ಬೆಂಗಳೂರು, ಸೆ.26: ರಾಜ್ಯ ಸರಕಾರದ ವೈಫಲ್ಯಗಳನ್ನು ವಿರೋಧಿಸಿ ಶಕ್ತಿ ಕೇಂದ್ರವಾದ ವಿಧಾನಸೌಧಕ್ಕೆ ದಿಗ್ಬಂದನ ವಿಧಿಸಲು ಮುಂದಾಗಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಘರ್ಷಣೆ ಸೇರಿದಂತೆ ಹಲವು ನಾಟಕೀಯ ಪ್ರಸಂಗಗಳು ನಡೆದಿವೆ.ಪರಿಸ್ಥಿತಿಯೊಂದರಲ್ಲಿ ಪೊಲೀಸರು ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಹಾರ ನಡೆಸಿದ್ದಾರೆ ಹಾಗೂ ಕೆಲವು ಶಾಸಕರನ್ನೂ ಥಳಿಸಲಾಗಿದೆ.
ಬಿಜೆಪಿ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಇಂದು ವಿಧಾನಸೌಧಕ್ಕೆ ದಿಗ್ಬಂಧನ ವಿಧಿಸಲು ಮುಂದಾಗಿತ್ತು. ಶಾಸಕರು ಮಾತ್ರ ಶಾಂತಿಯುತವಾಗಿ ದಿಗ್ಬಂಧನ ವಿಧಿಸಿ, ವಿಧಾನಸೌಧದೊಳಗೆ ಅಧಿಕಾರಿಗಳು ಮತ್ತು ಸಚಿವರು ಪ್ರವೇಶಿಸದಂತೆ ನೋಡಿಕೊಳ್ಳುವುದಾಗಿ ಕಾಂಗ್ರೆಸ್ ಹೇಳಿತ್ತು.
ಇದಕ್ಕೆ ಪೂರ್ವ ಭಾವಿಯಾಗಿ ಬೆಳಗ್ಗೆ 9 ಗಂಟೆಗೆ ವಿಧಾನಸೌಧದ ಪ್ರತಿಪಕ್ಷದ ನಾಯಕರ ಕಚೇರಿಯಲ್ಲಿ ಸಿದ್ದರಾಮಯ್ಯ ಶಾಸಕಾಂಗ ಸಭೆ ಕರೆದಿದ್ದರು. ಸಭೆಯ ನಂತರ ದಿಗ್ಭಂದನ ನಡೆಸುವುದಾಗಿ ಕಾಂಗ್ರೆಸ್ ನಾಯಕರು ತಿಳಿಸಿದ್ದರು. ಸಭೆಗೆಂದು ಬಂದ ಶಾಸಕರಿಗೆ ವಿಧಾನಸೌಧದ ಒಳಗೆ ಪ್ರವೇಶ ನಿರಾಕರಿಸಲಾಯಿತು. ಆರಂಭದಲ್ಲಿ ಒಬ್ಬರಾಗಿ ಬಂದ ವಿಧಾನ ಪರಿಷತ್ ಸದಸ್ಯರಾದ ವೆಂಕಟೇಶ್, ಮೋಟಮ್ಮ, ಬಿ.ಸಿ.ಪಾಟೀಲ್ ಮತ್ತಿತರರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಜನಪ್ರತಿನಿಧಿಗಳ ಯಾವುದೇ ಒತ್ತಡಕ್ಕೂ ಜಗ್ಗದ ಪೊಲೀಸರು ವಿಧಾನಸೌಧದ ಒಳಗೆ ಬಿಡಲು ನಿರಾಕರಿಸಿದರು. ಕಾರ್ಯತಂತ್ರ ರೂಪಿಸಿದ ಕಾಂಗ್ರೆಸ್ ನಾಯಕರು ವಿಧಾನಸೌಧದ ನಾಲ್ಕು ದಿಕ್ಕುಗಳಿಂದಲೂ ಪ್ರತ್ಯೇಕ ತಂಡಗಳಾಗಿ ಮುತ್ತಿಗೆ ಹಾಕಲು ಮುಂದಾದರೂ, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಂಡ ಕಂಡೆಡೆಯಲ್ಲೆಲ್ಲಾ ಕಾಂಗ್ರೆಸ್ ಶಾಸಕರನ್ನು ಬಂಧಿಸತೊಡಗಿದರು.
ಕಾಂಗ್ರೆಸ್ ಕಚೇರಿಯ ಸಮೀಪ ಸುಮಾರು ಒಂದು ಸಾವಿರ ಮಂದಿ ಪೊಲೀಸರನ್ನು ಕಾವಲಿಗಿರಿಸಿ ಎಲ್ಲ ಮುಖಂಡರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಪೊಲೀಸರನ್ನು ತಳ್ಳಿಕೊಂಡು ವಿಧಾನಸೌಧ ಸಮೀಪದ ಚಾಲುಕ್ಯ ವೃತ್ತದ ಬಳಿ ಬಂದರು. ಅದೇ ಸ್ಥಳಕ್ಕೆ ಕೆಪಿಸಿಸಿ ಕಾಯಾಧ್ಯಕ್ಷ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಮತ್ತಿತರ ಶಾಸಕರು ಆಗಮಿಸಿದರು, ಎಲ್ಲರನ್ನು ಬಂಧಿಸಲಾಯಿತು. ಪೊಲೀಸರ ವರ್ತನೆಯನ್ನು ವಿರೋಧಿಸಿ ಧರಣಿ ನಡೆಸಿದ ಮುಖಂಡರನ್ನು ಬಲವಂತವಾಗಿ ಬಿಎಂಟಿಸಿ ಬಸ್ಗೆ ತುಂಬಿಕೊಂಡು ಕರೆದೊಯ್ಯಲಾಯಿತು.
ಪೊಲೀಸರಿಂದಲೇ ದಿಗ್ಭಂದನ: ಮುನ್ನೆಚ್ಚರಿಕೆಯಾಗಿ ಸುಮಾರು ೩ ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಿ, ವಿಧಾನಸೌಧದ ಸುತ್ತಲೂ ಅಭೇದ್ಯ ಕೋಟೆಯನ್ನು ನಿರ್ಮಿಸಿಲಾಗಿತ್ತು. ಬ್ಯಾರಿಕೆಡ್ಗಳ ಮುಲಕ ಪ್ರವೇಶ ದ್ವಾರವನ್ನು ಮುಚ್ಚಲಾಗಿತ್ತು. ಕಾಂಗ್ರೆಸ್ ಮುಖಂಡರು ಆಗಮಿಸಿದಾಗ ಪೊಲೀಸರು ಮಾನವ ಕೋಟೆ ನಿರ್ಮಿಸಿ ತಡೆಗಟ್ಟಿದ್ದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ನುಗ್ಗಲೇತ್ತಿಸಿದಾಗ ಲಾಠಿಪ್ರಹಾರ ನಡೆಸಿ ಥಳಿಸಲಾಯಿತು. ಯುವ ಕಾಂಗ್ರೆಸ್ ನಾಯಕರೊಬ್ಬರಿಗೆ ಸುಮಾರು ೨೦ ಮಂದಿ ಪೊಲೀಸರು ಏಕಕಾಲಕ್ಕೆ ಲಾಠಿಗಳಿಂದ ಥಳಿಸಿ ಬಸ್ ಒಳಗೆ ನೂಕಿದರು.
ಸಚಿವಾಲಯ ಸಿಬ್ಬಂದಿಗಳು, ಹಿರಿಯ ಅಧಿಕಾರಿಗಳು ಮತ್ತು ಸಚಿವರನ್ನು ಹೊರತು ಪಡಿಸಿ ಬೇರೆ ಯಾರಿಗೂ ವಿಧಾನಸೌದದೊಳಗೆ ಪ್ರವೇಶಿಸಲು ಅವಕಾಶ ನೀಡದಂತೆ ಪೊಲೀಸರಿಗೆ ಕಟ್ಟಾಜ್ಞೆ ನೀಡಲಾಗಿತ್ತು. ಸಾರ್ವಜನಿಕರನ್ನು ಸುತ್ತಳತೆಯಲ್ಲಿ ನಿಲ್ಲಲು ಪೊಲೀಸರು ಅವಕಾಶ ನೀಡುತ್ತಿರಲಿಲ್ಲ. ಮಾಧ್ಯಮದವರ ಪ್ರವೇಶಕ್ಕೂ ಅವಕಾಶ ನೀಡದೆ ಪ್ರವೇಶದ್ವಾರಗಳ ಹೊರಗುಳಿಸಲಾಗಿತ್ತು.
ಸಚಿವಾಲಯ ಸಿಬ್ಬಂದಿಗಳು ಪೊಲೀಸರ ಕಿರಿಕಿರಿ ಅನುಭವಿಸಿಯೇ ವಿಧಾನಸೌಧ ಪ್ರವೇಶಿಸಿದರು.
ಕಾಂಗ್ರೆಸ್ ನಾಯಕರನ್ನು ನಾಯಿಶೆಡ್ಗೆ ತಳ್ಳಿದ ಸರಕಾರ
ಬೆಂಗಳೂರು: ವಿಧಾನಸೌಧ ಮುತ್ತಿಗೆಗೂ ಮೊದಲೆ ಬಂಧಿಸಲಾದ ಸುಮಾರು ೫೦೦ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ನಾಯಕರನ್ನು ಆಡುಗೋಡಿಯ ಸಿಎಆರ್ ಪರೇಡ್ ಮೈದಾನ ದಲ್ಲಿರುವ ನಾಯಿಶೆಡ್ನಲ್ಲಿ ಕೂಡಿ ಹಾಕಿ ಮುಜುಗರಕ್ಕೀಡು ಮಾಡಲಾಯಿತು.
ಪೊಲೀಸ್ ಇಲಾಖೆಯ ಕಾರ್ಶೆಡ್, ತ್ಯಾಜ್ಯವನ್ನು ತುಂಬುವ ದಾಸ್ತಾನು ಮಳಿಗೆ ಮತ್ತು ಇವೆರಡಕ್ಕೂ ಹೊಂದಿಕೊಂಡತ್ತಿರುವ ನಾಯಿಶೆಡ್ನಲ್ಲಿ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ವಿ.ಎಸ್.ಉಗ್ರಪ್ಪ. ಮುಖಂಡರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಸಂಸದ ಧೃವನಾರಾಯಣ್, ಶಾಸಕರಾದ ರಮಾನಾಥ್ ರೈ, ಅಭಯ್ಚಂದ್ರಜೈನ್, ಬಿ.ಸಿ.ಪಾಟೀಲ್, ನೆಲನರೇಂದ್ರಬಾಬು ಸೇರಿದಂತೆ ಹಲವರನ್ನು ಕೂಡಿ ಹಾಕಲಾಗಿತ್ತು.
ಬೆಳಗ್ಗೆ ಬಂಧನ ಕಾರ್ಯಾಚರಣೆ ಆರಂಭಗೊಳ್ಳುತ್ತಿದ್ದಂತೆ ತರಾತುರಿಯಲ್ಲಿ ನಾಯಿ ಶೆಡ್ನ್ನು ಸ್ವಚ್ಚಗೊಳಿಸಿ ಅದರಲ್ಲಿ ಕೂಡಿ ಹಾಕಲಾಗಿದೆ. ಆರಂಭದ ಎರಡು ಗಂಟೆ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಸರಿಯಾದ ಊಟದ ವ್ಯವಸ್ಥೆ ಇರಲಿಲ್ಲ. ತರಾತುರಿಯಲ್ಲಿ ಸ್ವಚ್ಚಗೋಳಿಸಿದ್ದರಿಂದ ವಾಸನೆ ಹಾಗೇಯೇ ಉಳಿದಿತ್ತು ಎಂದು ಕಾಂಗ್ರೆಸ್ ಮುಖಂಡರು ಹೇಳಿದಾರೆ.
ಭದ್ರತೆಗಾಗಿ ದಿಗ್ಬಂಧನ: ಸಿಎಂ
ಬೆಂಗಳೂರು: ಕಾಂಗ್ರೆಸ್ ಶಾಸಕರೂ ಕೂಡ ನಮ್ಮ ಸ್ನೇಹಿತರೆ, ಅವರನ್ನು ಬಂಧಿಸುವುದು ಸರಕಾರದ ಉದ್ದೇಶವಲ್ಲ. ಭದ್ರತಾ ದೃಷ್ಟಿಯಿಂದ ವಿಧಾನಸೌಧಕ್ಕೆ ನಿರ್ಬಂಧ ವಿಧಿಸ ಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟೀಕರಣ ನೀಡಿದ್ದಾರೆ.
ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕಾಂಗ್ರೆಸ್ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪ್ರತಿಭಟನೆಗೆ ಸರಕಾರ ಯಾವುದೇ ರೀತಿಯಲ್ಲಿಯೂ ಅಡ್ಡಿಪಡಿಸಿಲ್ಲ.
ಸ್ವಾತಂತ್ರ ಭಾರತದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಅಧಿಕಾರವಿದೆ. ಆದರೆ ಪ್ರತಿಭಟನೆಯ ನೆಪದಲ್ಲಿ ಅನ್ಯ ಶಕ್ತಿಗಳು ವಿಧಾನಸೌಧಕ್ಕೆ ಪ್ರವೇಶಿಸುವುದು ಸರಿಯಲ್ಲ ಎಂದು ಸಮರ್ಥಿಸಿಕೊಂಡರು.
ಬಂಧನ ತಪ್ಪಲ್ಲ: ಅಹಿತಕರ ಘಟನೆಗಳನ್ನು ತಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಸೇರಿದಂತೆ ಕಾರ್ಯಕರ್ತರ ಬಂಧನದಲ್ಲಿ ಯಾವುದೇ ರೀತಿಯ ತಪ್ಪಿಲ್ಲ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.
ಶನಿವಾರ ವಿಧಾನಸೌಧದ ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಯನ್ನು ನಿರ್ಬಂಧಿಸುವುದು ಸರಕಾರದ ಉದ್ದೇಶವಲ್ಲ. ಆದರೆ, ಕಾಂಗ್ರೆಸ್ ಮುಖಂಡರ ವರ್ತನೆಯ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿತ್ತು. ಈ ಹಿಂದೆ ಬೇರೆ ರಾಜ್ಯಗಳಲ್ಲಿ ಆಡಳಿತಾರೂಢ ಸರಕಾರದ ವಿರುದ್ಧ ಪ್ರತಿಪಕ್ಷಗಳು ಇಂತಹ ಪ್ರತಿಭಟನೆ ನಡೆಸಿದ ವೇಳೆ ಹಿಂಸಾತ್ಮಕ ಘಟನೆಗಳು ನಡೆದಿರುವ ಬಗ್ಗೆ ಸಾಕಷ್ಟು ಉದಾಹರಣೆಗಳಿವೆ ಎಂದು ಸಬೂಬು ಹೇಳಿದರು.
ಮಾಧ್ಯಮ ಪ್ರತಿನಿಧಿಗಳನ್ನು ವಿಧಾನಸೌಧಕ್ಕೆ ನಿರ್ಬಂಧಿಸಿದ್ದು ಸರಿಯೇ ಎಂಬ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿ ಆಚಾರ್ಯ, ಪತ್ರಕರ್ತರು ಕೂಡ ವ್ಯವಸ್ಥೆಯೊಳಗಿನ ಭಾಗ. ಆದ್ದರಿಂದ ಅವರಿಗೂ ಪ್ರವೇಶ ನಿಷೇಧಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.
58 ಶಾಸಕರ ಸಹಿತ 345 ಮಂದಿ ಬಂಧನ
ಬಂಧಿತ ಪ್ರಮುಖರಲ್ಲಿ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಮುಖಂಡರಾದ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಸಂಸದ ದೃವನಾರಾಯಣ್, ಮಾಜಿ ಸಂಸದೆ ತೇಜೆಸ್ವಿನಿ, ರಾಮಲಿಂಗಾರೆಡ್ಡಿ, ಸೇರಿದಂತೆ ಮೂರು ಮಂದಿ ಮಾಜಿ ಸಂಸದರು, ೨೮ ಮಂದಿ ಮಾಜಿ ಶಾಸಕರು, ಮೂರು ಮಂದಿ ಮಾಜಿ ವಿಧಾನ ಪರಿಷತ್ ಸದಸ್ಯರು, ೧೪ ಮಂದಿ ಹಾಲಿ ಸದಸ್ಯರು, ೪೪ ಮಂದಿ ಶಾಸಕರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ. ಬಂಧಿತರ ಪೈಕಿ ೨೯೨ ಪುರುಷರು, ೫೩ ಮಂದಿ ಮಹಿಳಾ ಕಾಂಗ್ರೆಸ್ ಮುಖಂಡರನ್ನು ಬಂಧಿಸಲಾಗಿದೆ.
ಇದು ರ್ಯಾಸ್ಕಲ್ ಸರಕಾರ: ಸಿದ್ದು ಕಿಡಿ
ಬೆಂಗಳೂರು: ನೂರಾರು ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಇದನ್ನು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಪ್ರತಿಪಕ್ಷಗಳಿಗೂ ಅವಕಾಶ ನೀಡದೆ ಇರುವ ರ್ಯಾಸ್ಕಲ್ ಸರಕಾರ ರಾಜ್ಯದಲ್ಲಿ ಆಡಳಿತದಲ್ಲಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುನ್ನೆಚ್ಚರಿಕೆಯಾಗಿ ಸಿದ್ದರಾಮಯ್ಯನವರನ್ನು ಬೆಂಗಳೂರಿನ ಚಾಲುಕ್ಯ ವೃತ್ತದ ಬಳಿ ಬಂಧಿಸಲು ಪೊಲೀಸರು ಮುಂದಾದಾಗ ಕೋಪಾವೇಶಕ್ಕೆ ಒಳಗಾದ ಸಿದ್ದರಾಯಮ್ಯ, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ‘ಯಡಿಯೂರಪ್ಪ ಶಾಶ್ವತವಾಗಿ ಮುಖ್ಯಮಂತ್ರಿಯಾಗಿ ರುತ್ತಾರೆಂದು ಅಂದು ಕೊಂಡಂತಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿರುವ ಕಾಂಗ್ರೆಸ್ ಶಾಸಕರನ್ನು ಥಳಿಸಲಾಗಿದೆ. ಇನ್ನು ಸಾಮಾನ್ಯರ ಗತಿಯೇನು? ಇದೊಂದು ನಾಲಾಯಕ್ ಸರಕಾರ’ ಎಂದು ಕಿಡಿಕಾರಿದರು.
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಇಲ್ಲ, ಕುಡಿಯುವ ನೀರಿನ ಸಮಸ್ಯೆ ಇದೆ, ಬಡವರ ಪಡಿತರ ಚೀಟಿಗೆ ಅಕ್ಕಿ, ಸಕ್ಕರೆ ನೀಡುತ್ತಿಲ್ಲ, ಬರ ಪರಿಹಾರ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾಗಿದ್ದರೂ ಸರಕಾರ ಸ್ಪಂದಿಸಿಲ್ಲ. ಭ್ರಷ್ಟಾಚಾರ ವ್ಯಾಪಕವಾಗಿದೆ. ಇದಕ್ಕಾಗಿ ಜನರ ಗಮನ ಸೆಳೆದು ಸರಕಾರವನ್ನು ಎಚ್ಚರಿಸಲು ಕಾಂಗ್ರೆಸ್ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಬೆಳಗ್ಗೆ ತಮ್ಮ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿ ನಂತರ ಮುತ್ತಿಗೆ ಕಾರ್ಯಕ್ರಮ ನಡೆಸುವ ನಿರ್ಧಾರ ಕೈಗೊಳ್ಳುವವರಿದ್ದವು. ಇದಕ್ಕೂ ಮೊದಲೇ ಪೊಲೀಸರು ಸಿಕ್ಕ ಸಿಕ್ಕ ಕಡೆ ಶಾಸಕರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ಕಚೇರಿ ಬಳಿಯೇ ಕೆಲವರನ್ನು ಬಂಧಿಸಲಾಗಿದೆ ಎಂದು ಸುದ್ದಿಗಾರರಿಗೆ ಸಿದ್ದರಾಮಯ್ಯ ಹೇಳಿದರು.
ಪ್ರತಿಭಟನೆ ನಡೆಸುವುದು, ಶಾಸಕಾಂಗ ಸಭೆ ನಡೆಸುವುದು ತಮ್ಮ ಹಕ್ಕು ಅದನ್ನು ತಡೆಯಲು ಯತ್ನಿಸಲಾಗುತ್ತಿದೆ. ಪ್ರತಿಯೊಬ್ಬ ಪ್ರಜೆಗೂ ಪ್ರತಿಭಟನೆ, ಅಭಿವ್ಯಕ್ತಿ ಸ್ವಾತಂತ್ರವಿದೆ. ಯಡಿಯೂರಪ್ಪ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿ ಹಿಟ್ಲರ್ ಆಡಳಿತ ನಡೆಸಲು ಮುಂದಾಗಿದ್ದಾರೆ. ಇಂತಹ ಯಾವ ಬೆದರಿಕೆಗಳಿಗೂ ಕಾಂಗ್ರೆಸ್ ಜಗ್ಗುವುದಿಲ್ಲ. ಮುಂದಿನ ದಿನದಲ್ಲಿ ಹೋರಾಟವನ್ನು ಇನ್ನಷ್ಟು ವ್ಯಾಪಕ ಗೊಳಿಸಲಾಗುವುದು. ಒಂದು ಲಕ್ಷ ಮಂದಿಯನ್ನು ಕರೆತರುತ್ತೇವೆ, ಸಾಧ್ಯವಾದರೆ ತಡೆಯಿರಿ. ಇದೇ ದೋರಣೆ ಮುಂದುವರಿದರೆ ರಾಜ್ಯಾದ್ಯಂತ ಬೆಂಕಿಹತ್ತಿ ಉರಿಯುತ್ತದೆ. ಮುಂದಿನ ಅನಾವುತಗಳಿಗೆ ಯಡಿಯೂರಪ್ಪನವರೆ ಹೊಣೆಯಾಗಬೇಕಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿದರು.
ಪೊಲೀಸರೊಂದಿಗೆ ಮಾತಿನಚಕಮಕಿ ನಡೆಸಿದ ಸಿದ್ದರಾಮಯ್ಯ, ಲಂಚ ಪಡೆದು ವಾರಕ್ಕೆ ಮೂರು ಬಾರಿ ನಿಮ್ಮನ್ನು ವರ್ಗಾವಣೆ ಮಾಡಿದ್ದಾರೆ. ಹಾಗೇ ನೋಡಿದರೆ ನೀವು ನಮಗೆ ಬೆಂಬಲಿಸಬೇಕಿತ್ತು, ಅದು ಬಿಟ್ಟು ಅಡ್ಡ ನಿಂತಿದ್ದೀರಾ. ಯಡಿಯೂರಪ್ಪ ಏನು ಜೀವಂತ ವಾಗಿರುವವರೆಗೂ ವಿಧಾನಸೌಧದಲ್ಲಿ ಗೂಟ ಹೊಡೆದುಕೊಂಡು ಇರುತ್ತಾರೆ ಎಂದು ಕೊಂಡಿದ್ದೀರಾ. ನಾಳೆ ನಾವು ಅಧಿಕಾರಕ್ಕೆ ಬಂದರೆ ನಮ್ಮ ಮಾತನ್ನು ಕೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಶಾಸಕರಿಂದ ವಿಧಾನಸೌಧಕ್ಕೆ ಯಾವುದೇ ಬೆದರಿಕೆ ಇರಲಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿರಲಿಲ್ಲ. ಆದರೂ, ಬಂಧಿಸಲಾಗಿದೆ. ಚರ್ಚ್, ಮಸೀದಿಗಳ ಮೇಲೆ ದಾಳಿ ಮಾಡಿ ಅಲ್ಪಸಂಖ್ಯಾತರನ್ನು ಭಯ ಬೀಳಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಈ ಸರಕಾರದ ಕೈಯಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಅವರು ಲೇವಡಿ ಮಾಡಿದರು.
ಮುಂದೆ ಹೋಗಲು ಪೊಲೀಸರು ಬಿಡದೇ ಇದ್ದಾಗ ರಸ್ತೆ ಬದಿಯಲ್ಲೇ ಕುಳಿತು ಸಿದ್ದರಾಮಯ್ಯ ಪ್ರತಿಭಟನೆ ನಡೆಸಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ಪಪ್ಪ, ಕೆಪಿಸಿಸಿ ಕಾಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಂಸದೆ ತೇಜೇಶ್ವಿನಿ ರಮೇಶ್ ಸೇರಿದಂತೆ ಮತ್ತಿತರ ಮುಖಂಡರು, ಕಾರ್ಯಕರ್ತರು ಸಿದ್ದರಾಮಯ್ಯನವರ ಜೊತೆಗಿದ್ದರು.
ಮುಖ್ಯಮಂತ್ರಿ ರಾಜೀನಾಮೆ ನೀಡಲಿ: ದೇಶಪಾಂಡೆ
ಬೆಂಗಳೂರು: ಪ್ರತಿಪಕ್ಷಗಳ ಹಕ್ಕನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ.
ಪ್ರತಿಪಕ್ಷವಾಗಿರುವ ಕಾಂಗ್ರೆಸ್ಗೂ ಜವಾಬ್ದಾರಿಗಳಿವೆ. ವಿಧಾನಸೌಧದ ರಕ್ಷಣೆ ಯಡಿಯೂರಪ್ಪನವರೊಬ್ಬರೆ ನಿಭಾಯಿಸುವಂತೆ ನಡೆದುಕೊಳ್ಳುತ್ತಿದ್ದಾರೆ. ನಮ್ಮನ್ನು ಕಳ್ಳರು, ದರೋಡೆಕೋರರಂತೆ ಬಂಧಿಸಲಾಗಿದೆ ಎಂದು ಕಿಡಿಕಾರಿದರು.
ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವ ವವ್ಯವಸ್ಥೆಯನ್ನು ಕಗ್ಗೊಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಿಂದ ಧರಣಿ
ತಮ್ಮನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆಕ್ರೋಶಗೊಂಡ ಕಾಂಗ್ರೆಸ್ ಮುಖಂಡರು ಸಂಜೆ ೬ ಗಂಟೆಗೆ ಬಿಡುಗಡೆಗೊಳಿಸಿದ ನಂತರ ತಮ್ಮನ್ನು ಕೂಡಿಹಾಕಿದ ಸ್ಥಳದಲ್ಲೇ ಅಹೋರಾತ್ರಿ ಧರಣಿ ನಡೆಸಿದರು. ವಿಧಾನಸಭಾಧ್ಯಕ್ಷರು ಸ್ಥಳಕ್ಕೆ ಆಗಮಿಸಿ ತಮ್ಮ ಮನವಿಗಳಿಗೆ ಸ್ಪಂದಿಸುವವರೆಗೂ ಧರಣಿಯನ್ನು ವಾಪಸು ಪಡೆಯುವುದಿಲ್ಲ ಎಂದು ಪ್ರತಿಪಕ್ಷದ ಮುಖಂಡರು ಪಟ್ಟು ಹಿಡಿದರು