕರ್ನಾಟಕ ಸರ್ಕಾರ

ವಾರ್ತಾ ಇಲಾಖೆ

ನಂ.೧೭, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ ಬೆಂಗಳೂರು ೫೬೦ ೦೦೧. ದೂ. ೦೮೦-೨೨೦೨೮೦೩೨/೩೪/ಫ್ಯಾಕ್ಸ್ ೨೨೦೨೮೦೪೧

 

ದಿನಾಂಕ: ೬-೩-೨೦೧೦

ಪತ್ರಿಕಾ ಪ್ರಕಟಣೆ

 

 


Share: